ಶ್ರೀಲಂಕಾ ವಿರುದ್ಧ ಮೂರೇ ದಿನದಲ್ಲಿ ಶರಣಾದ ದ.ಆಫ್ರಿಕ

Update: 2018-07-14 18:33 GMT

ಗಾಲೆ, ಜು.14: ಗಾಲೆಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯರ ಸ್ಪಿನ್ ದಾಳಿಗೆ ಕಂಗಾಲಾದ ದಕ್ಷಿಣ ಆಫ್ರಿಕ ಆಟಗಾರರು ಮೂರೇ ದಿನದಲ್ಲಿ ಸೋಲೊಪ್ಪಿಕೊಂಡಿದ್ದಾರೆ. ಗೆಲ್ಲಲು 352 ರನ್ ಗುರಿ ಪಡೆದ ದಕ್ಷಿಣ ಆಫ್ರಿಕ ತನ್ನ ಎರಡನೇ ಇನಿಂಗ್ಸ್‌ನಲ್ಲಿ ಚಹಾ ವಿರಾಮದ ವೇಳೆಗೆ ಕೇವಲ 73 ರನ್ ಗಳಿಸಿ ತನ್ನೆಲ್ಲಾ ವಿಕೆಟ್‌ಗಳನ್ನು ಒಪ್ಪಿಸಿತು. ಆ ಮೂಲಕ ಶ್ರೀಲಂಕಾ 278 ರನ್‌ಗಳ ಅಂತರದಿಂದ ಜಯ ಗಳಿಸಿತು. ಅಂತರ್‌ರಾಷ್ಟ್ರೀಯ ಕ್ರಿಕೆಟ್‌ಗೆ ಮರುಸೇರ್ಪಡೆಯಾದ ನಂತರ ದಕ್ಷಿಣ ಆಫ್ರಿಕ ಟೆಸ್ಟ್‌ವೊಂದರಲ್ಲಿ ಗಳಿಸಿದ ಅತ್ಯಂತ ಕಡಿಮೆ ಸ್ಕೋರ್ ಇದಾಗಿದೆ.

ಶ್ರೀಲಂಕಾದ ಆಫ್- ಸ್ಪಿನ್ನರ್ ದಿಲ್ರುವಾನ್ ಪೆರೇರ 32 ರನ್‌ಗಳನ್ನು ನೀಡಿ ಆರು ವಿಕೆಟ್ ಪಡೆಯುವ ಮೂಲಕ ಹರಿಣಗಳ ಬ್ಯಾಟಿಂಗ್ ಬೆನ್ನೆಲುಬನ್ನು ಮುರಿದರು. ಈ ಪಂದ್ಯದಲ್ಲಿ ದಿಲ್ರುವಾನ್ ಒಟ್ಟಾರೆಯಾಗಿ 78 ರನ್ ನೀಡಿ ಹತ್ತು ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ. ಇದಕ್ಕೂ ಮುನ್ನ ದಕ್ಷಿಣ ಆಫ್ರಿಕದ ಡೇಲ್ ಸ್ಟೇನ್, ಶ್ರೀಲಂಕಾದ ಬಾಲಂಗೋಚಿ ಆಟಗಾರ ಲಕ್ಷಣ್ ಸಂಡಕನ್‌ರನ್ನು ಔಟ್ ಮಾಡುವ ಮೂಲಕ ತಮ್ಮ ಟೆಸ್ಟ್ ಜೀವನದ 421ನೇ ವಿಕೆಟ್ ಪಡೆದರು. ಈ ಮೂಲಕ ದ.ಆಫ್ರಿಕದ ಮಾಜಿ ಆಟಗಾರ ಶಾನ್ ಪೊಲಾಕ್ ದಾಖಲೆಯನ್ನು ಸರಿಗಟ್ಟಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News