×
Ad

ಕೊಟ್ಟ ಮಾತಿನಂತೆ ಸಿಎಂ ನಡೆದುಕೊಂಡಿಲ್ಲ: ಆಯನೂರು ಮಂಜುನಾಥ್

Update: 2018-07-12 22:24 IST

ಬೆಂಗಳೂರು, ಜು.12: ಮಹಿಳೆಯರು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಾತು ಕೇಳಿ ಗರ್ಭಿಣಿಯಾಗಿದ್ದರೆ ಬೀದಿಗೆ ಬರುತ್ತಿದ್ದರು ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಜೆಡಿಎಸ್ ಪ್ರಣಾಳಿಕೆಗೆ ಟಾಂಗ್ ನೀಡಿದ್ದಾರೆ.

ಕುಮಾರಸ್ವಾಮಿ ಜೆಡಿಎಸ್ ಪ್ರಣಾಳಿಕೆಯಲ್ಲಿ ಗರ್ಭಿಣಿ ಮಹಿಳೆಯರಿಗೆ ಪ್ರತಿ ತಿಂಗಳು 6 ಸಾವಿರ ರೂಪಾಯಿ ಕೊಡುತ್ತೇನೆಂದು ಭರವಸೆ ನೀಡಿದ್ದರು. ಆದರೆ, ಈಗ ಪ್ರತಿ ತಿಂಗಳು 1 ಸಾವಿರ ರೂ.ಕೊಡುತ್ತೇವೆ ಎಂದು ಬಜೆಟ್‌ನಲ್ಲಿ ಹೇಳಿದ್ದಾರೆ ಎಂದು ತಿಳಿಸಿದರು. ಗುರುವಾರ ವಿಧಾನ ಪರಿಷತ್‌ನಲ್ಲಿ ಬಜೆಟ್ ಮೇಲಿನ ಚರ್ಚೆಯ ವೇಳೆ ಈ ವಿಷಯ ಪ್ರಸ್ತಾಪಿಸಿದ ಆಯನೂರು ಮಂಜುನಾಥ್, ಕುಮಾರಸ್ವಾಮಿ ಮಾತು ತಪ್ಪಿದ್ದಾರೆ. ಅವರ ಮಾತನ್ನು ಮಹಿಳೆಯರು ಕೇಳಿ, ಗರ್ಭಿಣಿಯಾಗಿದ್ದರೆ ಅವರ ಸ್ಥಿತಿ ಹರೋಹರ ಎಂದರು.

ಆಯನೂರು ಮಂಜುನಾಥ್ ಬಳಸಿದ ಪದಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ತೀವ್ರ ವಾಗ್ವಾದ ನಡೆಯಿತು. ಸಭಾನಾಯಕಿ ಡಾ. ಜಯಮಾಲಾ, ಆಡಳಿತ ಪಕ್ಷದ ಸದಸ್ಯರಾದ ವಿ.ಎಸ್. ಉಗ್ರಪ್ಪ, ಜಯಮ್ಮ ಬಾಲರಾಜು, ವೀಣಾ ಅಚ್ಚಯ್ಯ ಅವರು ಮಂಜುನಾಥ್ ಅವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಯಾರು ಯಾರನ್ನು ಕೇಳಿ ಗರ್ಭಿಣಿಯಾಗುವುದಿಲ್ಲ ಎಂದು ತಿರುಗೇಟು ನೀಡಿದರು. ಇದರಿಂದ ಮತ್ತೆ ಆಡಳಿತ ಹಾಗೂ ಪ್ರತಿಪಕ್ಷದ ಸದಸ್ಯರ ನಡುವೆ ಗದ್ದಲ, ಕೋಲಾಹಲಕ್ಕೆ ಕಾರಣವಾಯಿತು.

ಈ ವೇಳೆ ಮಧ್ಯ ಪ್ರವೇಶಿಸಿದ ವಿ.ಎಸ್. ಉಗ್ರಪ್ಪ, ಹೆಣ್ಣು ಮಕ್ಕಳ ಬಗ್ಗೆ ಅಗೌರವದಿಂದ ನಡೆದುಕೊಳ್ಳುವ ಸಂಸ್ಕೃತಿ ಸರಿಯಲ್ಲ. ಇದು ಮನು ಸಂಸ್ಕೃತಿಯನ್ನು ಬಿಂಬಿಸುತ್ತದೆ ಎಂದು ತಿರುಗೇಟು ನೀಡಿದರು.

ಮತ್ತೆ ಮಾತು ಮುಂದುವರೆಸಿದ ಆಯನೂರು ಮಂಜುನಾಥ್, ನೇಕಾರರ ಸಾಲ, ಮೀನುಗಾರರ ಸಾಲವನ್ನು ಮನ್ನಾ ಮಾಡುತ್ತೇವೆ ಎಂದು ಭರವಸೆ ನೀಡಿದರು. ಆದರೂ ಆ ಭರವಸೆಯನ್ನು ಈಡೇರಿಸಲಿಲ್ಲ ಎಂದು ಹೇಳಿದರು. ಪ್ರಾಮಾಣಿಕವಾಗಿ ಸಾಲ ತೀರಿಸಿದ ರೈತರಿಗೆ 25 ಸಾವಿರ ರೂ.ಸಾಲಮನ್ನಾ ಮಾಡುತ್ತೇವೆ ಎಂದು ಹೇಳುತ್ತಾರೆ. ಅಪ್ರಾಮಾಣಿಕವಾಗಿ ಸಾಲ ತೀರಿಸದ ರೈತರಿಗೆ 2 ಲಕ್ಷ ರೂ.ಸಾಲಮನ್ನಾ ಮಾಡಿದ್ದಾರೆ. ಇಷ್ಟೇ ಅಲ್ಲದೆ, 7 ಕೆಜಿ ಅಕ್ಕಿ ನೀಡುವ ಬದಲಿಗೆ 5 ಕೆಜಿ ಅಕ್ಕಿ ನೀಡಲು ಬಜೆಟ್‌ನಲ್ಲಿ ಆದೇಶಿಸಿದ್ದಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News