ಅಂಬೇಡ್ಕರ್‌ರನ್ನು ಎಟಿಎಂ ಕಾರ್ಡ್‌ನಂತೆ ಬಳಸಿಕೊಳ್ಳಲಾಗುತ್ತಿದೆ: ರಖ್ಖಿತ ಭಂಜೇತಿ

Update: 2018-07-14 15:51 GMT

ಬೆಂಗಳೂರು, ಜು.14: ಪ್ರಬುದ್ಧ ಭಾರತ ನಿರ್ಮಾಣದ ಕನಸು ಕಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್‌ರನ್ನು ಮೀಸಲಾತಿ, ಉದ್ಯೋಗ, ಭಡ್ತಿ ಹಾಗೂ ರಾಜಕೀಯ ಲಾಭ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಪಡೆದುಕೊಳ್ಳುವ ಸಲುವಾಗಿ ಎಟಿಎಂ ಕಾರ್ಡ್ ರೀತಿ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಬೌದ್ಧ ಧರ್ಮದ ಅಂತಾರಾಷ್ಟ್ರೀಯ ಆಧ್ಯಾತ್ಮಿಕ ಗುರು ವಿನಯ ರಖ್ಖಿತ ಭಂತೇಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಬುದ್ಧ ಪೂರ್ಣಿಮಾ ಹಾಗೂ ಡಾ.ಬಿ.ಆರ್.ಅಂಬೇಡ್ಕರ್’ ಅವರ ಜನ್ಮದಿನದ ಅಂಗವಾಗಿ ಕರ್ನಾಟಕ ಬೌದ್ಧ ಸಮಾಜ ಹಮ್ಮಿಕೊಂಡಿದ್ದ ‘ರಾಷ್ಟ್ರೀಯ ಬೌದ್ಧ ಸಮ್ಮೇಳನ’ದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಂಬೇಡ್ಕರ್ ಅವರ ಚಿಂತನೆ, ನೈಜ ಆಶಯಗಳನ್ನು ಗಾಳಿಗೆ ತೂರಲಾಗಿದೆ. ಎಷ್ಟು ಜನರಿಂದು ಅಂಬೇಡ್ಕರ್ ಬಯಸಿದ ಮಾರ್ಗದಲ್ಲಿ ಸಾಗುತ್ತಿದ್ದೀರಿ ಎಂದು ಸ್ವವಿಮರ್ಶೆ ಮಾಡಿಕೊಳ್ಳಬೇಕಿದೆ ಎಂದರು.

ಸಮ ಸಮಾಜ ನಿರ್ಮಾಣ ಮಾಡಬೇಕು. ಎಲ್ಲರಿಗೂ ಸಮಾನವಾದ ಅವಕಾಶಗಳು ಕಲ್ಪಿಸಬೇಕು ಎಂಬುದು ಬುದ್ಧ ಮತ್ತು ಅಂಬೇಡ್ಕರ್‌ರ ಆಶಯವಾಗಿತ್ತು. ಮಹಿಳೆಯರ ಸಮಾನತೆಗೂ ನಾಂದಿ ಹಾಡಿದ್ದರು. ಆದರೆ, ಇತ್ತೀಚಿಗೆ ಬುದ್ಧ ಮತ್ತು ಅಂಬೇಡ್ಕರ್‌ರನ್ನು ಮಹಿಳೆಯರೇ ತಿರಸ್ಕಾರ ಮಾಡುತ್ತಿದ್ದಾರೆ. ಹೀಗಾಗಿ, ಮಹಿಳೆಯರು ಇತಿಹಾಸವನ್ನು ಅರಿಯಬೇಕು. ಬುದ್ಧ, ಅಂಬೇಡ್ಕರ್ ಅವರ ಕೊಡುಗೆಗಳನ್ನು ಸ್ಮರಿಸಬೇಕು. ಮನೆಯಿಂದಲೇ ಬದಲಾವಣೆಯ ಪರ್ವ ಸೃಷ್ಟಿಸಬೇಕು ಎಂದು ಆಶಿಸಿದರು.

ಇತ್ತೀಚಿನ ದಿನಗಳಲ್ಲಿ ಜಾತಿ ಕಲ್ಪನೆಯೇ ಇಲ್ಲದ ಅನೇಕ ರಾಷ್ಟ್ರಗಳಲ್ಲಿ ಬೌದ್ಧ ಧರ್ಮ ಬೆಳೆಯುತ್ತಿದೆ. ಅಲ್ಲದೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಆನ್‌ಲೈನ್ ಮೂಲಕ ಹಾಗೂ ಪುಸ್ತಕಗಳ ಮೂಲಕ ಧರ್ಮದ ಕುರಿತು ಹೆಚ್ಚು ಅಧ್ಯಯನ ಮಾಡುತ್ತಿದ್ದಾರೆ. ಜೊತೆಗೆ, ಹೆಚ್ಚು ಬೌದ್ಧ ಧರ್ಮದ ಕಡೆಗೆ ಆಕರ್ಷಿತರಾಗುತ್ತಿದ್ದಾರೆ. ಬೌದ್ಧ ಧರ್ಮ ಒಂದು ದೇಶಕ್ಕೆ ಸೀಮಿತಗೊಂಡಿಲ್ಲ, ಅದು ವಿಶ್ವ ಧರ್ಮವಾಗಿದ್ದು, ಬುದ್ಧ ವೈಜ್ಞಾನಿಕ ಹಾಗೂ ವೈಚಾರಿಕ ಚಿಂತನಾ ಕ್ರಮಗಳಿಂದ ಜಗದ್ಗುರುವಾಗಿ ಪರಿಗಣಿಸಲ್ಪಟ್ಟಿದ್ದಾನೆ. ನಮ್ಮಲ್ಲಿ ನಂಬಿಕೆ ಬಹುಮುಖ್ಯ. ನಂಬಿಕೆ ಮೇಲೆಯೇ ಎಲ್ಲವೂ ನಿರ್ಧರಿಸಲ್ಪಡುತ್ತದೆ ಎಂದು ನುಡಿದರು.

ಮಹಾಬೋಧಿ ಸೊಸೈಟಿಯ ಆನಂದ ಭಂತೇಜಿ ಮಾತನಾಡಿ, ಇಂದು ಧರ್ಮ ಸಂಸ್ಕೃತಿ ಕಳೆದು ಹೋಗಿದ್ದು, ಅದನ್ನು ಪುನರ್ ಸ್ಥಾಪಿಸಬೇಕಿದೆ. ಸತ್ಯವನ್ನು ಎದುರುಗೊಳ್ಳುವ ಧೈರ್ಯ ಯಾರಿಗೂ ಇಲ್ಲ. ಎಲ್ಲವನ್ನೂ ವಿಜೃಂಭಿಸಲಾಗುತ್ತಿದೆ. ಸಮಾಜದಲ್ಲಿ ಪರಸ್ಪರ ದ್ವೇಷ, ಅಸೂಯೆ, ತಾರತಮ್ಯವೇ ತುಂಬಿದೆ. ವೈರತ್ವ ಮನುಷ್ಯನನ್ನು ಕುಗ್ಗಿಸುತ್ತದೆ. ಬೌದ್ಧ ಧರ್ಮ ಕರುಣೆ, ಸುಖ, ಶಾಂತಿ, ಜ್ಞಾನವನ್ನು ಬಿತ್ತುತ್ತದೆ. ಇದರ ಸತ್ವವನ್ನು ಅರಿತು ಜನರು ನಡೆಯಬೇಕು ಎಂದು ಮಾರ್ಗದರ್ಶನ ನೀಡಿದರು.

ಮನುಷ್ಯನಾಗಿ ಜನ್ಮಿಸಿದ ಪ್ರತಿಯೊಬ್ಬ ವ್ಯಕ್ತಿಯೂ ಪರಸ್ಪರ ಸಂಬಂಧಗಳನ್ನು ಗೌರವಿಸುವುದನ್ನು ಕಲಿಯಬೇಕು. ಯಾರೋ ಹೇಳಿದ್ದನ್ನು ನಂಬಿ, ಮತ್ತೊಂದು ಧರ್ಮವನ್ನು ದ್ವೇಷಿಸುವ ಬದಲಿಗೆ, ಪ್ರೀತಿಸುವುದನ್ನು ಕಲಿಯಬೇಕು. ಅಲ್ಲದೆ, ಅಜ್ಞಾನದ ಅಂಧಕಾರದಿಂದ ಹೊರಬಂದು ಜ್ಞಾನದ ಕಡೆಗೆ ಪಯಣಿಸಬೇಕು. ಆ ಮೂಲಕ ಸುಂದರವಾದ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಂಗವಾಗಿ ನಗರದ ವಿಧಾನಸೌಧದ ಎದುರಿನ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಯಿಂದ ಪುರಭವನದವರೆಗೂ ವಿಶ್ವಶಾಂತಿಗಾಗಿ ಬುದ್ಧ ನಡಿಗೆ ಶೀರ್ಷಿಕೆ ಅಡಿಯಲ್ಲಿ ಮಾನ ಬಂಧುತ್ವ ಧರ್ಮ ರಥಯಾತ್ರೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಒಂದು ಸಾವಿರಕ್ಕೂ ಅಧಿಕ ಜನರು ಬೌದ್ಧ ಧಮ್ಮ ದೀಕ್ಷೆ ಸ್ವೀಕರಿಸಿದರು.

ಪರಿಶಿಷ್ಟ ಜಾತಿಯವರು ಬೌದ್ಧ ಧರ್ಮ ಸ್ವೀಕರಿಸಿದರೆ ಮೀಸಲಾತಿ ಸೌಲಭ್ಯ ಕಳೆದುಕೊಳ್ಳುತ್ತಾರೆ ಎಂದು ಆಧುನಿಕ ಮನುವಾದಿಗಳು ಅಪಪ್ರಚಾರ ಮಾಡುತ್ತಿದ್ದಾರೆ. ಅಂಬೇಡ್ಕರ್ ನಮ್ಮನ್ನು ಇಷ್ಟೊಂದು ಅನಾಥರನ್ನಾಗಿ ಮಾಡಿಲ್ಲ. ಪರಿಶಿಷ್ಟ ಜಾತಿಯವರು ಬೌದ್ಧ ಧರ್ಮಕ್ಕೆ ಮರಳಿದರೆ ಅವರಿಗೆ ಮೀಸಲಾತಿಯ ಎಲ್ಲಾ ಸೌಲಭ್ಯಗಳು ಸಿಗುತ್ತವೆ. ಹಾಗಾಗಿ ಸುಳ್ಳು ಪ್ರಚಾರಕ್ಕೆ ಕಿವಿಗೊಡಬೇಡಿ. ಈ ಕಾನೂನನ್ನು ನಾವು ತಿಳಿದುಕೊಳ್ಳಬೇಕು ಬೇರೆಯವರಿಗೂ ತಿಳಿಸಬೇಕು.
-ಡಾ. ಸಾಖೇ ಶ್ಯಾಮು, ಕೆಬಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News