ಸುಳ್ಳು ಸುದ್ದಿಗಳ ವಿರುದ್ಧ ಹೋರಾಟಕ್ಕೆ ವಾಟ್ಸ್ಯಾಪ್ ನ 10 ಮಾರ್ಗಸೂಚಿಗಳು

Update: 2018-07-11 10:14 GMT

ಸಾಮಾಜಿಕ ಜಾಲತಾಣದಲ್ಲಿನ ವದಂತಿ, ಸುಳ್ಳುಸುದ್ದಿಗಳನ್ನು ನಂಬಿ ದೇಶಾದ್ಯಂತ ಹಲವು ಹತ್ಯೆಗಳು ನಡೆದ ನಂತರ ಭಾರತ ಸರ್ಕಾರ ಕಟುವಾಗಿ ಸುಳ್ಳುಸುದ್ದಿಗಳನ್ನು ತಡೆಯಬೇಕು ಎನ್ನುವ ಸೂಚನೆ ನೀಡಿದ ನಂತರ ವಾಟ್ಸ್ಯಾಪ್ ಕ್ರಮ ಕೈಗೊಂಡಿದೆ ಫೇಸ್‍ಬುಕ್ ಮಾಲಕತ್ವದ ಮೆಸೇಜಿಂಗ್ ಪ್ಲಾಟ್‍ಫಾರಂ ವಾಟ್ಸ್ಯಾಪ್ ಸುಳ್ಳು ಸುದ್ದಿಗಳನ್ನು ತಡೆಯಲು ಬಳಕೆದಾರರಿಗೆ ಹತ್ತು ಸೂತ್ರಗಳನ್ನು ನೀಡಿದೆ.

ದೇಶದಲ್ಲಿ 20 ಕೋಟಿಗೂ ಅಧಿಕ ಬಳಕೆದಾರರನ್ನು ಹೊಂದಿರುವ ವಾಟ್ಸ್ಯಾಪ್ ಮಂಗಳವಾರ  ಭಾರತದ ಪ್ರಮುಖ ಪತ್ರಿಕೆಗಳಲ್ಲಿ ಜಾಹೀರಾತು ನೀಡಿ, ಸುಳ್ಳುಸುದ್ದಿ ಹರಡುವುದನ್ನು ಹೇಗೆ ತಡೆಯಬಹುದು ಎಂಬ ಬಗ್ಗೆ ಸಲಹೆಗಳನ್ನು ನೀಡಿದೆ. ದೇಶಾದ್ಯಂತ ಹಲವು ಹತ್ಯೆಗಳಿಗೆ ಕಾರಣವಾಗುತ್ತಿರುವ ವದಂತಿಗಳ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ಸಂಸ್ಥೆಯ ಮೊದಲ ಪ್ರಯತ್ನ ಇದಾಗಿದೆ.

ಸುಳ್ಳು ಸುದ್ದಿ ವಿರುದ್ಧ ಹೋರಾಟಕ್ಕೆ ವಾಟ್ಸ್ಯಾಪ್ನ ಹತ್ತು ಸೂತ್ರಗಳು

1. ಫಾರ್ವರ್ಡ್ ಮಾಡುವ ಸಂದೇಶ ಅರ್ಥ ಮಾಡಿಕೊಳ್ಳಿ

ಈ ವಾರದಿಂದಲೇ ವಾಟ್ಸ್ಯಾಪ್ ಹೊಸ ಫೀಚರ್‍ಗೆ ಚಾಲನೆ ನೀಡುತ್ತಿದ್ದು, ಯಾವ ಮೆಸೇಜ್ ಫಾರ್ವರ್ಡ್ ಆಗಿದೆ ಎಂದು ನೋಡಲು ಅವಕಾಶ ಮಾಡಿಕೊಡುತ್ತದೆ. ಮಾಹಿತಿಗಳ ಬಗ್ಗೆ ನಿಮಗೆ ಖಾತ್ರಿ ಇಲ್ಲ ಎಂದಾದಲ್ಲಿ ಈ ಮೂಲ ಸಂದೇಶವನ್ನು ಯಾರು ಬರೆದಿದ್ದಾರೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.

2. ನಿಮ್ಮನ್ನು ಭಯಭೀತರಾಗಿಸುವ ಮಾಹಿತಿ ಬಗ್ಗೆ ಪ್ರಶ್ನಿಸಿ

ನಿಮ್ಮಲ್ಲಿ ಸಿಟ್ಟು ಬರಿಸುವ ಅಥವಾ ನಿಮ್ಮನ್ನು ಭೀತಿಗೆ ತಳ್ಳುವ ಏನನ್ನಾದರೂ ನೀವು ಓದಿದಲ್ಲಿ, ಆ ರೀತಿಯ ಭಾವನೆಯನ್ನು ನಿಮ್ಮಲ್ಲಿ ಕೆರಳಿಸಲು ಇದನ್ನು ಷೇರ್ ಮಾಡಲಾಗಿದೆಯೇ ಎನ್ನುವುದನ್ನು ತಿಳಿದುಕೊಳ್ಳಿ. ನಿಮ್ಮ ಉತ್ತರ ಹೌದು ಎಂದಾದಲ್ಲಿ ಅದನ್ನು ಮತ್ತೆ ಷೇರ್ ಮಾಡುವ ಮುನ್ನ ಎರಡೆರಡು ಬಾರಿ ಯೋಚಿಸಿ.

3. ನಂಬಲಸಾಧ್ಯ ಎನಿಸುವ ಮಾಹಿತಿ ಪರಿಶೀಲಿಸಿ

ನಿಮಗೆ ನಂಬಲಸಾಧ್ಯ ಎಂದೆನಿಸುವ ಸುದ್ದಿಗಳು ಸಾಮಾನ್ಯವಾಗಿ ಸತ್ಯಕ್ಕೆ ದೂರ ಇರುತ್ತವೆ. ಅವು ವಾಸ್ತವವಾಗಿ ನಿಜವೇ ಎಂದು ತಿಳಿದುಕೊಳ್ಳಲು ಬೇರೆ ಮೂಲಗಳಿಂದ ಪರಿಶೀಲಿಸಿಕೊಳ್ಳಿ.

4. ಭಿನ್ನ ಎನಿಸುವ ಸಂದೇಶಗಳನ್ನು ಪತ್ತೆ ಮಾಡಿ

ವದಂತಿ ಅಥವಾ ಸುಳ್ಳು ಸುದ್ದಿಗಳನ್ನು ಹೊಂದಿರುವ ಬಹಳಷ್ಟು ಸಂದೇಶಗಳು ಅಕ್ಷರತಪ್ಪುಗಳನ್ನು ಹೊಂದಿರುತ್ತವೆ. ಇಂಥ ಸಂಕೇತವನ್ನು ಪತ್ತೆ ಮಾಡಿ ಹಾಗೂ ಈ ಮೂಲಕ ಮಾಹಿತಿ ನಿಖರವಾಗಿದೆಯೇ ಎಂದು ನೀವು ಪರಿಶೀಲಿಸಬಹುದು.

5. ಸಂದೇಶದಲ್ಲಿರುವ ಫೋಟೊಗಳನ್ನು ಹೆಚ್ಚು ಜಾಗರೂಕತೆಯಿಂದ ಪರಿಶೀಲಿಸಿ

ಫೋಟೊ ಮತ್ತು ವಿಡಿಯೊಗಳನ್ನು ಸುಲಭವಾಗಿ ನಂಬುತ್ತೇವೆ. ಆದರೆ ನಿಮ್ಮನ್ನು ತಪ್ಪುದಾರಿಗೆ ಎಳೆಯಲು ಇದನ್ನು ಕೂಡಾ ತಿರುಚಲು ಅವಕಾಶವಿದೆ. ಕೆಲವೊಮ್ಮೆ ಫೋಟೊ ನಿಜವಾಗಿದ್ದಾದರೂ, ಅದರ ಜೊತೆಗಿರುವ ಸುದ್ದಿ ನಿಜವಿರುವುದಿಲ್ಲ. ಆದ್ದರಿಂದ ಈ ಫೋಟೊ ಎಲ್ಲಿಂದ ಬಂದಿದೆ ಎನ್ನುವುದನ್ನು ಆನ್ ಲೈನ್‍ನಲ್ಲಿ ಪರಿಶೀಲಿಸಿಕೊಳ್ಳಿ.

6. ಲಿಂಕ್‍ಗಳನ್ನೂ ಪರಿಶೀಲಿಸಿ

ಇದು ಚಿರಪರಿಚಿತ ವೆಬ್‍ಸೈಟ್‍ನಂತೆ ಕಂಡರೂ, ಅಕ್ಷರ ತಪ್ಪುಗಳು ಅಥವಾ ಅಸಹಜ ಲಕ್ಷಣಗಳು ಕಂಡುಬಂದರೆ ಅದು ಏನೋ ಎಡವಟ್ಟಾಗಿದೆ ಎನ್ನುವುದರ ಸೂಚನೆ.

7. ಇತರ ಮೂಲಗಳನ್ನು ಬಳಸಿ

ಈ ಸುದ್ದಿ ಬೇರೆ ಎಲ್ಲಾದರೂ ಪ್ರಕಟವಾಗಿದೆಯೇ ಎಂದು ನೋಡಲು ಇತರ ಸುದ್ದಿ ವೆಬ್‍ಸೈಟ್ ಅಥವಾ ಆ್ಯಪ್‍ಗಳನ್ನು ನೋಡಿ.

8. ನೀವು ಷೇರ್ ಮಾಡುವುದು ಪ್ರಜ್ಞಾಪೂರ್ವಕವಾಗಿರಲಿ

ಮೂಲದ ಬಗ್ಗೆ ನಿಮಗೆ ಖಾತ್ರಿ ಇಲ್ಲ ಎಂದಾದಲ್ಲಿ ಅಥವಾ ಈ ಮಾಹಿತಿ ಸತ್ಯಕ್ಕೆ ದೂರ ಎನಿಸಿದರಲ್ಲಿ ಅದನ್ನು ಷೇರ್ ಮಾಡುವ ಮುನ್ನ ಎರಡು ಬಾರಿ ಯೋಚಿಸಿ.

9. ನೀವು ನೋಡುವುದನ್ನು ನೀವು ನಿಯಂತ್ರಿಸಬಹುದು

ವಾಟ್ಸ್ಯಾಪ್ ನಲ್ಲಿ, ಯಾವುದೇ ಸಂಖ್ಯೆಯನ್ನು ನೀವು ಬ್ಲಾಕ್ ಮಾಡಲು ಅಥವಾ ಯಾವುದೇ ಗುಂಪಿನಿಂದ ಹೊರಬರಲು ನಿಮಗೆ ಅವಕಾಶ ಇರುತ್ತದೆ. ನಿಮ್ಮ ವಾಟ್ಸ್ಯಾಪ್ ಅನುಭವವನ್ನು ನಿಯಂತ್ರಿಸುವ ಸಲುವಾಗಿ ಈ ಗುಣಲಕ್ಷಣವನ್ನು ಬಳಸಿಕೊಳ್ಳಿ.

10. ಸುಳ್ಳುಸುದ್ದಿಗಳು ಸಾಮಾನ್ಯವಾಗಿ ವೈರಲ್ ಆಗುತ್ತವೆ

ಒಂದೇ ಸಂದೇಶವನ್ನು ನೀವು ಹಲವು ಬಾರಿ ಸ್ವೀಕರಿಸಿದಾಗ ಅದಕ್ಕೆ ಹೆಚ್ಚು ಗಮನ ಹರಿಸಬೇಡಿ. ಒಂದು ಸಂದೇಶವನ್ನು ಹಲವು ಬಾರಿ ಷೇರ್ ಮಾಡುವುದರಿಂದ ಅದು ನಿಜವಾಗಲು ಸಾಧ್ಯವಿಲ್ಲ.

ಇದರ ಜತೆಗೆ ಸುಳ್ಳುಸುದ್ದಿಯ ವಿರುದ್ಧ ಹೋರಾಡಲು ತಂತ್ರಜ್ಞಾನ ಕಂಪನಿಗಳು, ಸರ್ಕಾರ ಮತ್ತು ಸಮುದಾಯ ಗುಂಪುಗಳು ಜತೆಯಾಗಿ ಕೆಲಸ ಮಾಡಬೇಕು ಎಂದು ಕಂಪನಿ ಹೇಳಿದೆ. ಈ ಬಗ್ಗೆ ಇತರರಲ್ಲಿ ಅರಿವು ಮೂಡಿಸಬೇಕು ಎಂದು ಬಳಕೆದಾರರನ್ನು ವಾಟ್ಸ್ಯಾಪ್ ಕೋರಿದ್ದು, ಯಾವುದೇ ಸುಳ್ಳು ಸುದ್ದಿ ಗಮನಕ್ಕೆ ಬಂದಲ್ಲಿ ಅದು ಹರಡುವುದನ್ನು ತಡೆಯಲು ನೆರವಾಗುವಂತೆಯೂ ಮನವಿ ಮಾಡಿದೆ. ವಾಟ್ಸ್ಯಾಪ್ ಟ್ವೀಕಿಂಗ್ ಫೀಚರ್ ಹೊಂದಿದ್ದು, ಸುಳ್ಳು ಸಂದೇಶವನ್ನು ತಡೆಯಲು ಬಳಕೆದಾರರಿಗೇ ನಿಯಂತ್ರಣ ಸಾಧನ ಒದಗಿಸುವುದಾಗಿ ವಾಟ್ಸ್‍ಆ್ಯಪ್ ಈ ಹಿಂದೆ ಹೇಳಿಕೆ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News