×
Ad

ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಅರಿತು ಎಚ್ಚೆತ್ತುಕೊಳ್ಳಬೇಕಾಗಿದೆ: ಬಿ.ಟಿ.ವೆಂಕಟೇಶ್

Update: 2018-07-14 19:51 IST

ಬೆಂಗಳೂರು, ಜು. 14: ದಲಿತರ ಹಕ್ಕುಗಳನ್ನು ವ್ಯವಸ್ಥಿತವಾಗಿ ನಾಶಪಡಿಸುವ ಹುನ್ನಾರ ನಡೆಯುತ್ತಿದ್ದು, ಈ ಬಗ್ಗೆ ದಲಿತರು ಎಚ್ಚೆತ್ತುಕೊಳ್ಳಬೇಕಿದೆ ಎಂದು ಹಿರಿಯ ವಕೀಲ ಬಿ.ಟಿ.ವೆಂಕಟೇಶ್ ಇಂದಿಲ್ಲಿ ತಿಳಿಸಿದರು.

ಶನಿವಾರ ನಗರದ ಚರ್ಚೆ ಬೆನ್ಸನ್‌ಟೌನ್‌ನ ಇಂಡಿಯನ್ ಸೋಷಿಯಲ್ ಇನ್ಸ್‌ಟಿಟ್ಯೂಟ್‌ನಲ್ಲಿ ಸೋಷಿಯಲ್ ಇನ್ಸ್‌ಟಿಟ್ಯೂಟ್, ಅನನ್ಯ ಎಜುಕೇಶನ್ ಅಂಡ್ ಎಂಪವರ್‌ಮೆಂಟ್ ಟ್ರಸ್ಟ್ ಹಾಗೂ ರೀಚ್ ಲಾ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ದೌರ್ಜನ್ಯ ಪ್ರತಿಬಂಧಕ ಅಧಿನಿಯಮ 1989 ಕುರಿತು ಎರಡು ದಿನಗಳ ರಾಜ್ಯ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯಿದೆಯನ್ನು ದುರ್ಬಲಗೊಳಿಸಿ ದಲಿತರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದರೂ ಸಹ ಮಾಹಿತಿ ಕೊರತೆಯಿಂದಾಗಿ ನಮ್ಮ ಜನರಿಗೆ ಇದರ ಗಂಭೀರತೆ ಅರ್ಥವಾಗುತ್ತಿಲ್ಲ. ಈ ಕಾಯ್ದೆ ಹೊಲೆಯ, ಮಾದಿಗ ಎಂದು ಬೈದರೆ ಕೇಸು ದಾಖಲಿಸಲು ಮಾತ್ರ ಸೀಮಿತವಾಗಿದೆ. ಹೀಗಾಗಿ, ಈ ಕಾಯ್ದೆ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಾಗಿದೆ ಎಂದು ಅವರು ತಿಳಿಸಿದರು.

ದಲಿತರ ಮೇಲೆ ನಿರಂತರವಾಗಿ ಹಲ್ಲೆ ದೌರ್ಜನ್ಯದಂತಹ ಪ್ರಕರಣಗಳು ಮರುಕಳಿಸುತ್ತಿವೆ. ಆದರೆ, ಇಂತಹ ಪ್ರಕರಣಗಳು ಮರುಕಳಿಸಲು ಸರಕಾರಗಳ ನಿರ್ಲಕ್ಷ ಹಾಗೂ ವೈಫಲ್ಯ ಕಾರಣ. ಇದನ್ನು ನಿಲ್ಲಿಸುವಲ್ಲಿ ಸರಕಾರ ಹಾಗೂ ದಲಿತ ಚಳುವಳಿಗಳು ವಿಫಲವಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.

ನಕಲಿ ಜಾತಿಪ್ರಮಾಣ ಪತ್ರದಿಂದ ಉದ್ಯೋಗ: ಬೆಂಗಳೂರು ಸುತ್ತಮುತ್ತ ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಉದ್ಯೋಗ ಪಡೆದಿರುವ ಸಾಕಷ್ಟು ಪ್ರಕರಣಗಳಿವೆ. ದಲಿತರ ಹಕ್ಕನ್ನು ಕಸಿದು ಮೇಲ್ವರ್ಗದವರು ಫಲಾನುಭವಿಗಳಾಗಿದ್ದಾರೆ. ಐಎಎಸ್, ಐಪಿಎಸ್ ಅಧಿಕಾರಿಗಳು ಸೇರಿ, ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಉದ್ಯೋಗ ಪಡೆದಿರುವ 40 ಸಾವಿರ ಪ್ರಕರಣಗಳಿವೆ ಎಂದು ಬಿ.ಟಿ. ವೆಂಕಟೇಶ್ ಹೇಳಿದರು.

ದಲಿತ ಸಂಘರ್ಷ ಸಮಿತಿ ಹಿರಿಯ ಮುಖಂಡ ಎನ್.ವೆಂಕಟೇಶ್ ಮಾತನಾಡಿ, ಸಮಾನತೆ ಸಿಗುವವರೆಗೂ ದಬ್ಬಾಳಿಕೆ, ದೌರ್ಜನ್ಯ ತಡೆಯಲು ಸಾಧ್ಯವಿಲ್ಲ. ಆದರೆ, ಮೇಲ್ವರ್ಗದ ಹಿತಾಸಕ್ತಿಗೋಸ್ಕರ ಸಂವಿಧಾನದ ಸಮಾನತೆಯ ಆಶಯಗಳನ್ನು ಗಾಳಿಗೆ ತೂರಲಾಗುತ್ತಿದೆ. ದಲಿತರ ಹಕ್ಕುಗಳ ಮೂಲ ಆಶಯಕ್ಕೆ ಧಕ್ಕೆ ತರಲು ವ್ಯವಸ್ಥಿತ ಸಂಚು ರೂಪುಗೊಳ್ಳುತ್ತಿದೆ. ಇದರ ವಿರುದ್ಧ ಹೋರಾಡಲು ಚಳುವಳಿ ಒಂದೇ ಮಾರ್ಗ. ಹೀಗಾಗಿ, ದಲಿತ ಸಂಘಟನೆಗಳು ಯಾವುದೇ ಲೋಭಕ್ಕೊಳಗಾಗದೇ ಚಳುವಳಿಗಳನ್ನು ಗಟ್ಟಿಗೊಳಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮಕ್ಕಳ ಆಯೋಗದ ಸದಸ್ಯ ವೈ.ಮರಿಸ್ವಾಮಿ, ಡಾ.ಬಾಲಗುರುಮೂರ್ತಿ, ಮನೋರಂಜಿನಿ ಸೇರಿ ಪ್ರಮುಖರಿದ್ದರು.

ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ದುರ್ಬಲಗೊಳಿಸಲು ಬಿಜೆಪಿ ಹಾಗೂ ಸಂಘಪರಿವಾರ ವ್ಯವಸ್ಥಿತ ಹುನ್ನಾರ ನಡೆಸುತ್ತಿವೆ. ಈ ಕಾಯ್ದೆಯನ್ನು ಬಲಪಡಿಸಲು ದಲಿತ ಚಳುವಳಿಗಳನ್ನು ಚುರುಕುಗೊಳಿಸಬೇಕಿದೆ.
-ವೆಂಕಟೇಶ್, ಹಿರಿಯ ಮುಖಂಡ, ದಲಿತ ಸಂಘರ್ಷ ಸಮಿತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News