ಮದೀನಾ ತಲುಪಿದ ಭಾರತೀಯ ಹಜ್ ಯಾತ್ರಾರ್ಥಿಗಳ ಪ್ರಥಮ ತಂಡ

Update: 2018-07-15 09:07 GMT

ಸೌದಿ ಅರೇಬಿಯಾ, ಜು.15: ಪವಿತ್ರ ಹಜ್ ಕರ್ಮ ನಿರ್ವಹಿಸಲು ಭಾರತದಿಂದ ಆಗಮಿಸಿದ ಮೊದಲ ಹಜ್ಜಾಜಿಗಳ ತಂಡ ಶನಿವಾರ ಮದೀನಾ ಮುನವ್ವರದ ಪ್ರಿನ್ಸ್ ಮುಹಮ್ಮದ್ ಬಿನ್ ಅಬ್ದುಲ್ ಅಝೀಝ್ ವಿಮಾನ ನಿಲ್ದಾಣ ತಲುಪಿತು. ಕರ್ನಾಟಕ ಕಲ್ಚರಲ್ ಫೌಂಡೇಶನ್(ಕೆಸಿಎಫ್) ಇದರ ಹಜ್ ವಾಲೇಂಟಿಯರ್ ಕೋರ್(ಎಚ್.ವಿ.ಸಿ.) ಕಾರ್ಯಕರ್ತರು ಹಜ್ಜಾಜಿಗಳಿಗೆ ನೀರು ಹಾಗೂ ಖರ್ಜೂರ ನೀಡಿ ಆದರದಿಂದ ಸ್ವಾಗತಿಸಿದರು. ನಂತರ ಹಜ್ಜಾಜಿಗಳ ತಂಗುವ ವಸತಿಗಳಿಗೆ ತೆರಳಿದ ಎಚ್.ವಿ.ಸಿ. ಕಾರ್ಯಕರ್ತರು ಹಜ್ಜಾಜಿಗಳ ಲಗೇಜ್ ಸಾಗಿಸಲು ಸಹಕರಿಸಿದರು. 

ಈ ವೇಳೆ ಭೇಟಿ ನೀಡಿದ ಭಾರತೀಯ ಕನ್ಸುಲೇಟ್ ಜನರಲ್ ನೂರ್ ರಹ್ಮಾನ್ ಶೇಖ್, ಹಜ್ಜಾಜಿಗಳಿಗೆ ನೀಡಲಾದ ವಸತಿ ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು. ಹಜ್ಜಾಜಿಗಳಿಗೆ ಯಾವುದೇ ಸಮಸ್ಯೆ ಆಗಿದ್ದಲ್ಲಿ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಸಿಬ್ಬಂದಿಗೆ ಸೂಚಿಸಿದರು. ಹಜ್ಜಾಜಿಗಳ ಸಿಮ್ ಕಾರ್ಡ್, ಲಗೇಜ್ ಮಿಸ್ಸಿಂಗ್ ಸಮಸ್ಯೆ ಪರಿಹರಿಸುವ ಬಗ್ಗೆ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡರು.

ದಿಲ್ಲಿ, ಗಯಾ, ಗುವಾಹಟಿ, ಲಕ್ನೊ ಹಾಗೂ ಶ್ರೀ ನಗರ ಸೇರಿದಂತೆ 5 ವಿಮಾನಗಳಲ್ಲಿ 3,000ಕ್ಕೂ ಅಧಿಕ ಹಜ್ಜಾಜಿಗಳು ಶನಿವಾರ ಮದೀನಾಕ್ಕೆ ಆಗಮಿಸಿದ್ದಾರೆ. ಈ ವೇಳೆ ಕೆಸಿಎಫ್ ಎಚ್.ವಿ.ಸಿ. ಮದೀನಾ ಘಟಕದ ಅಧ್ಯಕ್ಷ ತಾಜುದ್ದೀನ್ ಸುಳ್ಯ, ಕನ್ವೀನರ್ ರಝಾಕ್ ಸಂತೋಷ್ ನಗರ, ಫಾರೂಖ್ ನಈಮಿ, ಜಬ್ಬಾರ್ ಉಪ್ಪಿನಂಗಡಿ, ರಝಾಕ್ ಬೈತಡ್ಕ,ಅಶ್ರಫ್ ಸಖಾಫಿ ನೂಜಿ,ಅಬೂಬಕರ್ ಉದ್ದ ಬೆಟ್ಟು, ಇಕ್ಬಾಲ್ ಕುಪ್ಪೆಪದವು, ಹೈದರ್ ಉದ್ದಬೆಟ್ಟು,  ಮತ್ತಿತರರು ಉಪಸ್ಥಿತರಿದ್ದರು.

ವರದಿ: ಹಕೀಂ ಬೋಳಾರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News