ಅಪಾಯದ ಅಂಚಿನಲ್ಲಿ ಭಾರತದ ಸಾರ್ವಜನಿಕ ಉನ್ನತ ಶಿಕ್ಷಣ ವ್ಯವಸ್ಥೆ!

Update: 2018-07-13 18:30 GMT

ಭಾಗ-2

ಜೆ.ಎನ್.ಯು. ವಿದ್ಯಾರ್ಥಿಗಳಿಗೆ ದೇಶದ್ರೋಹಿ ಪಟ್ಟ ಮರಣ ದಂಡನೆಯಂತಹ ಕಠಿಣ ಶಿಕ್ಷೆಯ ವಿರುದ್ಧವಾಗಿ - 2016ರ ಫೆಬ್ರವರಿಯಲ್ಲಿ ದೇಶದ ಪ್ರತಿಷ್ಠಿತ ಜವಾಹರ ಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ನಡೆದ ಪ್ರತಿಭಟನಾ ರ್ಯಾಲಿಯಲ್ಲಿ ಎಡ ಪಂಥೀಯ ವಿದ್ಯಾರ್ಥಿ ಸಂಘಟನೆಗಳು ದೇಶದ್ರೋಹಿ ಘೋಷಣೆಗಳನ್ನು ಕೂಗಿದ್ದರೆಂದು ಆರೋಪಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು ರ್ಯಾಲಿಯ ಆಯೋಜಕರ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಕ್ರಮಕೈಗೊಳ್ಳಲು ಕೋರುತ್ತದೆ. ತನಿಖಾ ಸಂಸ್ಥೆಗಳು ಏಕ ಪಕ್ಷೀಯವಾಗಿ ವಿಷಯದ ಸತ್ಯಾಸತ್ಯತೆಯನ್ನು ವಿಚಾರಣೆ ನಡೆಸದೆ ಜೆಎನ್‌ಯುನ ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಿದ್ದ ಕನ್ಹಯ್ಯ ಕುಮಾರರನ್ನು ಬಂಧಿಸುವ ಮೂಲಕ ಮೂಲಭೂತ ಹಕ್ಕುಗಳಾದ ಮಾತನಾಡುವ ಹಕ್ಕು ಮತ್ತು ಪ್ರಶ್ನಿಸುವ ಹಕ್ಕನ್ನು ಉಲ್ಲಂಘಿಸಿದ್ದು, ಬಲಪಂಥೀಯವಲ್ಲದ ಯಾವುದೇ ವಿಚಾರಧಾರೆಗಳ ಬಗೆಗಿನ ಕೇಂದ್ರ ಸರಕಾರದ ಅಸಹಿಷ್ಣತೆಯನ್ನು ಜಗಜ್ಜಾಹೀರು ಮಾಡಿತ್ತು. ರ್ಯಾಲಿಯಲ್ಲಿ ಕೂಗಿದ್ದ ಘೋಷಣೆಗಳನ್ನು ತಿರುಚಿ ದೇಶದ್ರೋಹಿ ಘೋಷಣೆಗಳಿದ್ದ ವೀಡಿಯೊವನ್ನು ಪ್ರಚಾರ ಮಾಡಲಾಗಿತ್ತು, ಇದರ ಅಸಲಿ ವೀಡಿಯೊ ಬೆಳಕಿಗೆ ಬಂದಾಗ ಕೇಂದ್ರ ಸರಕಾರಕ್ಕೆ ಭಾರೀ ಮುಖಭಂಗವಾಗಿತ್ತು.

ನೇರ ಸಂದರ್ಶನಕ್ಕೆ ಹೆಚ್ಚಿನ ಆದ್ಯತೆ:  

ಈ ಹಿಂದೆ ಉನ್ನತ ವಿದ್ಯಾ ಸಂಸ್ಥೆಗಳಲ್ಲಿ ಸಂಶೋಧನಾ ವಿದ್ಯಾರ್ಥಿಗಳ ದಾಖಲಾತಿಯು ಲಿಖಿತ ಪರೀಕ್ಷೆ, ಸಂದರ್ಶನದ ಆಧಾರದ ಮೇಲೆ ನಡೆಯುತ್ತಿತ್ತು. ಆದರೆ ಇತ್ತೀಚಿಗೆ ವಿಶ್ವವಿದ್ಯಾನಿಲಯಗಳ ಅನುದಾನ ಆಯೋಗ (ಯುಜಿಸಿ)ವು ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ. ಇದರ ಪ್ರಕಾರ ಲಿಖಿತ ಪರೀಕ್ಷೆಯಲ್ಲಿ ಅಭ್ಯರ್ಥಿಯು ಎಷ್ಟೇ ಅಂಕಗಳನ್ನು ಪಡೆದಿದ್ದರೂ ಅದಕ್ಕೆ ಆದ್ಯತೆ ನೀಡದೆ, ಲಿಖಿತ ಪರೀಕ್ಷೆಯನ್ನು ಕನಿಷ್ಠ ಅರ್ಹತೆಯನ್ನಾಗಿಸಿ. ಆಯ್ಕೆಯಲ್ಲಿ ಸಂದರ್ಶನವನ್ನೇ ಪ್ರಮುಖ ಮಾನದಂಡವಾಗಿ ನಿಗದಿಮಾಡಲಾಗಿದೆ. ಇದು ಪ್ರತಿಭಾವಂತರನ್ನು ಆಯ್ಕೆ ಮಾಡದೆ, ಸ್ವಜನಪಕ್ಷಪಾತ, ವಾಮ ಮಾರ್ಗಗಳ ಮುಖಾಂತರ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಹುನ್ನಾರವಾಗಿದೆ. ಇದರಿಂದಾಗಿ ಜಾತಿವಾದಿ, ಕೋಮುವಾದಿ ಪ್ರಾಧ್ಯಾಪಕರು ಉದ್ದೇಶಪೂರ್ವಕವಾಗಿ ಪರಿಶಿಷ್ಟ ಜಾತಿ/ಪಂಗಡ, ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸೀಟು ನೀಡದೆ ಉನ್ನತ ಶಿಕ್ಷಣವು ಇವರ ಕೈಗೆಟುಕದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ದಾಖಲಾತಿ ಪ್ರಮಾಣ ಕಡಿತ:  
ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕ-ವಿದ್ಯಾರ್ಥಿಗಳ ಅನುಪಾತದ ಆಧಾರದ ಮೇಲೆ ದಾಖಲಾತಿ ನಿಗದಿಪಡಿಸಲು ಯುಜಿಸಿ ಕ್ರಮ ಕೈಗೊಂಡಿರುತ್ತದೆ. ಇದರಿಂದಾಗಿ ವಿವಿಗಳಲ್ಲಿ ಆಯಾ ಶೈಕ್ಷಣಿಕ ವರ್ಷದಲ್ಲಿ ದಾಖಲಾತಿ ಪ್ರಮಾಣಕಡಿತಗೊಳಿಸಿ ಅಧಿಸೂಚನೆ ಹೊರಡಿಸಲಾಗುತ್ತಿದೆ. ಉನ್ನತ ಶಿಕ್ಷಣಕ್ಕೆ ಬೇಡಿಕೆ ಹೆಚ್ಚಾಗಿರುವುದರಿಂದ ಹೆಚ್ಚಿನ ಪ್ರಾಧ್ಯಾಪಕರನ್ನು ನೇಮಕ ಮಾಡಿಕೊಳ್ಳದೆ, ಪ್ರಾಧ್ಯಾಪಕರ ಕೊರತೆಯ ಕಾರಣ ನೀಡಿ ದಾಖಲಾತಿಗಳನ್ನು ಕಡಿಮೆ ಮಾಡುತ್ತಿರುವುದು ಸಂವಿಧಾನ ವಿರೋಧಿನೀತಿಯಾಗಿದೆ. ಈ ನಿರ್ಬಂಧದಿಂದಾಗಿ ಇತ್ತೀಚೆಗೆ ಉನ್ನತ ವಿದ್ಯಾಭ್ಯಾಸದ ಕನಸು ಕಟ್ಟಿಕೊಂಡು ಬರುತ್ತಿರುವ ಪರಿಶಿಷ್ಟ ಜಾತಿ/ಪಂಗಡದ, ಹಿಂದುಳಿದ ಜಾತಿಗಳ, ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಅವಕಾಶವಂಚಿತರಾಗುತ್ತಿದ್ದಾರೆ. ಉದಾಹರಣೆಗೆ 2017ರಲ್ಲಿ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯದ ಮಾನವ ಹಕ್ಕುಗಳ ವಿಭಾಗದಲ್ಲಿ ದಾಖಲಾತಿಗಾಗಿ ಅಧಿಸೂಚನೆ ಹೊರಡಿಸಿದ್ದ, ವಿ.ವಿ.ಯು ಲಿಖಿತ ಪರೀಕ್ಷೆ ನಡೆಸಿದ ನಂತರ ಪ್ರಾಧ್ಯಾಪಕರ ಕೊರತೆಯ ಕಾರಣ ನೀಡಿ ಈ ವಿಭಾಗದ ದಾಖಲಾತಿಯನ್ನು ಹಿಂಪಡೆದಿರುತ್ತದೆ. ಪ್ರಾಧ್ಯಾಪಕರ ಕೊರತೆಯ ಕಾರಣ ಹಾಸ್ಯಾಸ್ಪದವೇ ಸರಿ.

ವರ್ಷಕ್ಕೊಮ್ಮೆ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ  

ಪ್ರಾಧ್ಯಾಪಕರಾಗುವ ಕನಸು ಹೊತ್ತ ಲಕ್ಷಾಂತರ ಮಂದಿಗೆ ಯುಜಿಸಿಯು ಈ ಹಿಂದೆ ವರ್ಷದಲ್ಲಿ ಎರಡು ಬಾರಿ ಅರ್ಹತಾ ಪರೀಕ್ಷೆಯನ್ನು, CBSE ಮುಖಾಂತರ ನಡೆಸಿ ಪ್ರತಿ ವಿಷಯದಲ್ಲಿ ಹೆಚ್ಚಿನ ಅಂಕಗಳಿಸುವ ಶೇ. 15ರಷ್ಟು ವಿದ್ಯಾರ್ಥಿಗಳಿಗೆ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಲು ಅರ್ಹತಾ ಪ್ರಮಾಣ ಪತ್ರವನ್ನು ನೀಡಲಾಗುತ್ತಿತ್ತು. ಆದರೆ ಯಾವುದೇ ವೈಜ್ಞಾನಿಕ ಕಾರಣ ನೀಡದೆ ಯುಜಿಸಿಯು ಅರ್ಹತಾ ಪರೀಕ್ಷೆಯನ್ನು ‘‘ಇನ್ನು ಮುಂದೆ ವರ್ಷಕ್ಕೊಮ್ಮೆ’’ ನಡೆಸುವುದಾಗಿ ಆದೇಶ ಹೊರಡಿಸಿತು. ವರ್ಷಕ್ಕೆ ಎರಡು ಬಾರಿ ಅರ್ಹತಾ ಪರೀಕ್ಷೆ ನಡೆಸುತ್ತಿದ್ದುದರಿಂದ ಪ್ರಾಧ್ಯಾಪಕರಾಗುವ ಕನಸು ಹೊತ್ತ ದೇಶದ ಬಹುಸಂಖ್ಯಾತರಾಗಿರುವ ಪರಿಶಿಷ್ಟ ಜಾತಿ/ಪಂಗಡದ ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಪ್ರತಿಭಾವಂತರು ಅವಕಾಶ ಪಡೆಯುತ್ತಿದ್ದರು. ಇದನ್ನು ಮೊಟಕುಗೊಳಿಸಿ ಯುಜಿಸಿ ವರ್ಷಕ್ಕೊಮ್ಮೆ ಅರ್ಹತಾ ಪರೀಕ್ಷೆ ನಡೆಸುವುದರಿಂದಾಗಿ ಎಲ್ಲಾ ವಿವಿಗಳ ಸಾವಿರಾರು ವಿದ್ಯಾರ್ಥಿಗಳು ವರ್ಷಕ್ಕೆ ಒಂದೇ ಪ್ರಯತ್ನದಲ್ಲಿ ಉತ್ತೀರ್ಣಗೊಳ್ಳಲು ಸಾಧ್ಯವಾಗದೆ, ಮಾನಸಿಕ ಒತ್ತಡಕ್ಕೆ ಒಳಗಾಗಬಹುದು. ವಿದ್ಯೆಗೆ ತಕ್ಕಂತಹ ಉದ್ಯೋಗ ಪಡೆಯುವ ದಾರಿಯನ್ನು ಮುಚ್ಚುವ ಪ್ರಯತ್ನ ಇದಾಗಿತ್ತು. ಆನಂತರ ಯುಜಿಸಿಯ ಈ ಕ್ರಮದ ವಿರುದ್ಧ ನಡೆದ ತೀವ್ರ ಪ್ರತಿಭಟನೆಗೆ ಮಣಿದ ಕೇಂದ್ರ ಸರಕಾರ ಅರ್ಹತಾ ಪರೀಕ್ಷೆಯನ್ನು ವರ್ಷಕ್ಕೆರಡು ಬಾರಿ ನಡೆಸುವ ಕ್ರಮವನ್ನೇ ಮುಂದುವರಿಸುತ್ತೇವೆಂದು ಆಶ್ವಾಸನೆ ನೀಡಿದೆ.

ಸಹಾಯಧನದ ಪಟ್ಟಿಯಿಂದ ಹೊರಕ್ಕೆ   

ಪರಿಶಿಷ್ಟ ಜಾತಿ/ಪಂಗಡದ ವಿದ್ಯಾರ್ಥಿಗಳಿಗೆ ನೀಡುವ ರಾಷ್ಟ್ರೀಯ ಫೆಲೋಶಿಪ್ ಯೋಜನೆಯನ್ನು ದಕ್ಷ ಹಾಗೂ ಪರಿಣಾಮಕಾರಿಯಾಗಿ ನಡೆಸಲಾಗದ ಯುಜಿಸಿಯು ಉದ್ದೇಶಪೂರ್ವಕವಾಗಿಯೇ 2016-17ನೇ ಸಾಲಿನಲ್ಲಿ ಆಯ್ಕೆಯಾಗಿದ್ದಂತಹ 200ಕ್ಕೂ ಹೆಚ್ಚು ಪರಿಶಿಷ್ಟ ಜಾತಿ/ಪಂಗಡದ ವಿದ್ಯಾರ್ಥಿಗಳನ್ನು ಪರಿಷ್ಕೃತ ಪಟ್ಟಿಯಿಂದ ಕೈಬಿಡಲಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳು ಮಾನಸಿಕವಾಗಿ ಕುಗ್ಗಿದ್ದಾರೆ. ವಿದ್ಯಾರ್ಥಿಗಳ ಶೈಕ್ಷಣಿಕ ಹಾದಿಯು ಬಹಳ ಕಠಿಣವಾಗಿದೆ. ಅಲ್ಲದೆ ಪ್ರತಿವರ್ಷ ನೀಡುತ್ತಿದ್ದ ಈ ಫೆಲೋಶಿಪ್ ಕಾರ್ಯಕ್ರಮಕ್ಕೆ 2018-19ನೇ ಸಾಲಿನಲ್ಲಿ ಈವರೆಗೂ ಅಧಿಸೂಚನೆ ಹೊರಡಿಸಿರುವುದಿಲ್ಲ. ಇದರಿಂದಾಗಿ ಸಾವಿರಾರು ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಅತಂತ್ರ ಸ್ಥಿತಿಯಲ್ಲಿದೆ. TISS  (ಟಾಟಾ ಇನ್ಸ್‌ಟಿಟ್ಯೂಟ್ ಆಫ್ ಸೋಷಿಯಲ್ ಸಾಯನ್ಸಸ್): ಯುಜಿಸಿಯು ಟಾಟಾ ಇನ್ಸ್‌ಟಿಟ್ಯೂಟ್ ಆಫ್ ಸೋಷಿಯಲ್ ಸಾಯನ್ಸಸ್‌ನ ಪರಿಶಿಷ್ಟ ಜಾತಿ/ಪಂಗಡದ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಅನುದಾನವನ್ನು ನಿಲ್ಲಿಸಿ ಆದೇಶ ಹೊರಡಿಸಿದೆ. ಈ ನಿರ್ಧಾರವನ್ನು ಪ್ರಶ್ನಿಸಿ ಐಖಖನ ಎಲ್ಲಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿದ್ದರು. ಇದರಿಂದಾಗಿ ಬೆದರಿದ ಸಂಸ್ಥೆಯ ಆಡಳಿತ ಮಂಡಳಿಯು ತಾತ್ಕಾಲಿಕವಾಗಿ ವಿದ್ಯಾರ್ಥಿಗಳ ಬೇಡಿಕೆಯನ್ನು ಒಪ್ಪಿಕೊಂಡಿದೆಯಾದರೂ ಮುಂದಿನ ದಿನಗಳಲ್ಲಿ ಅನುದಾನದ ಕೊರತೆಯಿಂದಾಗಿ ಪರಿಶಿಷ್ಟ ಜಾತಿ/ಪಂಗಡದ ವಿದ್ಯಾರ್ಥಿಗಳು TISSಗೆ ಸೇರಲು ಕಠಿಣವಾಗಲಿದೆ.

ಉನ್ನತ ಶಿಕ್ಷಣದ ಖಾಸಗೀಕರಣ: ಯುಜಿಸಿಯ ಇತ್ತೀಚಿನ ಸುತ್ತೋಲೆಗಳನ್ವಯ ಸಾರ್ವಜನಿಕ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಹೆಚ್ಚಿನ ಸ್ವಾಯತ್ತತೆ ನೀಡುವ ಹಾಗೂ ಶೈಕ್ಷಣಿಕ ಗುಣಮಟ್ಟವನ್ನು ಅಂತರ್‌ರಾಷ್ಟ್ರೀಯ ಮಟ್ಟಕೇರಿಸುವ ನೆಪದಲ್ಲಿ ವಿದೇಶಿ ವಿಶ್ವವಿದ್ಯಾನಿಲಯಗಳೊಂದಿಗೆ ಒಪ್ಪಂದಗಳನ್ನು ಮಾಡಿಕೊಂಡು ಖಾಸಗಿ ವ್ಯಕ್ತಿಗಳ ಹಾಗೂ ಖಾಸಗಿ ಸಂಸ್ಥೆಗಳನ್ನು ಪಾಲುದಾರರನ್ನಾಗಿಸಲು ಹೊರಟಿದೆ. ವಿವಿಗಳಿಗೆ ಅನುದಾನಗಳನ್ನು ಕಡಿತಗೊಳಿಸಿ, ಮೀಸಲಾತಿ ನೀತಿಯನ್ನು ಕಿತ್ತೊಗೆದು ಹಾಗೂ ಈ ಸಂಸ್ಥೆಗಳನ್ನು ‘ಸೆಲ್ಫ್ ಫೈನಾನ್ಸ್ಡ್’ ಸಂಸ್ಥೆಗಳನ್ನಾಗಿ ಮಾರ್ಪಾಡು ಮಾಡಿ, ಹೆಚ್ಚಿನ ಶುಲ್ಕಗಳನ್ನು ನಿಗದಿ ಮಾಡುವುದು, ಇದರ ಅಂತರ್ಗತ ಉದ್ದೇಶವಾಗಿದೆ. ಉದಾಹರಣೆಗೆ: ಇತ್ತೀಚೆಗೆ ಮುಖೇಶ್ ಅಂಬಾನಿ ಒಡೆತನದ ಜಿಯೋ ಇನ್ಸ್‌ಟಿಟ್ಯೂಟ್‌ಗೆ ‘ಶ್ರೇಷ್ಠ ಶಿಕ್ಷಣ ಸಂಸ್ಥೆ’ ಸ್ಥಾನಮಾನ ನೀಡಿರುವುದು, ಬಿಜೆಪಿ ಹಾಗೂ ಬಂಡವಾಳಶಾಹಿಗಳ ದೋಸ್ತಿಯು ಉನ್ನತ ಶಿಕ್ಷಣ ವ್ಯವಸ್ಥೆಯ ಮೇಲೆ ನಡೆಸುತ್ತಿರುವ ಕಾರ್ಪೊರೇಟ್ ದಾಳಿಗೆ ಸಾಕ್ಷಿಯಾಗಿದೆ. ಈ ನಿರ್ಧಾರವು ಸಾರ್ವಜನಿಕ ಶಿಕ್ಷಣ ಸಂಸ್ಥೆಗಳ ಸಾಮಾಜಿಕ ನ್ಯಾಯ ಹಾಗೂ ಸಾಮಾಜಿಕ ಜವಾಬ್ದಾರಿಯ ಗುರಿಯನ್ನು ದಾರಿ ತಪ್ಪಿಸಲಿದೆ. ಸಾವಿರಾರು ಪರಿಶಿಷ್ಟ ಜಾತಿ/ಪಂಗಡದ, ಹಿಂದುಳಿದ ಜಾತಿಗಳ ಹಾಗೂ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸದ ಕನಸನ್ನು ಕಾಣುವ ಸಾಹಸ ಮಾಡದಂತೆ ಎಚ್ಚರವಹಿಸಿ ಅವಕಾಶವಂಚಿತರನ್ನಾಗಿಸುತ್ತಿದ್ದಾರೆ.

ಮೀಸಲಾತಿಯನ್ನು ಕೊಣೆಗಾಣಿಸುವ ಪ್ರಯತ್ನ: 

ಸಾರ್ವಜನಿಕ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕ ಹುದ್ದೆಗಳಿಗೆ ನಡೆಯುವ ನೇಮಕಾತಿಯಲ್ಲಿ ಇಡೀ ವಿಶ್ವ ವಿದ್ಯಾನಿಲಯವನ್ನು ಒಂದು ಘಟಕವನ್ನಾಗಿ ಪರಿಗಣಿಸಿ ರೋಸ್ಟರ್ ವಿಧಾನದಂತೆ ಆಯಾ ಸಂಬಂಧಪಟ್ಟ ಬಿಂದುಗಳನ್ವಯ ಸಾಮಾನ್ಯ ವರ್ಗ, ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ವಿಕಲಚೇತನರಿಗೆ ನೇಮಕಾತಿಯಲ್ಲಿ ಪ್ರತಿನಿಧಿತ್ವ ನೀಡಲಾಗುತ್ತಿತ್ತು. ಆದರೆ ಅಲಹಾಬಾದ್ ಹೈಕೋರ್ಟ್‌ನ ಇತ್ತೀಚಿನ ಪ್ರಕರಣವೊಂದರ ತೀರ್ಪಿನನ್ವಯ ಮುಂದಿನ ನೇಮಕಾತಿಗಳಲ್ಲಿ ಇಡೀ ವಿಶ್ವವಿದ್ಯಾನಿಲಯವನ್ನು ಒಂದು ಘಟಕವನ್ನಾಗಿ ಪರಿಗಣಿಸುವ ಬದಲು ಆಯಾ ವಿಭಾಗವನ್ನು ಒಂದು ಘಟಕವನ್ನಾಗಿ ಪರಿಗಣಿಸಲು ಆದೇಶ ನೀಡಿದೆ. ಇದರಿಂದಾಗಿ ಆಯಾ ವಿಭಾಗಗಳಲ್ಲಿ ರೋಸ್ಟರ್‌ನಂತೆ ನೇಮಕಾತಿ ಮಾಡಲು ಮುಂದಾದರೆ ಮೀಸಲಾತಿ ಪಡೆಯುವ ಸಮುದಾಯಗಳಿಗೆ ರೋಸ್ಟರ್ ಬಿಂದುವಿನಂತೆ ಅವಕಾಶವೇ ಸಿಗದಂತಾಗುತ್ತದೆ, ಅವಕಾಶ ಸಿಗಬೇಕಾದರೆ ಈ ಸಮುದಾಯಗಳು ಹಲವಾರು ವರ್ಷಗಳ ಕಾಲ ಕಾಯಬೇಕಾಗುತ್ತದೆ. ಒಂದು ವಿಶ್ವವಿದ್ಯಾನಿಲಯವು ಸಮಗ್ರವಾಗಿ ಕಾರ್ಯ ನಿರ್ವಹಿಸುವುದರಿಂದ ನೇಮಕಾತಿಗಳು ಸಹ ಸಮಗ್ರವಾಗಿಯೇ ನಡೆಯಬೇಕಾಗಿರುತ್ತದೆ. ವಿಭಾಗ ಆಧರಿತ ನೇಮಕಾತಿಗೆ ಪ್ರತಿ ವಿಭಾಗಕ್ಕೊಂದರಂತೆ ರೋಸ್ಟರ್ ಪದ್ಧತಿ ಅಳವಡಿಸಿಕೊಳ್ಳಬೇಕಾಗುತ್ತದೆ. ಇದರಿಂದಾಗಿ ಇಲ್ಲಿಯವರೆಗಿನ ಅವಕಾಶ ವಂಚಿತ ಸಮುದಾಯಗಳ ಪ್ರಾತಿನಿಧ್ಯ ಕಡಿಮೆಯಾಗುತ್ತದೆ. ಹೊಸ ಮಾರ್ಗದರ್ಶನಗಳನ್ವಯ ಹಲವಾರು ವಿಶ್ವವಿದ್ಯಾನಿಲಯಗಳು ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿದ್ದವು. ಇದು ಮೀಸಲಾತಿಯನ್ನು ಕೇವಲ ನಾಮಮಾತ್ರವಾಗಿಸಿ ಆಚರಣೆಯಲ್ಲಿ ಇಲ್ಲದಂತಾಗಿಸುವ ತಂತ್ರವಾಗಿದೆ.

ವಿಶ್ವವಿದ್ಯಾನಿಲಯಗಳ ಮೇಲೆ ಕೇಂದ್ರ ಸರಕಾರದ ನೇರ ನಿಯಂತ್ರಣ:
ಇತ್ತೀಚೆಗೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಿ ಪ್ರಕಾಶ್ ಜಾವಡೇಕರ್ ಮಾಡಿದ ಪ್ರಕಟನೆಯಲ್ಲಿ ಯುಜಿಸಿಯನ್ನು ರದ್ದುಗೊಳಿಸಿ ಭಾರತ ಉನ್ನತ ಶಿಕ್ಷಣ ಆಯೋಗವನ್ನು ರಚಿಸುವ ಪ್ರಸ್ತಾವನೆಯನ್ನು ಮುಂದಿಟ್ಟರು, ಅದರ ಕರಡಿನಲ್ಲಿನ ಅಂಶಗಳ ಚರ್ಚೆಗೆ ಮತ್ತು ಸಲಹೆಗೆ ಹತ್ತು ದಿನಗಳ ಅವಕಾಶ ಕಲ್ಪಿಸಲಾಯಿತು. ಈ ಕರಡಿನಲ್ಲಿ ಯುಜಿಸಿಯನ್ನು ರದ್ದುಗೊಳಿಸಲು ಯಾವುದೇ ಸ್ಪಷ್ಟ ಕಾರಣಗಳನ್ನು ನೀಡಿರುವುದಿಲ್ಲ, ಅಲ್ಲದೆ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿನ ಗಂಭೀರ ಸಮಸ್ಯೆಗಳ ಬಗ್ಗೆ ಚರ್ಚೆ ಇಲ್ಲದಿರುವುದು, ಸಮಸ್ಯೆಗಳ ಪರಿಷ್ಕಾರಕ್ಕಾಗಿ ಉತ್ತಮ ಪದ್ಧತಿಗಳ ಬಗ್ಗೆ ಪ್ರಸ್ತಾವನೆಯಾಗಲಿ ಎಲ್ಲಿಯೂ ಕಾಣಸಿಗುವುದಿಲ್ಲ. ಬದಲಾಗುತ್ತಿರುವ ಪರಿಸ್ಥಿತಿಗಳಿಗೆ ಅನುಗುಣವಾದ ಉನ್ನತ ಶಿಕ್ಷಣ ಮಾದರಿ ಬಗ್ಗೆ ಸಮಗ್ರ ದೃಷ್ಟಿಕೋನದ ಕೊರತೆ ಎದ್ದುಕಾಣುತ್ತಿತ್ತು.

ಈ ನಿಟ್ಟಿನಲ್ಲಿ ವಿಶ್ವವಿದ್ಯಾನಿಲಯಗಳು ತಮ್ಮ ಸ್ವಾಯತ್ತೆಯನ್ನು ಕಳೆದುಕೊಳ್ಳುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಅದಲ್ಲದೆ ನೇರವಾಗಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರ ಅಧ್ಯಕ್ಷತೆಯಲ್ಲಿಯೇ ಪ್ರಸ್ತಾಪಿಸಿರುವ ಭಾರತೀಯ ಉನ್ನತ ಶಿಕ್ಷಣ ಆಯೋಗ ಕಾರ್ಯ ನಿರ್ವಹಿಸಲಿದೆ. ಒಂದೆಡೆ ವಿಶ್ವವಿದ್ಯಾನಿಲಯಗಳ ನಿರ್ವಹಣೆಯಲ್ಲಿ ರಾಜಕೀಯ ಹಸ್ತಕ್ಷೇಪವಿಲ್ಲವೆಂದು ಹೇಳುತ್ತಲೇ, ಉನ್ನತ ಶಿಕ್ಷಣ ವ್ಯವಸ್ಥೆಯನ್ನು ನೇರವಾಗಿ ಸರಕಾರವು ತಮ್ಮ ಅಧೀನಕ್ಕೆ ತೆಗೆದುಕೊಳ್ಳುತ್ತಿದೆ. ಅಲ್ಲದೆ ವಿಶ್ವವಿದ್ಯಾನಿಲಯಗಳ ದೈನಂದಿನ ಚಟುವಟಿಕೆಗಳಲ್ಲಿ ಹಸ್ತಕ್ಷೇಪಮಾಡುವ ಅಧಿಕಾರವನ್ನು ಭಾರತೀಯ ಉನ್ನತ ಶಿಕ್ಷಣ ಆಯೋಗಕ್ಕೆ ನೀಡಲಾಗುತ್ತಿದೆ. ಯಾವುದೇ ವಿದ್ಯಾಸಂಸ್ಥೆಯನ್ನು ಸ್ಥಾಪಿಸುವ, ನಡೆಸುವ, ಮುಚ್ಚುವ ಅಧಿಕಾರವನ್ನು ಈ ಆಯೋಗಕ್ಕೆ ಕಲ್ಪಿಸಲಾಗುತ್ತದೆ.

ಪಠ್ಯಕ್ರಮ, ಬೋಧನಾಕ್ರಮ ಹಾಗೂ ಸಂಶೋಧನೆಗಳಿಗೆ ಸಂಬಂಧಿಸಿದ ಎಲ್ಲಾ ಅಂಶಗಳನ್ನು ಈ ಆಯೋಗ ನೇರವಾಗಿ ನಿಯಂತ್ರಿಸಲಿದೆ. ಈಗಾಗಲೇ ನಾಯಿಕೊಡೆಗಳಂತೆ ತಲೆಎತ್ತುತ್ತಿರುವ ಖಾಸಗಿ ವಿದ್ಯಾಸಂಸ್ಥೆಗಳ ಹಾವಳಿಯ ಮಧ್ಯೆ, ಉನ್ನತ ಶಿಕ್ಷಣ ಸಂಪೂರ್ಣ ಕಾರ್ಪೊರೇಟೀಕರಣ ಹಾಗೂ ಖಾಸಗೀಕರಣಗೊಳಿಸುವ ಅವಕಾಶವನ್ನು ಹೊಸ ತಿದ್ದುಪಡಿ ಕಲ್ಪಿಸಲಿರುವುದು ಶೋಚನೀಯ ಸಂಗತಿ. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದಾಗ ಸಾರ್ವಜನಿಕ ಉನ್ನತ ಶಿಕ್ಷಣ ಎತ್ತ ಸಾಗುತ್ತಿದೆ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಬಹುಮತ ಹೊಂದಿರುವ ಕೇಂದ್ರ ಸರಕಾರವು ಉನ್ನತ ಶಿಕ್ಷಣ ನೀತಿಗಳನ್ನು ತನ್ನ ಅನುಕೂಲಕ್ಕೆ ತಕ್ಕಂತೆ ನಯವಾಗಿ ತಿರುಚಿ ಸಂವಿಧಾನದ ಮೂಲ ಆಶಯಗಳಿಗೆ ಧಕ್ಕೆ ಬರುವಂತೆ ಹಿಂದುಳಿದ ಸಮುದಾಯಗಳಲ್ಲಿನ ಸಹಜ ಪ್ರತಿಭೆಗಳನ್ನು ಆರಂಭದಲ್ಲೇ ಚಿವುಟುವ ಕ್ರಮಕ್ಕೆ ಮುಂದಾಗಿದೆ.

ಪ್ರತಿಷ್ಠಿತ ಉನ್ನತಶಿಕ್ಷಣ ಸಂಸ್ಥೆಗಳ ಮೇಲಿನ ಅನಗತ್ಯ ನಿಯಂತ್ರಣದ ಹಿಂದೆ ಹಿಂದುಳಿದ ಜಾತಿಗಳ ಪ್ರತಿಭಾವಂತ ವಿದ್ಯಾರ್ಥಿಗಳಲ್ಲಿ ಹಾಗೂ ಪೋಷಕರಲ್ಲಿ ಆತಂಕ ಸೃಷ್ಟಿಸಿ ಈ ಸಂಸ್ಥೆಗಳಲ್ಲಿ ದಾಖಲಾತಿ ಪಡೆಯದಂತೆ ತಡೆಯುವ ಷಡ್ಯಂತ್ರವಿದೆ. ಬಿಜೆಪಿಯ ಗುಪ್ತ ಮೀಸಲಾತಿ ವಿರೋಧಿ ನೀತಿ ಹಾಗೂ ಖಾಸಗೀಕರಣದ ಪರವಾದ ಕಾಳಜಿ ಮೇಲ್ಜಾತಿಗಳಿಗೆ ಅನುಕೂಲವಾಗುವಂತೆ ನೋಡಿಕೊಳ್ಳುವುದರೊಂದಿಗೆ ಜಾತಿ ವ್ಯವಸ್ಥೆಯನ್ನು ಜೀವಂತವಾಗಿರಿಸಿ ಉನ್ನತ ವಿದ್ಯೆಯನ್ನು ಸಮಾಜದ ಹಿಂದುಳಿದ ಜಾತಿಗಳಿಗೆ ತಲುಪದಂತೆ ನೋಡಿಕೊಳ್ಳುವುದೇ ಆಗಿದೆ. ಇನ್ನಾದರೂ ಮೀಸಲಾತಿ ವಿರೋಧಿ ಖಾಸಗೀಕರಣದ ಪರವಾದ ಕೋಮುವಾದಿ ಶಕ್ತಿಯನ್ನು ಅಧಿಕಾರದಿಂದ ದೂರವಿಡಲು ಹಾಗೂ ಅಧಿಕಾರದಲ್ಲಿ ಸಮಪಾಲು ಪಡೆಯಲು ತುರ್ತಾಗಿ ಪರಿಶಿಷ್ಟ ಜಾತಿ/ಪಂಗಡದ ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಸಮುದಾಯಗಳು ಎಚ್ಚೆತ್ತುಕೊಂಡು ಕಾರ್ಯಪ್ರವೃತ್ತವಾಗದೆ ಹೋದಲ್ಲಿ ಈ ಸಮುದಾಯಗಳ ಪಾಲಿಗೆ ಮುಂದಿನ ದಿನಗಳು ಪ್ರಾಣಾಂತಿಕವಾಗಿ ಪರಿಣಮಿಸಲಿವೆ.

Writer - ಭಾನುಪ್ರಕಾಶ್ ಅರ್.

contributor

Editor - ಭಾನುಪ್ರಕಾಶ್ ಅರ್.

contributor

Similar News