×
Ad

ಬೆಳ್ಳಂದೂರು ಕೆರೆ ಸಂರಕ್ಷಣೆಯಲ್ಲಿ ಸರಕಾರ ವಿಫಲ: ಹೈಕೋರ್ಟ್ ಅಸಮಾಧಾನ

Update: 2018-07-12 21:55 IST

ಬೆಂಗಳೂರು, ಜು.12: ನಗರದ ಬೆಳ್ಳಂದೂರು ಕೆರೆ ಸಂರಕ್ಷಣೆ ವಿಚಾರದಲ್ಲಿ ಸರಕಾರ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಹೈಕೋರ್ಟ್, ಕೆರೆ ಸಂರಕ್ಷಣೆ ಜವಾಬ್ದಾರಿ ಹೊತ್ತಿರುವ ಅಧಿಕಾರಿ ಮುಂದಿನ ವಿಚಾರಣೆಗೆ ಖುದ್ದು ಹಾಜರಾಗುವಂತೆ ತಾಕೀತು ಮಾಡಿದೆ.

ಕಲುಷಿತಗೊಂಡಿರುವ ಬೆಳ್ಳಂದೂರು ಕೆರೆಯನ್ನು ಪುನರುಜ್ಜೀವನಗೊಳಿಸಲು ರಾಜ್ಯ ಸರಕಾರಕ್ಕೆ ನಿರ್ದೇಶಿಸುವಂತೆ ಕೋರಿ ರಾಜ್ಯಸಭಾ ಸದಸ್ಯ ಡಿ. ಕುಪೇಂದ್ರ ರೆಡ್ಡಿ ಹಾಗೂ ಎಚ್‌ಎಸ್‌ಆರ್ ಬಡಾವಣೆ ನಿವಾಸಿಗಳು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾ. ಎಚ್.ಜಿ. ರಮೇಶ್ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಚಾರಣೆ ವೇಳೆ ಬೆಳ್ಳಂದೂರು ಕೆರೆ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳದ ರಾಜ್ಯ ಸರಕಾರವನ್ನು ಕಟುವಾಗಿ ಟೀಕಿಸಿದ ಪೀಠ, ನಗರದ ಇನ್ನಿತರ ಸಮಸ್ಯೆಗಳನ್ನು ಎತ್ತಿಕೊಂಡು ಸರಕಾರಕ್ಕೆ ಚಾಟಿ ಬೀಸಿತು. ಬೆಂಗಳೂರಿನ ರಸ್ತೆಗಳು ಗುಂಡಿ ಬಿದ್ದು ಹೋಗಿವೆ. ನಗರದ ತ್ಯಾಜ್ಯವೂ ಸಮರ್ಪಕವಾಗಿ ವಿಲೇವಾರಿ ಆಗುತ್ತಿಲ್ಲ. ಟ್ರಾಫಿಕ್ ಸಮಸ್ಯೆ ಹಿಂದಿಗಿಂತ ಮಿತಿ ಮೀರಿದೆ. ಇವೆಲ್ಲ ಸಾಲದೆಂಬಂತೆ ಪರಿಸರ ಮಾಲಿನ್ಯ ಹೆಚ್ಚುತ್ತಿದೆ. ಸ್ಥಳೀಯ ನಿವಾಸಿಗಳು ಬೆಳ್ಳಂದೂರು ಕೆರೆ ಸಂರಕ್ಷಣೆ ಮಾಡುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ 3 ವರ್ಷಗಳೇ ಕಳೆದು ಹೋಗಿವೆ. ಕೆರೆ ಸ್ವಚ್ಛಗೊಳಿಸಲು ಸರಕಾರ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಏಕೆ ? ಸರಕಾರಕ್ಕೆ ಬೆಳ್ಳಂದೂರು ಕೆರೆ ಸಂರಕ್ಷಿಸುವ ಇಚ್ಛಾಶಕ್ತಿಯೇ ಇರುವಂತೆ ಕಾಣುತ್ತಿಲ್ಲ. ಇಂತಹ ಗಂಭೀರ ಸಮಸ್ಯೆಗಳನ್ನು ನಿಯಂತ್ರಿಸುವಲ್ಲಿ ಸರಕಾರಕ್ಕೆ ಕನಿಷ್ಠ ಬದ್ಧತೆಯೂ ಇಲ್ಲವೆ? ಎಂದು ಸರಕಾರದ ಪರ ವಕೀಲರನ್ನು ಪೀಠ ಖಾರವಾಗಿ ಪ್ರಶ್ನಿಸಿತು.

ಅಂತಿಮವಾಗಿ ಸರಕಾರಿ ವಕೀಲರನ್ನು ಪ್ರಶ್ನಿಸಿದ ಪೀಠ, ಕೆರೆ ಸ್ವಚ್ಛತೆಯ ಜವಾಬ್ದಾರಿ ಯಾವ ಇಲಾಖೆಗೆ ಸೇರಿದ್ದು? ಎಂದು ಪ್ರಶ್ನಿಸಿತು. ಸರಕಾರಿ ವಕೀಲರು ಉತ್ತರಿಸಿ, ಬೆಳ್ಳಂದೂರು ಕೆರೆ ಪುರುಜ್ಜೀವನ ಕಾರ್ಯಕ್ಕೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ನಿರ್ದೇಶನದಂತೆ ತಜ್ಞರ ಸಮಿತಿ ರಚಿಸಲಾಗಿದೆ. ತಜ್ಞರ ಸಮಿತಿಯ ಶಿಫಾರಸಿನಂತೆ ಕೆರೆ ಶುದ್ಧೀಕರಣ ನಡೆಯುತ್ತಿದೆ ಎಂದರು.

ವಕೀಲರ ಹೇಳಿಕೆಗೆ ತೃಪ್ತವಾಗದ ಪೀಠ, ತಜ್ಞರ ಸಮಿತಿಯಲ್ಲಿರುವ ತಜ್ಞರು ಯಾರು? ಕೆರೆ ಸಂರಕ್ಷಣೆ ಜವಾಬ್ದಾರಿ ಹೊತ್ತಿರುವ ಅಧಿಕಾರಿ ಯಾರು? ಅವರು ಶುಕ್ರವಾರದ ವಿಚಾರಣೆ ವೇಳೆ ಖುದ್ದು ಹಾಜರಿರಬೇಕು ಎಂದು ಸೂಚಿಸಿ, ಅರ್ಜಿ ವಿಚಾರಣೆ ಮುಂದೂಡಿತು.

ಕೆರೆ ಸಂರಕ್ಷಣೆಯಲ್ಲಿ ಸರಕಾರ ವಿಫಲ: ಪ್ರಪಂಚದಲ್ಲಿ ಎಲ್ಲಾದರೂ ಬೆಂಕಿ ಹೊತ್ತಿಕೊಂಡು ಉರಿಯುತ್ತಿರುವ ಕೆರೆ ನೋಡಿದ್ದೀರಾ? ನಿಮ್ಮ ಸರಕಾರಗಳು ಯಾವ ಸಾಧನೆ ಮಾಡಿವೆ? ಎಲ್ಲ ವಿಚಾರಗಳಲ್ಲೂ ವಿಫಲವಾಗಿವೆ. ಸರಕಾರ 2017ರಲ್ಲೇ ನಗರದ ಕೆರೆಗಳನ್ನು ಸಂಪೂರ್ಣ ಶುದ್ಧಿಗೊಳಿಸುವುದಾಗಿ ಹೈಕೋರ್ಟ್‌ಗೆ ತಿಳಿಸಿತ್ತು. ಆದರೆ ಇಂದಿಗೂ ಕೆರೆ ಪರಿಸ್ಥಿತಿ ಸುಧಾರಿಸಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಫ್ಟ್‌ವೇರ್ ರಾಜಧಾನಿ ಎಂದು ಕರೆಸಿಕೊಳ್ಳುವ ಬೆಂಗಳೂರಿನ ಕೆರೆಗಳನ್ನು ಸ್ವಚ್ಛಗೊಳಿಸಲು ಸರಕಾರದ ಬಳಿ ತಜ್ಞರೇ ಇಲ್ಲ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News