×
Ad

ಅರಿವಿನ ನೆಲೆಯ ಸೃಜನಶೀಲ ಪ್ರತಿಭೆ ಮುಖ್ಯ: ಸಾಹಿತಿ ಡಾ.ವಡ್ಡಗೆರೆ ನಾಗರಾಜಯ್ಯ

Update: 2018-07-14 21:52 IST

ಬೆಂಗಳೂರು, ಜು. 14: ಪಠ್ಯ ಕೇಂದ್ರಿತ ಪರೀಕ್ಷೆ, ಅಂಕಗಳಿಂದ ಹೊರಹೊಮ್ಮುವ ‘ಪ್ರತಿಭೆ’ಗಿಂತ ತನ್ನ ಪರಿಸರದ ಅರಿವಿನ ನೆಲೆಯಲ್ಲಿ, ಅಭದ್ರತೆಗಳ ನಡುವೆ ಮೂಡುವ ಸೃಜನಶೀಲತೆ ಬಹಳ ಮುಖ್ಯ ಎಂದು ಸಾಹಿತಿ ಡಾ.ವಡ್ಡಗೆರೆ ನಾಗರಾಜಯ್ಯ ಪ್ರತಿಪಾದಿಸಿದ್ದಾರೆ.

ಶನಿವಾರ ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಕುರಿತು ಇಲ್ಲಿನ ಐಎಸ್‌ಐನಲ್ಲಿ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಪ್ರತಿಭೆ’ ಮೀಸಲಾತಿಯಿಂದ ನಾಶವಾಗುತ್ತಿದೆ ಎಂಬ ಸುಳ್ಳನ್ನು ಹಬ್ಬಿಸಲಾಗುತ್ತದೆ. ಆದರೆ, ಪಠ್ಯ ಕೇಂದ್ರಿತ, ಅಂಕಗಳನ್ನು ಆಧರಿಸಿದ ಪ್ರತಿಭೆ ಅರ್ಥಹೀನ ಎಂದು ವಿಶ್ಲೇಷಿಸಿದರು.

ಶೋಷಣೆ ಮೂಲದ ಪ್ರತಿಭೆಗಿಂತ ಶ್ರಮಜೀವ ಸಂಸ್ಕೃತಿಯ ನಾಡುಕಟ್ಟುವ ಪ್ರತಿಭೆಯ ನಮ್ಮ ದೇಶದಲ್ಲಿ ಉಪೇಕ್ಷೆಗೆ ಒಳಗಾಗುತ್ತಿದೆ ಎಂದ ಅವರು, ಮೀಸಲಾತಿ ವಿರುದ್ಧ ಗುಲ್ಲೆಬ್ಬಿಸುತ್ತಿರುವ ಜನರೇ ಶೇ.85ರಷ್ಟು ಮೀಸಲಾತಿ ಫಲವನ್ನು ಉಣ್ಣುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ವಕೀಲರಾದ ಮನೋರಂಜನಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮೀಸಲಾತಿ ಮತ್ತು ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯನ್ನು ದುರ್ಬಲಗೊಳಿಸಲು ಹುನ್ನಾರ ನಡೆಸಲಾಗುತ್ತಿದ್ದು, ಇದರ ವಿರುದ್ಧ ಶೋಷಿತರು ಜಾಗೃತರಾಗಬೇಕಾಗಿದೆ ಎಂದು ಕರೆ ನೀಡಿದರು. ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಮುನ್ನಚ್ಚರಿಕೆ ಕೈಗೊಳ್ಳಬೇಕೆಂದು ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಲ್ಲೆ ಉಲ್ಲೇಖಿಸಲಾಗಿದೆ. ಆದರೆ, ಉದ್ದೇಶಿತ ಕಾಯ್ದೆ ಬಗ್ಗೆ ಸಾರ್ವಜನಿಕರಲ್ಲಿ ಮಾತ್ರವಲ್ಲ, ನ್ಯಾಯವಾದಿಗಳಿಗೆ ತಿಳುವಳಿಕೆ ಇಲ್ಲ. ಈ ಬಗ್ಗೆ ದಲಿತ ಸಮುದಾಯದ ವಕೀಲರು ಜಾಗೃತರಾಗಬೇಕು ಎಂದು ಸಲಹೆ ಮಾಡಿದರು.

ಅಲೆಮಾರಿ ಬುಡಕಟ್ಟು ಒಕ್ಕೂಟದ ಕಾರ್ಯದರ್ಶಿ ಡಾ.ಬಾಲಗುರುಮೂರ್ತಿ, ಜಾತಿ ವಿನಾಶದ ಬಗ್ಗೆ ಆಲೋಚಿಸುತ್ತಿರುವ ವೇಳೆ ಅಲೆಮಾರಿ ಸಮುದಾಯಗಳು ಜಾತಿ ಪ್ರಮಾಣಪತ್ರಕ್ಕಾಗಿ ಹೋರಾಟ ಮಾಡಬೇಕಾದ ಸ್ಥಿತಿ ನಮ್ಮಲ್ಲಿದೆ. ಹೀಗಾಗಿ ಒಳ ಮೀಸಲಾತಿ ಕಲ್ಪಿಸಬೇಕಿದೆ ಎಂದು ಆಗ್ರಹಿಸಿದರು.

ಕಾರ್ಯಾಗಾರದಲ್ಲಿ ಹಿರಿಯ ವಕೀಲ ಬಿ.ಟಿ.ವೆಂಕಟೇಶ್, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ವೈ.ಮರಿಸ್ವಾಮಿ, ಐಎಸ್‌ಐನ ಹಂಗಾಮಿ ನಿರ್ದೇಶಕ ಫಾ. ಮಾರ್ಟಿನ್ ಸೇರಿ ವಿವಿಧೆಡೆಯಿಂದ ಆಗಮಿಸಿದ್ದ ವಕೀಲರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News