ಅಸ್ಪೃಶ್ಯತೆ-ಇತ್ತೀಚಿನ ಮಾದರಿ

Update: 2018-07-15 14:15 GMT

ನಮ್ಮ ಈಗಿನ ದಲಿತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಇತ್ತೀಚೆಗೆ ಪತ್ನಿ ಸಮೇತರಾಗಿ ಪುರಿ ದೇವಾಲಯಕ್ಕೆ ಹೋದಾಗ ಅವರನ್ನು ಗದರಿಸಿ ಅವಮಾನಿಸಲಾಯಿತು. ಗದರಿಸಿ ಅವಮಾನಿಸಲಾಯಿತು ಎಂದು ಮುಗುಮ್ಮಾಗಿ ಹೇಳಲಾಗಿದೆ. ಗದರಿಸಿ ಅವಮಾನಿಸುವುದು ಎಂದರೇನು? ರಾಷ್ಟ್ರದ ಪ್ರಥಮ ಪ್ರಜೆಯನ್ನು ಹಾಗೇಕೆ ನಡೆಸಿಕೊಳ್ಳಲಾಯಿತು ಎಂಬುದು ವರದಿಯಾಗಿಲ್ಲ. ಅದರ ವಿವರಗಳು ವರದಿಯಾಗಿಲ್ಲ. ಇದನ್ನು ಪ್ರತಿಭಟಿಸಿ ರಾಷ್ಟ್ರಪತಿಯವರ ಕಾರ್ಯಾಲಯದಿಂದ ಒಡಿಶಾ ಸರಕಾರಕ್ಕೆ, ದೇವಾಲಯದ ಆಡಳಿತ ಸಮಿತಿಗೆ ಪತ್ರ ಹೋಗಿರುವುದು ಘಟನೆಯ ಸತ್ಯತೆಯನ್ನೂ ತೀವ್ರತೆಯನ್ನೂ ಸೂಚಿಸುತ್ತದೆ.


ಇತ್ತೀಚೆಗೆ ನಮ್ಮ ರಾಷ್ಟ್ರಪತಿಗಳು ಪತ್ನಿಸಮೇತರಾಗಿ ಒಡಿಶಾದ ಪುರಿ ಜಗನ್ನಾಥ ದೇವಾಲಯಕ್ಕೆ ಭೇಟಿಕೊಟ್ಟಾಗ ಅವರನ್ನು ಮೈಲಿಗೆ ಎಂಬಂತೆ ನಡೆಸಿಕೊಳ್ಳಲಾಯಿತೆಂಬ ವರದಿ ಓದಿ ಇತಿಹಾಸದ ಕೆಲವು ಪುಟಗಳು ಕಣ್ಣ ಮುಂದೆ ಬಂದವು.

1938ರ ಮಾರ್ಚ್ ಕೊನೆಯಲ್ಲಿ ಕಸ್ತೂರಿ ಬಾ, ಮಹದೇವ ದೇಸಾಯಿ ಮತ್ತಿತರರು ಆಗಿನ ಒಡಿಶಾಗೆ ಭೇಟಿಕೊಟ್ಟಿದ್ದರು. ಆಗ ಕಸ್ತೂರಿ ಬಾ, ಮಹದೇವರ ಪತ್ನಿ ದುರ್ಗಾ ಹಾಗೂ ದುರ್ಗಾಳ ಬಂಧುವೊಬ್ಬರು ಸೇರಿದಂತೆ ಈ ಮೂವರು ಪುರಿಯ ಜಗನ್ನಾಥ ದೇವಾಲಯಕ್ಕೆ ಹೋದ ವಿಷಯ ಗಾಂಧಿಗೆ ಗೊತ್ತಾಗಿತ್ತು. ಆಗ (ಈಗಲೂ?)ಜಗನ್ನಾಥ ದೇವಾಲಯದಲ್ಲಿ ಹರಿಜನರಿಗೆ ಪ್ರವೇಶ ನಿಷೇಧಿಸಿಲಾಗಿತ್ತು. ಅದಕ್ಕೆ ನಾಲ್ಕು ವರ್ಷಗಳ ಹಿಂದೆ ಇದೇ ದೇವಾಲಯದ ಪ್ರವೇಶ ದ್ವಾರದಲ್ಲಿ ಗಾಂಧಿಯವರನ್ನು ನಿಂದಿಸಲಾಗಿತ್ತು

ಗಾಂಧಿಯವರಿಗೆ ಕಸ್ತೂರಿ ಬಾ ಜಗನ್ನಾಥ ದೇವಾಲಯಕ್ಕೆ ಹೋದದ್ದು ಆಘಾತ ಉಂಟುಮಾಡಿತ್ತು. ಬಾ ಜಗನ್ನಾಥ ದೇವಾಲಯ ಪ್ರವೇಶಿಸಿದ್ದು ಈ ವೇಳೆಗಾಗಲೇ ಪುರಿಯಲ್ಲಿ ಎಲ್ಲರ ನಾಲಗೆಯ ಮೇಲೆ ನಲಿದಾಡುತ್ತಿದ್ದ ಸುದ್ದಿಯಾಗಿತ್ತು. ‘‘ನಿಜವಾಗಲೂ ಕಸ್ತೂರಿ ಬಾ ದೇವಸ್ಥಾನದ ಒಳಗೆ ಹೋಗಿದ್ದರಾ?’’ ಎಂದು ಅಲ್ಲಿನ ರೈಲ್ವೆ ಸ್ಟೇಷನ್ ಮಾಸ್ತರನೂ ಕೇಳಿದ್ದನಂತೆ!

ಗಾಂಧಿಯಿಂದ ಛೀಮಾರಿ ಹಾಕಿಸಿಕೊಂಡು ಈ ಮಹಿಳೆಯರು ಕಂಬನಿಗರೆದಿದ್ದರು. ದೇವಾಲಯ ಪ್ರವೇಶಿಸಿದ್ದು ತಪ್ಪಾಯಿತೆಂದು ಕಸ್ತೂರಿ ಬಾ ಒಪ್ಪಿಕೊಂಡಿದ್ದರು. ಆದರೆ ಗಾಂಧಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡದ್ದು ಮಹದೇವ ದೇಸಾಯರನ್ನು. ದೇವಸ್ಥಾನದ ಒಳಗೆ ಹೋಗದಂತೆ ಹೆಂಗಸರಿಗೆ ತಿಳಿಯಹೇಳಬೇಕಿತ್ತೆಂದು ಗಾಂಧಿ ಆಕ್ಷೇಪಿಸಿದ್ದರು.ಗಾಂಧಿ ನಂತರ ಮಾರ್ಚ್ 30ರಂದು ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡುತ್ತ ಬಾ ಅವರ ದೇವಾಲಯ ಪ್ರವೇಶ ಪ್ರಸ್ತಾಪಿಸಿ ಹೀಗೆ ಹೇಳಿದ್ದರು:

‘‘ಅಸ್ಪಶ್ಯತೆ ನಿವಾರಣೆಯಾಗದಿದ್ದಲ್ಲಿ ಹಿಂದೂ ಧರ್ಮ ನಾಶವಾಗಿ ಹೋಗಲಿ ಎನ್ನುವುದು ನನ್ನ ನಿತ್ಯದ ಪ್ರಾರ್ಥನೆ. ನೀವೆಲ್ಲರೂ ನಿತ್ಯ ಇದೇ ರೀತಿ ಪ್ರಾರ್ಥಿಸಬೇಕು....ನನ್ನ ಹೆಂಡತಿ ಮತ್ತು ನಾನು ಮಕ್ಕಳಂತೆ ಕಾಣುವ ಇಬ್ಬರು ಆಶ್ರಮವಾಸಿಗಳು ಪುರಿಯ ದೇವಾಲಯದೊಳಕ್ಕೆ ಹೋಗಿದ್ದರೆಂದು ತಿಳಿದು ನನಗೆ ತುಂಬ ಅವಮಾನವಾಯಿತು.ತೇಜೋಭಂಗವಾದಂತೆನಿಸಿತು. ಕುಸಿದು ಬೀಳುವಷ್ಟು ತೀವ್ರವಾಗಿತ್ತು ಆ ಯಾತನೆ. ಮೂವರೂ ತಿಳಿಯದೆ ದೇವಾಲಯವನ್ನು ಪ್ರವೇಶಿಸಿದ್ದರು. ಅದಕ್ಕೆ ನನ್ನನ್ನೇ ದೂಷಿಸಬೇಕು. ನನಗಿಂತ ಹೆಚ್ಚಾಗಿ ಮಹದೇವನನ್ನು ದೂಷಿಸಬೇಕು. ಅವನು ಅವರಿಗೆ ತಮ್ಮ ಧರ್ಮ ಏನೆಂದು ತಿಳಿಸಲಿಲ್ಲ...ಅವನು ಅದರ ಸಾಮಾಜಿಕ ಪರಿಣಾಮಗಳ ಬಗ್ಗೆಯೂ ಯೋಚಿಸಬೇಕಿತ್ತು...ಹೀಗಾದರೆ ನಾವು ಸದಾಕಾಲ ನಿಮ್ಮೆಂದಿಗಿದ್ದೇವೆ ಎಂದು ಹರಿಜನರಿಗೆ ಹೇಗೆ ಮನವರಿಕೆ ಮಾಡಿಕೊಡುವುದು ಸಾಧ್ಯವಾದೀತು? ನಮ್ಮ ಹೆಂಡತಿ ಮಕ್ಕಳು ನಮ್ಮ ಜೊತೆಗಿಲ್ಲದೆ ಹರಿಜನರೊಂದಿಗೆ ನಮ್ಮನ್ನು ಗುರುತಿಸಿಕೊಳ್ಳುವುದು ಹೇಗೆ ಸಾಧ್ಯವಾದೀತು?’’
          (ಮೋಹನದಾಸ್ ಒಂದು ಸತ್ಯ ಕಥೆ)
-ಈ ಮಾತುಗಳೊಂದಿಗೆ ಅಂದಿನ ಸಭೆಯಲ್ಲಿ ಗಾಂಧಿ ಸುಳ್ಳು ಧರ್ಮವನ್ನಲ್ಲ, ನಿಜವಾದ ಧರ್ಮವನ್ನು ಪಾಲಿಸುವಂತೆ ಜನರಿಗೆ ಕರೆ ನೀಡಿದ್ದರು.

ಸ್ವಾತಂತ್ರ್ಯೋತ್ತರ ಭಾರತದಲ್ಲಿ ಈ ವೇಳೆಗೆ ಅಸ್ಪಶ್ಯತೆ ತೊಲಗಿ ಗಾಂಧಿಯವರ ಈ ಮಾತುಗಳು ಇಂದಿನ ಭಾರತಕ್ಕೆ ಅಪ್ರಸ್ತುತವಾಗಬೇಕಿತ್ತು. ಅಸ್ಪಶ್ಯತೆ ತೊಲಗಲಿಲ್ಲ. ಆದರೆ ಈ ಮೂರು ನಾಲ್ಕು ವರ್ಷಗಳಲ್ಲಿ ಹಲವಾರು ಕಾರಣಗಳಿಂದಾಗಿ ದಲಿತರ ಮೇಲೆ ಹಲ್ಲೆ ಹೆಚ್ಚುತ್ತಿರುವ ಈ ದಿನಗಳಲ್ಲಿ ಗಾಂಧೀಜಿಯವರ ಮಾತುಗಳು ಎಂದಿಗಿಂತ ಹೆಚ್ಚು ಪ್ರಸ್ತುತವೆನಿಸುತ್ತದೆ. ಈಗಲೂ ಗ್ರಾಮೀಣ ಭಾರತದಲ್ಲಿ ದಲಿತರಿಗೆ ಹೊಟೇಲು, ಕ್ಷೌರದ ಅಂಗಡಿ, ಸಾರ್ವಜನಿಕ ಜಲಮೂಲಗಳು ಮೊದಲಾದ ಕಡೆಗಳಲ್ಲಿ ಸಾಮಾಜಿಕ ಬಹಿಷ್ಕಾರ ಹಾಕುತ್ತಿರುವುದು ವರದಿಯಾಗುತ್ತಲೇ ಇದೆ. ಇನ್ನು ದೇವಾಲಯ ಪ್ರವೇಶ ನಿರಾಕರಣೆಯಂತೂ ಹಳ್ಳಿನಗರ ಭೇದವಿಲ್ಲದೆ ಅಲಿಖಿತ ನಿಷೇಧಾಜ್ಞೆಯಂತೆ ಜಾರಿಯಲ್ಲಿದೆ.

ದಲಿತರಿಗೆ ಮತ್ತು ಮಹಿಳೆಯರಿಗೆ ದೇವಾಲಯಗಳಲ್ಲಿ ಪ್ರವೇಶ ನಿರಾಕರಣೆ ಆಗಾಗ್ಗೆ ಸುದ್ದಿಯಾಗುತ್ತಿರುತ್ತದೆ. ಪುರಿಯ ಜಗನ್ನಾಥ ದೇವಾಲಯವಂತೂ ಇದರಲ್ಲಿ ಮುಂಚೂಣಿಯಲ್ಲಿರುವಂತಿದೆ. ದಲಿತ ಹೆಣ್ಣುಮಗಳೊಬ್ಬಳು ಭಾರತದ ಪ್ರಥಮ ರಾಷ್ಟ್ರಪತಿಯಾಗಬೇಕು ಎನ್ನುವುದು ಗಾಂಧೀಜಿಯವರ ಇಚ್ಛೆಯಾಗಿತ್ತು. ದಲಿತ ಮಹಿಳೆ ಅಥವಾ ದಲಿತ ಪರುಷನನ್ನು ಸ್ವತಂತ್ರ ಭಾರತದ ಪ್ರಪ್ರಥಮ ರಾಷ್ಟ್ರಪತಿಯಾಗಿ ನೇಮಿಸುವಂತೆ ಗಾಂಧಿ ಸಲಹೆ ಮಾಡಿದ್ದರು. ಜಾತಿ ಧ್ರುವೀಕರಣದ ಪ್ರಯತ್ನಗಳನ್ನು ವಿಫಲಗೊಳಿಸುವುದು ಗಾಂಧಿಯ ಹುನ್ನಾರವಾಗಿತ್ತು. ಪ್ರಾದೇಶಿಕ ಧ್ರುವೀಕರಣದಂತೆ ಜಾತಿ ಧ್ರುವೀಕರಣವೂ ವಿನಾಶಕಾರಿಯಾಗಿದ್ದು ಅದನ್ನು ತಪ್ಪಿಸುವುದು ಗಾಂಧಿಯ ಉದ್ದೇಶವಾಗಿತ್ತು. ಚಕ್ರಯ್ಯ ಎಂಬ ಆಂಧ್ರದ ದಲಿತ ಯುಕನೊಬ್ಬನ ಮರಣ ಗಾಂಧಿಯ ಈ ಆಲೋಚನೆಗೆ ಪ್ರೇರಣೆಯಾಗಿತ್ತು. ಚಕ್ರಯ್ಯ ಸೇವಾಗ್ರಾಮ ಶುರುವಾದಾಗಿನಿಂದಲೂ ಅಲ್ಲಿದ್ದವನು. ಗಾಂಧಿ ಚಕ್ರಯ್ಯನ ಬಗ್ಗೆ ತುಂಬ ಆಸೆಗಳನ್ನಿಟ್ಟುಕೊಂಡಿದ್ದರು. ಚಕ್ರಯ್ಯನ ನಿಧನಕ್ಕೆ ಗಾಂಧಿ ಕಂಬನಿ ಸುರಿಸಲಿಲ್ಲ. ಆದರೆ ಅವರು ಪ್ರಾರ್ಥನಾ ಸಭೆಯಲ್ಲಿ ಹೀಗೆ ಹೇಳಿದರು:

‘‘ಭಾರತ ಗಣರಾಜ್ಯದ ಪ್ರಥಮ ರಾಷ್ಟ್ರಪತಿಯನ್ನು ಆಯ್ಕೆಮಾಡುವ ಕಾಲ ಸನ್ನಿಹಿತವಾಗುತ್ತಿದೆ. ಅವನು ಬದುಕಿದ್ದಿದ್ದರೆ, ಚಕ್ರಯ್ಯನ ಹೆಸರನ್ನು ನಾನು ಆ ಸ್ಥಾನಕ್ಕೆ ಸೂಚಿಸುತ್ತಿದ್ದೆ. ...ಎಲ್ಲ ನಾಯಕರೂ ಸಂಪುಟದಲ್ಲಿ ಸಚಿವರಾದರೆ ಜನಸಾಮಾನ್ಯರೊಂದಿಗೆ ಸಂಪರ್ಕವಿರಿಸುವುದು ಕಷ್ಟವಾಗುತ್ತದೆ. ಹಾಗೆಂದೇ ನಾನು ಪ್ರಾರ್ಥನಾ ಸಭೆಯಲ್ಲಿ ಚಕ್ರಯ್ಯನಂಥ ಹರಿಜನನೊಬ್ಬನನ್ನು ಅಥವಾ ಹರಿಜನ ಹೆಣ್ಣು ಮಗಳನ್ನು ರಾಷ್ಟ್ರದ ಪ್ರಥಮ ರಾಷ್ಟ್ರಪತಿಯಾಗಿ ಮಾಡಬೇಕೆಂದು ಸಲಹೆ ಮಾಡಿದ್ದೆ. ನನ್ನ ಮಾತಿನಂತೆ ನಡೆಯುವುದಾದಲ್ಲಿ ಭಂಗಿ ಹೆಣ್ಣುಮಗಳೊಬ್ಬಳು ಭಾರತ ಗಣರಾಜ್ಯದ ರಾಷ್ಟ್ರಪತಿಯಾಗಲಿದ್ದಾಳೆ.ಅಂಥ ನನ್ನ ಕನಸಿನ ಹುಡುಗಿ ರಾಷ್ಟ್ರಪತಿಯಾದರೆ ನಾನು ಅವಳ ಜವಾನನಾಗಿ ದುಡಿಯಲು ಸಿದ್ಧನಿದ್ದೇನೆ.....’’

(ಮೋಹನದಾಸ್ ಒಂದು ಸತ್ಯಕಥೆ) ದಲಿತ ಹೆಣ್ಣುಮಗಳೊಬ್ಬಳು ಪ್ರಥಮ ರಾಷ್ಟ್ರಪತಿ ಆಗಲಿಲ್ಲ.ಇಲ್ಲಿಯವರೆಗೂ ನಾವು ಗಾಂಧಿಯವರ ಕನಸನ್ನು ನನಸಾಗಿಸಿಲ್ಲ. ಕಳೆದ ರಾಷ್ಟಪತಿ ಚುನಾವಣೆಯಲ್ಲಿ ದಲಿತ ಹೆಣ್ಣುಮಗಳೊಬ್ಬಳನ್ನು ಸೋಲಿಸಿದ ಪ್ರಜಾಪ್ರಭುತ್ವ ನಮ್ಮದು!

ಹೆಣ್ಣುಮಗಳಲ್ಲದಿದ್ದರೂ ಆಸ್ಥಾನದಲ್ಲಿ ದಲಿತ ಪುರುಷರನ್ನು ಕೂರಿಸುವ ಮೂಲಕ ಗಾಂಧೀಜಿಯವರ ಆಶೆಯನ್ನು ಭಾಗಶಃ ಈಡೇರಿಸಿದ್ದೇವೆ ಎಂದು ನಮ್ಮ ರಾಜಕೀಯ ಸೂತ್ರಧಾರರು ಹೇಳಬಹುದು. ಅಂದ ಮಾತ್ರಕ್ಕೆ ಅವರ ಬಗೆಗಿನ ಸವರ್ಣೀಯರ ಪೂರ್ವಾಗ್ರಹಗಳು ಹೋಗಿವೆಯೇ? ಇಲ್ಲ ಎಂದು ಎದೆ ತಟ್ಟಿಕೊಂಡು ಹೇಳುವಂಥ ಪರಿಸ್ಥಿತಿ ನಮ್ಮ ದೇಶದಲ್ಲಿಲ್ಲ ಎಂಬುದು ಸರ್ವವಿಧಿತ. ದಲಿತರನ್ನು ರಾಷ್ಟ್ರಪತಿ ಪೀಠದಲ್ಲಿ ಕೂರಿಸಿ, ಅವರನ್ನು ‘ದಲಿತ’ ಎಂದು ಅವಮಾನಿಸುವ ಅಕ್ಷಮ್ಯ ಕಾರ್ಯವೂ ಈ ದೇಶದಲ್ಲಿ ನಡೆದಿದೆ. ನಮ್ಮ ಈಗಿನ ದಲಿತ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಇತ್ತೀಚೆಗೆ ಪತ್ನಿ ಸಮೇತರಾಗಿ ಪುರಿ ದೇವಾಲಯಕ್ಕೆ ಹೋದಾಗ ಅವರನ್ನು ಗದರಿಸಿ ಅವಮಾನಿಸಲಾಯಿತು. ಗದರಿಸಿ ಅವಮಾನಿಸಲಾಯಿತು ಎಂದು ಮುಗುಮ್ಮಾಗಿ ಹೇಳಲಾಗಿದೆ. ಗದರಿಸಿ ಅವಮಾನಿಸುವುದು ಎಂದರೇನು? ರಾಷ್ಟ್ರದ ಪ್ರಥಮ ಪ್ರಜೆಯನ್ನು ಹಾಗೇಕೆ ನಡೆಸಿಕೊಳ್ಳಲಾಯಿತು ಎಂಬುದು ವರದಿಯಾಗಿಲ್ಲ. ಅದರ ವಿವರಗಳು ವರದಿಯಾಗಿಲ್ಲ.

ಇದನ್ನು ಪ್ರತಿಭಟಿಸಿ ರಾಷ್ಟ್ರಪತಿಯವರ ಕಾರ್ಯಾಲಯದಿಂದ ಒಡಿಶಾ ಸರಕಾರಕ್ಕೆ, ದೇವಾಲಯದ ಆಡಳಿತ ಸಮಿತಿಗೆ ಪತ್ರ ಹೋಗಿರುವುದು ಘಟನೆಯ ಸತ್ಯತೆಯನ್ನೂ ತೀವ್ರತೆಯನ್ನೂ ಸೂಚಿಸುತ್ತದೆ. ಪುರಿ ಜಗನ್ನಾಥ ದೇವಾಲಯದಲ್ಲಿ ಇಂಥ ವಿದ್ಯಮಾನ ಹೊಸತೇನಲ್ಲ. ದಿವಂಗತ ಪ್ರಧಾನ ಮಂತ್ರಿ ಇಂದಿರಾಗಾಂಧಿಯವರೂ ಸೇರಿದಂತೆ ಅನೇಕರಿಗೆ ಹಿಂದೂ ಅಲ್ಲ ಎಂಬ ಕಾರಣಕ್ಕಾಗಿ ಪ್ರವೇಶ ನಿರಾಕರಿಸಿರುವ ಕುಖ್ಯಾತಿ ಈ ಪುರಾತನ ದೇವಾಲಯದ್ದು. ಜಗನ್ನಾಥ ದೇವಾಲಯದೊಳಗೆ ಹಿಂದೂಗಳಲ್ಲದವರಿಗೆ ಪ್ರವೇಶ ನಿರಾಕರಣೆ ಪರಂಪರಾನುಗತವಾಗಿ ನಡೆದುಕೊಂಡು ಬಂದಿರುವ ಸಂಪ್ರದಾಯ ಎಂಬುದು ದೇವಾಲಯದ ಆಡಳಿತ ಸಮಿತಿ ನೀಡುವ ಸಮಜಾಯಿಷಿ. ಇದು ತಪ್ಪು. ದೇವಾಲಯಗಳು, ಗುಡಿಗೋಪುರಗಳಲ್ಲಿ ಪ್ರವೇಶ ಎಲ್ಲ ಧರ್ಮೀಯರಿಗೂ ಮುಕ್ತವಾಗಿರಬೇಕು. ಪ್ರವೇಶ ವಿಚಾರದಲ್ಲಿ ಜಾತಿಮತ-ಅನ್ಯಧರ್ಮಗಳು ಅಥವಾ ಮಹಿಳೆಯರು, ಅಪವಿತ್ರರು, ಅಸ್ಪಶ್ಯರು ಇತ್ಯಾದಿ ಕಾರಣಗಳಿಂದಾಗಿ ತಾರತಮ್ಯಮಾಡಲಾಗದು, ಮಾಡಬಾರದು. ಭಾರತದಲ್ಲಿನ ಎಲ್ಲ ದೇವಾಲಯಗಳಲ್ಲೂ ಇದೇ ಸ್ಥಿತಿ ಇದೆ ಎಂದಲ್ಲ. ಬಹುತೇಕ ದೇವಾಲಯಗಳಲ್ಲಿ ಅಹಿಂದೂಗಳಿಗೆ ಪ್ರವೇಶ ಮುಕ್ತವಿದೆ. ಆದರೆ ಪುರಿಯ ಜಗನ್ನಾಥ ದೇವಾಲಯ, ಗುರುವಾಯೂರು ಕೃಷ್ಣ ದೇವಾಲಯಗಳಲ್ಲಿ ಹಿಂದೂಗಳಿಗೆ ಮಾತ್ರ ಪ್ರವೇಶ.

ಹಿಂದೂಗಳಲ್ಲದವರಿಗೆ ಜಗನ್ನಾಥ-ಬಲಭದ್ರ-ಸುಭದ್ರೆ-ಕೃಷ್ಣರ ದರ್ಶನಭಾಗ್ಯವಿಲ್ಲ.ಇನ್ನು ಶಬರಿಮಲೆಯಂತಹ ಕೆಲವು ದೇವಾಲಯಗಳಲ್ಲಿ ಒಂದು ವಯೋಮಾನದ ಗುಂಪಿನ ಮಹಿಳೆಯರಿಗೆ ಪ್ರವೇಶ ನಿಷಿದ್ಧ. ಈ ನಿಷೇಧಕ್ಕೆ ಬಹುತೇಕ ಕೊಡುವ ಕಾರಣ ಪರಂಪರೆ/ಸಂಪ್ರದಾಯಗಳು. ದೇವರು/ಧರ್ಮಗಳು ವೈಯಕ್ತಿಕ, ವ್ಯಕ್ತಿಗತವಾಗಿರುವಾಗ ಇದು ಬೇಕು/ಇದು ಬೇಡ ಎಂದು ನಿಷೇಧಗಳನ್ನು ಹೇರುವುದು ತಪ್ಪಾಗುತ್ತದೆ. ಅದರಲ್ಲೂ ಧಾರ್ಮಿಕ ಸ್ವಾತಂತ್ರ್ಯವಿರುವ ಭಾರತದಲ್ಲಿ. ಈ ನಿಷೇಧಗಳು ಕೆಟ್ಟ ಪರಂಪರೆಯ ಅಂಧ ಮುಂದುವರಿಕೆ ಹಾಗೂ ಇದು ತಿರೋಗಾಮಿಯಾದದ್ದು. ಸರ್ವರಿಗೂ ಧಾರ್ಮಿಕ ಸ್ವಾತಂತ್ರ್ಯ ಮತ್ತು ಇಷ್ಟದೈವವನ್ನು ಪೂಜಿಸುವ ಸ್ವಾತಂತ್ರ್ಯವಿರುವ ಪ್ರಜಾಪ್ರಭುತ್ವ ದೇಶದಲ್ಲಿ ಇಂಥ ಅರ್ಥಹೀನ ಪರಂಪರೆಗಳು ಮತ್ತು ಓಬೀರಾಯನ ಕಾಲದ ಸಂಪ್ರದಾಯಗಳು ಇರಬಾರದು. ಪೂಜಾ ಸ್ವಾತಂತ್ರ್ಯ ಎಂದರೆ ಪ್ರಜೆಗಳಿಗೆ ಅವರವರ ನಂಬಿಕೆಯನುಸಾರ ತಮಗೆ ಬೇಕಾದ ದೇವಾಲಯಗಳಲ್ಲಿ ದೇವರ ದರ್ಶನ ಮತ್ತು ಪೂಜೆಗಳಿಗೆ ಸ್ವಾತಂತ್ರ್ಯವಿರಬೇಕು.

ಪುರಿ ಜಗನ್ನಾಥ ದೇವಾಲಯವನ್ನು ಹಿಂದೂಯೇತರರಿಗೂ ಮುಕ್ತಧ್ವಾರವಾಗಿಸುವಂತೆ ಇತ್ತೀಚೆಗೆ ಸುಪ್ರೀಂ ಕೋರ್ಟ್ ಸರಕಾರಕ್ಕೆ ನೀಡಿರುವ ಸಚನೆ ಅನುಷ್ಠಾನಯೋಗ್ಯವಾದುದು. ಜಗನ್ನಾಥ ದೇವಾಲಯ ರಾಷ್ಟ್ರದ ಪ್ರಮುಖವೂ ಜನಾದರಣೀಯವೂ ಆದ ದೇವಾಲಯವಾಗಿದ್ದು ಪ್ರತೀ ವರ್ಷ ಲಕ್ಷಾಂತರ ಭಕ್ತರನ್ನೂ ಪ್ರವಾಸಿಗರನ್ನೂ ಆಕರ್ಷಿಸುವ ಪ್ರಖ್ಯಾತಿ ಹೊಂದಿದೆ. ಹಿಂದೂಯೇತರಿಗೆ ಪ್ರವೇಶ ನಿಷೇಧಿಸಿರುವ ದೇವಾಲಯದ ಆಡಳಿತ ಮಂಡಳಿಯ ಕ್ರಮ ಹಲವಾರು ದಶಕಗಳಿಂದ ಸಾರ್ವಜನಿಕ ಟೀಕೆಗೆ ಗುರಿಯಾಗಿದೆ ಹಾಗೂ ಈ ದೇವಾಲಯದಲ್ಲಿ ಧರ್ಮಾತೀತವಾಗಿ ಸಾರ್ವಜನಿಕರೆಲ್ಲರಿಗೂ ಪ್ರವೇಶಾವಕಾಶ ಇರಬೇಕೆಂಬುದು ಸಾರ್ವಜನಿಕ ಬೇಡಿಕೆಯಾಗಿದೆ. ದೇವಾಲಯದ ಪದ್ಧತಿ, ರೂಢಿನಿಯಮಗಳನ್ನೂ, ಆಚರಣೆಗಳನ್ನೂ ಪಾಲಿಸಲು ಸಿದ್ಧರಿರುವ ಅನ್ಯ ಧರ್ಮೀಯರಿಗೂ ಜಗನ್ನಾಥನ ದರ್ಶನಕ್ಕೆ ಅವಕಾಶಮಾಡಿಕೊಡಬೇಕೆಂಬ ಸುಪ್ರೀಂ ಕೋರ್ಟ್ ಸೂಚನೆ ಸಂವಿಧಾನದತ್ತ ಸ್ವಾತಂತ್ರ್ಯಕ್ಕನುಗುಣವಾಗಿದ್ದು ಪರಿಶೀಲನಾರ್ಹವಾದುದು. ದೇವಾಲಯದ ಆಡಳಿತ ಸೇವಾ ಮಂಡಳಿ ಈ ಸಲಹೆಯನ್ನು ಮಾನ್ಯಮಾಡಿಲ್ಲ. ವಿಶ್ವ ಹಿಂದೂ ಪರಿಷತ್ತು ಸಹ ಇದನ್ನು ವಿರೋಧಿಸಿದೆ.

ಧರ್ಮ ಕೆಲವೊಂದು ನಂಬಿಕೆ ಮತ್ತು ಆಚರಣೆಗಳಿಗೆ ಮಾತ್ರ ಸೀಮಿತವಾದ ವ್ಯವಸ್ಥೆಯಾಗಿದೆ, ಇಲ್ಲಿ ಎಲ್ಲರಿಗೂ ಮುಕ್ತ ಪ್ರವೇಶವಿಲ್ಲ ಎನುವಂಥ ಅಭಿಪ್ರಾಯಮೂಲವಾದುದು ಈ ವಿರೋಧ. ಹಿಂದೂ ಧರ್ಮ ನಿಷೇಧಾತ್ಮಕವಲ್ಲ. ಎಲ್ಲರನ್ನೂ ಅಂತರ್ಗತಗೊಳ್ಳುವಿಕೆಯಲ್ಲೇ, ಬಹುತ್ವದಲ್ಲೇ ಅದರ ಶಕ್ತಿ ಇರುವುದು, ಅದರ ಪ್ರಖ್ಯಾತಿ ಇರುವುದು. ಎಲ್ಲರನ್ನೂ ಸೇರಿಸಿಕೊಳ್ಳುವ ಎಲ್ಲರಿಗೂ ಮುಕ್ತ ಅವಕಾಶಗಳನ್ನು ಕಲ್ಪಿಸುವ ಮೂಲಕ ಇದು ಸ್ಪಷ್ಟವಾಗಿ ಸಾಬೀತಾಗಬೇಕಾಗಿದೆ. ಹಿಂದೂ ಧರ್ಮದ ಶ್ರೇಷ್ಠ ಸಂಪ್ರದಾಯ ಮತ್ತು ‘ವಸುಧೈವಕ ಕುಟುಂಬಕಂ’ ಪರಿಕಲ್ಪನೆಯ ಪರಂಪರೆಗಳಿಗನುಸಾರವಾಗಿಯೇ ಜಗನ್ನಾಥ ದೇವಾಲಯ ಮತ್ತಿತರ ದೇವಾಲಯಗಳು ಹಿಂದೂಯೇತರರಿಗೂ ಮುಕ್ತದ್ವಾರವಾಗಬೇಕೆಂದು ಸುಪ್ರೀಂ ಕೋರ್ಟ್ ಸಲಹೆ ನೀಡಿದರೆ ಸಾಲದು, ಹಾಗೆಂದು ಆದೇಶಿಸಬೇಕು 

Writer - ಜಿ.ಎನ್.ರಂಗನಾಥ ರಾವ್

contributor

Editor - ಜಿ.ಎನ್.ರಂಗನಾಥ ರಾವ್

contributor

Similar News