ಜಿಎಸ್‌ಟಿ ಜಾರಿ ನಂತರ 4.26 ಲಕ್ಷ ಕೋಟಿ ತೆರಿಗೆ ಸಂಗ್ರಹ: ಬಿಹಾರ ಡಿಸಿಎಂ ಸುಶೀಲ್‌ ಕುಮಾರ್ ಮೋದಿ

Update: 2018-07-14 15:44 GMT

ಬೆಂಗಳೂರು, ಜು.14: ದೇಶದಲ್ಲಿ ಜಿಎಸ್‌ಟಿ ಜಾರಿಯಾಗಿ ಒಂದು ವರ್ಷವಾಗಿದ್ದು, ಈ ಅವಧಿಯಲ್ಲಿ 1.12 ಕೋಟಿ ಮಂದಿ ಆನ್‌ಲೈನ್‌ನಲ್ಲಿ ರಿಟರ್ನ್ ಸಲ್ಲಿಕೆ ಮಾಡಿದ್ದಾರೆ. ಈ ಮೂಲಕ 4.26 ಲಕ್ಷ ಕೋಟಿ ರೂ.ತೆರಿಗೆ ಸಂಗ್ರಹವಾಗಿದೆ ಎಂದು ಜಿಎಸ್‌ಟಿ ಉಪ ಸಮಿತಿಯ ಅಧ್ಯಕ್ಷ ಮತ್ತು ಬಿಹಾರದ ಉಪ ಮುಖ್ಯಮಂತ್ರಿ ಸುಶೀಲ್‌ಕುಮಾರ್ ಮೋದಿ ತಿಳಿಸಿದರು.

ಶನಿವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ನಡೆದ ಜಿಎಸ್‌ಟಿ ಅನುಷ್ಠಾನದ ಒಂದು ವರ್ಷದ ಪ್ರಗತಿಯ ಅವಲೋಕನಾ ಸಭೆಯ ಬಳಿಕ ಅವರು ಸುದ್ದಿಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿದರು. ಬೆಂಗಳೂರಿನಲ್ಲಿ ಕಳೆದ ಫೆಬ್ರವರಿಯಲ್ಲಿ ಜಿಎಸ್‌ಟಿಯ ಸಭೆ ನಡೆಸಲಾಗಿತ್ತು. ಆನಂತರ ಹೊಸದಿಲ್ಲಿಯಲ್ಲಿ ಎರಡು ಸಭೆಗಳನ್ನು ನಡೆಸಲಾಯಿತು. ಇಂದು ಜಿಎಸ್‌ಟಿ ಸುಧಾರಣೆ ಉಪ ಸಮಿತಿಯ 9ನೆ ಸಭೆ ನಡೆಸಲಾಗಿದೆ. ಪ್ರಮುಖವಾಗಿ ಐಟಿ ವ್ಯವಸ್ಥೆ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದು ಅವರು ತಿಳಿಸಿದರು.

ವಿಷಯಗಳು ತುಂಬಾ ಕಡಿಮೆಯಾಗಿದೆ. ಡೀಲರ್ಸ್‌ಗಳು, ತೆರಿಗೆ ಪಾವತಿದಾರರಿಂದ ದೂರುಗಳು ತುಂಬಾನೆ ಕಡಿಮೆಯಾಗಿದೆ. ಇವತ್ತು ನಾವು ಟಿಡಿಎಸ್ ಬಗ್ಗೆ ಚರ್ಚೆ ಮಾಡಿದ್ದೇವೆ. ಅಕ್ಟೋಬರ್ 1ರಿಂದ ನಾವು ಟಿಡಿಎಸ್ ಜಾರಿ ಮಾಡಲಿದ್ದೇವೆ. ಇದಕ್ಕೆ ಸಂಬಂಧಿಸಿದಂತೆ ಸಾಫ್ಟ್‌ವೇರ್ ಸಿದ್ಧಪಡಿಸಲು ಇನ್ಫೋಸಿಸ್‌ಗೆ ಸೂಚನೆ ನೀಡಿದ್ದೇವೆ ಎಂದು ಸುಶೀಲ್‌ಕುಮಾರ್ ಹೇಳಿದರು.

ತಂತ್ರಜ್ಞಾನ ಅಳವಡಿಕೆ ಉಪ ಸಮಿತಿಯ ನಿರ್ಧಾರಗಳನ್ನು ಜಿಎಸ್‌ಟಿ ಕೌನ್ಸಿಲ್ ಸಭೆಯ ಮುಂದಿಟ್ಟು ಅಂತಿಮಗೊಳಿಸಲಾಗುತ್ತದೆ. ರಿವರ್ಸ್ ಚಾರ್ಜ್ ಮೆಕ್ಯಾನಿಸಂ ಅಳವಡಿಕೆ ಕುರಿತು ಕಾನೂನು ಸಮಿತಿ ಸಲಹೆ ನೀಡಿದೆ. ಜಿಎಸ್‌ಟಿಯನ್ನು ಗ್ರಾಹಕ ಹಾಗೂ ಉದ್ಯಮಿ ಸ್ನೇಹಿಯಾಗಿಸಲು ತ್ವರಿತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಡೀಲರ್ ಹಾಗೂ ತೆರಿಗೆದಾರರು ನಮಗೆ ಮೋಸ ಮಾಡಲು ಸಾಧ್ಯವಿಲ್ಲ. ಬಿಝಿನೆಸ್ ಇಂಟಲಿಜೆನ್ಸ್‌ಗೆ ಬಲವರ್ಧನೆಗೊಳಿಸಲಾಗಿದೆ. ಇದು ಐಟಿ ಇಲಾಖೆಯ ಮೂರನೆ ಕಣ್ಣಿನ ರೀತಿಯಲ್ಲಿ ಕೆಲಸ ಮಾಡಲಿದೆ. ಒಬ್ಬ ವ್ಯಕ್ತಿಯು ಅನೇಕ ರೀತಿಯ ರಿಟರ್ನ್ಸ್ ಪಾವತಿಸುತ್ತಾನೆ. ಎಲ್ಲವನ್ನೂ ಪರಿಶೀಲಿಸುವುದು ಕಷ್ಟವಾಗುತ್ತದೆ. ಆದುದರಿಂದ, ಈ ಎಲ್ಲ ವಿವರಗಳನ್ನು ಆನ್‌ಲೈನ್‌ನಲ್ಲಿ ಪರಿಶೀಲನೆಗೊಳ ಪಡಿಸುವುದರಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಅವರು ಹೇಳಿದರು.

ಶೇ.14ರವರೆಗೆ ಪರಿಹಾರ ಸೆಸ್ ಸಂಗ್ರಹಿಸಲು ಉಪ ಸಮಿತಿಯು ಶಿಫಾರಸ್ಸು ಮಾಡಿದೆ. ಇನ್ನು ಮೂರು ವರ್ಷಗಳಲ್ಲಿ ಯಾವುದೆ ರಾಜ್ಯಕ್ಕೆ ಪರಿಹಾರ ಸೆಸ್ ಸಂಗ್ರಹಿಸುವ ಅಗತ್ಯವಿರುವುದಿಲ್ಲ. ಆ ನಿಟ್ಟಿನಲ್ಲಿ ಆರ್ಥಿಕ ಚೇತರಿಕೆಯಾಗಲಿದೆ ಎಂದು ಸುಶೀಲ್‌ಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.

2017-18ರಲ್ಲಿ ಪ್ರತಿ ತಿಂಗಳು ಸರಾಸರಿ 89,885 ಕೋಟಿ ರೂ.ಗಳ ಆದಾಯ ಬರುತ್ತಿದ್ದು, ಶೇ.11.9ರಷ್ಟು ಬೆಳವಣಿಗೆ ಕಂಡಿದೆ. 300ಕ್ಕೂ ಹೆಚ್ಚು ಗ್ರಾಹಕ ವಸ್ತುಗಳ ಮೇಲಿನ ತೆರಿಗೆ ಇಳಿಸಲಾಗಿದೆ. ಮೇ ತಿಂಗಳಲ್ಲಿ ಆದಾಯವು 94 ಸಾವಿರ ಕೋಟಿ ರೂ.ಆಗಿದೆ. ನಮ್ಮ ಪ್ರಯತ್ನವು ಎಲ್ಲ ರಾಜ್ಯಗಳ ಪರಿಶ್ರಮದಿಂದ ಪ್ರತಿ ತಿಂಗಳು ಕನಿಷ್ಠ 1 ಲಕ್ಷ ಕೋಟಿ ರೂ.ಗಳ ಆದಾಯ ಸಿಗುವಂತಾಗಬೇಕು ಎಂದು ಅವರು ಹೇಳಿದರು.

ಜಿಎಸ್‌ಟಿ ಉಪ ಸಮಿತಿಯ ಸಭೆಯಲ್ಲಿ ರಾಜ್ಯದ ಪ್ರತಿನಿಧಿಯಾಗಿ ಕಾನೂನು ಸಚಿವ ಕೃಷ್ಣಭೈರೇಗೌಡ ಪಾಲ್ಗೊಂಡಿದ್ದರು. ಪತ್ರಿಕಾಗೋಷ್ಠಿಯಲ್ಲಿ ಜಿಎಸ್‌ಟಿಎನ್ ಸಿಇಓ ಪ್ರಕಾಶ್‌ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಜಿಎಸ್‌ಟಿಯನ್ನು ಕಟ್ಟದೆ ಬಾಕಿ ಉಳಿಸಿಕೊಂಡಿರುವವರಿಗೆ ರಾಜ್ಯ ಸರಕಾರಗಳು ನೋಟಿಸ್ ನೀಡಲಿವೆ. ಬಾಕಿ ಉಳಿಸಿಕೊಂಡಿರುವವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು. ಜಿಎಸ್‌ಟಿ ಜಾರಿಯಿಂದಾಗಿ ಭ್ರಷ್ಟಾಚಾರ ಕಡಿಮೆಯಾಗಿದೆ, ಇ-ವೇ ಬಿಲ್‌ನಿಂದಾಗಿ ಗ್ರಾಹಕರ ಸಮಯ, ಪೆಟ್ರೋಲ್, ಡಿಸೇಲ್ ಎಲ್ಲವೂ ಉಳಿತಾಯವಾಗುತ್ತಿದೆ.
-ಸುಶೀಲ್‌ ಕುಮಾರ್ ಮೋದಿ, ಜಿಎಸ್‌ಟಿ ಉಪ ಸಮಿತಿಯ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News