ಹಲವು ಸಂದೇಶಗಳನ್ನು ದಾಟಿಸುವ ಕಿರುಚಿತ್ರ 'ಫ್ರಾಕ್'

Update: 2018-07-15 18:34 GMT

ಸ್ವಾತಂತ್ರ್ಯ ಬಂದು 60 ವರ್ಷವಾದರೂ, ಸರಕಾರಗಳು ಬದಲಾದರೂ ಹಸಿವು, ಬಡತನ ಹೋಗಲಿಲ್ಲ ಎಂಬುದು ಮನಕ್ಕಿಳಿದಿರುತ್ತದೆ. ಕೆಲವೇ ಕೆಲವು ದೃಶ್ಯಗಳ, ಮಾತಿಲ್ಲದ, 9 ನಿಮಿಷ, 25 ಸೆಕೆಂಡ್‌ಗಳ ಫ್ರಾಕ್ ಕಿರುಚಿತ್ರದ ಸಂದೇಶವನ್ನು ಆನಂದ್ ಮಧುಸೂದನನ್ ಅವರ ಹಿನ್ನೆಲೆ ಸಂಗೀತವೇ ಹೇಳುತ್ತದೆ.

‘ಫ್ರಾಕ್’ ಎಂಬ ಕಿರುಚಿತ್ರ ಹಲವು ಕಾರಣಗಳಿಂದ ಗಮನ ಸೆಳೆಯುತ್ತದೆ. ಚಿಕ್ಕ ಹುಡುಗಿಯೊಬ್ಬಳು ಸ್ವಾತಂತ್ರ್ಯ ದಿನಾಚರಣೆ ದಿನ ಸಿಗುವ ಅನ್ನಕ್ಕಾಗಿ ಓಡಿ ಹೋಗುತ್ತಾಳೆ. ಅವಳ ಮುಖ ಮತ್ತು ಆಕೆ ಧರಿಸಿರುವ ಫ್ರಾಕ್- ಆಕೆಯ ಹಸಿವನ್ನು, ಬಡತನವನ್ನು ಹೇಳುತ್ತವೆ. ಅಷ್ಟು ದೂರದಿಂದ ಓಡಿ ಬಂದು ಹಿಡಿ ಅನ್ನ ತಿಂದು, ಸಂತೃಪ್ತಗೊಂಡು, ಮತ್ತದೇ ಧಾವಂತದಲ್ಲಿ ಮನೆಗೆ ಓಡುತ್ತಾಳೆ.

ಅಲ್ಲಿ, ಇವಳಿಗಾಗಿ, ಇವಳ ಫ್ರಾಕಿಗಾಗಿ, ಇವಳ ತಂಗಿ ಮತ್ತು ತಾಯಿ ಕಾಯುತ್ತಿರುತ್ತಾರೆ. ಇವಳು ಓಡಿ ಬರುವುದನ್ನು ನೋಡಿದ ಅವರ ಕಣ್ಣುಗಳು ಅರಳುತ್ತವೆ. ಬಂದ ತಕ್ಷಣ ತಾಯಿ ಅವಳ ಫ್ರಾಕನ್ನು ತೆಗೆದು ತಂಗಿಗೆ ತೊಡಿಸುತ್ತಾಳೆ. ತಂಗಿ ಅಷ್ಟೇ ಬಿರುಸಿನಿಂದ ಓಡಿ ಅನ್ನಕ್ಕಾಗಿ ಬೇಡಿದರೆ, ಅನ್ನ ದಾಸೋಹ ಏರ್ಪಡಿಸಿರುವ ಸಮಾಜ ಸೇವಕ ಆಕೆಯನ್ನು ಕಂಡು, ಮತ್ತೆ ಉಣ್ಣಲು ಬಂದಿದ್ದೀಯಾ ಎಂದು ಹೊರದೂಡುತ್ತಾನೆ. ಆಕೆ, ಎಷ್ಟೇ ಕಾಡಿ ಬೇಡಿದರೂ ಏನನ್ನೂ ಕೊಡದೆ ಕಳುಹಿಸುತ್ತಾನೆ. ದುರದೃಷ್ಟಕರ ಸಂಗತಿ ಎಂದರೆ ಅಕ್ಕ-ತಂಗಿಯರು ಇಬ್ಬರು ಅವಳಿ ಜವಳಿಗಳು. ಮನೆಯಲ್ಲಿ ಇರುವುದೊಂದೇ ಫ್ರಾಕು. ಇಬ್ಬರೂ ಕೂಡಿ ಹೂವಿನ ತೋಟದಲ್ಲಿ ನಲಿದಾಡುವಾಸೆ. ಆದರೆ ಇಬ್ಬರಿಗೂ ಇರುವುದೊಂದೇ ಫ್ರಾಕ್. ಹಾಗಾಗಿ ಮನೆಯಿಂದ ಹೊರಗೆ ಹೋಗುವುದು, ಆಟವಾಡುವುದು ಕನಸಿನ ಮಾತಾಗಿರುತ್ತದೆ.

ಅನ್ನ ಸಿಗದೆ ಖಾಲಿ ಹೊಟ್ಟೆಯನ್ನಿಟ್ಟುಕೊಂಡು ಹಿಂದಿರುಗುವ ಬಾಲಕಿಗೆ, ಮನೆಗೆ ಹೋಗುವ ದಾರಿಯಲ್ಲಿ ನೆಲಕ್ಕೆ ನೆಟ್ಟಿರುವ ಧ್ವಜ ಕಾಣುತ್ತದೆ. ಅದನ್ನು ಕಿತ್ತುಕೊಂಡು ಮನೆಗೆ ಹೋಗುತ್ತಾಳೆ. ಇವಳ ಮುಖ ನೋಡಿದ ತಾಯಿಗೆ ಈಕೆಗೆ ಏನೂ ಸಿಕ್ಕಿಲ್ಲ ಎನ್ನುವುದು ಮನವರಿಕೆಯಾಗುತ್ತದೆ. ಸಂಕಟ ಉಮ್ಮಳಿಸಿ ಬರುತ್ತದೆ. ಧ್ವಜ ಹಿಡಿದ ಹುಡುಗಿಯ ದೃಶ್ಯದೊಂದಿಗೆ ಚಿತ್ರವೂ ಮುಗಿಯುತ್ತದೆ. ಅಲ್ಲಿಗೆ... ಯಾರಿಗೇ ಬಂತು, ಎಲ್ಲಿಗೇ ಬಂತು 47ರ ಸ್ವಾತಂತ್ರ್ಯ ಎನ್ನುವ ಸಂದೇಶ ಎಲ್ಲರ ಹೃದಯಕ್ಕಿಳಿದಿರುತ್ತದೆ. ಸ್ವಾತಂತ್ರ ಬಂದು 60 ವರ್ಷವಾದರೂ, ಸರಕಾರಗಳು ಬದಲಾದರೂ ಹಸಿವು, ಬಡತನ ಹೋಗಲಿಲ್ಲ ಎಂಬುದು ಮನಕ್ಕಿಳಿದಿರುತ್ತದೆ. ಕೆಲವೇ ಕೆಲವು ದೃಶ್ಯಗಳ, ಮಾತಿಲ್ಲದ, 9 ನಿಮಿಷ, 25 ಸೆಕೆಂಡ್‌ಗಳ ಫ್ರಾಕ್ ಕಿರುಚಿತ್ರದ ಸಂದೇಶವನ್ನು ಆನಂದ್ ಮಧುಸೂದನನ್ ಅವರ ಹಿನ್ನೆಲೆ ಸಂಗೀತವೇ ಹೇಳುತ್ತದೆ. ಸುಭೀಷ್ ಚಿತ್ರಕಥೆ, ಮಹೇಶ್ ನಿರ್ದೇಶನದ ಈ ಕಿರುಚಿತ್ರವನ್ನು ಆಸಕ್ತರು (https://youtu.be/wAIGzIU2Wjg) ಕೊಂಡಿ ಬಳಸಿ ನೋಡಬಹುದು.

Writer - ಮಜೀದ್ ಎಚ್.ಎನ್., ತುಮಕೂರು

contributor

Editor - ಮಜೀದ್ ಎಚ್.ಎನ್., ತುಮಕೂರು

contributor

Similar News