ನಡಾಲ್ ಸೆಮಿ ಫೈನಲ್‌ಗೆ: ಜೊಕೊವಿಕ್ ಎದುರಾಳಿ

Update: 2018-07-12 18:30 GMT

ಲಂಡನ್, ಜು.12: ವಿಶ್ವದ ನಂ.1 ಆಟಗಾರ ರಫೆಲ್ ನಡಾಲ್ ಅರ್ಜೆಂಟೀನದ ಜುಯಾನ್ ಮಾರ್ಟಿನ್ ಡೆಲ್ ಪೊಟ್ರೊರನ್ನು ಐದು ಸೆಟ್‌ಗಳ ಅಂತರದಿಂದ ಸೋಲಿಸುವ ಮೂಲಕ ವಿಂಬಲ್ಡನ್ ಟೆನಿಸ್ ಚಾಂಪಿಯನ್‌ಶಿಪ್‌ನ ಪುರುಷರ ಸಿಂಗಲ್ಸ್‌ನಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದಾರೆ.

ಇಲ್ಲಿ ಬುಧವಾರ ರಾತ್ರಿ 4 ಗಂಟೆ, 48 ನಿಮಿಷಗಳ ಕಾಲ ನಡೆದ ಮ್ಯಾರಥಾನ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನಡಾಲ್ ಅವರು ಡೆಲ್ ಪೊಟ್ರೊರನ್ನು 7-5, 6-7(7), 4-6, 6-4, 6-4 ಸೆಟ್‌ಗಳಿಂದ ಮಣಿಸಿದರು. 2011ರ ಬಳಿಕ ಮೊದಲ ಬಾರಿ ವಿಂಬಲ್ಡನ್ ಟೂರ್ನಿಯಲ್ಲಿ ಅಂತಿಮ-4ರ ಹಂತ ತಲುಪಿದರು. ಈ ಪಂದ್ಯವು ಈ ವರ್ಷದ ಟೂರ್ನಿಯಲ್ಲಿ ನಡೆದ ದೀರ್ಘಾವಧಿಯ ಪಂದ್ಯವಾಗಿದೆ. ಸ್ಪೇನ್ ಆಟಗಾರ ನಡಾಲ್ ಸೆಮಿ ಫೈನಲ್ ಸುತ್ತಿನಲ್ಲಿ ಸರ್ಬಿಯದ ನೊವಾಕ್ ಜೊಕೊವಿಕ್‌ರನ್ನು ಎದುರಿಸಲಿದ್ದಾರೆ. 2011ರ ವಿಂಬಲ್ಡನ್ ಫೈನಲ್‌ನಲ್ಲಿ ಈ ಇಬ್ಬರು ಆಟಗಾರರು ಮುಖಾಮುಖಿಯಾಗಿದ್ದರು. ಮತ್ತೊಂದು ಕ್ವಾರ್ಟರ್ ಫೈನಲ್‌ನಲ್ಲಿ ಅಮೆರಿಕದ ಜಾನ್ ಇಸ್ನೆರ್ ತನ್ನ 41ನೇ ಪ್ರಯತ್ನದಲ್ಲಿ ಮೊದಲ ಬಾರಿ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದಾರೆ. ಈ ಮೂಲಕ ಸ್ಯಾಮ್ ಕ್ವೆರ್ರಿ(42 ಪ್ರಯತ್ನ)ನಂತರ ದೀರ್ಘ ಸಮಯದ ಬಳಿಕ ಸೆಮಿ ಫೈನಲ್‌ಗೆ ತಲುಪಿದ ಎರಡನೇ ಆಟಗಾರ ಎನಿಸಿಕೊಂಡರು.

ಬುಧವಾರ ನಡೆದ ಪಂದ್ಯದಲ್ಲಿ ಇಸ್ನೆರ್ ಕೆನಡಾದ ಮಿಲೊಸ್ ರಾವೊನಿಕ್‌ರನ್ನು 6-7(5), 7-6(7), 6-4, 6-3 ಸೆಟ್‌ಗಳಿಂದ ಮಣಿಸಿದರು. ಇಸ್ನೆರ್ ಸೆಮಿ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕದ ಕೆವಿನ್ ಆ್ಯಂಡರ್ಸನ್ ಸವಾಲು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News