ಅಪ್ಪಾ, ನೀವು ನಿದ್ರಿಸುತ್ತಿದ್ದಾಗ ನಾನು ವಿಶ್ವವನ್ನು ಬಡಿದೆಬ್ಬಿಸಿದೆ: ಹಿಮಾ ದಾಸ್

Update: 2018-07-14 03:30 GMT

ಕೊಲ್ಕತ್ತಾ, ಜು. 14: "ಅಪ್ಪಾ, ನೀವು ನಿದ್ರಿಸುತ್ತಿದ್ದಾಗ ನಾನು ವಿಶ್ವವನ್ನು ಬಡಿದೆಬ್ಬಿಸಿದೆ" ಎಂದು ವಿಶ್ವದಾಖಲೆಯೊಂದಿಗೆ ಭಾರತಕ್ಕೆ ಟ್ರ್ಯಾಕ್ ಸ್ಪರ್ಧೆಯಲ್ಲಿ ಮೊಟ್ಟಮೊದಲ ಚಿನ್ನದ ಪದಕ ಗೆದ್ದುಕೊಟ್ಟ ಹಿಮಾ ದಾಸ್, ತಂದೆ ಜತೆ ದೂರವಾಣಿಯಲ್ಲಿ ಮಾತನಾಡುತ್ತಾ ಸಂತಸ ಹಂಚಿಕೊಂಡಿದ್ದಾರೆ.

ಫಿನ್‌ಲೆಂಡ್‌ನಲ್ಲಿ ನಡೆಯುತ್ತಿರುವ ಐಎಎಫ್ ವಿಶ್ವ 20 ವರ್ಷ ವಯೋಮಿತಿ ಕೂಟದಲ್ಲಿ ಹಿಮಾ ಶರವೇಗದಲ್ಲಿ ಓಡಿ ಈ ದಾಖಲೆ ನಿರ್ಮಿಸಿದ್ದರು. "ನಾವೆಲ್ಲ ಎಚ್ಚರವಾಗಿದ್ದು, ನಿನ್ನ ಓಟವನ್ನು ಟಿವಿಯಲ್ಲಿ ನೋಡಿದೆವು ಎಂದು ಹೇಳಿದಾಗ ಆಕೆ ಅಕ್ಷರಶಃ ಅತ್ತಳು" ಎಂದು ಅಸ್ಸಾಂನ ನಗಾಂವ್ ಜಿಲ್ಲೆಯ ಭತ್ತದ ಕೃಷಿಕ ರಂಜಿತ್‌ದಾಸ್ ಬಣ್ಣಿಸಿದರು.

ಹಿಮಾ ವಿಶ್ವ ದರ್ಜೆಯ ಅಥ್ಲೀಟ್ ಮಾತ್ರವಲ್ಲ, ಸಾಮಾಜಿಕ ಕಳಕಳಿ ಇರುವ ಹದಿಹರೆಯದ ಯುವತಿ. ಕಳ್ಳಭಟ್ಟಿ ಸಾರಾಯಿ ಮಾರಾಟ ದಂಧೆಯನ್ನು ಮಟ್ಟಹಾಕುವ ಸಲುವಾಗಿ ತಮ್ಮ ಧಿಂಗ್ ಹಾಗೂ ಸುತ್ತಮುತ್ತಲ ಗ್ರಾಮದಲ್ಲಿ ಸಮರ ಸಾರಿದ್ದಾರೆ. "ಯಾವುದನ್ನಾದರೂ ಮತ್ತು ಎಲ್ಲವನ್ನೂ ಸಾಧಿಸುವ ಛಲ ಈ ಯುವತಿಗೆ ಇದೆ. ಅಕ್ರಮಗಳ ವಿರುದ್ಧ ಧ್ವನಿ ಎತ್ತಲು ಆಕೆ ಎಂದೂ ಭಯಪಟ್ಟದ್ದಿಲ್ಲ. ಆಕೆ ನಮಗೆ ಹಾಗೂ ದೇಶಕ್ಕೆ ಮಾದರಿ" ಎಂದು ಗ್ರಾಮದ ನೆರೆಯವರು ಬಣ್ಣಿಸಿದರು. ಗ್ರಾಮಸ್ಥರು ಈಕೆಯನ್ನು "ಧಿಂಗ್ ಎಕ್ಸ್‌ಪ್ರೆಸ್" ಎಂದೇ ಗುರುತಿಸುತ್ತಾರೆ.

ಕೇವಲ ಎರಡು ವರ್ಷ ಹಿಂದೆ ಭಾರತ ಫುಟ್‌ಬಾಲ್ ತಂಡದಲ್ಲಿ ಆಡುವ ಕನಸು ಕಾಣುತ್ತಿದ್ದ ಹಿಮಾ, ಸತತ ಪರಿಶ್ರಮದಿಂದ ನಂಬಲಸಾಧ್ಯ ಸಾಧನೆ ಮಾಡಿದ್ದಾರೆ. ಫುಟ್‌ಬಾಲ್ ಆಡುವಾಗ ಈಕೆಯ ವೇಗ ನೋಡಿದ ಜವಾಹರ್ ನವೋದಯ ವಿದ್ಯಾಲಯದ ಶಿಕ್ಷಕ ಶಂಶುಲ್ ಶೇಖ್ ಆಕೆಯನ್ನು ಅಥ್ಲೆಟಿಕ್ಸ್‌ಗೆ ವರ್ಗಾವಣೆಯಾಗುವಂತೆ ಸಲಹೆ ಮಾಡಿದ್ದರು.

ಉತ್ತಮ ತರಬೇತಿಯ ಸಲುವಾಗಿ ತಕ್ಷಣ ಧಿಂಗ್ ಗ್ರಾಮದಿಂದ ಗುವಾಹತಿಯಲ್ಲಿರುವ ಸರೂಸಾಜಾಯ್ ಕ್ರೀಡಾ ಸಂಕೀರ್ಣಕ್ಕೆ ಬಂದರು. ಆಕೆಯ ಕೋಚ್ ನಿಪೋನ್‌ದಾಸ್ ಇದಕ್ಕಾಗಿ ತಂದೆ ತಾಯಿಯ ಮನವೊಲಿಸಿದರು. "ನಾವು ಮೂರು ಹೊತ್ತು ಆಕೆಗೆ ಊಟ ಕೊಡುತ್ತೇವೆ ಎಂದು ತಿಳಿದಾಗ ಅವರು ಸಂತಸಪಟ್ಟರು" ಎಂದು ನಿಪೋನ್‌ದಾಸ್ ಹೇಳಿದ್ದಾರೆ. ಮತ್ತೊಬ್ಬ ಸ್ಥಳೀಯ ವೈದ್ಯ ಪ್ರತುಲ್ ಶರ್ಮಾ, ಆಕೆಯ ವಾಸ್ತವ್ಯಕ್ಕೆ ಅಗತ್ಯವಾದ ಹಣ ಸಂಗ್ರಹಿಸಿಕೊಟ್ಟರು.

ಐವರು ಮಕ್ಕಳಲ್ಲಿ ಕೊನೆಯವಳಾದ ಹಿಮಾ ತರಬೇತಿದಾರರ ಸಲಹೆಯಂತೆ 400 ಮೀಟರ್ ಓಡುವ ಮುನ್ನ 100 ಹಾಗೂ 200 ಮೀಟರ್ ಅಭ್ಯಸಿಸುತ್ತಿದ್ದರು. ಈ ವರ್ಷ ಗೋಲ್ಡ್‌ಕೋಸ್ಟ್‌ನಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದ 400 ಮೀಟರ್ ಸ್ಪರ್ಧೆಯಲ್ಲಿ ಹಿಮಾ ಆರನೇ ಸ್ಥಾನ ಗಳಿಸಿದ್ದರು.

ಹಿಮಾ ಚಿನ್ನದ ಸಾಧನೆ ಮಾಡಿದ ಬಳಿಕ ಫಿನ್‌ಲೆಂಡ್‌ನಿಂದ ಕರೆ ಮಾಡಿದ ಆಕೆಯ ಎರಡನೇ ಕೋಚ್ ನಬಜಿತ್ ಮಲಕರ್, "ನಾನೇನು ಮಾಡಿದ್ದೇನೆ ?" ಎಂದು ಆನಂದಬಾಷ್ಪ ಸುರಿಸಿದರು. "ಅದು ಆನಂದಬಾಷ್ಪ. ಆಕೆಗೇ ತನ್ನ ಸಾಧನೆ ಬಗ್ಗೆ ಶಾಕ್ ಆಗಿದೆ" ಎಂದು ಅವರು ವಿವರಿಸಿದರು. ಹಿಮಾ ಖಂಡಿತವಾಗಿ ಏಷ್ಯನ್ ಗೇಮ್ಸ್ ಚಿನ್ನ ಗೆಲ್ಲಬಲ್ಲಳು ಎಂದು ಅವರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News