ಬಿಲ್ ಸಂಗ್ರಹದ ಹೆಸರಲ್ಲಿ ನಡೆಯುತ್ತಿತ್ತು ವಂಚನೆ...

Update: 2018-07-15 07:38 GMT

ಭಾಗ-50

ಹಿಂದೆ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಬಿಲ್ ಕಲೆಕ್ಟರ್ ಎಂಬ ಹುದ್ದೆಯಿತ್ತು. ಹಿಂದೆಲ್ಲಾ ಕೆಲವರು ತಮ್ಮ ಮನೆಯ ವಿದ್ಯುತ್ ಹಾಗೂ ನೀರಿನ ಬಿಲ್ಲನ್ನು ಇಂತಹ ಈ ಬಿಲ್ ಕಲೆಕ್ಟರ್‌ಗಳ ಕೈಯಲ್ಲಿ ಕೊಡುವ ಅಭ್ಯಾಸವಿತ್ತು. ಸಾರ್ವಜನಿಕರೊಬ್ಬರು ಮಹಾನಗರ ಪಾಲಿಕೆಯ ಬಿಲ್ ಕಲೆಕ್ಟರ್‌ಗೆ ಪ್ರತಿ ತಿಂಗಳು ನೀರಿನ ಬಿಲ್‌ನ ಮೊತ್ತವನ್ನು ನೀಡುತ್ತಿದ್ದರು. ಆತ ರಶೀದಿ ನೀಡುತ್ತಿದ್ದ. ಆ ಗ್ರಾಹಕರು ಅದೃಷ್ಟವಶಾತ್ ಬಿಲ್ ಕಲೆಕ್ಟರ್ ನೀಡುತ್ತಿದ್ದ ರಶೀದಿಯನ್ನು ತೆಗೆದಿಡುತ್ತಿದ್ದರು. ಅದೊಂದು ದಿನ ಗ್ರಾಹಕರಿಗೆ ಪಾಲಿಕೆಯಿಂದ ನೋಟಿಸ್ ಬಂದಿತ್ತು. ಅದರಲ್ಲಿ ನೀವು ನೀರಿನ ಬಿಲ್ ಕಟ್ಟದಿರುವ ಕಾರಣ ನಿಮ್ಮ ಮನೆಯ ನೀರಿನ ಸಂಪರ್ಕವನ್ನು ಕಡಿತಗೊಳಿಸಲಾಗುವುದು ಎಂಬುದು. ಕೆಲ ತಿಂಗಳಿನ ನೀರಿನ ಬಿಲ್ ಪಾವತಿಸದಿರುವ ಬಗ್ಗೆಯೂ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿತ್ತು. ಗ್ರಾಹಕರಿಗೆ ಶಾಕ್!

ಅವರು ನೇರವಾಗಿ ಪಾಲಿಕೆಗೆ ತೆರಳಿ ಅಲ್ಲಿ ಪರಿಶೀಲಿಸಿದಾಗ ಕೆಲವು ತಿಂಗಳ ನೀರಿನ ಬಿಲ್ ಮೊತ್ತ ಪಾವತಿಯಾಗಿರಲಿಲ್ಲ. ಆದರೆ ಆ ಗ್ರಾಹಕರು ಕಟ್ಟಿದ್ದ ಬಿಲ್ ರಶೀದಿ ಅವರಲ್ಲಿತ್ತು. ಅವರದನ್ನು ತೋರಿಸಿದಾಗ, ಅದು ಜಮಾ ಆಗಿಲ್ಲ ಎಂಬ ಉತ್ತರ ಅಲ್ಲಿಯ ಸಿಬ್ಬಂದಿಯಿಂದ ಬಂತು.

ತಕ್ಷಣ ಆ ಗ್ರಾಹಕ ದೂರು ನೀಡಿದರು. ಈ ಬಗ್ಗೆ ತನಿಖೆ ಆಯಿತು. ಈ ಬಗ್ಗೆ ಪತ್ರಿಕೆಯಲ್ಲೂ ಪ್ರಕಟವಾಯಿತು. ಈ ಬಗ್ಗೆ ಸಮಗ್ರ ತನಿಖೆ ಆದಾಗ, ಆ ಬಿಲ್ ಕಲೆಕ್ಟರ್ ಸಾಕಷ್ಟು ಗ್ರಾಹಕರಿಂದ ಲಕ್ಷಗಟ್ಟಲೆ ಹಣವನ್ನು ಪಡೆದು ವಂಚಿಸಿರುವುದು ಬೆಳಕಿಗೆ ಬಂತು. ಬಿಲ್‌ನ ರಶೀದಿ ನೀಡಿ ಅದರ ಕಾರ್ಬನ್ ಕಾಪಿಯನ್ನು ಆತ ಹರಿದು ಹಾಕುತ್ತಿದ್ದ. ತನಿಖೆಯಾಗಿ ಬಿಲ್ ಕಲೆಕ್ಟರ್ ತಪ್ಪಿತಸ್ಥ ಎಂಬುದು ಸಾಬೀತಾಯಿತು. ಆದರೆ ಆತನನ್ನು ಕೆಲಸದಿಂದ ತೆಗೆದುಹಾಕಲಿಲ್ಲ. ಬದಲಿಗೆ, ಕೆಲಸದಲ್ಲಿದ್ದುಕೊಂಡೇ ಆತನ ವೇತನದಿಂದ ಬಾಕಿ ಮೊತ್ತ ವಸೂಲಿ ಮಾಡಲಾಯಿತು.

ವಾಸ್ತು ದೋಷವೆಂಬ ಮೋಸ...

ವಾಸ್ತು ದೋಷ ಎಂಬುದು ಇತ್ತೀಚೆಗೆ ಸಾಮಾನ್ಯವಾಗಿ ಕೇಳಿ ಬರುವ ಸಂಗತಿ. ಸಾವಿರ ಗಟ್ಟಲೆ ಫ್ಲಾಟ್‌ಗಳು ವಾಸ್ತು ದೋಷವೆಂಬ ಮೂಢನಂಬಿಕೆಯಿಂದ ಮಾರಾಟವಾಗದೆ, ಕೊಳ್ಳುವವರಿಲ್ಲದೆ ಪಾಳು ಬೀಳುತ್ತಿವೆ. ವಾಸ್ತು ಹೇಳುವವರ ಪ್ರಕಾರ ಇಂತಹದ್ದೇ ದಿಕ್ಕು, ಕಡೆಯಲ್ಲಿ ಬೆಡ್ ರೂಂ ಇರಬೇಕು, ಅಡುಗೆ ಮನೆ ಹೀಗಿರಬೇಕು, ಕೊನೆಗೆ ಶೌಚಾಲಯವೂ ಇಂತಹದ್ದೇ ಕಡೆ ಇರಬೇಕೆಂದು ಹೇಳುತ್ತಾರೆ. ವಾಸ್ತು ತಜ್ಞರು ಎಂದು ಹೇಳಿಕೊಳ್ಳುವವರು ಜನಸಾಮಾನ್ಯರನ್ನು ತಪ್ಪು ದಾರಿಗೆಳೆಯುತ್ತಾರೆ. ಒಂದು ಕಟ್ಟಡ ಕಟ್ಟಬೇಕಾದರೆ, ಇಂಜಿನಿಯರ್‌ಗಳು ಬೇಕು. ಅದು ಸ್ಟ್ರಕ್ಚರಲ್, ಆರ್ಕಿಟೆಕ್ಟ್, ಸಿವಿಲ್, ಸುಪರ್‌ವೈಸಿಂಗ್ ಇಂಜಿನಿಯರ್‌ಗಳು ಇರುತ್ತಾರೆ. ಇವರೆಲ್ಲಾ ಅಗತ್ಯ. ಆದರೆ ಈ ವಾಸ್ತುತಜ್ಞರೆಂಬ ಹೊಸ ‘ಪ್ರಾಣಿ’ ಮಾತ್ರ ಕುತೂಹಲಕಾರಿ!

ಯಾಕೆಂದರೆ, ಇಲ್ಲಿ 8ನೆ ತರಗತಿ ಅನುತ್ತೀರ್ಣ ರಾದವರಿಂದ ಹಿಡಿದು, ಸಂಸ್ಕೃತ ಪಂಡಿತರು, ಆಂಗ್ಲ ಉಪನ್ಯಾಸಕರೂ ಇದ್ದಾರೆ. ಕೆಲವರು, ಖಗೋಳ, ಭೂಗೋಳ ಸೇರಿದಂತೆ ಎಲ್ಲಾ ಗೋಳಗಳ ಬಗ್ಗೆ ಅರಿತುಕೊಂಡವರೆಂದು ಹೇಳಿಕೊಳ್ಳುವವರೂ ಇದ್ದಾರೆ. ಇಂತಹವರಿಗೆ ಬಲಿ ಹೋಗುವವರೇ ಅಧಿಕ. ಕೈಯಲ್ಲಿ ಕಂಪಾಸ್ ಹಿಡಿದು ಬರುವ ಅವರು ಕಟ್ಟಡ ಅಥವಾ ಮನೆ ಅದೆಲ್ಲಿ ಸರಿ ಇದೆ ಇಲ್ಲವೇ ಎಂದು ಪರಿಶೀಲಿಸಿ ಹೇಳುತ್ತಾರೆ. ಮಾತ್ರವಲ್ಲದೆ, ಅವರು ಹೇಳುವ ದೋಷಗಳನ್ನು ಪರಿಹರಿಸಲು ಅವರಲ್ಲೇ ಉತ್ತರವೂ ಇರುತ್ತದೆ. ಪರಿಹಾರ ಮಾರ್ಗವೂ ಇರುತ್ತದೆ!

ಇವರಿಗೆ ಯಾವುದೇ ರೀತಿಯ ವಿದ್ಯಾರ್ಹತೆ, ಪರವಾನಿಗೆ ಬೇಕಾಗಿಲ್ಲ. ವಾಸ್ತುಶಿಲ್ಪವೆಂಬ ಪದವಿಯನ್ನು ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಕಲಿಸಲಾಗುತ್ತದೆಯಾದರೂ, ಈ ವಾಸ್ತು ತಜ್ಞರು ಎಂದು ಹೇಳಿಕೊಳ್ಳುವವರಿಗೆ ಈ ಯಾವುದೇ ವಿದ್ಯಾರ್ಹತೆ ಇರುವುದಿಲ್ಲ. ಇಂತಹ ಮೂಢ ವಾಸ್ತುತಜ್ಞರೆಂದು ಕರೆಸಿಕೊಳ್ಳುವ ಮೋಸಗಾರರ ಬಲೆಗೆ ಬೀಳುವ ಜನರು ಅಧಿಕ. ಎರಡು ವರ್ಷಗಳ ಹಿಂದೆ ಕಲ್ಕುಳಿ ವಿಠಲ ಹೆಗ್ಡೆ ಎಂಬವರ ಮನೆಯ ಗೃಹ ಪ್ರವೇಶಕ್ಕೆ ನನ್ನನ್ನು ಕರೆಸಿದ್ದರು. ಅಲ್ಲಿಗೆ ಹೋದಾಗ ವಾಸ್ತು ಪುಸ್ತಕ ಅವರ ಮನೆಯಲ್ಲಿ ನೋಡಿದೆ. ಅವರ ಮನೆಯನ್ನು ನೋಡಿದಾಗ, ವಾಸ್ತುವಿನ ತತ್ವಕ್ಕೆ ವಿರುದ್ಧವಾಗಿ ಕಟ್ಟಲಾಗಿತ್ತು. ಅವರು ಆರಾಮವಾಗಿದ್ದಾರೆ. ನಮ್ಮ ಮನೆ ಕೂಡಾ ವಾಸ್ತುವಿಗೆ ವಿರುದ್ಧವಾಗಿದೆ. ವಾಸ್ತು ಎಂಬ ಭ್ರಮೆಯನ್ನು ಜನರ ತಲೆಯಲ್ಲಿ ಹುಟ್ಟಿಸಿ ಇದರಿಂದ ತೊಂದರೆ ಆಗಲಿದೆ ಎಂದು ಹೇಳಿ, ಆ ತೊಂದರೆಗೆ ಪರಿಹಾರವನ್ನು ಸೂಚಿಸಿ, ಆ ಮನೆಯ ಕಟ್ಟಡ ನಿರ್ಮಾಣ ವೆಚ್ಚಕ್ಕಿಂತಲೂ ಅಧಿಕ ಹಣವನ್ನು ವಾಸ್ತು ದೋಷ ನಿವಾರಣೆಗೆ ತೆತ್ತವರು ಅನೇಕರು!

ನನ್ನ ಪರಿಚಯದ ವ್ಯಕ್ತಿಯೊಬ್ಬ 25 ವರ್ಷದ ಹಿಂದೆ ಸಾಫ್ಟ್ ವೇರ್ ಕಂಪೆನಿಗಳಲ್ಲಿ ಶೇರ್‌ಗಳಲ್ಲಿ ಸಾಕಷ್ಟು ಹಣವನ್ನು ಹೂಡಿಕೆ ಮಾಡಿದ್ದ. ಅದೊಂದು ದಿನ ಆತನಿಗೆ ತನ್ನ ಮನೆ ವಾಸ್ತು ಪ್ರಕಾರವಿಲ್ಲ ಎಂಬ ಮಾಹಿತಿ ಯಾರಿಂದಲೋ ದೊರೆಯಿತು. ಇದರಿಂದಾಗಿ ವಾಸ್ತು ತಜ್ಞರೊಬ್ಬರ ಬಳಿ ತನ್ನ ಮನೆಯನ್ನು ತೋರಿಸಿದ. ಆ ವಾಸ್ತು ದೋಷ ನಿವಾರಣೆಯ ವೆಚ್ಚ ಆತ ಹೊಸ ಮನೆಯನ್ನೇ ಕಟ್ಟಬಹುದ ಷ್ಟರಾಗಿತ್ತು. ಅದಕ್ಕಾಗಿ ಆತ ಮನೆಯನ್ನೇ ಕೆಡವಿ ಮತ್ತೆ ಹೊಸತಾಗಿ ನಿರ್ಮಿಸುವ ನಿರ್ಧಾರಕ್ಕೆ ಬಂದ. ಅವನಲ್ಲಿ ಹಣವಿತ್ತು. ಹಾಗಾಗಿ ಬಾಡಿಗೆ ಮನೆ ಮಾಡಿಕೊಂಡು ಹೊಸ ಮನೆ ನಿರ್ಮಾಣಕ್ಕೆ ಮುಂದಾದ. ಆ ಸಂದರ್ಭದಲ್ಲಿ ಸ್ಟಾಕ್ ಮಾರ್ಕೆಟ್ ಭಾರೀ ಕುಸಿತ ಕಂಡಿತು. ಸಾಫ್ಟ್ ವೇರ್ ಕಂಪೆನಿಗಳೆಲ್ಲಾ ದಿವಾಳಿಯಾದವು. ಆ ವ್ಯಕ್ತಿಗೆ ಹಣವೂ ಇಲ್ಲ, ಮನೆಯೂ ಇಲ್ಲದ ಪರಿಸ್ಥಿತಿ. ಕೇವಲ ಜಾಗ ಮಾತ್ರ ಉಳಿಯಿತು!

Writer - ನಿರೂಪಣೆ: ಸತ್ಯಾ ಕೆ.

contributor

Editor - ನಿರೂಪಣೆ: ಸತ್ಯಾ ಕೆ.

contributor

Similar News