ಸಲಹೆ ಕೊಡುವುದು ತಪ್ಪಲ್ಲ, ಆದರೆ ಒತ್ತಡ ಸರಿಯಲ್ಲ: ಸಚಿವ ಡಿ.ಕೆ.ಶಿವಕುಮಾರ್
ಬೆಂಗಳೂರು, ಜು. 14: ರಾಜ್ಯ ಸರಕಾರಕ್ಕೆ ಯಾರೇ ಆಗಲಿ ಸಲಹೆ ಕೊಡುವುದು ತಪ್ಪಲ್ಲ. ಆದರೆ, ಮುಖ್ಯಮಂತ್ರಿ ಮೇಲೆ ಒತ್ತಡ ಹೇರುವುದು ಸರಿಯಲ್ಲ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರೋಕ್ಷವಾಗಿ ಸಮನ್ವಯ ಸಮಿತಿ ಅಧ್ಯಕ್ಷ, ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ತಿರುಗೇಟು ನೀಡಿದರು. ಒತ್ತಡ ಹಾಕುವುದಕ್ಕೂ ಇತಿಮಿತಿ ಇರಬೇಕು. ಉಚಿತವಾಗಿ ಸಲಹೆ ಕೊಡುವುದು ಸುಲಭ. ಆದರೆ, ನಾವು ನೀಡುವ ಸಲಹೆಗಳು ರಾಜಕಾರಣಕ್ಕೆ ಅವಕಾಶ ನೀಡಬಾರದು ಎಂದರು.
ಯಾವುದನ್ನು ಮಾಡಬೇಕು, ಯಾವುದನ್ನು ಮಾಡಬಾರದು ಎಂಬ ವಿವೇಚನೆ ಮುಖ್ಯಮಂತ್ರಿಗೆ ಇರುತ್ತದೆ. ಏನೇ ಮಾಡುವುದಾದರೂ ಆರ್ಥಿಕ ಇತಿಮಿತಿಯೊಳಗೆ ಮಾಡಬೇಕಾಗುತ್ತದೆ. ಅನ್ನಭಾಗ್ಯ ಯೋಜನೆಯಡಿ ನೀಡುತ್ತಿರುವ ಅಕ್ಕಿ ಪ್ರಮಾಣವನ್ನು ಯಥಾಸ್ಥಿತಿಯಲ್ಲಿ ಮುಂದುವರೆಸುವುದು ಎಂದು ಕುಮಾರಸ್ವಾಮಿ ಭರವಸೆ ನೀಡಿದ್ದಾರೆ ಎಂದರು.
ಮೈತ್ರಿ ಸರಕಾರ ಜನತೆಗೆ ನೀಡಿದ ಭರವಸೆಯಂತೆ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಜಾರಿ ಮಾಡಿ ಯಶಸ್ವಿ ಆಡಳಿತ ನೀಡುತ್ತೇವೆ. ಯಾರು ಏನೇ ಮಾತನಾಡಿದರೂ ತಲೆಕೆಡಿಸಿಕೊಳ್ಳುವುದಿಲ್ಲ. 5 ವರ್ಷ ಸುಭದ್ರ ಸರಕಾರ ನೀಡುವುದು ನಮ್ಮ ಮುಂದಿನ ಸವಾಲು. ಏನೇ ಅಡೆತಡೆಯಾದರೂ ಸರಕಾರ ಸುಭದ್ರವಾಗಿರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.