ಬಿಬಿಎಂಪಿಯ ಪೌರ ಕಾರ್ಮಿಕರಿಗೆ ವೇತನ ಬಿಡುಗಡೆಗೆ ವಿಳಂಬ: ಮೇಯರ್ ಅಸಮಾಧಾನ

Update: 2018-07-12 16:50 GMT

ಬೆಂಗಳೂರು, ಜು. 12: ಬಿಬಿಎಂಪಿಯ ಪೌರ ಕಾರ್ಮಿಕರಿಗೆ ವೇತನ ಬಿಡುಗಡೆ ಮಾಡಲು ವಲಯ ಜಂಟಿ ಆಯುಕ್ತರು ವಿಳಂಬ ಮಾಡಿದ್ದಾರೆಂದು ಮೇಯರ್ ಆರ್.ಸಂಪತ್‌ ರಾಜ್ ಅಸಮಾಧಾನ ವ್ಯಕ್ತಪಡಿಸಿದರು.

ಗುರುವಾರ ಬಿಬಿಎಂಪಿ ಕೇಂದ್ರ ಕಚೇರಿ ಕೆಂಪೇಗೌಡ ಪೌರ ಸಭಾಂಗಣದಲ್ಲಿ ನಡೆದ ಪಾಲಿಕೆ ವಿಶೇಷ ಸಭೆಯಲ್ಲಿ ಜಂಟಿ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡ ಮೇಯರ್, ವಲಯ ಆಯುಕ್ತರು ತಮ್ಮ ಜವಾಬ್ದಾರಿ ಏನೆಂಬುದನ್ನು ಅರಿತುಕೊಳ್ಳಿ ಎಂದು ತಾಕೀತು ಮಾಡಿದರು.

6 ತಿಂಗಳಿಂದ ಎಷ್ಟು ಮಂದಿ ಹೆಚ್ಚುವರಿ ಪೌರ ಕಾರ್ಮಿಕರಿದ್ದಾರೆಂಬುದು ನಿಮ್ಮ ಗಮನಕ್ಕೆ ಬಂದಿಲ್ಲ. ಬಿಬಿಎಂಪಿಯ ಎಲ್ಲ ವಲಯಗಳಲ್ಲಿ ಹೆಚ್ಚುವರಿ ಪೌರ ಕಾರ್ಮಿಕರು ಹೇಗೆ ಬಂದಿದ್ದಾರೆ. ಕೌನ್ಸಿಲ್ ಸಭೆಗೆ ತಿಳಿಸದೆ ಪೌರ ಕಾರ್ಮಿಕರನ್ನು ಹೆಚ್ಚುವರಿಯಾಗಿ ಸೇರಿಸಿಕೊಂಡಿದ್ದಾದರೂ ಏಕೆ ಎಂದು ಜಂಟಿ ಆಯುಕ್ತರುಗಳಿಗೆ ವಿವರ ಕೇಳಿದರು.

ಈ ವೇಳೆ ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ ಮಾತನಾಡಿ, ಪೌರ ಕಾರ್ಮಿಕ ಸುಬ್ರಹ್ಮಣಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣರಾದ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಆಗ್ರಹಿಸಿದರು. ಬಳಿಕ ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್ ಮಾತನಾಡಿ, ಎಲ್ಲ ವಲಯಗಳ ಜಂಟಿ ಆಯುಕ್ತರ ಮೇಲೆ ಶಿಸ್ತುಕ್ರಮ ಜರುಗಿಸಬೇಕು. ಪೌರ ಕಾರ್ಮಿಕರ ವೇತನ ಬಾಕಿ ಉಳಿಯಲು ಜಂಟಿ ಆಯುಕ್ತರುಗಳ ಬೇಜವಾಬ್ದಾರಿಯೇ ಕಾರಣ. ಇಂತಹವರ ವಿರುದ್ಧ ಶಿಸ್ತುಕ್ರಮ ಜರುಗಿಸಿ ಎಂದು ಧ್ವನಿಗೂಡಿಸಿದರು.

ಪಾಲಿಕೆ ಸದಸ್ಯ ಉಮೇಶ್‌ಶೆಟ್ಟಿ ಮಾತನಾಡಿ, ಬಿಬಿಎಂಪಿಯಿಂದ 3,330 ಪೌರಕಾರ್ಮಿಕರಿಗೆ ವೇತನ ನೀಡಲು ಸಾಧ್ಯವಾಗದ ಕಾರಣ ಒಬ್ಬ ಪೌರ ಕಾರ್ಮಿಕ ಆತ್ಮಹತ್ಯೆ ಮಾಡಿಕೊಳ್ಳಬೇಕಾಯಿತು. ಇಂತಹ ಬೇಜವಾಬ್ದಾರಿತನಕ್ಕೆ ಮತ್ತೆಷ್ಟು ಬಲಿಯಾಗಬೇಕು ಎಂದು ಏರು ಧ್ವನಿಯಲ್ಲಿ ಪ್ರಶ್ನೆ ಮಾಡಿದರು.

ಚರ್ಚಿಸಿ ನಿರ್ಧಾರ: ಸಾರಿಗೆ ತೆರಿಗೆ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ ಮೇಯರ್ ಸಂಪತ್‌ ರಾಜ್, ಸಾರಿಗೆ ಇಲಾಖೆಯಿಂದ ಬಿಬಿಎಂಪಿಗೆ ಟ್ರಾನ್ಸ್‌ಪೋರ್ಟ್ ತೆರಿಗೆ ಬಗ್ಗೆ ಯಾವುದೇ ಪ್ರಸ್ತಾವನೆ ಬಂದಿಲ್ಲ. ಬಿಎಂಟಿಸಿ ಬಸ್‌ಗಳ ಸಂಚಾರದಿಂದ ನಗರದ ರಸ್ತೆಗಳು ಹಾಳಾಗುತ್ತಿವೆ ಎನ್ನುವ ವಿಚಾರ ಈಗಾಗಲೇ ಪಾಲಿಕೆ ಸಭೆಗಳಲ್ಲಿ ಚರ್ಚೆಯಾಗಿವೆ. ತೆರಿಗೆ ವಿಧಿಸಲು ಸರಕಾರ ಮತ್ತು ಕೌನ್ಸಿಲ್ ಸಭೆಯಲ್ಲಿ ಚರ್ಚೆಯಾಗಬೇಕು. ಒಂದು ವೇಳೆ ಸರಕಾರದಿಂದ ಪ್ರಸ್ತಾವನೆ ಬಂದಲ್ಲಿ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.

ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ ಮಾತನಾಡಿ, ಸಾರ್ವಜನಿಕರು ಈಗಾಗಲೇ ಆಸ್ತಿ ತೆರಿಗೆ ಪಾವತಿಸುತ್ತಿದ್ದಾರೆ. ಅದೇ ತೆರಿಗೆಯಲ್ಲಿ ಸರಕಾರ ರಸ್ತೆ ಮತ್ತು ಸಾರ್ವಜನಿಕ ಮೂಲಭೂತ ಸೌಕರ್ಯಗಳ ವ್ಯವಸ್ಥೆಯನ್ನು ನಿರ್ವಹಿಸಬೇಕು. ರಸ್ತೆಗಳಲ್ಲಿ ಓಡಾಡುವುದಕ್ಕೂ ವಿಧಿಸಿದರೆ ಹೊರೆಯಾಗುತ್ತದೆ. ಹೊಸ ವಾಹನ ಖರೀದಿಸಿದಾಗ ಸಾರಿಗೆ ಇಲಾಖೆ ತೆರಿಗೆ ಸಂಗ್ರಹಿಸಿ ಸರಕಾರಕ್ಕೆ ಪಾವತಿಸುತ್ತಿದೆ. ಹೀಗಾಗಿ, ಹೊಸ ತೆರಿಗೆ ವಿಧಿಸುವುದು ಸರಿಯಲ್ಲ ಎಂದು ಹೇಳಿದರು...

ಟ್ರಾನ್ಸ್‌ಪೋರ್ಟ್ ಸೆಸ್‌ಗೆ ವಿರೋಧ: ದುರಸ್ತಿಯಾಗದ ರಸ್ತೆಗಳಿಂದ ಬಿಎಂಟಿಸಿ ಬಸ್ ಹಾಳಾಗುತ್ತಿವೆ ಎಂಬ ನೆಪವೊಡ್ಡಿ ಹೊಸದಾಗಿ ಬಿಬಿಎಂಪಿ ಮೂಲಕ ಸಾರಿಗೆ ತೆರಿಗೆ ವಿಧಿಸಲು ಮುಂದಾಗಿರುವ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ವಿಧಾನಸಭೆಯಲ್ಲಿ ಪ್ರಸ್ತಾವನೆ ಸಲ್ಲಿಸಿರುವುದಕ್ಕೆ ಬಿಬಿಎಂಪಿ ಸದಸ್ಯರು ವಿರೋಧ ವ್ಯಕ್ತಪಡಿಸಿದರು.

ಬಿಎಂಟಿಸಿ ಬಸ್‌ಗಳಿಂದ ನಗರದ ರಸ್ತೆಗಳು ಹಾಳಾಗುತ್ತಿವೆ. ಇದಕ್ಕೆ ಬಿಬಿಎಂಪಿಯನ್ನು ಹೊಣೆಗಾರಿಕೆ ಮಾಡುವುದು ಸರಿಯಲ್ಲ. ಇಂತಹ ಪ್ರಸ್ತಾವನೆ ಸಾರಿಗೆ ಇಲಾಖೆಯಿಂದ ಬಂದಲ್ಲಿ ಅದನ್ನು ತಿರಸ್ಕರಿಸಬೇಕೆಂದು ಮೇಯರ್ ಆರ್.ಸಂಪತ್‌ರಾಜ್ ಅವರಿಗೆ ಒತ್ತಾಯಿಸಿದರು.

ಬಿಎಂಟಿಸಿ ತನ್ನ ಬಸ್‌ಗಳ ಮೇಲೆ ಜಾಹೀರಾತು ಪ್ರಕಟಿಸಿ ಲಾಭ ಮಾಡುತ್ತಿದೆ. ಹೀಗಾಗಿ, ಬಿಎಂಟಿಸಿ ಸಂಸ್ಥೆಯೇ ಬಿಬಿಎಂಪಿಗೆ ತೆರಿಗೆ ಕಟ್ಟಲಿ. ನಗರದ ನಾಗರಿಕರು ಈಗಾಗಲೇ ಹಲವಾರು ತೆರಿಗೆಗಳನ್ನು ಕಟ್ಟುತ್ತಿದ್ದಾರೆ. ಆದರೀಗ, ಅನಗತ್ಯವಾಗಿ ಸಾರಿಗೆ ತೆರಿಗೆ ಹಾಕುವ ಪ್ರಸ್ತಾವನೆ ಸರಿಯಲ್ಲ ಎಂದು ಸದಸ್ಯರು ಒಕ್ಕೂರಲಿನಿಂದ ವಿರೋಧಿಸಿದರು.

ಪೌರ ಕಾರ್ಮಿಕ ಸುಬ್ರಮಣಿ ಆತ್ಮಹತ್ಯೆ ಪ್ರಕರಣವನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ. ಬೆಂಗಳೂರು ನಗರಾಭಿವೃದ್ಧಿ ಸಚಿವ ಜಿ.ಪರಮೇಶ್ವರ್ ಉನ್ನತ ಮಟ್ಟದ ತನಿಖೆ ನಡೆಸಲು ಸೂಚಿಸಿದ್ದಾರೆ.
-ಆರ್.ಸಂಪತ್‌ರಾಜ್, ಪಾಲಿಕೆ ಮೇಯರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News