ಬಿಬಿಎಂಪಿ: ನೇರ ವೇತನ ಪಾವತಿಗೆ ಒತ್ತಾಯಿಸಿ ಗುತ್ತಿಗೆ ಪೌರ ಕಾರ್ಮಿಕರ ಸಂಘದಿಂದ ಧರಣಿ

Update: 2018-07-12 16:45 GMT

ಬೆಂಗಳೂರು, ಜು.12: ನೇರ ವೇತನ ಪಾವತಿ ಆದೇಶವನ್ನು ರಾಜ್ಯ ಸರಕಾರ ಈ ಕೂಡಲೇ ಜಾರಿಗೊಳಿಸುವ ಜೊತೆಗೆ ಇನ್ನಿತರೆ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕೆಂದು ಗುತ್ತಿಗೆ ಪೌರಕಾರ್ಮಿಕರು ಇಂದಿಲ್ಲಿ ಆಗ್ರಹಿಸಿದ್ದಾರೆ.

ಗುರುವಾರ ನಗರದ ಪಾಲಿಕೆ ಕೇಂದ್ರ ಕಚೇರಿ ಮುಂದೆ ಬಿಬಿಎಂಪಿ ಗುತ್ತಿಗೆ ಪೌರ ಕಾರ್ಮಿಕರ ಸಂಘ ನೇತೃತ್ವದಲ್ಲಿ ಜಮಾಯಿಸಿದ ನೂರಾರು ಪೌರಕಾರ್ಮಿಕರು, ವೇತನ ನೀಡದ ಕಾರಣ ಸುಬ್ರಮಣಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂತಹ ಪ್ರಕರಣಗಳು ಮರುಕಳಿಸದಂತೆ ನೇರ ವೇತನ ಪಾವತಿ ಸೇರಿದಂತೆ ನಾನಾ ಬೇಡಿಕೆಗಳಿಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯನ್ನು ಬೆಂಬಲಿಸಿ ಮಾತನಾಡಿದ ಮೃತ ಪೌರಕಾರ್ಮಿಕ ಸುಬ್ರಮಣಿ ಪತ್ನಿ ಕವಿತಾ, ಪೌರ ಕಾರ್ಮಿಕರು, ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಬಿಬಿಎಂಪಿ ಮಾಡಬಾರದು. ನನ್ನ ಕುಟುಂಬಕ್ಕೆ ಆದ ಅನ್ಯಾಯ ಬೇರೆ ಯಾರಿಗೂ ಆಗಬಾರದು ಎಂದು ಹೇಳಿದರು.

ಇದುವರೆಗೂ ನನ್ನ ಪತಿಯ ಬಾಕಿ ವೇತನ ಬಿಡುಗಡೆಯಾಗಿಲ್ಲ. ಬಿಬಿಎಂಪಿ ಮೇಯರ್ 10 ಲಕ್ಷ ರೂ. ಪರಿಹಾರ ಘೋಷಿಸಿದ್ದರು. ಆ ಪೈಕಿ 5 ಲಕ್ಷ ರೂ. ಚೆಕ್ ಬ್ಯಾಂಕಿಗೆ ಹಾಕಲಾಗಿದೆ. ಉಳಿದ 5 ಲಕ್ಷ ರೂ. ಪರಿಹಾರ ಹಣ ಇನ್ನೂ ಸಿಕ್ಕಿಲ್ಲ. ಬಿಬಿಎಂಪಿ ಹೆಚ್ಚುವರಿ ಪೌರಕಾರ್ಮಿಕರ ಬಾಕಿ ವೇತನ ಬಿಡುಗಡೆ ಮಾಡಿದೆ ಎಂದು ಹೇಳಿದೆ. ಆದರೆ ಈತನಕ ಬಾಕಿ ವೇತನ ಪೌರಕಾರ್ಮಿಕರಿಗೆ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಂಘದ ಎಂ.ನಿರ್ಮಲಾ ಮಾತನಾಡಿ, ಪೌರ ಕಾರ್ಮಿಕರಿಗೆ ವೇತನ ನೀಡುವುದರಲ್ಲಿ ತಡೆ ಏಕೆ ಎನ್ನುವ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಬೇಕು. 700 ಜನಸಂಖ್ಯೆಗೆ ಓರ್ವ ಪೌರ ಕಾರ್ಮಿಕ ಎಂಬ ನೀತಿಯನ್ನು ರದ್ದುಗೊಳಿಸಬೇಕು. ಅದೇ ರೀತಿ, ಪ್ರತಿ ತಿಂಗಳು 7ನೇ ತಾರೀಖಿನೊಳಗೆ ನೇರ ವೇತನವನ್ನು ಪಾವತಿ ಮಡಲು ಸರಕಾರ ಆದೇಶಿಸಬೇಕು ಎಂದು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News