ರೈಫಲ್ ಕಳವು ಪ್ರಕರಣ: ಮಹಿಳಾ ಎಸ್ಸೈ ಸೇರಿ ನಾಲ್ವರು ಪೇದೆಗಳ ಅಮಾನತು

Update: 2018-07-10 16:58 GMT

ಬೆಂಗಳೂರು, ಜು.10: ರೈಫಲ್ ಕಳವು ಮಾಡಿದ್ದಲ್ಲದೆ, ಬಚ್ಚಿಟ್ಟಿದ್ದ ಆರೋಪದ ಮೇಲೆ ಮಹಿಳಾ ಎಸ್ಸೈ ಸೇರಿ ನಾಲ್ವರು ಪೇದೆಗಳನ್ನು ಹೆಚ್ಚುವರಿ ಪೊಲೀಸ್ ಆಯುಕ್ತ(ಆಡಳಿತ) ನಂಜುಂಡಸ್ವಾಮಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ನಗರದ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸುಮಾ, ಪೇದೆಗಳಾದ ಆನಂದ್ ಕೊಳೆಕಾರ್, ಪರಮಾನಂದ ಕೋಟಿ, ಅಶೋಕ್ ಬಿರಾದರ್ ಹಾಗೂ ಬಸವರಾಜು ಬೆಳಗಾವಿ ಎಂಬುವರನ್ನು ಅಮಾನತು ಮಾಡಲಾಗಿದೆ.

ಚುನಾವಣೆ ವೇಳೆ ಸಾರ್ವಜನಿಕರು ರೈಫಲ್‌ಗಳನ್ನು ಠಾಣೆಯಲ್ಲಿ ಠೇವಣಿ ಮಾಡಿದ್ದರು. ಇದರ ಉಸ್ತುವಾರಿಯನ್ನು ಠಾಣಾಧಿಕಾರಿಯವರು ವಹಿಸಿದ್ದರು. ವೈಯಕ್ತಿಕ ದ್ವೇಷ ಹಾಗೂ ವೃತ್ತಿ ವೈಷಮ್ಯದ ಹಿನ್ನೆಲೆಯಲ್ಲಿ ಠಾಣಾಧಿಕಾರಿಗೆ ಕೆಟ್ಟ ಹೆಸರುತರಲು ಎಸ್ಸೈ ಸುಮಾ ಹಾಗೂ ನಾಲ್ವರು ಪೇದೆಗಳು ಎರಡು ಡಬಲ್ ಬ್ಯಾರಲ್ ರೈಫಲ್‌ಗಳನ್ನು ಕಳವು ಮಾಡಿದ್ದರು ಎನ್ನಲಾಗಿದೆ.

ಠಾಣೆಯಲ್ಲಿದ್ದ ರೈಫಲ್‌ಗಳು ಕಳ್ಳತನವಾಗಿರುವುದು ಪತ್ತೆಯಾಗಿ ಆಂತರಿಕ ವಿಚಾರಣೆ ನಡೆಸಿದಾಗ ಹೆದರಿದ ಪಿಎಸ್ಸೈ ಹಾಗೂ ಪೇದೆಗಳು ಕಳವು ಮಾಡಿದ್ದ ರೈಫಲ್‌ನ್ನು ಮರಳಿ ತಂದಿಟ್ಟಿದ್ದರು. ಈ ಸಂಬಂಧ ಕೂಲಂಕಷ ವಿಚಾರಣೆ ನಡೆಸಿ ಕರ್ತವ್ಯ ಲೋಪದಡಿ ದಕ್ಷಿಣ ವಿಭಾಗದ ಡಿಸಿಪಿ ಶರಣಪ್ಪಅವರು ಕರ್ತವ್ಯ ಲೋಪದಡಿ ಐವರನ್ನು ಅಮಾನತು ಪಡಿಸುವಂತೆ ವರದಿ ಸಲ್ಲಿಸಿದ್ದರು. ಇದನ್ನು ಆಧರಿಸಿ ನಂಜುಂಡಸ್ವಾಮಿ ಅವರು ಅಮಾನತುಪಡಿಸಿ ಆದೇಶ ಹೊರಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News