ಬಿಬಿಎಂಪಿ: ಕೆಂಪೇಗೌಡ ಜಯಂತಿ ಮುಂದೂಡುವ ಸಾಧ್ಯತೆ

Update: 2018-07-11 16:56 GMT

ಬೆಂಗಳೂರು, ಜು.11: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ಜು.18 ರಂದು ಆಚರಿಸಲು ಉದ್ದೇಶಿಸಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಮುಂದೂಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರಾಜ್ಯ ಸರಕಾರದಿಂದ ಕಳೆದ ತಿಂಗಳು ನಗರದ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ಕೆಂಪೇಗೌಡ ಜಯಂತಿಯನ್ನು ಆಚರಣೆ ಮಾಡಲಾಗಿತ್ತು. ಹೀಗಾಗಿ, ಪಾಲಿಕೆ ವತಿಯಿಂದ ಯಾವುದೇ ಕಾರ್ಯಕ್ರಮ ಹಮ್ಮಿಕೊಂಡಿರಲಿಲ್ಲ. ಆದರೆ, ಸಾಮಾನ್ಯವಾಗಿ ಬೆಂಗಳೂರು ಕರಗ ಉತ್ಸವದ ಸಂದರ್ಭದಲ್ಲಿ ಕೆಂಪೇಗೌಡ ಜಯಂತಿ ಆಚರಣೆ ಮಾಡಲಾಗುತ್ತದೆ. ಈ ಬಾರಿ ಕರಗ ಉತ್ಸವದ ವೇಳೆ ವಿಧಾನಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಿದ್ದರಿಂದ ಜಯಂತಿ ಆಚರಣೆ ಮುಂದೂಡಲಾಗಿತ್ತು.

ಈ ಹಿನ್ನೆಲೆಯಲ್ಲಿ ಜು.18 ರಂದು ಪಾಲಿಕೆ ವತಿಯಿಂದಲೇ ಅದ್ಧೂರಿಯಾಗಿ ಕೆಂಪೇಗೌಡರ ಜಯಂತಿಯನ್ನು ಆಚರಣೆ ಮಾಡಲು ನಿರ್ಧಾರ ಮಾಡಲಾಗಿತ್ತು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಮಾರಂಭಕ್ಕೆ ಆಗಮಿಸಲು ಒಪ್ಪಿಗೆ ನೀಡಿದ್ದರು. ಆದರೆ, ಅನ್ಯ ಕೆಲಸದಿಂದಾಗಿ ಜು.18 ರಂದು ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಆದುದರಿಂದಾಗಿ, ಮತ್ತೊಂದು ಬಾರಿ ಜಯಂತಿಯನ್ನು ಮುಂದೂಡುವ ಸಾಧ್ಯತೆಯಿದೆ ಎನ್ನಲಾಗಿದೆ.
ಮುಖ್ಯಮಂತ್ರಿ ಕುಮಾರಸ್ವಾಮಿ ದಿನಾಂಕ ನೀಡಿದ ನಂತರ ಕೆಂಪೇಗೌಡ ಜಯಂತಿಯನ್ನು ಆಚರಣೆ ಮಾಡಲು ಮತ್ತೊಂದು ದಿನಾಂಕ ನಿಗದಿ ಮಾಡಲು ಬಿಬಿಎಂಪಿ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News