ಬಿಬಿಎಂಪಿ: ಸುಬ್ರಮಣ್ಯ ಸಾವಿಗೆ ಕಾರಣಕರ್ತರ ಅಮಾನತಿಗೆ ಆಗ್ರಹ
ಬೆಂಗಳೂರು, ಜು.14: ಇತ್ತೀಚಿಗೆ ಮರಣ ಹೊಂದಿದ ಮಲ್ಲೇಶ್ವರಂನ ಬಿಬಿಎಂಪಿ ಗುತ್ತಿಗೆ ಪೌರ ಕಾರ್ಮಿಕ ಸುಬ್ರಹ್ಮಣಿ ಸಾವಿಗೆ ಕಾರಣವಾದ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು ಎಂದು ಸಫಾಯಿ ಕರ್ಮಚಾರಿ ಕಾವಲು ಸಮಿತಿ ಒತ್ತಾಯಿಸಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ರಾಜ್ಯ ಸಂಚಾಲಕ ಕೆ.ಎಚ್.ಓಬಳೇಶ, ದೌರ್ಜನ್ಯ ತಡೆ ಕಾಯ್ದೆ 1989 ರ ಅಡಿಯಲ್ಲಿ ಘಟನೆಗೆ ಕಾರಣವಾದ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲು ಮಾಡಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಜೊತೆಗೆ, ಮರಣ ಹೊಂದಿದ ಕಾರ್ಮಿಕನ ಕುಟುಂಬಕ್ಕೆ 25 ಲಕ್ಷ ಪರಿಹಾರ ಧನ ನೀಡಬೇಕು ಮತ್ತು ಅವರ ಪತ್ನಿಗೆ ಅನುಕಂಪದ ಆಧಾರದ ಮೇಲೆ ಖಾಯಂ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದರು.
ಗುತ್ತಿಗೆ ಪೌರ ಕಾರ್ಮಿಕರ ನೇರ ನೇಮಕಾತಿಗೆ 45 ವರ್ಷ ನಿಗದಿಪಡಿಸಿರುವ ಸರಕಾರದ ಕ್ರಮ ಸರಿಯಲ್ಲ. ಇದು, ಕಳೆದ 25 ವರ್ಷಗಳಿಂದ ದುಡಿಯುತ್ತಿರುವ ಪೌರ ಕಾರ್ಮಿಕರಿಗೆ ಅನ್ಯಾಯವಾಗಲಿದೆ. ಸರಕಾರ ಕೂಡಲೇ ವಯಸ್ಸಿನ ಮಿತಿಯನ್ನು ಹಿಂಪಡೆಯಬೇಕು. ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ಅನ್ಯಾಯಕ್ಕೊಳಗಾದ ಪೌರಕಾರ್ಮಿಕರು ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಬಳ್ಳಾರಿಯ ಸಮಾನತೆ ಯೂನಿಯನ್ ಕರ್ನಾಟಕ ಸಂಘಟನೆಯ ಸಂಚಾಲಕ ರಾಮಚಂದ್ರ ಮಾತನಾಡಿ, ಗುತ್ತಿಗೆದಾರರು ಮತ್ತು ಅಧಿಕಾರಿಗಳಿಂದಾಗಿ ಪೌರಕಾರ್ಮಿಕರಿಗೆ ಸಿಗಬೇಕಾದ ಭವಿಷ್ಯ ನಿಧಿ ಸೇರಿದಂತೆ ವಿವಿಧ ಸವಲತ್ತುಗಳು ಸಿಗುತ್ತಿಲ್ಲ. ಈ ಸಂಬಂಧ ಸರಕಾರ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಇನ್ನೂ ಮಲ ಹೊರುವ ಪದ್ಧತಿ ಜೀವಂತವಾಗಿದೆ. ಅದರ ನಿರ್ಮೂಲನೆ ಮಾಡಲು ಸರಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲದಿದ್ದರೆ, ರಾಜ್ಯಾದ್ಯಂತ ಜನಾಂದೋಲನ ರೂಪಿಸಲಾಗುತ್ತದೆ ಎಂದು ಹೇಳಿದರು.