ಕನ್ನಡ ಸಿನೆಮಾರಂಗದ ಬಹುಸಂಸ್ಕೃತಿ ನನ್ನ ಪೊರೆದಿದೆ: ನಿರ್ದೇಶಕ ಸಾಯಿಪ್ರಕಾಶ್

Update: 2018-07-14 15:39 GMT

ಬೆಂಗಳೂರು, ಜು.14: ತೆಲಗು ಮೂಲದಿಂದ ಬಂದ ನಾನು ಕನ್ನಡ ಸಿನೆಮಾ ರಂಗದಲ್ಲಿ ಬಹು ಎತ್ತರಕ್ಕೆ ಬೆಳೆಯಲು ಇಲ್ಲಿನ ಬಹು ಸಂಸ್ಕೃತಿಯೇ ಮೂಲಕಾರಣವೆಂದು ಹಿರಿಯ ಸಿನೆಮಾ ನಿರ್ದೇಶಕ ಸಾಯಿಪ್ರಕಾಶ್ ಮೆಚ್ಚುಗೆ ವ್ಯಕ್ತಪಡಿಸಿದರು.

ಶನಿವಾರ ಕರ್ನಾಟಕ ಚಲನಚಿತ್ರ ಅಕಾಡೆಮಿ ನಗರದ ಗಾಂಧಿಭವನದಲ್ಲಿ ಆಯೋಜಿಸಿದ್ದ ಬೆಳ್ಳಿಹೆಜ್ಜೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ತಮ್ಮ ಸಿನೆಮಾ ರಂಗದ ಪಯಣವನ್ನು ಸಭಿಕರ ಮುಂದೆ ಬಿಚ್ಚಿಟ್ಟ ಅವರು, ಜಾತಿ, ಧರ್ಮಕ್ಕಿಂತ ಮನುಷ್ಯತ್ವವೆ ಮಿಗಿಲು ಎಂದರಿತಿರುವ ಕನ್ನಡ ಸಿನೆಮಾ ರಂಗದ ಪೋಷಣೆಯಿಂದ ನಾನು ನೂರಕ್ಕೂ ಹೆಚ್ಚು ಸಿನೆಮಾಗಳನ್ನು ನಿರ್ದೇಶಿಸಲು ಸಾಧ್ಯವಾಗಿದೆ ಎಂದು ತಿಳಿಸಿದರು.

ಕನ್ನಡದ ವರನಟ ಡಾ.ರಾಜ್‌ಕುಮಾರ್‌ರಿಂದ ಮೊದಲುಗೊಂಡು ವಿಷ್ಣುವರ್ಧನ್, ಅಂಬರೀಶ್, ಜಗ್ಗೇಶ್, ಮಾಲಾಶ್ರೀ, ಕಾಶಿನಾಥ್, ಶಿವರಾಜ್‌ಕುಮಾರ್ ಸೇರಿದಂತೆ ಇತ್ತೀಚಿನ ಈಗಿನ ನಟರಾದ ಸುದೀಪ್, ಉಪೇಂದ್ರರವರು ನನ್ನ ನಿರ್ದೇಶನದಲ್ಲಿ ನಟಿಸಿದ್ದಾರೆ. ಶಂಕರ್‌ನಾಗ್ ಅವರಲ್ಲಿದ್ದ ಸಮಾಜಪರ ಕಾಳಜಿ ಎಂತಹವರಿಗೂ ಮಾದರಿಯಾದದ್ದು. ಇಂತಹ ಮಹಾನ್ ನಟರ ಸಂಪರ್ಕದಿಂದ ನನ್ನ ಅನುಭವ ಸಾಕಷ್ಟು ವಿಸ್ತರಿಸಿದೆ ಎಂದು ಅವರು ಹೇಳಿದರು.

ಆ ದಿನಗಳಲ್ಲಿ ಆಂಧ್ರಪ್ರದೇಶದಲ್ಲಿ ರಾಜಕೀಯ ಚಟುವಟಿಕೆಗಳು ತೀವ್ರವಾಗಿ ಇರುತ್ತಿತ್ತು. ಅಧಿಕಾರಕ್ಕಾಗಿ, ಪ್ರತಿಷ್ಠೆಗಾಗಿ, ಪ್ರತೀಕಾರಕ್ಕಾಗಿ ಒಡೆದಾಟಗಳು ಸಾಮಾನ್ಯ. ಇಂತಹ ಪರಿಸರದಲ್ಲಿಯೆ ಬೆಳೆದ ನಾನು ಸಾಯಿಬಾಬಾ ಚಿಂತನೆಗಳಿಂದ ಪ್ರಭಾವಿತಗೊಂಡು ಶಿಕ್ಷಣ ಹಾಗೂ ಆಧ್ಯಾತ್ಮಿಕತೆಯತ್ತ ಸಾಗಿದೆ. ಗ್ರಾಮೀಣ ಭಾಗದ ಸಂಸ್ಕೃತಿ, ಮನುಷ್ಯ ಸಂಬಂಧಗಳು, ಕೌಟುಂಬಿಕ ತವಕ-ತಲ್ಲಣಗಳನ್ನು ಸ್ವತಃ ಅನುಭವಿಸಿದ ನಾನು, ಅದನ್ನೆ ಮೂಲವಸ್ತುಗಳನ್ನಾಗಿಸಿಕೊಂಡು ಸಿನೆಮಾ ಕತೆಗಳಾಗಿ ರೂಪಿಸುತ್ತಿದ್ದೆ ಎಂದು ಅವರು ತಮ್ಮ ಅನುಭವಗಳನ್ನು ಬಿಚ್ಚಿಟ್ಟರು.

ನಾನು ಬಾಲ್ಯದಲ್ಲಿರುವಾಗಲೇ ನನ್ನೂರಿನಲ್ಲಿ ಹನುಮಾನ್ ನಾಟಕ ಮಂಡಳಿಯನ್ನು ರಚಿಸಿ ಎಲ್ಲ ಜಾತಿ, ಧರ್ಮಗಳ ವ್ಯಕ್ತಿಗಳನ್ನು ಸೇರಿಸಿಕೊಂಡು ನಾಟಕ ರಚಿಸಿ, ಅಭಿನಯಿಸುತ್ತಿದ್ದೆವು. ಹಾಗೂ ಶಾಲೆಯಲ್ಲಿಯೂ ನಾಟಕಗಳನ್ನು ರಚಿಸಿ ನಿರ್ದೇಶಿಸುತ್ತಿದ್ದೆ. ಈ ಅನುಭವ ಸಿನೆಮಾ ರಂಗದಲ್ಲಿ ತೊಡಗುವಂತೆ ಪ್ರೇರೇಪಿಸಿತು ಎಂದು ಅವರು ಹೇಳಿದರು.

ಈ ವೇಳೆ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್, ಮಾಜಿ ಅಧ್ಯಕ್ಷ ರಾಜೇಂದ್ರಸಿಂಗ್ ಬಾಬು, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸಾಹಿತಿ ದೊಡ್ಡರಂಗೇಗೌಡ, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ನಟ ಶಶಿಕುಮಾರ್, ಜೈಜಗದೀಶ್ ಮತ್ತಿತರ ಹಿರಿಯ ನಟರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News