ನಿಮ್ಮ ಫೇಸ್‌ಬುಕ್ ಖಾತೆಯನ್ನು ಹ್ಯಾಕರ್‌ಗಳಿಂದ ಸುರಕ್ಷಿತವಾಗಿರಿಸಲು ನೀವೇನು ಮಾಡಬೇಕು.....?

Update: 2018-07-14 12:13 GMT

ಕೆಲ ವರ್ಷಗಳ ಹಿಂದಿನವರೆಗೂ ಫೇಸ್‌ಬುಕ್ ಖಾತೆ ಹ್ಯಾಕರ್‌ಗಳಿಗೆ ಅಪ್ರಸ್ತುತವಾಗಿತ್ತು. ಅವರು ಯಾವುದೇ ವ್ಯಕ್ತಿಯ ಫೇಸ್‌ಬುಕ್ ಖಾತೆಯನ್ನು ಹ್ಯಾಕ್ ಮಾಡಲು ಕಾರಣಗಳೇ ಇರಲಿಲ್ಲ. ಆದರೆ ಬಳಕೆದಾರರ ಸಂಖ್ಯೆ ಬಿಲಿಯನ್‌ಗಳಷ್ಟು ಹೆಚ್ಚಿದಾಗಿನಿಂದ ಹಣಕಾಸು ಲಾಭ ಅಥವಾ ಬ್ಲಾಕ್‌ಮೇಲ್‌ಗಾಗಿ ಹ್ಯಾಕರ್‌ಗಳು ಬಳಸಬಹುದಾದ ಸಾಕಷ್ಟು ದತ್ತಾಂಶಗಳನ್ನು ಫೇಸ್‌ಬುಕ್ ಒಳಗೊಂಡಿದೆ. ಉದಾಹರಣೆಗೆ ಸೆಲೆಬ್ರಿಟಿಯೋರ್ವರ ಖಾತೆಯನ್ನು ಜಾಹೀರಾತುಗಳಲ್ಲಿ ಬಳಸಲು ಹ್ಯಾಕ್ ಮಾಡಬಹುದಾಗಿದೆ. ಅಲ್ಲದೆ ಹ್ಯಾಕರ್ ಅಂತಹ ಸೆಲೆಬ್ರಿಟಿಗಳ ಅಭಿಮಾನಿಗಳಲ್ಲಿ ಆಕ್ರೋಶವನ್ನುಂಟು ಮಾಡುವ ಮುಜುಗರದ ಅಥವಾ ಅವಮಾನಕಾರಿ ಬರಹಗಳನ್ನೂ ಪೋಸ್ಟ್ ಮಾಡಬಹುದು.

ನೀವು ಸೆಲೆಬ್ರಿಟಿಯಲ್ಲದಿದ್ದರೂ ನಿಮ್ಮ ಖಾತೆಯು ಕೂಡ ಹ್ಯಾಕ್ ಆಗಬಹುದು. ಹೀಗಾಗಿ ಹ್ಯಾಕರ್‌ಗಳಿಂದ ಸುರಕ್ಷಿತವಾಗಿರಲು ನಿಮ್ಮ ಫೇಸ್‌ಬುಕ್ ಖಾತೆಯನ್ನು ರಕ್ಷಿಸಿಕೊಳ್ಳುವುದು ಅಗತ್ಯವಾಗುತ್ತದೆ. ಇದು ಕಠಿಣ ಕೆಲಸವೇನಲ್ಲ. ಅದಕ್ಕಾಗಿ ಕೆಲವು ಸರಳ ಮಾರ್ಗಸೂಚಿಗಳಿಲ್ಲಿವೆ...

►ಸೈಬರ್‌ಕೆಫೆಗಳಲ್ಲಿ ಪಾಸವರ್ಡ್‌ಗಳನ್ನು ಸೇವ್ ಮಾಡಬೇಡಿ

  ನಿಮ್ಮ ಮೊಬೈಲ್,ಲ್ಯಾಪ್‌ಟಾಪ್ ಮತ್ತು ಕಂಪ್ಯೂಟರ್‌ಗಳಲ್ಲಿ ಯಾವುದೇ ಡಾಟಾ ಇಲ್ಲದಿದ್ದಾಗ ಅಥವಾ ನಿಮ್ಮ ಸಾಧನವನ್ನು ಬಳಸಲು ಸಾಧ್ಯವಿಲ್ಲದಿದ್ದಾಗ ಸೈಬರ್‌ಕೆಫೆ ಪರ್ಯಾಯವಾಗಿರುತ್ತದೆ. ಹೆಚ್ಚಿನ ಜನರು ‘ಸೇವ್ ಪಾಸ್‌ವರ್ಡ್?’ ಬಾಕ್ಸ್ ಕಾಣಿಸಿಕೊಂಡಾಗ ಅನುಮತಿ ನೀಡುವುದರಿಂದ ಸೈಬರ್‌ಕೆಫೆಗಳಲ್ಲಿಯ ಕಂಪ್ಯೂಟರ್‌ಗಳಲ್ಲಿ ಪಾಸ್‌ವರ್ಡ್‌ಗಳು ಸೇವ್ ಆಗಿರುತ್ತವೆ. ಬ್ರೌಸಿಂಗ್ ಸಮಯದಲ್ಲಿ ಅವಸರದಲ್ಲಿರುವವರು ಸಾಮಾನ್ಯವಾಗಿ ಈ ತಪ್ಪನ್ನು ಎಸಗಿರುತ್ತಾರೆ. ಇಂತಹ ತಪ್ಪು ನಿಮ್ಮಿಂದಲೂ ಆಗಬಹುದು. ನಿಮ್ಮ ಬಳಿ ವೆಬ್ ಬ್ರೌಸಿಂಗ್‌ಗೆ ಸಾಧನವಿಲ್ಲದಿದ್ದಲ್ಲಿ ನಿಮಗೆ ಯಾವುದೇ ನಿಯಂತ್ರಣವಿಲ್ಲದ ಇತರ ಕಂಪ್ಯೂಟರ್‌ಗಳಲ್ಲಿ ಎಂದಿಗೂ ನಿಮ್ಮ ಪಾಸ್‌ವರ್ಡ್‌ಗಳನ್ನು ಸೇವ್ ಮಾಡಬೇಡಿ. ಹಾಗೆ ಮಾಡಿದರೆ ನಿಮ್ಮ ಪಾಸ್‌ವರ್ಡ್ ಅಲ್ಲಿ ಉಳಿದುಕೊಳ್ಳುತ್ತದೆ ಮತ್ತು ಇತರ ಯಾವುದೇ ವ್ಯಕ್ತಿ ಸುಲಭವಾಗಿ ನಿಮ್ಮ ಖಾತೆಯನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ.

►ಇತರ ಸಾಧನಗಳಲ್ಲಿ ಲಾಗ್ ಔಟ್ ಆಗಲು ಮರೆಯಬೇಡಿ

ಸಾರ್ವಜನಿಕ ಕಂಪ್ಯೂಟರ್‌ಗಳಲ್ಲಿ ಹ್ಯಾಕಿಂಗ್ ಅನ್ನು ತಡೆಯಲು ಪಾಸ್‌ವರ್ಡ್ ಸೇವ್ ಮಾಡದಿರುವುದು ಏಕೈಕ ಮಾರ್ಗವೇನಲ್ಲ. ನಿಮ್ಮ ಖಾತೆಯು ಲಾಗ್ ಆಗಿರುವುದು ಸಹ ನಿಮ್ಮ ಖಾತೆಯ ಮೇಲೆ ನಿಯಂತ್ರಣ ಹೊಂದಲು ಹ್ಯಾಕರ್‌ಗಳಿಗೆ ಸುಲಭವಾಗಿಸುತ್ತದೆ.

ನಿಮ್ಮ ಬ್ರೌಸಿಂಗ್ ಮುಗಿದ ಬಳಿಕ ನೀವು ಬ್ರೌಸರ್ ಅನ್ನು ಮುಚ್ಚಿದರೂ ಕೆಲಸಮಯದವರೆಗೂ ನಿಮ್ಮ ಫೇಸ್‌ಬುಕ್ ಬ್ರೌಸಿಂಗ್ ಚಾಲನೆಯಲ್ಲಿರುತ್ತದೆ. ಹೀಗಾಗಿ ನೀವು ಎದ್ದು ಹೋದ ತಕ್ಷಣ ಆ ಕಂಪ್ಯೂಟರ್‌ನೆದುರು ಕುಳಿತ ವ್ಯಕ್ತಿಗೆ ನಿಮ್ಮ ಖಾತೆಯ ಸಂಪರ್ಕ ಸಿಗುತ್ತದೆ.

ನೀವು ಸೈಬರ್‌ಕೆಫೆಯಿಂದ ಹೊರಬೀಳುವ ಮುನ್ನ ಲಾಗ್ ಔಟ್ ಆಗಿದ್ದೀರಿ ಮತ್ತು ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿ ದೃಢೀಕರಣ ಟ್ಯಾಬ್‌ಗಳಲ್ಲಿ ಪ್ರದರ್ಶಿತವಾಗುತ್ತಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. ಇಲ್ಲದಿದ್ದರೆ ನಿಮ್ಮ ಫೇಸ್‌ಬುಕ್ ವಾಲ್‌ನಲ್ಲಿ ಕೆಲವು ಅಸಭ್ಯ ಪೋಸ್ಟ್‌ಗಳನ್ನು ನೀವು ನೋಡಬೇಕಾದೀತು.

►ಟು-ವೇ ಅಥೆಂಟಿಕೇಷನ್ ಬಳಸಿ

ಈ ವ್ಯವಸ್ಥೆಯು ನೀವು ಅಥವಾ ಹ್ಯಾಕರ್ ನಿಮ್ಮ ಖಾತೆಗೆ ಲಾಗ್ ಇನ್ ಆಗಲು ಪ್ರಯತ್ನಿಸಿದಾಗ ಪ್ರತಿ ಬಾರಿಯೂ ನಿಮ್ಮ ಮೊಬೈಲ್ ಫೋನ್‌ಗೆ ದೃಢೀಕರಣ ಸಂದೇಶವೊಂದನ್ನು ರವಾನಿಸುತ್ತದೆ. ಇದನ್ನು ನೀವು ಥರ್ಡ್ ಪಾರ್ಟಿ ಸಾಫ್ಟ್‌ವೇರ್ ಅಥವಾ ಫೇಸ್‌ಬುಕ್‌ನ ದೃಢೀಕರಣ ವ್ಯವಸ್ಥೆಯ ಮೂಲಕ ಬಳಸಿಕೊಳ್ಳಬಹುದು.

ನೀವು ಲಾಗ್ ಇನ್ ಆಗುವಾಗ ನೀವು ವಿಶಿಷ್ಟ್ ಕೋಡ್ ಅನ್ನು ಸ್ವೀಕರಿಸುತ್ತೀರಿ ಮತ್ತು ಅದು ನಿಮ್ಮ ಆ ಬ್ರೌಸಿಂಗ್ ಅವಧಿಗೆ ಮಾತ್ರ ನಿಮ್ಮ ಫೇಸ್‌ಬುಕ್ ಖಾತೆಗೆ ಪ್ರವೇಶವನ್ನು ದೊರಕಿಸುತ್ತದೆ. ಆ ಅವಧಿಯ ನಂತರ ಮತ್ತೆ ನೀವು ನಿಮ್ಮ ಫೇಸ್‌ಬುಕ್ ಖಾತೆಗೆ ಲಾಗ್ ಇನ್ ಆಗಲು ಬಯಸಿದರೆ ಮತ್ತೆ ವಿಶಿಷ್ಟ ಕೋಡ್ ಸ್ವೀಕರಿಸಬೇಕಾಗುತ್ತದೆ. ಇದು ಸುಲಭದ ಒನ್ ಕ್ಲಿಕ್ ಲಾಗ್ ಇನ್‌ಗೆ ಹೋಲಿಸಿದರೆ ಕೆಲಸವನ್ನು ಹೆಚ್ಚಿಸುತ್ತದೆ ನಿಜ. ಆದರೆ ನಂತರ ಪಶ್ಚಾತ್ತಾಪ ಪಡುವುದಕ್ಕಿಂತ ಸುರಕ್ಷಿತವಾಗಿರಲು ಸಾಧ್ಯವೆಂದಾದರೆ ನೀವು ಈ ಮಾರ್ಗವನ್ನು ಅನುಸರಿಸಲೇಬೇಕು.

►ನಿಮ್ಮ ಬ್ರೌಸರ್ ಅನ್ನು ಕ್ಲೀನ್ ಮಾಡಿ

 ಆಗಿಂದಾಗ್ಗೆ ನಿಮ್ಮ ಬ್ರೌಸರ್‌ನ್ನು ಕ್ಲೀನ್ ಮಾಡುತ್ತಿದ್ದರೆ ಒಳ್ಳೆಯದು. ಹೆಚ್ಚಿನ ಫಿಷಿಂಗ್ ಮತ್ತು ವೈರಸ್ ಚಟುವಟಿಕೆಗಳು ಪೋರ್ನ್ ಮತ್ತು ಟೊರೆಂಟ್ ಸೈಟ್‌ಗಳಲ್ಲಿ ನಡೆಯುತ್ತವೆ. ಇಂತಹ ಸೈಟ್‌ಗಳಿಗೆ ಭೇಟಿ ನೀಡುತ್ತಿದ್ದರೆ ನಿಮ್ಮ ದೃಢೀಕರಣ ವಿವರಗಳು ಇನ್ನೊಬ್ಬರ ಕೈಸೇರದಂತೆ ಯಾವಾಗಲೂ ನಿಮ್ಮ ಡಾಟಾಗಳನ್ನು ತೆಗೆದುಬಿಡಿ. ಇದು ಕಷ್ಟವೆಂದು ಅನಿಸಿದರೆ ನಿಮಗಾಗಿ ಈ ಕೆಲಸವನ್ನು ಮಾಡಲು ಆ್ಯಡ್‌ವೇರ್ ರಿಮೂವಲ್ ಟೂಲ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ. ಇದು ನಿಮ್ಮನ್ನು ಹ್ಯಾಕರ್‌ಗಳಿಂದ ರಕ್ಷಿಸುತ್ತದೆ.

►ಸ್ಪೈವೇರ್ ಮತ್ತು ಮಾಲ್‌ವೇರ್‌ಗಳಿಂದ ರಕ್ಷಿಸಿಕೊಳ್ಳಿ

ಹ್ಯಾಕಿಂಗ್ ಸಮಸ್ಯೆಗಳು ಕೇವಲ ವೆಬ್-ಬೇಸ್ಡ್ ಅಲ್ಲ. ನೀವು ನಿಮಗೆ ಗೊತ್ತಿಲ್ಲದೆ ನಿಮ್ಮ ಕಂಪ್ಯೂಟರ್‌ನಲ್ಲಿ ಇನ್‌ಸ್ಟಾಲ್ ಮಾಡಿಕೊಂಡಿರುವ ಮಾಲ್‌ವೇರ್ ಮೂಲಕ ವ್ಯಕ್ತಿಯು ನಿಮ್ಮ ಬ್ರೌಸರ್‌ನ್ನು ಹ್ಯಾಕ್ ಮಾಡಬಹುದು. ಈ ಪೈಕಿ ಕೆಲವು ಮಾಲ್‌ವೇರ್‌ಗಳು ನಿಮ್ಮ ಸ್ಕ್ರೀನ್ ಅಥವಾ ಬ್ರೌಸರ್‌ನಲ್ಲಿ ಕೆಲವು ಸ್ಪಾಮ್ ಪಾಪ್ ಅಪ್‌ಗಳನ್ನು ಸಹ ತೋರಿಸಬಹುದು. ಮಾಲ್‌ವೇರ್, ಆ್ಯಡ್‌ವೇರ್ ಮತ್ತು ಸ್ಪೈವೇರ್ ರಿಮೂವರ್‌ಗಳನ್ನು ಬಳಸಿ ನೀವು ಇವುಗಳನ್ನು ನಿವಾರಿಸಿಕೊಳ್ಳಬಹದು.

ನಿಮ್ಮ ಫೇಸ್‌ಬುಕ್ ಖಾತೆ ಈಗಾಗಲೇ ಹ್ಯಾಕ್ ಆಗಿದ್ದರೆ ಆತಂಕ ಪಟ್ಟುಕೊಳ್ಳಬೇಕಿಲ್ಲ. ಅದನ್ನು ಮರಳಿ ಪಡೆಯಲು ಬೇಕಾದಷ್ಟು ಮಾರ್ಗಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News