ಮಂಗಳಗ್ರಹದಲ್ಲಿ ಮೊದಲ ಹೆಜ್ಜೆಯನ್ನಿರಿಸಲಿರುವ ಬಾಲಕಿ ಯಾರು ಗೊತ್ತಾ?

Update: 2018-07-15 12:10 GMT

ವಿಜ್ಞಾನದಲ್ಲಿ ಪ್ರಗತಿಯಾಗುತ್ತಿದ್ದಂತೆ ಮಾನವ ವಾಸಕ್ಕೆ ಸೂಕ್ತವಾಗಿರುವ ಇತರ ಗ್ರಹಗಳ ಅನ್ವೇಷಣೆಯೂ ಹೆಚ್ಚಿನ ವೇಗ ಪಡೆದುಕೊಳ್ಳುತ್ತಿದೆ. ಬಹುಶಃ ಇದನ್ನು ಸಾಧಿಸಲು ಹೆಚ್ಚಿನ ಸಮಯ ಬೇಕಾಗಿಲ್ಲ. ಮಂಗಳಗ್ರಹದ ಮೇಲ್ಮೈಯಲ್ಲಿ ಖನಿಜಗಳು ಮತ್ತು ನೀರಿನ ಅಂಶಗಳು ಪತ್ತೆಯಾಗುವುದರೊಂದಿಗೆ ಮನುಷ್ಯ ಆ ಗ್ರಹದಲ್ಲಿಳಿದು ಅದು ವಾಸಯೋಗ್ಯವೇ ಎನ್ನುವುದನ್ನು ಪರಿಶೀಲಿಸಲು ಸರ್ವಸಜ್ಜಾಗಿರುವಂತಿದೆ.

ಇನ್ನೂ ಹದಿನೇಳರ ಹರೆಯದಲ್ಲಿರುವ ಅಮೆರಿಕದ ಬಾಲೆ ಆಲಿಸ್ಸಾ ಕಾರ್ಸನ್ ಮಂಗಳಗ್ರಹಕ್ಕೆ ತೆರಳಲು ಕಠಿಣ ತರಬೇತಿಯನ್ನು ಪಡೆದುಕೊಳ್ಳುತ್ತಿದ್ದಾಳೆ. ಬಹುಶಃ ಮಂಗಳಗ್ರಹದ ಮೆಲೆ ಹೆಜ್ಜೆಯಿರಿಸಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಯೂ ಅವಳದಾಗಬಹುದು.

ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಆಲಿಸ್ಸಾಗೆ ನಿಡಿರುವ ಕೋಡ್ ನೇಮ್ ‘ಬ್ಲೂ ಬೆರ್ರಿ’. ನಾಸಾದಿಂದ ಬಾಹ್ಯಾಕಾಶ ಯಾನಕ್ಕೆ ತರಬೇತಿ ಪಡೆಯುತ್ತಿರುವ ಅತ್ಯಂತ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಯನ್ನು ಈಗಾಗಲೇ ತನ್ನ ಮುಡಿಗೇರಿಸಿಕೊಂಡಿರು ಆಲಿಸ್ಸಾ ಮಂಗಳಗ್ರಹಕ್ಕೆ ಪ್ರಯಾಣಿಸಲು ತಯಾರಾಗುತ್ತಿದ್ದಾಳೆ.

ಆಲಿಸ್ಸಾ ತನ್ನ ತರಬೇತಿಯ ಅವಧಿಯಲ್ಲಿ ಈಗಾಗಲೇ ಮೂರು ಬಾಹ್ಯಾಕಾಶ ಯಾನಗಳ ಉಡಾವಣೆಗಳಿಗೆ ಸಾಕ್ಷಿಯಾಗಿದ್ದಾಳೆ ಮತ್ತು ಹತ್ತಕ್ಕೂ ಹೆಚ್ಚು ಬಾರಿ ಸ್ಪೇಸ್ ಕ್ಯಾಂಪ್‌ಗೆ ಭೇಟಿ ನೀಡಿದ್ದಾಳೆ. ಈ ಹುಡುಗಿ ತನ್ನ ಮೂರು ವರ್ಷ ಪ್ರಾಯದಿಂದಲೇ ಮಂಗಳ ಗ್ರಹಕ್ಕೆ ಪ್ರಯಾಣಿಸುವ ಕನಸನ್ನು ಪೋಷಿಸಿಕೊಂಡು ಬಂದಿದ್ದಾಳೆ. ಆಲಿಸ್ಸಾ ಬುದ್ಧಿ ತಿಳಿದಾಗಿನಿಂದಲೂ ಬಾಹ್ಯಾಕಾಶ ಯಾನಿಯಾಗಬೇಕು ಮತ್ತು ಮಂಗಳ ಗ್ರಹಕ್ಕೆ ಹೋಗಬೇಕೆಂಬ ತನ್ನ ಬಯಕೆಯನ್ನು ಸದಾ ತನ್ನ ತಂದೆಯ ಬಳಿ ವ್ಯಕ್ತಪಡಿಸುತ್ತಿದ್ದಳು.

ಆಲಿಸ್ಸಾ ತನ್ನ ತರಬೇತಿಯಲ್ಲಿ ಯಾವುದೇ ಪ್ರಯತ್ನವನ್ನು ಬಿಟ್ಟಿಲ್ಲ. ಆಕೆ ಹಾಲಿ ಇಂಗ್ಲಿಷ್, ಸ್ಪಾನಿಷ್,ಚೈನೀಸ್ ಮತ್ತು ಫ್ರೆಂಚ್....ಹೀಗೆ ನಾಲ್ಕು ವಿಭಿನ್ನ ಭಾಷೆಗಳನ್ನು ಕಲಿಯುತ್ತಿದ್ದಾಳೆ. ಅಂದ ಹಾಗೆ ಆಕೆ ಇನ್ನೂ ತನ್ನ ಹೈಸ್ಕೂಲ್ ಹಂತದಲ್ಲಿದ್ದಾಳೆ.

ಕಳೆದ ಮೂರು ವರ್ಷಗಳಿಂದಲೂ ಆಕೆ ತನ್ನೊಂದಿಗೆ ತರಬೇತಿ ಪಡೆಯುತ್ತಿರುವ ಇತರ ಬಾಹ್ಯಾಕಾಶ ಯಾನಿಗಳೊಂದಿಗೆ ವಿವಿಧ ಪ್ರಯೋಗಗಳಲ್ಲಿ ನಿರತಳಾಗಿದ್ದು, ಬಾಹ್ಯಾಕಾಶ ವಾಸಕ್ಕೆ ಸಂಪೂರ್ಣ ಸಜ್ಜಾಗಿದ್ದಾಳೆ. ಅಲ್ಲದೆ ಭವಿಷ್ಯದಲ್ಲಿ ತನ್ನದೇ ಆದ ಕುಟುಂಬವನ್ನು ಹೊಂದಿ ಸಹಜ ಜೀವನವನ್ನು ನಡೆಸಲು ಸಾಧ್ಯವಿಲ್ಲ ಎನ್ನುವುದನ್ನೂ ಆಕೆ ಅರಿತುಕೊಂಡಿದ್ದಾಳೆ. ಆದರೆ ಇದು ಮಂಗಳಗ್ರಹಕ್ಕೆ ಪ್ರಯಾಣಿಸಬೇಕು ಎಂಬ ಆಕೆಯ ಕನಸನ್ನು ಭಗ್ನಗೊಳಿಸಿಲ್ಲ.

ಮಂಗಳ ಗ್ರಹಕ್ಕೆ ಪ್ರಯಾಣಿಸುವ ಬಾಹ್ಯಾಕಾಶ ಯಾನಿಗಳ ತಂಡದಲ್ಲಿ ಮುಖ್ಯಪಾತ್ರ ವಹಿಸಲು ನಿರ್ಧರಿಸಿರುವ ಆಲಿಸ್ಸಾ ಅದಕ್ಕಾಗಿ ಸಾಧವ್ಯಿರುವ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದ್ದಾಳೆ. ಮಂಗಳ ಗ್ರಹ ಅಭಿಯಾನದ ಮೊದಲ ವ್ಯಕ್ತಿಯಾಗಲು ಆಕೆ ಬಯಸಿದ್ದಾಳೆ.

2033ರಲ್ಲಿ ನಾಸಾ ತಾನು ಮಂಗಳಗ್ರಹಕ್ಕೆ ಕಳುಹಿಸಲಿರುವ ಏಳು ಬಾಹ್ಯಾಕಾಶ ಯಾನಿಗಳಲ್ಲೊಬ್ಬಳಾಗಿ ಆಲಿಸ್ಸಾಳನ್ನು ಆಯ್ಕೆ ಮಾಡಿಕೊಂಡಿದೆ. ಆಗ ಆಕೆಗೆ 33 ವರ್ಷ ಪ್ರಾಯವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News