ಸಾಲ ಮನ್ನಾ ಸಂಪನ್ಮೂಲ ಸಂಗ್ರಹಿಸಿ

Update: 2018-07-13 18:30 GMT

ಮಾನ್ಯರೇ,

ರಾಜ್ಯದಲ್ಲಿ ಅನ್ನದಾತನ ಸಾಲ ಮನ್ನಾ ಮಾಡುವ ವಿಚಾರದಲ್ಲಿ ರಾಜ್ಯ ಸರಕಾರ ದಿಟ್ಟವಾದ ಹೆಜ್ಜೆಯನ್ನು ಅನುಸರಿಸುತ್ತಿದೆ. ಆದರೆ ಇದಕ್ಕೆ ಬೇಕಾದ ಸಂಪನ್ಮೂಲವೇ ದೊಡ್ಡ ಪ್ರಶ್ನೆಯಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ರಾಜ್ಯದ ಪಂಚಾಯತ್‌ನಿಂದ ಹಿಡಿದು ಪಾರ್ಲಿಮೆಂಟ್ ಸದಸ್ಯರ ತನಕ ಚುನಾಯಿತ ಪ್ರತಿನಿಧಿಗಳು ತಮ್ಮ ಒಂದು ತಿಂಗಳ ಸಂಬಳವನ್ನು ಕಾಣಿಕೆಯಾಗಿ ನೀಡಲಿ. ಅಲ್ಲದೆ ರಾಜ್ಯ ಸರಕಾರಿ ನೌಕರರು ತಮ್ಮ ಒಂದು ದಿನದ ಸಂಬಳದ ಮೊತ್ತವನ್ನು ನೀಡಲಿ. ಅಲ್ಲದೆ ಕಾರ್ಪೊರೇಟ್ ಸಂಸ್ಥೆಗಳು ಕೂಡಾ ತಮ್ಮ ಒಂದು ದಿನದ ಉತ್ಪಾದನೆಯ ಅಂಶವನ್ನು ನೀಡುವುದಲ್ಲದೆ ಸಮಾಜದ ಸಿರಿವಂತರು ಕೂಡಾ ತಮ್ಮಿಂದಾದಷ್ಟು ದೇಣಿಗೆಯನ್ನು ನೀಡಲಿ. ಈ ರೀತಿ ಎಲ್ಲರೂ ಕೈ ಜೋಡಿಸಿದರೆ ರೈತರ ಸಾಲ ಮನ್ನಾ ಮಾಡಲು ಹಣದ ಕೊರತೆಯಾಗದು.
ಅಲ್ಲದೆ ಸರಕಾರ ಯಾವುದಾದರೂ ಒಂದು ದಿನವನ್ನು ಕೃತಜ್ಞತಾ ದಿನವೆಂದು ಹೆಸರಿಸಿ, ಒಂದು ನಿಧಿಯನ್ನು ಸ್ಥಾಪಿಸಿ, ಪ್ರತೀ ವರ್ಷವೂ ಇದೇ ಸ್ವರೂಪದಲ್ಲಿ ದೇಣಿಗೆ ಪಡೆದು, ಸಂಗ್ರಹವಾದ ನಿಧಿಯನ್ನು ಠೇವಣಿಯಾಗಿಟ್ಟು, ಅದರಿಂದ ಬರುವ ಬಡ್ಡಿಯ ಮೊತ್ತವನ್ನು ರೈತರು, ಸ್ವಚ್ಛತಾ ಕಾರ್ಮಿಕರು ಮತ್ತು ಸೈನಿಕರ ಆರೋಗ್ಯ ಮತ್ತು ಶಿಕ್ಷಣಕ್ಕೆ ವ್ಯಯಿಸುವಂತಹ ಯೋಜನೆ ರೂಪಿಸಬೇಕಾಗಿದೆ. ದೇಶದಲ್ಲಿ ಅನೇಕ ರೀತಿಯ ದಿನಾಚರಣೆಗಳಿವೆ. ಆದರೆ ದೇಶದ ಸೈನಿಕರಿಗೆ, ರೈತರಿಗೆ ಮತ್ತು ನಮ್ಮ ಪರಿಸರವನ್ನು ಸ್ವಚ್ಛ ಮಾಡುವ ಶ್ರಮಜೀವಿಗಳಿಗೂ ವರ್ಷದಲ್ಲಿ ಒಂದು ದಿನ ‘ಕೃತಜ್ಞತಾ ದಿವಸ’ವೆಂದು ಆಚರಿಸಿದರೆ ಇಂತಹ ಶ್ರಮಿಕರನ್ನು ಎಲ್ಲ ಭಾರತೀಯರು ವರ್ಷಕ್ಕೊಮ್ಮೆಯಾದರೂ ನೆನಪಿಸಿಕೊಳ್ಳುತ್ತಾರೆ.

Similar News