ನನ್ನೊಳಗೊಂದು ಮಲೆಗಳಲ್ಲಿ ಮದುಮಗಳು

Update: 2018-07-15 18:30 GMT

ಮಲೆನಾಡಿನ ಮಳೆಗಾಲ ಅದೆಷ್ಟು ಸುಂದರ. ಕಾದಂಬರಿಯ ದಾರಿಗಳಲ್ಲಿ ಸಾಮಾಜಿಕ ಅಸಮಾನತೆಯ ಹೋರಾಟ, ಪರಿಸರ, ಬದುಕಿನ ಪಡಿಪಾಟಿಲು ವರ್ಣ ರಂಜಿತವಾಗಿ ಚಿತ್ರಿತವಾಗಿದೆ. ಕುವೆಂಪು ಅವರಿಗಿರುವ ದೈವ ಭಕ್ತಿ, ವೈಚಾರಿಕತೆಯು ಓದುಗರನ್ನು ಆಕರ್ಷಿಸದಿರದು. ಒಂದು ಧಾರ್ಮಿಕ ಹೊತ್ತಗೆಯಂತೆ, ಬಂಡಾಯ ಸಾಹಿತ್ಯದಂತೆ, ಅಸಮಾನತೆಯ ವಿರುದ್ಧ ಹೋರಾಟದ ದಾಖಲೆಯಂತೆ ಕಾದಂಬರಿ ನಮ್ಮನ್ನು ಯಾವ ಯಾವುದೋ ಫಿಲಾಸಫಿಗಳಿಗೆ ಕೊಂಡೊಯ್ಯುತ್ತದೆ. ಐತ -ಪೀಂಚಲು, ಮುಕುಂದ- ಹೂವಮ್ಮ, ಸಿಂಭಾವಿ ಗುತ್ತಿ- ತಿಮ್ಮಿ ಪ್ರೀತಿಸುವ ಜೀವಗಳ ಬೆಸುಗೆ ಕಾದಂಬರಿಯ ಮೆರುಗು.

ಕುವೆಂಪು ಅವರ ಪುಸ್ತಕ ಕೈಗೆತ್ತಿಕೊಂಡಂತೆ ತೇಜಸ್ವಿಯನ್ನು ನಿರೀಕ್ಷಿಸಿದ್ದೆ. ಮೊದಲೆರಡು ಪುಟ ಮತ್ತೂ ಮತ್ತೂ ಓದಿಸಿತ್ತೇ ವಿನಃ ತೇಜಸ್ವಿಯಂತೆ ಹಚ್ಚಿಕೊಳ್ಳಲಿಲ್ಲ. ಅಷ್ಟರವರೆಗೂ ಕುವೆಂಪು ಪಠ್ಯ ಪುಸ್ತಕದ ಕವಿತೆಗಳಲ್ಲಿ ಅದ್ಭುತವಾಗಿ ಕಾಣುತ್ತಿದ್ದರು. ಯಾವುದಕ್ಕೂ ಮುಂದುವರಿಸೋಣವೆಂದು ಓದಿದೆ. ಓದಿನ ರುಚಿ ಹತ್ತಿತ್ತು. ಒಬ್ಬೊಬ್ಬರದು ಒಂದೊಂದು ಶೈಲಿ. ಅವರಲ್ಲಿ ಇವರನ್ನು ಹುಡುಕಬಾರದು, ಇವರಲ್ಲಿ ಅವರನ್ನೂ. ಹಾಗೆ ನೋಡಿದರೆ ತೇಜಸ್ವಿಯ ಶೈಲಿ ಭೂಗೋಳ, ಕುವೆಂಪು ಪೌರನೀತಿ. ಅಷ್ಟಕ್ಕೂ ತಳಕು ಹಾಕಿದ್ದು ಯಾಕೆಂದರೆ ಇಬ್ಬರಿಗಿರುವ ರಕ್ತ ಸಂಬಂಧ ಮತ್ತು ನನಗಿಷ್ಟವಾದ ಬರಹ ಶೈಲಿ. ‘ಮಲೆಗಳಲ್ಲಿ ಮದುಮಗಳು’ ಪುಸ್ತಕ ಒಮ್ಮೆ ಆವಾಹಿಸಿಕೊಂಡರೆ ಅದೇ ಉಮೇದು. ಒಮ್ಮ್ಮೆಮ್ಮೆ ಕೋಪ ಬಂದಾಗ ಗುತ್ತಿ ನಾಯಿಗೆ ಬೈಯ್ದಂಗೆ ‘‘ಹಡ್ಬೇಗೆ ಹುಟ್ಟಿದ್ದು’’ ಎಂದು ಅರಿವಿಲ್ಲದೆ ನಾಲಗೆ ತುದಿವರೆಗೂ ಬರುವುದುಂಟು. ಹಾಗೆಯೇ ನುಂಗಿಕೊಂಡು ಸಹಿಸುವ ಶಕ್ತಿ ಆ ಓದುಗನಿಗೆ ಗೊತ್ತು. ತೀರಾ ಕ್ಲಾಸಿಕಲಾಗಿ ಚಿತ್ರಿಸುತ್ತಾ ಬರುವ ಪ್ರತಿಯೊಂದು ಪಾತ್ರಗಳು ನಮ್ಮಾಳಗೊಂದು ಸಣ್ಣ ಚಲನ ಚಿತ್ರವಾಗಿ ರೂಪುಗೊಳ್ಳುತ್ತವೆೆ. ಮತ್ತೆ ಹೆಂಚಿನ ಮನೆ, ಸೋಗೆ ಮನೆಗೆ ತದ್ವತ್ತಾಗಿ ನಮ್ಮಜ್ಜಿ ಮನೆಯನ್ನೇ ಹೋಲಿಸಿ ಕೊಂಡಿದ್ದೆ. ಸುಬ್ಬಣ್ಣ ಹೆಗ್ಡೆ ಅಷ್ಟೂ ದನಕರುಗಳನ್ನೆಲ್ಲಾ ಹಟ್ಟಿಯಿಂದ ಬಿಡುವಾಗ ಅದೇ ಅಜ್ಜಿ ಮನೆಯ ಹಟ್ಟಿ ನೆನಪಿಗೆ ಬರುತ್ತದೆ. ದೂರದಿಂದ ಬರುವ ಗುತ್ತಿಯನ್ನು ಕಣ್ಣು ಕಿರಿದು ಮಾಡಿ ನೋಡುತ್ತ ಸುಬ್ಬಣ್ಣ ಗೌಡರು ಲೆಕ್ಕ ಹಾಕುವ ದೂರ; ನಮ್ಮ ಅಜ್ಜಿ ಮನೆಯ ಹಿಂದಿನ ಕಾಡನ್ನು ನೆನಪಿಸುತ್ತದೆ. ಅದೇ ದೂರ, ದೂರದಲ್ಲೊಂದು ಬೆಟ್ಟ, ಮನೆಗೊಂದು ಪಡಸಾಲೆ, ಅಜ್ಜನ ತಾಂಬೂಲ ಬುತ್ತಿ ಎಲ್ಲವೂ ಒಮ್ಮಿಂದೊಮ್ಮೆಲೆ ಧುತ್ತನೆ ಪ್ರತ್ಯಕ್ಷಗೊಂಡು ಕಣ್ಣುಗಳು ಹನಿಗೂಡುತ್ತವೆ.

ಗುತ್ತಿ ಮತ್ತು ನಾಯಿಯ ಸಂಬಂಧ ಬಹಳ ಹೃದಯಸ್ಪರ್ಶಿ. ಎಲ್ಲೇ ಹೋದರೂ ಹಿಂಬಾಲಿಸುವ ಸ್ವಾಮಿ ನಿಷ್ಠೆಯ ನಾಯಿ; ಅದರ ಆ ಬುದ್ಧಿಯು ಅದಕ್ಕೇ ಮುಳುವಾಗಿ ಕೊನೆಗೊಂದು ಸಲ ನದಿ ನೀರಲ್ಲಿ ಕೊಚ್ಚಿ ಹೋಗುವಾಗ ಕಣ್ಣುಗಳು ಆರ್ದ್ರವಾಗುತ್ತವೆೆ. ಕುವೆಂಪು ಅವರು ಹೆಣೆದ ಆ ಕಾದಂಬರಿಯ ಭಾಗಗಳು ಅಷ್ಟು ನಾಜೂಕಾಗಿದೆ. ಕಾದಂಬರಿ ಏನು ಸಂದೇಶ ಕೊಡು ವುದೆಂದು ಕೆಲವೊಮ್ಮೆ ಪಕ್ಕನೆ ಹೇಳಲು ಬರುವುದಿಲ್ಲ. ಆದರೆ ಆ ಕಾದಂಬರಿ ಯೆಂದರೆ ಒಂದು ಊರಿನ ಪೂರ್ವೇತಿಹಾಸ, ಚರಿತ್ರೆ. ಅದಕ್ಕೂ ಮಿಗಿಲಾಗಿ ಅಲ್ಲಿನ ಜನ ಜೀವನದ ಯಥಾವತ್ತಾದ ಚಿತ್ರಣ.

 ‘‘ಜನಗಣತಿ’’ಯ ಅಗತ್ಯವನ್ನೂ ಇಲ್ಲವಾಗಿವಸುಷ್ಟು ಸ್ಪಷ್ಟವಾಗಿ ಮನೆ ಮನೆಗೂ ಇಣುಕಿ ನೋಡಿ ಬರೆಯುವ ಶೈಲಿಗೆ ಎಂಥವನೂ ಮನಸೋಲದಿರಲಾರ. ಮಧ್ಯೆ ನಾಯಿಯೇ ಸ್ವತಃ ತನ್ನ ಪಾಡಿಗೆ ನೆನೆದುಕೊಳ್ಳುವುದು ಅಕ್ಷರವಾಗಿ ಬದಲಾದದ್ದು ಕಾದಂಬರಿಯ ಉತ್ಕಟ ವೈಭವಕ್ಕೆ ಸಾಕ್ಷಿ. ಯಶಸ್ವಿ ಪ್ರೇಮ ಪ್ರಸಂಗದಲ್ಲಿ ಕೊನೆಯಾಗುವ ಕಾದಂಬರಿ ಎಲ್ಲೂ ನಮ್ಮನ್ನು ನಿಲ್ಲಲು ಬಿಡುವುದಿಲ್ಲ. ಒಂದಕ್ಕೊಂದಕ್ಕೆ ಸಂಬಂಧ ಸಂಧಿಸುತ್ತ ಸಾಗುತ್ತದೆ. ಕಾದಂಬರಿಯ ಮೊದಲಲ್ಲೇ ಹೇಳಿರುವಂತೆ ‘‘ಇಲ್ಲಿ ಯಾರೂ ಅಮುಖ್ಯರಲ್ಲ, ಯಾವುದೂ ಯಕಃಶ್ಚಿತವೂ ಅಲ್ಲ’’. ಕಾದಂಬರಿ ಓದುತ್ತ ಹೋದಂತೆ ಎಲ್ಲವೂ ನಮ್ಮ್ಮಿಳಗೆ ಆವಾಹಿಸಿಕೊಂಡು ನಾವು ಅದರೊಳಗೆ ವಿಲೀನವಾಗಿ ಬಿಡುತ್ತೇವೆ. ಅಲ್ಲಿ ಬರುವ ಕೆಲವು ಪಾತ್ರಗಳು ನನ್ನೂರಿನ ಶೂದ್ರರನ್ನು ಯಥಾವತ್ತಾಗಿಯೇ ಹೋಲುತ್ತದೆ. ಉಕ್ರಜ್ಜಿ, ಅಂಗಜಣ್ಣ, ಪೆರ್ಣು ಎಲ್ಲರೂ ‘ಮಲೆಗಳಲ್ಲಿ ಮದುಮಗಳು’ ಪುಸ್ತಕದ ಪಾತ್ರಗಳಾಗಿ ಕಣ್ಣೆದುರು ನಿಲ್ಲುತ್ತಾರೆ. ಕೆಲಸಕ್ಕೆ ಹೇಳಲು ಹೋಗುವಾಗ ಬರಿಗೈಯಲ್ಲಿ ಮರಳಿಸದ ಉಕ್ರಜ್ಜಿಯನ್ನು ನೆನೆಯುವಾಗ ಕಣ್ಣುಗಳು ಜಿನುಗುತ್ತವೆೆ. ಕೆಳ ಜಾತಿ, ಮೇಲ್ಜಾತಿ ಎಂಬ ಬೇಧವಿಲ್ಲದೆ ನನ್ನನೆತ್ತಿ ಮುತ್ತಿಕೊಳ್ಳುತ್ತಿದ್ದ ಆ ಅಜ್ಜಿಯ ನೆನಪುಗಳು ರಾಚುತ್ತವೆೆ. ಅದೇ ಗದ್ದೆ, ಪ್ರಕೃತಿ ವೈಭವ, ಮೊದಲಡಿಯ ಜಲಪಾತದ ನೆನಪು ಎಲ್ಲವೂ ಚಿತ್ರಿಸಲ್ಪಡುತ್ತದೆ. ಮನುಷ್ಯ ಸಂಬಂಧದ ಅತ್ಯುತ್ತಮ ಉದಾಹರಣೆಯಂತೆ ಮಲೆಗಳಲ್ಲಿ ಮದುಮಗಳು ಸಾರ್ಥಕತೆಯ ನಿಟ್ಟುಸಿರೊಂದು ಹೊರಡಿಸುತ್ತದೆ.

 ಮಲೆನಾಡಿನ ಮಳೆಗಾಲ ಅದೆಷ್ಟು ಸುಂದರ. ಕಾದಂಬರಿಯ ದಾರಿಗಳಲ್ಲಿ ಸಾಮಾಜಿಕ ಅಸಮಾನತೆಯ ಹೋರಾಟ, ಪರಿಸರ, ಬದುಕಿನ ಪಡಿಪಾಟಿಲು ವರ್ಣ ರಂಜಿತವಾಗಿ ಚಿತ್ರಿತವಾಗಿದೆ. ಕುವೆಂಪು ಅವರಿಗಿರುವ ದೈವ ಭಕ್ತಿ, ವೈಚಾರಿಕತೆಯು ಓದುಗರನ್ನು ಆಕರ್ಷಿಸದಿರದು. ಒಂದು ಧಾರ್ಮಿಕ ಹೊತ್ತಗೆಯಂತೆ, ಬಂಡಾಯ ಸಾಹಿತ್ಯದಂತೆ, ಅಸಮಾನತೆಯ ವಿರುದ್ಧ ಹೋರಾಟದ ದಾಖಲೆಯಂತೆ ಕಾದಂಬರಿ ನಮ್ಮನ್ನು ಯಾವ ಯಾವುದೋ ಫಿಲಾಸಫಿಗಳಿಗೆ ಕೊಂಡೊಯ್ಯುತ್ತದೆ. ಐತ -ಪೀಂಚಲು, ಮುಕುಂದ- ಹೂವಮ್ಮ, ಸಿಂಭಾವಿ ಗುತ್ತಿ- ತಿಮ್ಮಿ ಪ್ರೀತಿಸುವ ಜೀವಗಳ ಬೆಸುಗೆ ಕಾದಂಬರಿಯ ಮೆರುಗು. ಮೇಲ್ಜಾತಿ- ಕೀಳ್ಜಾತಿಗಳ ಹೋರಾಟದ ಮಧ್ಯೆ ಪ್ರೀತಿಗೆ ಸೆಣಸಾಡುವ ಜೀವಗಳಿಗೆ ಎದುರಾಗಿ ನಿಲ್ಲುವುದು ಬರೀ ಮನುಷ್ಯರು ಮಾತ್ರವಲ್ಲ. ವಿಧಿ, ಪಕೃತಿ ವಿಕೋಪವೂ ಒಂದರ್ಥದಲ್ಲಿ ಅಡ್ಡಗಾಲಾಗುತ್ತದೆ. ಬದುಕು ಎಂದರೆ ಅಷ್ಟೇ, ಕತ್ತಲಲ್ಲಿ ಬೆಳಕು ಹುಡುಕುವುದು, ಮತ್ತೆ ದೀಪವಾಗಿರುವುದು ಇಷ್ಟೇ. ಯಥಾವತ್ತಾಗಿ ಚಿತ್ರಿಸಿ ಕಥೆ ಕಟ್ಟಿಕೊಡುವ ಕಲೆಯಿಂದ ಅಷ್ಟೂ ಬೃಹತ್ ಕಾದಂಬರಿ ಮುಗಿಯುವಾಗ ‘‘ಛೇ, ಇಷ್ಟು ಬೇಗ ಮುಗಿಯಿತೇ’’ ಎಂದೆನಿಸಿ ಬಿಡುವುದುಂಟು. ‘ಮಲೆಗಳಲ್ಲಿ ಮದುಮಗಳು’ ಪುಸ್ತಕವನ್ನು ಮಳೆಯನ್ನೇ ಧ್ಯಾನಿಸುತ್ತಾ ಓದಬೇಕು. ಪ್ರಕೃತಿಯನ್ನು ಆಸ್ವಾದಿಸುತ್ತಾ ಮುಗಿಸಬೇಕು. ಆಗ ಓದು ಇನ್ನಷ್ಟು ಅರ್ಥಪೂರ್ಣ. ಅಕ್ಷರಕ್ಕೆ ಅಕ್ಷರಗಳೇ ಜಾಡು ಎಂಬಂತೆ, ಒಂದೊಂದು ಪ್ರಸಂಗಗಳು ನಮ್ಮನ್ನು ಅದೇ ತಲ್ಲೀನತೆಯಲ್ಲಿ ಓದಿಸುತ್ತವೆ. ಪುಸ್ತಕ ತೆಗೆದು ಎರಡು ಪುಟಗಳನ್ನು ತಿರುವಿ, ಮತ್ತೆಲ್ಲೂ ನಿಲ್ಲದಂತೆ ಕೊನೆಯ ಪುಟಕ್ಕೆ ನಿಮ್ಮನ್ನು ಖಂಡಿತಾ ಒಯ್ಯುತ್ತದೆ.

Writer - ಮುನವ್ವರ್ ಜೋಗಿಬೆಟ್ಟು

contributor

Editor - ಮುನವ್ವರ್ ಜೋಗಿಬೆಟ್ಟು

contributor

Similar News