ಕೇಂದ್ರ ಸಚಿವರಿಂದ ಕೊಲೆ ಆರೋಪಿಗೆ ಮಾಲಾರ್ಪಣೆ ಖಂಡನೀಯ: ಎಸ್‌ಡಿಪಿಐ ಅಧ್ಯಕ್ಷ ಎಂ.ಕೆ. ಪೈಝಿ

Update: 2018-07-11 17:17 GMT

ಬೆಂಗಳೂರು, ಜು.11: ಜಾನುವಾರು ವರ್ತಕ ಅಲೀಮುದ್ದೀನ್ ಅನ್ಸಾರಿಯವರ ಗುಂಪು ಹಿಂಸಾಹತ್ಯಾ ಆರೋಪಿಗೆ ಕೇಂದ್ರ ಸಚಿವರು ಮಾಲಾರ್ಪಣೆ ಮಾಡಿದ ಘಟನೆಯನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ರಾಷ್ಟ್ರೀಯ ಅಧ್ಯಕ್ಷ ಎಂ.ಕೆ. ಫೈಝಿ ಖಂಡಿಸಿದ್ದಾರೆ.

ಜಾಮೀನಿನ ಮೇಲೆ ಹೊರಬಂದ ಆರೋಪಿಗಳಿಗೆ ಕೇಂದ್ರ ವಿಮಾನಯಾನ ಸಚಿವ ಜಯಂತ್ ಸಿನ್ಹಾ ಸಿಹಿ ತಿನ್ನಿಸಿ ಮಾಲಾರ್ಪಣೆ ಮಾಡಿದ್ದಾರೆ. ಆರೋಪಿಗಳನ್ನು ಈ ರೀತಿಯಲ್ಲಿ ಗೌರವಿಸುವುದು ಫ್ಯಾಶನ್ ಆಗುತ್ತಿದ್ದು, ಸಚಿವರ ಈ ನಡೆ ಆಶ್ಚರ್ಯಕರವಾಗಿದೆ. ಇಂತಹ ಕೃತ್ಯಗಳಿಂದ ಸಾರ್ವಜನಿಕರಿಗೆ ಯಾವ ಸಂದೇಶವನ್ನು ಸಚಿವರು ನೀಡುತ್ತಿದ್ದಾರೆ ಎಂದು ಅವರು ಹೇಳಿಕೆಯಲ್ಲಿ ಪ್ರಶಿಸಿದ್ದಾರೆ.

ನೆಲದ ಕಾನೂನನ್ನು ಗೌರವಿಸಬೇಕಾದ ಸಚಿವರು ಮತ್ತು ಬಿಜೆಪಿಯು ಸರಕಾರದ ವರ್ಚಸ್ಸಿಗೆ ಕುಂದು ತರುತ್ತಿದೆ. ಕೇಂದ್ರ ಸರಕಾರ ಕೂಡಲೇ ಸಚಿವರನ್ನು ವಜಾ ಮಾಡಬೇಕೆಂದು ಅವರು ಒತ್ತಾಯಿಸಿದ್ದಾರೆ.

ಗೋರಕ್ಷಣೆಯ ಹೆಸರಿನಲ್ಲಿ ಗುಂಪು ಹಿಂಸಾಹತ್ಯೆಯ ಘಟನೆಗಳು ಜಾರ್ಖಂಡ್ ರಾಜ್ಯದಲ್ಲಿ ಅತಿಹೆಚ್ಚು ನಡೆಯುತ್ತಿವೆ. ಅಪರಾಧಿಗಳಿಗೆ ಮುಕ್ತ ಸ್ವಾತಂತ್ರ ನೀಡಿ ಸಂತ್ರಸ್ತರಿಗೆ ನ್ಯಾಯ ನಿರಾಕರಿಸಲಾಗುತ್ತಿದೆ ಎಂದರು.

ಸೂಕ್ತ ಸಾಕ್ಷಾಧಾರಗಳು ಲಭ್ಯವಿದ್ದರೂ ಗುಂಪು ಹಿಂಸಾ ಆರೋಪಿಗಳು ಸುಲಭವಾಗಿ ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಇದು ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತದೆ. ಗೋರಕ್ಷಣೆಯ ಹೆಸರಲ್ಲಿ ಅಪರಾಧಿಗಳನ್ನು ಗೌರವಿಸಿ ಧರ್ಮ ರಕ್ಷಕರು ಎಂದು ಬಿಂಬಿಸಲಾಗುತ್ತಿದೆ. ಸಚಿವರ ಈ ಮನಸ್ಥಿತಿ ದೇಶಾದ್ಯಂತ ಅರಾಜಕತೆಗೆ ಮತ್ತು ಹಿಂಸೆಗೆ ದಾರಿ ಮಾಡಿ ಕೊಡುತ್ತಿದೆ ಎಂದು ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ. ಫೈಝಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News