ತಂತಿ ಮೇಲಿಂದ ಕೆಳಗೆ ಬಿದ್ದರೆ ಕತ್ತೆಯೊಂದಿಗೆ ಮದುವೆ!

Update: 2018-07-11 17:01 GMT

ಬೆಂಗಳೂರು, ಜು. 11: ‘ಸರ್ಕಸ್ ಕಂಪೆನಿಯ ಮಾಲಕ ತಂತಿ ಮೇಲೆ ನಡೆಯುವ ತನ್ನ ಮಗಳಿಗೆ ನೀನು ಕೆಳಗೆ ಬಿದ್ದರೆ ಕತ್ತೆಯೊಂದಿಗೆ ಮದುವೆ ಮಾಡುತ್ತೇನೆಂದ. ಹೀಗಾಗಿ ಕತ್ತೆ ಆಸೆಯಿಂದ ಕಾಯುತ್ತಿತ್ತು. ಆದರೆ, ಮಗಳು ಕೆಳಗೆ ಬೀಳಲಿಲ್ಲ’ ಎಂದು ಜೆಡಿಎಸ್ ಹಿರಿಯ ಸದಸ್ಯ ಎ.ಟಿ.ರಾಮಸ್ವಾಮಿ, ಮೈತ್ರಿ ಸರಕಾರ ಬೀಳಲಿದೆ ಎಂಬ ಬಿಜೆಪಿ ಸದಸ್ಯರನ್ನು ಛೇಡಿಸಿದರು.

ಬುಧವಾರ ವಿಧಾನಸಭೆಯಲ್ಲಿ ಆಯವ್ಯಯದ ಮೇಲಿನ ಚರ್ಚೆ ವೇಳೆ ಬಿಜೆಪಿಯ ಗೋವಿಂದ ಕಾರಜೋಳ, ಮೈತ್ರಿ ಸರಕಾರ ಕುರುಡರು, ಕುಂಟರನ್ನು ಹೊತ್ತೊಯ್ಯುವ ಸರಕಾರವಿದು ಎಂದು ಆಕ್ಷೇಪಿಸಿದರು. ನಾನು ಇದನ್ನು ಭಾಗಶಃ ಒಪ್ಪುತ್ತೇನೆ. ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ತೀರ್ಪು ಬಂದಿರಲಿಲ್ಲ. ಆದರೆ, ಬಿಜೆಪಿಗೆ 104 ಸ್ಥಾನಗಳಿದ್ದರೂ ಆತುರದಲ್ಲಿದ್ದರು ಎಂದರು.

ಈ ವೇಳೆ ಮಧ್ಯಪ್ರವೇಶಿಸಿದ ಬಿಜೆಪಿ ಬಸವರಾಜ ಬೊಮ್ಮಾಯಿ, ‘ನಿಮ್ಮದು ಅವಧಿಪೂರ್ವ ಮಗು. ಒಂಭತ್ತು ತಿಂಗಳು ಕಾಯಲಿಲ್ಲ. ಇದು ಆತುರ ಬಿದ್ದಿದ್ದರಿಂದ ಆಗಿದ್ದಲ್ಲವಾ. ನಿಮ್ಮ ಅನುಕೂಲಕ್ಕಾಗಿ ಹಿಂದೆ-ಮುಂದೆ ಹೋಗುವುದಲ್ಲ. ಮಿಂಚಿನ ವೇಗದಲ್ಲಿ ಮೈತ್ರಿ ಮಾಡಿಕೊಂಡಿರಿ’ ಎಂದು ವಾಗ್ಬಾಣ ಬಿಟ್ಟರು.

ಇದಕ್ಕೆ ಧ್ವನಿಗೂಡಿಸಿದ ಬಿಜೆಪಿಯ ಮಾಧುಸ್ವಾಮಿ, ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೂ, ಬಜೆಟ್ ಮೇಲಿನ ಚರ್ಚೆಗೂ ವ್ಯತ್ಯಾಸವೇ ಇಲ್ಲವೇ? ಹಿರಿಯ ಸದಸ್ಯರಾದ ರಾಮಸ್ವಾಮಿಯವರು ಗಾಂಭೀರ್ಯತೆ ಅರಿತು ಮಾತನಾಡಬೇಕು ಎಂದು ಸಲಹೆ ನೀಡಿದರು.

‘ನಾನೂ ಅಲ್ಲಿಗೆ ಬರುತ್ತಿದ್ದೇನೆ. ಸದನದ ಸಮಯವನ್ನು ಹಾಳು ಮಾಡಲು ಬಯಸುವುದಿಲ್ಲ ಎಂದು ಮಾತು ಮುಂದುವರಿಸಿದ ರಾಮಸ್ವಾಮಿ, ‘ಕೊನೆಗೂ ಅವಳು ಕೆಳಗೆ ಬೀಳಲಿಲ್ಲ. ಕತ್ತೆ ಸೊರಗಿ ಹೋಯಿತು’ ಎಂದರು. ‘ಇದನ್ನು ಕೇಳಿ ನನಗೆ ಬಂದಿದ್ದ ವಾಟ್ಸಪ್ ಸಂದೇಶವೊಂದು ನೆನಪಾಯಿತು. ಕಾಂಗ್ರೆಸ್-ಜೆಡಿಎಸ್ ಕತ್ತೆಗಳ ಮದುವೆಯಿಂದ ಒಳ್ಳೆಯ ಮಳೆಯಾಗಿದೆ ಎಂದು ಯಾರೋ ಕಳುಹಿಸಿದ್ದರು ಎಂದು ಸಿ.ಟಿ.ರವಿ ಮಸಾಲೆ ಬೆರೆಸಿದರು.

ಈ ವೇಳೆ ಮಧ್ಯಪ್ರವೇಶಿಸಿದ ಸಹಕಾರ ಸಚಿವ ಬಂಡೆಪ್ಪ ಕಾಂಶೆಪೂರ್, ‘ರಾಜ್ಯದಲ್ಲಿ ಒಳ್ಳೆಯ ಮಳೆಯಂತೂ ಆಗುತ್ತಿದೆ. ಇದಕ್ಕಿಂತ ರಾಜ್ಯಕ್ಕೆ ಇನ್ನೆಂಥ ಸಂಪನ್ಮೂಲದ ಅಗತ್ಯವಿದೆ’ ಎಂದು ಚಟಾಕಿ ಹಾರಿಸಿದ್ದು ಸದನವನ್ನು ಕೆಲಕ್ಷಣ ನಗೆ ಅಲೆಯಲ್ಲಿ ತೇಲಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News