×
Ad

ಶಿಕ್ಷಣ ಸಂಸ್ಥೆಗಳು ಸಾಧಕರನ್ನು ಹುಟ್ಟುಹಾಕಬೇಕು: ಸ್ಪೀಕರ್ ರಮೇಶ್ ಕುಮಾರ್

Update: 2018-07-14 18:14 IST

ಬೆಂಗಳೂರು, ಜು. 14: ಶಿಕ್ಷಣ ಸಂಸ್ಥೆಗಳು ಹೊಸ ಸಾಧಕರು, ತತ್ವಜ್ಞಾನಿಗಳು, ವಿಜ್ಞಾನಿಗಳನ್ನು ಹುಟ್ಟು ಹಾಕುವಂತೆ ಆಗಬೇಕೆಂದು ವಿಧಾನಸಭೆಯ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಇಂದಿಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಶನಿವಾರ ಇಲ್ಲಿನ ರೇವಾ ವಿಶ್ವ ವಿದ್ಯಾಲಯದಲ್ಲಿ ನೂತನವಾಗಿ ನಿರ್ಮಿಸಿರುವ ಕುವೆಂಪು ಸಭಾಂಗಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ದೇಶಕ್ಕೆ ಮಾದರಿ. ಅವರ ಪುಸ್ತಕಗಳು, ಭಾಷಣ ಒಟ್ಟಾರೆ ಹೇಳಬೇಕಾದರೆ, ಇಡೀ ಜೀವನವೇ ಇತರರಿಗೆ ಮಾದರಿ.
ಆರ್ಥಿಕ ತೊಂದರೆಯನ್ನು ಬದಿಗಿಟ್ಟು ಅವರು ಮಾಡಿದ ಸಾಧನೆ ಎಲ್ಲರಿಗೂ ಸ್ಪೂರ್ತಿ. ಜಗತ್ತಿಗೆ ಶಾಂತಿ ಸಂದೇಶ ಸಾರಿದ ಬುದ್ದ, ಲಿಂಗಭೇದ ತೊಡಗಿಸಲು ಪ್ರಯತ್ನಿಸಿದ ಬಸವಣ್ಣ, ಚೈತನ್ಯದ ಚಿಲುಮೆಯಾಗಿದ್ದ ಸ್ವಾಮಿ ವಿವೇಕಾನಂದ, ಸ್ವಾತಂತ್ರ ತಂದು ಕೊಟ್ಟ ಮಹಾತ್ಮ ಗಾಂಧಿ ಇಂತಹವರನ್ನು ಹುಟ್ಟುಹಾಕಲು ಶಿಕ್ಷಣ ಸಂಸ್ಥೆಗಳು ಶ್ರಮಿಸಬೇಕು ಎಂದು ಕರೆ ನೀಡಿದರು.

ಯುವ ಜನತೆಯ ಮೇಲೆ ಸಿನಿಮಾದ ಪ್ರಭಾವ ಹೆಚ್ಚಿದೆ. ನಟ-ನಟಿಯರಾದ ಶಾರುಖ್ ಖಾನ್, ಶಿಲ್ಪಶೆಟ್ಟಿ ಅಂತಹವರ ಪ್ರಭಾವಕ್ಕೆ ಹೆಚ್ಚು ಮಾರು ಹೋಗುತ್ತಿದ್ದಾರೆ. ವಿದ್ಯಾರ್ಥಿಗಳು ಸಿನಿಮಾದ ಬಗ್ಗೆಯೂ ಆಸಕ್ತಿ ಬೆಳೆಸಿಕೊಳ್ಳಲಿ, ತಪ್ಲಿಲ್ಲ. ಆದರೆ ದೇಶಕ್ಕಾಗಿ ಹೋರಾಟ ಮತ್ತು ಕೊಡುಗೆ ನೀಡಿದವರನ್ನು ನಾವು ಹೆಚ್ಚಾಗಿ ಸ್ಮರಿಸಿಕೊಂಡು ಅವರ ಆದರ್ಶಗಳನ್ನು ಪರಿಪಾಲಿಸುವುದು ಅತ್ಯಗತ್ಯ ಎಂದು ಅವರು ಕಿವಿಮಾತು ಹೇಳಿದರು.

ರೇವಾ ವಿವಿಯವರು ಇಂದು ಉದ್ಘಾಟನೆಯಾದ ಸಭಾಂಗಣಕ್ಕೆ ರಾಷ್ಟ್ರಕವಿ ಕುವೆಂಪು ಅವರ ಹೆಸರಿಟ್ಟಿದ್ದಾರೆ. ಈ ಸಭಾಂಗಣ ಆಧುನಿಕ ತಂತ್ರಜ್ಞಾನದಿಂದ ನಿರ್ಮಿಸಿದ್ದು, ಇದು ಅಂತಾರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣವನ್ನು ಮಾಡಲು ಯೋಗ್ಯವಾದ ಸಭಾಂಗಣ. ಇದಕ್ಕೆ ಕುವೆಂಪು ಅವರ ಹೆಸು ಇಟ್ಟಿರುವುದು ಅರ್ಥಪೂರ್ಣವಾಗಿದೆ. ಕುವೆಂಪು ಯಾವುದೇ ಒಂದು ಜಾತಿ-ಧರ್ಮಕ್ಕೆ ಸೀಮಿತರಾದವರಲ್ಲ. ಕುವೆಂಪು ಮನುಷ್ಯ ಕುಲಕ್ಕೆ ಸೇರಿದ ವಿಶ್ವಮಾನವರು. ಸಾಧಕರಿಗೆ ಎಂದೂ ಸಾವಿಲ್ಲ. ನಾವು ಎಷ್ಟು ವರ್ಷ ಬಾಳಿ ಬದುಕಿದ್ದೆವು ಎಂಬುದು ಮುಖ್ಯವಲ್ಲ. ಸಮಾಜಕ್ಕೆ ಏನು ಕೊಡುಗೆ ನೀಡಿದ್ದೇವೆ ಎನ್ನುವುದು ಮುಖ್ಯ. ನಾವು ಸಾಧನೆ ಮಾಡಿ ಹೋದರೆ ಸಮಾಜವೇ ನಮ್ಮನ್ನು ಸ್ಮರಿಸುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಉಪಸಭಾಧ್ಯಕ್ಷ ಎಂ.ಕೃಷ್ಣರೆಡ್ಡಿ ಮಾತನಾಡಿ, ಕುಲಪತಿ ಶ್ಯಾಮರಾಜು ಅವರ ಪರಿಶ್ರಮದ ಫಲವಾಗಿ ರೇವಾ ವಿ.ವಿ. ಇಷ್ಟು ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿದೆ. ಇಲ್ಲಿ ನಮ್ಮ ದೇಶದ ಕಲೆ, ಸಂಸ್ಕೃತಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಕತ್ತಲಿನಲ್ಲಿ ಇರುವವರಿಗೆ ಬೆಳಕನ್ನು ತೋರುವ ಜ್ಞಾನದೀಪವಿದು. ಮುಂದೆ ವೈದ್ಯಕೀಯ ಕಾಲೇಜು ಪ್ರಾರಂಭಿಸಲಿ ಎಂದರು ಶುಭಹಾರೈಸಿದರು.

ವಿವಿ ಕುಲಾಧಿಪತಿ ಡಾ.ಪಿ.ಶಾಮರಾಜು ಮಾತನಾಡಿ, ನನ್ನ ಪತ್ನಿ ರುಕ್ಮಿಣಿ ನೆನಪಿನಾರ್ಥವಾಗಿ ಈ ವಿಶ್ವವಿದ್ಯಾಲಯವನ್ನು ಆರಂಭಿಸಿದ್ದೇನೆ. ಪ್ರತಿಯೊಬ್ಬರು ಇಲ್ಲಿಂದ ಗುಣಮಟ್ಟದ ಶಿಕ್ಷಣ ಪಡೆದು ಹೋಗಬೇಕೆಂಬುದು ನನ್ನ ಆಶಯ. ನನ್ನ ಸ್ನೇಹಿತ ಹಾಗೂ ಸಹೋದರ ಸಮಾನರಾದ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಅವರಿಂದ ಈ ನೂತನ ಸಭಾಂಗಣವನ್ನು ಉದ್ಘಾಟಿಸಬೇಕೆಂಬುದು ನನ್ನ ಕನಸಾಗಿತ್ತು. ಆ ಕನಸು ಈಗ ನನಸಾಗಿದೆ ಎಂದರು.

ವಿವಿಯ ಕುಲಪತಿ ಡಾ.ಎಸ್.ವೈ.ಕುಲಕರ್ಣಿ, ಮಾಜಿ ಕುಲಪತಿ ಡಾ.ಯು.ಜಿ. ತಳವಾರ, ಕುಲಸಚಿವ ಡಾಂ.ಎಂ.ಧನಂಜಯ್ಯ, ಡಾ.ಬೀನಾ, ಡಾ.ಎನ್.ರಮೇಶ್, ಡಾ.ಶುಭಾ ಸೇರಿದಂತೆ ಮತ್ತಿತ್ತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News