ಮಕ್ಕಳ ಸುರಕ್ಷತೆಗೆ ಸರಕಾರದ ಆದ್ಯತೆ: ಮುಖ್ಯಮಂತ್ರಿ ಕುಮಾರಸ್ವಾಮಿ

Update: 2018-07-14 16:15 GMT

ಬೆಂಗಳೂರು, ಜು. 14: ಮಕ್ಕಳ ಸುರಕ್ಷತೆ, ಮಕ್ಕಳ ಮೇಲಿನ ದೌರ್ಜನ್ಯ ಅತ್ಯಂತ ಸೂಕ್ಷ್ಮ ವಿಷಯಗಳಾಗಿದ್ದು, ರಾಜ್ಯ ಸರಕಾರ ಮಕ್ಕಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಭರವಸೆ ವ್ಯಕ್ತಪಡಿಸಿದ್ದಾರೆ.

ಶನಿವಾರ ಇಲ್ಲಿನ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತ, ಬಚ್‌ಪನ್ ಬಚಾವೋ ಆಂದೋಲನ ಸಂಸ್ಥೆಯ ಸ್ಥಾಪಕ, ಮಕ್ಕಳ ಹಕ್ಕುಗಳ ಕಾರ್ಯಕರ್ತ ಕೈಲಾಶ್ ಸತ್ಯಾರ್ಥಿ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದರು.

ಈ ಸಂದರ್ಭದಲ್ಲಿ ಮಕ್ಕಳ ಸುರಕ್ಷತೆ, ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದ ವಿಷಯಗಳಲ್ಲಿ ಕರ್ನಾಟಕ ಸರಕಾರದೊಂದಿಗೆ ಕೈಜೋಡಿಸಲು ತಾವು ಸಿದ್ಧ ಎಂದು ಕೈಲಾಶ್ ಸತ್ಯಾರ್ಥಿ ತಿಳಿಸಿದರು. ಮಕ್ಕಳ ಹಕ್ಕುಗಳು, ಸುರಕ್ಷತೆ ಕುರಿತು ನೀತಿಯನ್ನು ರೂಪಿಸುವ ಮೂಲಕ ರಾಜಕೀಯಕ್ಕೆ ಒಂದು ಮಾನವೀಯ ಮುಖ ನೀಡಲು ಸಾಧ್ಯ ಎಂದು ಸತ್ಯಾರ್ಥಿ ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಮಕ್ಕಳ ಸುರಕ್ಷತೆಗೆ ಆದ್ಯತೆ, ಜಿಲ್ಲೆಗಳಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿಗಳನ್ನು ಬಲಪಡಿಸುವುದು ಹಾಗೂ ಮಕ್ಕಳ ಸುರಕ್ಷತೆ ಕುರಿತು ಕಾರ್ಯಪಡೆ ರಚಿಸುವ ಕುರಿತು ಈ ಸಂದರ್ಭದಲ್ಲಿ ಚರ್ಚಿಸಲಾಯಿತು. ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಸಿಎಂ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಈ ವೇಳೆ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News