ತುಳುನಾಡಿನ ಹಿರೀಕರ ಜನೋಪಯೋಗಿ ನಿರ್ಮಾಣಗಳು

Update: 2018-07-15 05:24 GMT

ನಾವು ಸಾಮಾನ್ಯವಾಗಿ ರಾಜ ಮಹಾರಾಜರುಗಳು ಕಟ್ಟಿಸಿದ ಮಹಲುಗಳು, ಕೋಟೆ ಕೊತ್ತಲಗಳನ್ನು ಮಾತ್ರ ಐತಿಹಾಸಿಕ ಎಂದು ಕೊಂಡಾಡುತ್ತೇವೆ. ನಮ್ಮ ಹಿಂದಿನ ತಲೆಮಾರಿನ ಜನತೆ ತಮ್ಮ ದಿನನಿತ್ಯದ ಬದುಕಿನಲ್ಲಿ ಉಪಯೋಗಕ್ಕೆ ಬರುವಂತೆ ನಿರ್ಮಿಸಿದ ನಿರ್ಮಾಣಗಳ ಬಗ್ಗೆ ವಿಶೇಷ ಆಸಕ್ತಿ ತೋರಿಸುವುದಿಲ್ಲ. ಮೇಲ್ನೋಟಕ್ಕೆ ಸರಳವೆಂಬಂತೆ ಕಂಡರೂ ವಾಸ್ತವದಲ್ಲಿ ವಿಶಿಷ್ಟವಾದ ಗತಿಸಿದ ಹಿರಿಯರ ಮೂರು ವಿಧದ ನಿರ್ಮಾಣಗಳ ಬಗ್ಗೆ ಒಂದು ಪುಟ್ಟ ಟಿಪ್ಪಣಿ ಇಲ್ಲಿದೆ.

ಅರಳಿಕಟ್ಟೆ

ನೀವು ಅರಳಿಕಟ್ಟೆಗಳನ್ನು ಎಲ್ಲೆಡೆಯೂ ನೋಡಿರಬಹುದು. ಅಂತಹ ಅರಳಿಕಟ್ಟೆಗಳು ನಮ್ಮ ತುಳುನಾಡಿನಲ್ಲೂ ಇವೆ. ಇದನ್ನು ಕಟ್ಟಿಸಿದವರ ಮೂಲ ಉದ್ದೇಶ ದಣಿದು ಬಂದವರು ನೆರಳಲ್ಲಿ ಕೂತು ಅಲ್ಪ ದಣಿವಾರಿಸಲಿ ಎಂದಾಗಿದೆ. ಇನ್ನು ಕೆಲವು ಕಟ್ಟೆಗಳು ಹಿಂದೆಲ್ಲಾ ರಾಜಿ ಪಂಚಾಯ್ತಿಕೆಯ ತಾಣಗಳೂ ಆಗಿದ್ದವು. ಇಷ್ಟು ಮಾತ್ರವಲ್ಲದೇ ಕೆಲಸವಿಲ್ಲದವರ ಸೋಮಾರಿಕಟ್ಟೆಯೂ ಆಗಿರುತ್ತದೆ. ಸಂಜೆ ಹೊತ್ತಿನ ಒಣ ಹರಟೆಯ ತಾಣವೂ ಹೌದು. ಅರಳಿಕಟ್ಟೆಗಳಲ್ಲಿ ನಡೆಯುವಷ್ಟು ರಾಜಕೀಯ ಹರಟೆ ಹಳ್ಳಿಗಳಲ್ಲಿ ಬೇರೆಲ್ಲೂ ನಡೆಯದು. ಸಾಮಾನ್ಯವಾಗಿ ಇಂತಹ ಕಟ್ಟೆಗಳು ಜನವಸತಿ ಪ್ರದೇಶಗಳಲ್ಲೇ ಇರುತ್ತವೆ.

ನಮ್ಮ ತುಳುನಾಡೆಂದರೆ ಎತ್ತರ ತಗ್ಗಿನ ಪ್ರದೇಶ..

ಒಂದರ್ಥದಲ್ಲಿ ಪಹಾಡಿ ಇಲಾಖಾ....

ಇಲ್ಲಿನ ಗ್ರಾಮೀಣ ಪ್ರದೇಶಗಳಲ್ಲಿ ಜನವಸತಿ ಯಿಲ್ಲದ ಸ್ಥಳಗಳಲ್ಲೂ ಕೆಲವು ಕಟ್ಟೆಗಳನ್ನು ಕಾಣಬ ಹುದು. ಅದು ಹಿಂದೆಯೂ ಜನವಸತಿಯ ಪ್ರದೇಶ ವಾಗಿರದಂತಹ ಕಾಡುಗಳ ಮಧ್ಯೆ ಕಾಣಸಿಗುತ್ತದೆ. ಇದರ ಮೂಲ ಉದ್ದೇಶವೂ ದಣಿದು ಬಂದವರು ದಣಿವಾರಿಸಲಿ ಎಂದೇ ಆಗಿದೆ. ಇಂತಹ ಕಟ್ಟೆಗಳ ವಿಶೇಷವೇನೆಂದರೆ ಇವುಗಳನ್ನು ಏರುದಾರಿಯ ಮಧ್ಯೆಯೇ ನಿರ್ಮಿಸಿದ್ದು ಕಾಣಸಿಗುತ್ತವೆ. ಏರುದಾರಿ ಯಿಂದ ಏರುತ್ತಾ ಬರುವಲ್ಲಿ ಅವು ಸಾಮಾನ್ಯವಾಗಿ ಸಾಮಾನ್ಯ ಎತ್ತರದ ಆಳಿನ ಭುಜದ ಮಟ್ಟಕ್ಕಿರುತ್ತವೆ. ಕುಳ್ಳಗಿನ ಆಳಾದರೆ ಒಂದೆರಡು ಹೆಜ್ಜೆ ಮುಂದೆ ಬಂದರೆ ಆತನ ಭುಜದ ಎತ್ತರಕ್ಕೂ ಅದೇ ಕಟ್ಟೆಗಳು ಸಿಗುತ್ತವೆ.

ಏರು ದಾರಿಯಲ್ಲಿ ಏರುತ್ತಾ ಬಂದವರು ತಮ್ಮ ತಲೆಯಲ್ಲಿರುವ ಹೊರೆಯನ್ನೋ, ಮೂಟೆಯನ್ನೋ ತಮ್ಮ ಭುಜದ ನೇರವಿರುವಲ್ಲಿ ಇಳಿಸಿಟ್ಟು ಕಟ್ಟೆಯ ಮುಂಭಾಗದಲ್ಲಿರುವ ಮೆಟ್ಟಿಲುಗಳ ಮೂಲಕ ಕಟ್ಟೆಯ ಮೇಲೆ ಹತ್ತಿ ಕೂತೋ, ಮಲಗಿಯೋ ದಣಿವಾರಿಸಬಹುದಿತ್ತು. ಮೆಟ್ಟಿಲುಗಳಿರುವ ಮುಂಭಾಗ ತಗ್ಗಾಗಿರುತ್ತವೆ. ಈಗಲೂ ಗ್ರಾಮೀಣ ಪ್ರದೇಶಗಳಲ್ಲಿ ತಲೆಹೊರೆ ವ್ಯಾಪಾರ ಮಾಡುವವರು, ಮೀನು ಮಾರುವವರು ಮನೆ ಮನೆಗೆ ವ್ಯಾಪಾರ ಮಾಡುತ್ತಾ ಬಂದು ತಮ್ಮ ತಲೆಯ ಮೇಲೆ ಹೊತ್ತ ಮೂಟೆಯನ್ನು ಇಳಿಸುತ್ತಾರೆ. ಒಮ್ಮೆ ಇಳಿಸಿದ ಮೂಟೆಯನ್ನು ಮತ್ತೆ ತಲೆಯ ಮೇಲಿಡಲು ಆ ಮನೆಯವರ ಸಹಾಯ ಪಡೆಯುತ್ತಾರೆ. ಅಂದರೆ ಮೂಟೆ ಎತ್ತಲು ಒಂಚೂರು ಕೈ ಕೊಡಿ ಎನ್ನುತ್ತಾರೆ. ಹೀಗೆ ಸಹಾಯ ಯಾಚಿಸುವುದು ಸಾಮಾನ್ಯ. ಜನವಸತಿಯಿಲ್ಲದ ಕಾಡದಾರಿಯಲ್ಲಿ ದಣಿವಾಗಿ ಮೂಟೆ ಇಳಿಸಿದರೆ ಮತ್ತೆ ಅದನ್ನೆತ್ತಿ ತಲೆ ಮೇಲಿಡಲು ತ್ರಾಸಪಡಬೇಕಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಏರುದಾರಿಯ ಕಟ್ಟೆಗಳಲ್ಲಿ ತಮ್ಮ ಭುಜದ ನೇರಕ್ಕೆ ಬರುವ ಜಾಗದಲ್ಲಿ ಮೂಟೆಯನ್ನು ಇಳಿಸಿದರೆ ಅದನ್ನು ಎತ್ತಿ ಮತ್ತೆ ತಲೆಯ ಮೇಲಿಡಲು ಯಾರದೇ ಸಹಾಯದ ಅಗತ್ಯ ಬೀಳದು ಎಂದು ತುಳುನಾಡಿನ ವಿವಿಧೆಡೆ ಏರುದಾರಿಯಲ್ಲಿ ವಿಶಿಷ್ಟ ಸ್ವರೂಪದಲ್ಲಿ ಕಟ್ಟೆಗಳನ್ನು ಕಟ್ಟಲಾಗುತ್ತಿತ್ತು.

ಜಾನುವಾರು ಕಲ್ಲು

ತುಳುನಾಡಿನ ಜನವಸತಿಯಿಲ್ಲದ ಸಮತಟ್ಟು ಪ್ರದೇಶಗಳಲ್ಲಿ ಜಾನುವಾರು ಕಲ್ಲುಗಳು ಕಾಣಸಿಗುತ್ತವೆ. ಸಾಮಾನ್ಯವಾಗಿ ಇವು ನೆಲದ ಮಟ್ಟದಿಂದ ನಾಲ್ಕು ನಾಲ್ಕೂವರೆ ಅಡಿ ಎತ್ತರದಲ್ಲಿರುತ್ತವೆ. ನೆಲದ ಮಟ್ಟದಿಂದ ಎರಡೂವರೆಯಿಂದ ಮೂರಡಿ ಆಳಕ್ಕೆ ಇವನ್ನು ಹೂತಿಡಲಾಗುತ್ತದೆ. ಅಂದರೆ ಸುಮಾರು ಏಳರಿಂದ ಏಳೂವರೆ ಅಡಿ ಎತ್ತರದ ಕಲ್ಲಿನ ಎರಡೂವರೆಯಿಂದ ಮೂರಡಿಯಷ್ಟು ಭಾಗವನ್ನು ನೆಲದಡಿಯಲ್ಲಿ ಹೂತಿಡಲಾಗುತ್ತದೆ. ನಾಲ್ಕರಿಂದ ನಾಲ್ಕೂವರೆ ಅಡಿ ನೆಲದ ಮೇಲಿರುತ್ತವೆ. ಇದು ಕಲ್ಲು ಕ್ವಾರೆಯಿಂದ ಕತ್ತರಿಸಿ ತರುವ ಆರೂವರೆ ಏಳಡಿ ಎತ್ತರದ ಒಂದೇ ಕಲ್ಲು. ಇದರ ಮೇಲ್ಭಾಗದಲ್ಲಿ ಒಂದೂವರೆ ಚದರ ಅಡಿಯಷ್ಟು ಸಮತಟ್ಟಾದ ಜಾಗವಿರುತ್ತದೆ. ಇವುಗಳನ್ನೂ ತಲೆ ಹೊರೆ ಹೊರುವವರ ಅನುಕೂಲಕ್ಕಾಗಿಯೇ ಕಟ್ಟಲಾಗುತ್ತಿತ್ತು. ಇಲ್ಲಿಯೂ ಕಟ್ಟೆಗಳಂತೆ ಜನ ತಮ್ಮ ಹೊರೆಯನ್ನು ತಮ್ಮ ಭುಜದ ನೇರಕ್ಕೆ ಜಾನುವಾರು ಕಲ್ಲುಗಳ ಮೇಲೆ ಇಳಿಸಿ ಅಲ್ಪ ವಿಶ್ರಾಂತಿ ಪಡೆಯುತ್ತಿದ್ದರು ಎಂದು ಹಿರಿಯರು ಹೇಳುತ್ತಾರೆ.

ಇದಕ್ಕೆ ಸಾಮಾನ್ಯವಾಗಿ ಜಾನುವಾರು ಕಲ್ಲು ಎನ್ನಲಾಗುತ್ತದೆ. ಏಕೆಂದರೆ ಜಾನುವಾರುಗಳು ಅವುಗಳ ತಲೆ, ಮೈ ತುರಿಸಿದಾಗ ಇಂತಹ ಕಲ್ಲುಗಳಿಗೆ ತಮ್ಮ ಮೈ ಒರೆಸುತ್ತಿರುತ್ತವೆ. ಈ ತಲೆಮಾರಿನ ಹಿರಿಯರು ಈ ಕಾರಣಕ್ಕೆ ಜಾನುವಾರು ಕಲ್ಲುಗಳೆನ್ನುತ್ತಾ ರಾದರೂ ಹಿಂದೆ ತಲೆಹೊರೆ ಕಲ್ಲುಗಳೆನ್ನುತ್ತಿದ್ದರೋ ಏನೋ....

ದೀಪದ ಕಲ್ಲು

ಬೀದಿ ದೀಪದ ಪರಿಕಲ್ಪನೆ ವಿದ್ಯುತ್ ಆಗಮನದ ಬಳಿಕವೇ ಆಯಿತೆಂದು ನಮ್ಮಲ್ಲಿ ಅನೇಕರ ಅಂಬೋಣ. ಆದರೆ ವಿದ್ಯುತ್ ತುಳುನಾಡಿಗೆ ಆಗಮಿಸುವ ಮುನ್ನವೇ ನಮ್ಮ ಹಿರೀಕರು ಬೀದಿ ದೀಪ ಬಳಸುತ್ತಿದ್ದರು. ಇತ್ತೀಚೆಗೆ ಬಂಟ್ವಾಳ ತಾಲೂಕಿನ ಪಜೀರು ಗ್ರಾಮದ ಅರ್ಕಾಣ ಎಂಬ ಹಳ್ಳಿಯ ಮಸೀದಿಯ ಬಳಿ ಸಂರಕ್ಷಿಸಿಟ್ಟ ಹಳೇ ಕಾಲದ ಬೀದಿ ದೀಪವೊಂದು ನನ್ನ ಗಮನಕ್ಕೆ ಬಂತು.

ಹಿಂದೆಲ್ಲಾ ಕತ್ತಲಲ್ಲಿ ಸಂಚರಿಸುವವರಿಗೆ ಅನುಕೂಲವಾ ಗಲೆಂದು ಸುಮಾರು ಆರೇಳು ಅಡಿ ಉದ್ದದ ಕಪ್ಪು ಕಲ್ಲನ್ನು ನೆಟ್ಟು ಅದರ ಮೇಲೆ ಗಾಜಿನ ಹೊರಮೈಯ ಕಂದೀಲನ್ನು ಉರಿಸಿಡುತ್ತಿದ್ದರು.ಮತ್ತು ದೀಪವು ಕೆಳಬೀಳದಂತೆ ತಡೆಯಲು ಕಂಬದ ಮೇಲ್ಮೈಗೆ ಪುಟ್ಟ ಆವರಣ ನಿರ್ಮಿಸುತ್ತಿದ್ದರು.

ಸದ್ರಿ ದೀಪದ ಕಲ್ಲಿನ ಸುತ್ತ ಪುಟ್ಟ ಕಟ್ಟೆಯೊಂದನ್ನು ಕಟ್ಟುತ್ತಿದ್ದರು. ಸದ್ರಿ ಕಟ್ಟೆಯ ಮೇಲೇರಿ ಸಾಮಾನ್ಯ ಎತ್ತರದ ಆಳುವೂ ದೀಪ ಉರಿಸಿಡಲು ಸಾಧ್ಯವಾಗುವಷ್ಟೇ ಎತ್ತರದಲ್ಲಿ ದೀಪದ ಕಲ್ಲು ನೆಡಲಾಗುತ್ತಿತ್ತು. ಇಂತಹ ಹಲವಾರು ಜನೋಪಕಾರಿ ನಿರ್ಮಾಣಗಳನ್ನು ಹಿರೀಕರು ಮಾಡುತ್ತಿದ್ದರು. ಈ ಕಾಲಕ್ಕೆ ಅವುಗಳು ಅಪ್ರಸ್ತುತ ಎಂದೆಣಿಸಿದರೂ ಹಳೇ ಕಾಲದಲ್ಲಿ ಅತ್ಯಂತ ಜನೋಪಯೋಗಿಯಾಗಿದ್ದವು ಎಂಬುದನ್ನು ಅವುಗಳ ನಿರ್ಮಾಣಗಳೇ ಸಾರುತ್ತವೆ.

(ಮಾಹಿತಿ: ನನ್ನೂರು ಪಜೀರಿನ ಹಿರಿಯರು)

Writer - ಇಸ್ಮತ್ ಪಜೀರ್

contributor

Editor - ಇಸ್ಮತ್ ಪಜೀರ್

contributor

Similar News