ಬಿಬಿಎಂಪಿ ಶಾಲೆಗಳಲ್ಲಿ ತಿಂಗಳು ಕಳೆದರೂ ಪೂರೈಕೆಯಾಗದ ಸಮವಸ್ತ್ರ: ಆರೋಪ

Update: 2018-07-11 17:05 GMT

ಬೆಂಗಳೂರು, ಜು.11: ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಿ ತಿಂಗಳು ಕಳೆದಿದ್ದರೂ, ನಗರದ ಬಿಬಿಎಂಪಿ ಶಾಲೆಗಳ ವಿದ್ಯಾರ್ಥಿಗಳಿಗೆ ಇದುವರೆಗೂ ಸಮವಸ್ತ್ರ ಪೂರೈಕೆಯಾಗಿಲ್ಲ ಎಂದು ಪೋಷಕರು ಆರೋಪಿಸಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ 14 ಪ್ರಾಥಮಿಕ ಶಾಲೆಗಳು, 32 ಪ್ರೌಢ ಶಾಲೆಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಅವರಿಗೆ ಸರಕಾರದ ವತಿಯಿಂದಲೇ ಪಠ್ಯಪುಸ್ತಕಗಳು ಪೂರೈಕೆ ಮಾಡಲಾಗಿದೆ. ಆದರೆ, ಬಾಕಿ ಬಿಲ್ ಪಾವತಿ ಮಾಡದೇ ಇದ್ದುದರಿಂದ ಸಮವಸ್ತ್ರ, ಬ್ಯಾಗ್ ಮತ್ತು ನೋಟ್ ಪುಸ್ತಕಗಳನ್ನು ಪೂರೈಕೆ ಮಾಡಲು ಗುತ್ತಿಗೆದಾರರು ಹಿಂದೇಟು ಹಾಕುತ್ತಿದ್ದಾರೆ. ಅಲ್ಪಾವಧಿ ಟೆಂಡರ್ ಆಹ್ವಾನಿಸಲು ಅಧಿಕಾರಿಗಳು ಮುಂದಾದರೂ, ಟೆಂಡರ್ ಆಹ್ವಾನ ವೇಳೆ ನಿಯಮಗಳು ಉಲ್ಲಂಘಿಸಲಾಗಿದೆ ಎಂಬ ಆರೋಪಗಳು ಕೇಳಿಬಂದಿದೆ.

ಆ ಹಿನ್ನೆಲೆಯಲ್ಲಿ ಮುಂದಿನ ಎರಡು ಮೂರು ತಿಂಗಳು ಮಕ್ಕಳಿಗೆ ಸಮವಸ್ತ್ರ, ನೋಟ್ ಪುಸ್ತಕಗಳು ದೊರೆಯುವುದು ಅನುಮಾನ ಎನ್ನಲಾಗಿದೆ. ಪಾಲಿಕೆಯ ಸಭೆಯಲ್ಲೂ ಈ ವಿಚಾರ ಪ್ರಸ್ತಾಪವಾಯಿತಾದರೂ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಗಂಗಮ್ಮ, ವಿದ್ಯಾರ್ಥಿಗಳಿಗೆ ನಿಗದಿತ ಅವಧಿಯಲ್ಲಿ ಸಮವಸ್ತ್ರ ಸಿಗುವಂತಾಗಲು ಮೂರು ವರ್ಷಗಳಿಗೆ ಟೆಂಡರ್ ಕರೆಯಲಾಗಿದೆ. ಆದರೆ, ಟೆಂಡರ್ ನವೀಕರಣಗೊಳಿಸಿ ಕಾರ್ಯಾದೇಶ ನೀಡಲು ಅಧಿಕಾರಿಗಳು ಮುಂದಾಗುತ್ತಿಲ್ಲ ಎಂದು ಅಸಹಾಯಕತೆ ತೋಡಿಕೊಂಡರು.

ಕಳೆದ ವರ್ಷದ ಬಾಕಿ ಇರೋ ಮೊತ್ತ ನೀಡದೆ ಇರೋದೆ ಇದಕ್ಕೆಲ್ಲ ಕಾರಣ. ಬಿಬಿಎಂಪಿ ಅಧಿಕಾರಿಗಳು ಸಮಯಕ್ಕೆ ತಕ್ಕಂತೆ ಬಿಲ್ ಪಾವತಿಸಿದರೆ ಈ ರೀತಿ ಆಗುತ್ತಿರಲಿಲ್ಲ. ಚುನಾವಣೆ ನೀತಿ ಸಂಹಿತೆ ನೆಪ ಮಾಡಿ, ನಿರ್ಲಕ್ಷ ತೋರಿದ್ದಾರೆ ಎಂದು ಗುತ್ತಿಗೆದಾರರು ತಿಳಿಸಿದ್ದಾರೆ. ಸಮವಸ್ತ್ರ ಟೆಂಡರ್ 2 ಕೋಟಿ 10 ಲಕ್ಷ ಮತ್ತು ಪಠ್ಯಪುಸ್ತಕ, ಶೂ ಸೇರಿದಂತೆ ಅಂದಾಜು ಒಂದು ಕೋಟಿ ರೂಪಾಯಿ ಮೊತ್ತ ಬಾಕಿ ಉಳಿಸಿಕೊಂಡಿದ್ದಾರೆ. ಈಗಾಗಲೇ ಈ ಸಂಬಂಧ ಕಳೆದ ಸಭೆಯಲ್ಲಿ ಮೇಯರ್ ಮತ್ತು ಕಮಿಷನರ್ ಆದಷ್ಟು ಬೇಗ ವಿತರಣೆ ಮಾಡುವಂತೆ ಆದೇಶ ನೀಡಿದ್ದಾರೆ. ಜೊತೆಗೆ ನಾವು ಕೂಡ ಟೆಂಡರ್ ವಹಿಸಿಕೊಂಡಿರೋ ವ್ಯಕ್ತಿಗೆ ಮನವೊಲಿಕೆ ಮಾಡಿದ್ದು, ಜು.16ರಂದು ಸಮವಸ್ತ್ರ ವಿತರಣೆ ಮಾಡುವಂತೆ ತಿಳಿಸಲಾಗಿದೆ. ಈ ತಿಂಗಳ ಅಂತ್ಯಕ್ಕೆ ಬಾಕಿ ಇರುವ ಎಲ್ಲವೂ ಪೂರೈಕೆ ಮಾಡುವಂತೆ ತಿಳಿಸಲಾಗಿದೆ ಎಂದು ಗಂಗಮ್ಮ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News