ಬೆಂಗಳೂರು: ಶುಲ್ಕ ಹೆಚ್ಚಳ ವಿರೋಧಿಸಿ ಪರೀಕ್ಷಾ ಪ್ರಾಧಿಕಾರಕ್ಕೆ ಎಬಿವಿಪಿ ಮುತ್ತಿಗೆ

Update: 2018-07-12 16:47 GMT

ಬೆಂಗಳೂರು, ಜು.12: ವೈದ್ಯಕೀಯ-ದಂತ ವೈದ್ಯಕೀಯ ಕೋರ್ಸ್‌ಗಳ ಶುಲ್ಕ ಏಕಾಏಕಿ ಹೆಚ್ಚಳ ಮಾಡಿರುವುದನ್ನು ವಿರೋಧಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಗುರುವಾರ ನಗರದ ಮಲ್ಲೇಶ್ವರಂನಲ್ಲಿರುವ ಕೆಇಎ ಕಚೇರಿ ಪ್ರಮುಖ ಪ್ರತಿಭಟನೆ ನಡೆಸಿದ ಎಬಿವಿಪಿ ಕಾರ್ಯಕರ್ತರು, ರಾಜ್ಯ ಸರಕಾರವು ಪ್ರಸ್ತುತ ಸಾಲಿನ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಶುಲ್ಕವನ್ನು ಮೂರು ಪಟ್ಟು ಹೆಚ್ಚಿಸಿ, ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ದೊರೆಯದಂತೆ ನೋಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ಹಿಂದಿನ ಸಾಲಿನಲ್ಲಿ ಸರಕಾರಿ ಕಾಲೇಜುಗಳಲ್ಲಿ ವೈದ್ಯಕೀಯ ಕೋರ್ಸ್‌ಗಳಿಗೆ 16 ಸಾವಿರ ರೂ.ಶುಲ್ಕ ಪಡೆಯಲಾಗುತಿತ್ತು. ಆದರೆ, ಪ್ರಸ್ತುತ ಸಾಲಿನಲ್ಲಿ ಏಕಾಏಕಿ ಹತ್ತರಷ್ಟು ಶುಲ್ಕ ಏರಿಕೆ ಮಾಡಲಾಗಿದೆ. ಖಾಸಗಿ ಕಾಲೇಜುಗಳಲ್ಲಿ ಸರಕಾರಿ ಸೀಟುಗಳಿಗೆ 77 ಸಾವಿರ ರೂ. ಶುಲ್ಕವನ್ನು ಪಡೆಯಲಾಗುತ್ತಿತ್ತು. ಆದರೆ, ಈ ಬಾರಿ ಬರೋಬ್ಬರಿ 97 ಸಾವಿರ ರೂ. ಶುಲ್ಕ ಪಡೆಯಲಾಗುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.

ಅದೇ ರೀತಿ, ಸರಕಾರಿ ದಂತ ವೈದ್ಯಕೀಯ ಕಾಲೇಜುಗಳಲ್ಲಿ ಈ ಹಿಂದೆ 14 ಸಾವಿರ ಶುಲ್ಕ ಪಡೆದರೆ, ಈ ಬಾರಿ 40 ಸಾವಿರ ರೂ. ಶುಲ್ಕ ನಿಗದಿ ಮಾಡಲಾಗಿದೆ. ಖಾಸಗಿ ಕಾಲೇಜಿನ ಸರಕಾರಿ ಸೀಟುಗಳಿಗೆ 49 ರೂ. ಶುಲ್ಕ ಪಡೆಯಲಾಗುತ್ತಿತ್ತು. ಈ ಬಾರಿ 63 ಸಾವಿರ ರೂ.ಗಳಿಗೆ ಏರಿಕೆ ಮಾಡಲಾಗಿದೆ ಎಂದರು.

ಈ ರೀತಿಯಲ್ಲಿ ಒಂದೇ ಬಾರಿಗೆ ಶುಲ್ಕವನ್ನು ಏರಿಕೆ ಮಾಡುವುದರಿಂದ ಉನ್ನತ ಶಿಕ್ಷಣ ಕೇವಲ ಉಳ್ಳವರ ಸ್ವತ್ತು ಎಂದು ಸರಕಾರ ಸಾರಿದಂತಿದೆ. ಖಾಸಗಿ ಕಾಲೇಜುಗಳ ಓಲೈಕೆಗೆ ಸರಕಾರ ವಾಲಿದಂತೆ ಕಾಣುತ್ತಿದೆ. ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ ಕನಸಾಗಲಿದೆ ಎಂದು ಎಬಿವಿಬಿ ಕಾರ್ಯಕರ್ತರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News