×
Ad

ಎಸೆಸೆಲ್ಸಿ ಮುಗಿಸಿದವರಿಗೂ ವೈದ್ಯಕೀಯ ಸರ್ಟಿಫಿಕೇಟ್ ಕೋರ್ಸ್: ಸಚಿವ ಡಿ.ಕೆ.ಶಿವಕುಮಾರ್

Update: 2018-07-14 21:59 IST

ಬೆಂಗಳೂರು, ಜು.14: ಗ್ರಾಮೀಣ ಪ್ರದೇಶದಲ್ಲಿನ ಯುವಕರಿಗೆ ಉದೋಗ ಕಲ್ಪಿಸುವ ನಿಟ್ಟಿನಲ್ಲಿ ಎಸೆಸೆಲ್ಸಿ ಮುಗಿಸಿದವರಿಗೂ ವೈದ್ಯಕೀಯ ಸರ್ಟಿಫಿಕೇಟ್ ಕೋರ್ಸ್ ಆರಂಭಿಸಲು ಸರಕಾರ ಚಿಂತನೆ ನಡೆಸಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.

ಶನಿವಾರ ನಗರದ ಕುವೆಂಪು ಸಭಾಂಗಣದಲ್ಲಿ ಭಾರತೀಯ ವೈದ್ಯಕೀಯ ಸಂಘ ಕರ್ನಾಟಕ ಘಟಕದ ವತಿಯಿಂದ ಆಯೋಜಿಸಿದ್ದ ’ವೈದ್ಯಕೀಯ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಆಸ್ಪತ್ರೆ ಆರೋಗ್ಯಕರವಾಗಿರಬೇಕಾದರೆ ನರ್ಸಿಂಗ್ ಪ್ಯಾರಾ ಮೆಡಿಕಲ್ ಅಗತ್ಯ. ಆದರೆ, ಪಿಯುಸಿ, ಡಿಗ್ರಿ ಮುಗಿಸಿದ ವಿದ್ಯಾರ್ಥಿಗಳು ನರ್ಸಿಂಗ್, ಪ್ಯಾರಾ ಮೆಡಿಕಲ್ನಂತಹ ಕೋರ್ಸ್‌ಗೆ ಸೇರಲು ಹಿಂಜರಿಯುತ್ತಿದ್ದಾರೆ. ಹೀಗಾಗಿ, ಎಸೆಸೆಲ್ಸಿ ಪಾಸ್ ಆದವರಿಗೆ 10 ತಿಂಗಳ ಹೆಲ್ತ್ ಸರ್ಟಿಫಿಕೇಟ್ ಕೋಸ್ ಆರಂಭಿಸಲು ಚಿಂತನೆ ನಡೆಸಲಾಗಿದೆ. ಇದರಿಂದ ಗ್ರಾಮೀಣ ಭಾಗದ ಯುವಕರಿಗೆ ಉದ್ಯೋಗ ಕಲ್ಪಿಸಬಹುದಾಗಿದೆ ಎಂದರು.

ವೈದ್ಯಕೀಯ ಶಿಕ್ಷಣದಲ್ಲಿ ಬದಲಾವಣೆ ಅಗತ್ಯವಾಗಿದೆ. ಹೀಗಾಗಿ, ಪ್ರತಿಯೊಬ್ಬರ ಸಲಹೆ ಅಗತ್ಯ. ಈ ಹಿನ್ನೆಲೆಯಲ್ಲಿ ಜು.15ರಂದು ಜಾಹೀರಾತು ಪ್ರಸಾರವಾಗುತ್ತದೆ. ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ಬಯಸುವ ಪ್ರತಿಯೊಬ್ಬರು ಸಲಹೆ ನೀಡಬಹುದು ಎಂದು ತಿಳಿಸಿದರು. ಎಲ್ಲರೂ ಒಟ್ಟಾಗಿ ಸೇರಿದರೆ ಸಮಾಜದ ಜನರ ಸೇವೆಗೆ ಅನುಕೂಲವಾಗುತ್ತದೆ. ಹೀಗಾಗಿ, ವೈದ್ಯರ ಸಮಸ್ಯೆಗಳೇನೇ ಇದ್ದರೂ, ಚರ್ಚಿಸಿ ಬಗೆಹರಿಸಿಕೊಳ್ಳಿ. ನಿಮಗೆ ಅಗತ್ಯವಿರುವ ಸೌಲಭ್ಯ ಕಲ್ಪಿಸಲು ಸರಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು.

ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಮಾತನಾಡಿ, ಆರೋಗ್ಯ ಇಲಾಖೆ ಗೊಂದಲದ ಗೂಡಾಗಿದೆ, ಅದನ್ನು ಸರಿಪಡಿಸಲು ನಿಟ್ಟಿನಲ್ಲಿ ಸರಕಾರ ಚಿಂತನೆ ನಡೆಸಿದೆ. ಯಶಸ್ವಿನಿ ಯೋಜನೆಯ ಅನುಕೂಲಕರವಾದ ಅಂಶಗಳನ್ನು ಆರೋಗ್ಯ ಕರ್ನಾಟಕ ಯೋಜನೆಗೆ ಸೇರ್ಪಡೆಗೊಳಿಸಲು ಪುನರ್‌ವಿಮರ್ಶೆ ಮಾಡಲಾಗುತ್ತದೆ ಎಂದು ಹೇಳಿದರು.

ವೈದ್ಯರ ದಿನವನ್ನು ಜು.1ರಂದು ಆಚರಿಸಿದರೆ ಅದರ ಮಹತ್ವ ಹೆಚ್ಚು. ಹೀಗಾಗಿ, ಸರಕಾರದ ವತಿಯಿಂದ ಆಚರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದ ಅವರು, ವೈದ್ಯರು ಇಂಜಿನಿಯರ್‌ಗಳು ಸಮಾಜದ ಸ್ತಂಭಗಳಿದ್ದಂತೆ. ಸಮಾಜಕ್ಕೆ ಅವರ ಕೊಡುಗೆ ಅಪಾರ. ಮಾನವೀಯ ಮೌಲ್ಯಗಳ ಕಟ್ಟುವ ವೃತ್ತಿಗಳು. ಹೀಗಾಗಿ, ಯಾವುದೇ ಆಮಿಷಗಳಿಗೆ ಒಳಗಾಗದೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿ ಎಂದು ಸಲಹೆ ನೀಡಿದರು.

ಈ ವೇಳೆ ವೈದ್ಯಕೀಯ ಸಂಘದಿಂದ ನಕಲಿ ವೈದ್ಯರ ಹಾವಳಿಗೆ ಕಡಿವಾಣ, ಯಶಸ್ವಿನಿ ಯೋಜನೆ ಮುಂದುವರಿಕೆ ಸೇರಿದಂತೆ ಇನ್ನಿತರ ಬೇಡಿಕೆಗಳನ್ನೊಳಗೊಂಡ ಮನವಿ ಪತ್ರವನ್ನು ಸಚಿವರಿಗೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಘಟಕದ ಅಧ್ಯಕ್ಷ ಡಾ.ಎಚ್.ಎನ್.ರವೀಂದ್ರ, ಡಾ.ಮಳಲಿಗೌಡ, ಡಾ.ಸಚ್ಚಿದಾನಂದ, ಡಾ.ಚಂದ್ರಶೇಖರ್ ಪಾಟೀಲ್ ಸೇರಿ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News