ಸಂಜಯ್‌ದತ್ ಒಂದು ಮುಖ ಹಲವು ಬಣ್ಣ

Update: 2018-07-15 18:44 GMT

ಭಾಗ-1

ಈಗ ಬಹುಪಾಲು ಎಲ್ಲರ ಬಳಿಯೂ ಹೇಳಲು ಒಂದು ಸಂಜಯದತ್ ಕತೆ ಇರುವಂತೆ ಕಾಣಿಸುತ್ತಿದೆ. ಹೀಗಿರುವಾಗ ಆ ಗತದಿನಗಳ ನನ್ನ ನೆನಪುಗಳ ಸ್ಫೋಟ ಇಲ್ಲಿದೆ. ನಾನಾಗ 1992-93ರಲ್ಲಿ ದಿ ಟೈಮ್ಸ್ ಆಫ್ ಇಂಡಿಯಾದ ನಗರ ಸಂಪಾದಕನಾಗಿದ್ದೆ. ಒಬ್ಬ ಪತ್ರಕರ್ತನಾಗಿ ನಾನು ಅನುಭವಿಸಿದ ಅತ್ಯಂತ ಯಾತನಾಮಯ ಅವಧಿ ಅದು. ಆಗ 4 ತಿಂಗಳುಗಳಿಗಿಂತಲೂ ಹೆಚ್ಚಿನ ಕಾಲ ನಾವು ಹಿಂಸೆಯ ಆವರ್ತನಗಳನ್ನು ಹಿಂಬಾಲಿಸಿದ್ದೆವು. ಮೊದಲು ದೊಂಬಿಗಳು, ಆನಂತರ ಸ್ಫೋಟಗಳು. ಆ ಹಿಂಸೆ ಮುಂಬೈ ನಗರದ ನಿಜಬಣ್ಣವನ್ನು ಹೊರಗೆಡಹಿತ್ತು. ಮುಂಬೈ ರಕ್ತಪಾತದ ಭಯಾನಕ ಕತೆಯೊಂದನ್ನು ತನ್ನ ಹಿಂದೆ ಬಿಟ್ಟು ಮತ್ತೆ ಮುಂದೆ ಸಾಗಿತು.

ಒಂದು ತಡಸಂಜೆ, 1993ರ ಮಾರ್ಚ್ ತಿಂಗಳಲ್ಲಿ ಸರಣಿ ಸ್ಫೋಟಗಳು ನಡೆದ ಕೆಲವು ವಾರಗಳ ಬಳಿಕ, ಮುಂಬೈ ಪೊಲೀಸ್ ಕಮಿಶನರ್‌ರವರ ಒಂದು ಮೂಲದಿಂದ ನಮ್ಮಲ್ಲೊಬ್ಬ ವರದಿಗಾರನಿಗೆ ಒಂದು ದೂರವಾಣಿ ಕರೆ ಬಂತು. ಫೋನ್ ಮಾಡಿದಾತ ಉದ್ವೇಗದ ಧ್ವನಿಯಲ್ಲಿ ಹೇಳಿದ: ‘‘ಸ್ಫೋಟಗಳ ಬಲೆಯಲ್ಲಿ ಬಾಲಿವುಡ್‌ನ ಒಂದು ದೊಡ್ಡ ಮೀನು ಬಿದ್ದಿರುವಂತೆ ಕಾಣುತ್ತದೆ’’. ಮರುದಿನ ಬೆಳಗ್ಗೆ ಆ ಬಗ್ಗೆ ಇನ್ನಷ್ಟು ವಿವರಗಳನ್ನು ನೀಡುವುದಾಗಿ ಆಶ್ವಾಸನೆ ನೀಡಿದ. ಮರುದಿನ ಬೆಳಗ್ಗೆ ಟ್ಯಾಬ್ಲಾಡ್ ದಿನಪತ್ರಿಕೆ, ‘ದಿ ಡೈಲಿ ಸಂಜಯದತ್‌ಗೆ ಮುಂಬೈ ಸ್ಫೋಟಗಳೊಂದಿಗೆ ಇತ್ತು ಎನ್ನಲಾದ ಕೊಂಡಿಯ ಬಗ್ಗೆ ವರದಿ ಪ್ರಕಟಿಸಿತ್ತು. ನಾವು ಮರುದಿನದ ನಮ್ಮ ಪತ್ರಿಕೆಯ ಆವೃತ್ತಿಯನ್ನು ಸಿದ್ಧಗೊಳಿಸುತ್ತಿದ್ದಾಗ ನಮಗೆ ಇನ್ನೊಂದು ಕಾಲ್ ಬಂತು. ಈ ಬಾರಿ ಸುನಿಲ್‌ದತ್ ಕರೆ ಮಾಡಿದ್ದರು. ‘‘ನೀವು ಸಂಜಯ್‌ಗೆ ನ್ಯಾಯ ಒದಗಿಸುತ್ತೀರಿ ಎಂಬ ಭರವಸೆ ನನಗಿದೆ; ಅವ ಒಬ್ಬ ಕೆಟ್ಟ ವ್ಯಕ್ತಿಯಲ್ಲ,’’ ಎಂದರು ದತ್. ಅವರು ಆಗ ವಾಯವ್ಯ ಮುಂಬೈಯ ಕಾಂಗ್ರೆಸ್ ಸಂಸದನಾಗಿದ್ದರು. ನಮ್ಮ ಪತ್ರಿಕೆಯ ರೆಸಿಡೆಂಟ್ ಸಂಪಾದಕ, ಜಂಟಲ್‌ಮ್ಯಾನ್ ಪತ್ರಕರ್ತ ಡರಿಲ್ ಡಿ’ಮೊಂಟೆಗೆ ದತ್‌ರವರ ಪರಿಚಯ ಚೆನ್ನಾಗಿತ್ತು. ಸಂಜಯದತ್ ತನ್ನ ಮನೆಯಲ್ಲಿ ಒಂದು ಎಕೆ-56 ಗನ್ ಅನ್ನು ಕೇವಲ ಅಡಗಿಸಿಟ್ಟದ್ದಷ್ಟೇ ಅಲ್ಲ; ಅವರು ಅದನ್ನು ಹೇಗೆ ನಾಶಮಾಡಿದ್ದರು ಎಂಬ ಬಗ್ಗೆ ಹೆಚ್ಚು ವರದಿಗಳು ಬಹಿರಂಗಗೊಂಡು ಸಂಜಯ್ ಕತೆ ವಿಸ್ತಾರವಾಗುತ್ತ ಹೋಯಿತು. ಕೆಲವು ದಿನಗಳ ಬಳಿಕ, ಆಗ ಮೊರಿಷಸ್‌ನಲ್ಲಿ ಸಿನೆಮಾ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ಸಂಜಯ್‌ದತ್ ಭಾರತಕ್ಕೆ ಮರಳುವಂತೆ ಬಲವಂತಪಡಿಸಲಾಯಿತು. ಮರಳಿದ ತಕ್ಷಣ ಅವರನ್ನು ಬಂಧಿಸಲಾಯಿತು.

ತನ್ನ ಮಗನ ಬಂಧನವಾದ ಮರುದಿನ ಸುನಿಲ್‌ದತ್ ಪುನಃ ಕರೆ ಮಾಡಿದರು. ಈ ಬಾರಿ ವೈಯಕ್ತಿಕವಾಗಿ ಭೇಟಿಯಾಗಬೇಕೆಂದು ವಿನಂತಿಸಿಕೊಂಡರು. ನಾವು ಒಬೆರಾ ಕಾಫಿಶಾಪ್‌ನಲ್ಲಿ ಭೇಟಿಯಾದೆವು. ಅಲ್ಲಿ ಅವರು ನಮಗೆ ಸಂಜಯ್‌ದತ್ ಕತೆ ಹೇಳಿದರು. ನಮ್ಮ ಸಂಭಾಷಣೆಯ ವೇಳೆ ಒಂದಕ್ಕಿಂತ ಹೆಚ್ಚು ಬಾರಿ ಅವರು ಭಾವೋದ್ವೇಗಕ್ಕೊಳಗಾದಂತೆ ಕಂಡರು. ಅವರು ಪುನಃ ಪುನಃ ಹೇಳಿದರು: ‘‘ನನ್ನ ಮಗ ತಪ್ಪುಗಳನ್ನು ಮಾಡಿರಬಹುದು, ಆದರೆ, ಆತ ಕೆಟ್ಟ ಮನುಷ್ಯನಲ್ಲ’’. ಇತ್ತೀಚೆಗೆ ನಾನು ನನ್ನ ಮಕ್ಕಳೊಂದಿಗೆ ಸಂಜು ಸಿನೆಮಾ ನೋಡಲು ಹೋದಾಗ ನನ್ನನ್ನು ಸುನೀಲ್‌ದತ್‌ರ ನೆನಪು ಮತ್ತೊಮ್ಮೆ ಕಾಡಿತು. ಈಗ ಸಿನೆಮಾದಲ್ಲಿ ನಿರ್ದೇಶಕ ರಾಜು ಹಿರಾನಿ ಸಾರ್ವಜನಿಕರ ಕಲ್ಪನೆಯಲ್ಲಿ ಸಂಜಯ್‌ದತ್‌ರಿಗೆ ಪುನರ್ವಸತಿ ನೀಡಿದ್ದಾರೆ. ಹಿರಾನಿ ಒಬ್ಬ ಪ್ರತಿಭಾವಂತ ನಿರ್ದೇಶಕ. ಆದರೆ, ಸಂಕೀರ್ಣತೆಗಳಿಗೆ ಅವಕಾಶವಿಲ್ಲದ ಒಂದು ಉದ್ಯಮದಲ್ಲಿ ಅವರು ಸೆರೆಯಾಳಾಗಿದ್ದಾರೆ. ಹೀಗಾಗಿ ಸಂಜು ಸಿನೆಮಾ ಇತಿಹಾಸಕ್ಕಿಂತ ಹೆಚ್ಚಾಗಿ ವ್ಯಕ್ತಿಯೊಬ್ಬನನ್ನು ಮಿತಿಮೀರಿ ಹೊಗಳುವ ಒಂದು ಕಥಾನಕವಾಗಿದೆ. ಅದು ಸಂಜಯ್‌ದತ್‌ರನ್ನು ಒಬ್ಬ ಬಲಿಪಶುವಾಗಿ, ತಪ್ಪುಮಾಡುವ, ಆದರೆ, ನಾವು ಪ್ರೀತಿಸಬಹುದಾದ, ನಮ್ಮ ಅನುಕಂಪಕ್ಕೆ ಅರ್ಹನಾದ ಒಬ್ಬ ನಾಯಕನಾಗಿ (ಪ್ರೊಜೆಕ್ಟ್ ಮಾಡುವ) ಬಿಂಬಿಸುವ ಒಂದು ಪ್ರಯತ್ನವಾಗಿದೆ; ಒಬ್ಬ ಖಳನಾಯಕನಾಗಿ ಚಿತ್ರಿಸುವ ಪ್ರಯತ್ನವಲ್ಲ. ಹಿರಾನಿಯವರ ವಿಶ್ವದೃಷ್ಟಿಯಲ್ಲಿ ಸಂಜಯ್‌ದತ್‌ಗೆ ಒಬ್ಬ ಭಯೋತ್ಪಾದಕನೆಂದು ಹಣೆಪಟ್ಟಿ ಅಂಟಿಸಿದ್ದು ಮಾಧ್ಯಮಗಳು; ಆ ನಟ ಭಯೋತ್ಪಾದಕರ ಒಂದು ಒಳಸಂಚಿನಲ್ಲಿ ಕೇವಲ ಒಂದು ದಾಳ. ಆದ್ದರಿಂದ 1992-93ರಲ್ಲಿ ಆಗ ಇನ್ನೂ ಜನಿಸಿರದಿದ್ದ ನನ್ನ 21ರ ಹರೆಯದ ಮಗಳು, ‘‘ಹಾಗಾದರೆ, ಸಂಜಯ್ ನಿಜವಾಗಿಯೂ ಒಬ್ಬ ಭಯೋತ್ಪಾದಕರಾಗಿದ್ದರೆ ಅಥವಾ ಇಲ್ಲವೇ?’’ ಎಂದು ನನ್ನನ್ನು ಪ್ರಶ್ನಿಸಿದಾಗ, ನನ್ನ ಪ್ರಾಮಾಣಿಕವಾದ ಉತ್ತರ ಹೀಗಿತ್ತು: ‘‘ ಹೂಂ, ಹೌದು ಮತ್ತು ಅಲ್ಲ’’.

ನಾವೀಗ ಬಯಸುತ್ತಿರುವ ಕಪ್ಪು-ಬಿಳುಪು ಪ್ರಪಂಚದಲ್ಲಿ ‘‘ನಾವು’’ ಮತ್ತು ‘‘ಅವರು’’, ‘‘ನಾಯಕ’’ ವರ್ಸಸ್ ‘‘ಖಳನಾಯಕ’’ ಎಂದು ಒಪ್ಪವಾಗಿ ವಿಭಜಿಸಲ್ಪಟ್ಟಿರುವ ನಾವು ಇರುವ ಈ ವಿಶ್ವದಲ್ಲಿ ನನಗೆ ಸಿನೆಮಾ ನಿರ್ಮಾಪಕನೊಬ್ಬನಿಗಿರುವ ಸವಲತ್ತು ನನಗೆ ಇಲ್ಲ. ನನಗಿರುವುದು ನೆನಪುಗಳು ಮಾತ್ರ. ನಮ್ಮನ್ನು ಪತ್ರಕರ್ತರನ್ನು ನಿಷ್ಕರುಣಿಗಳು, ಅಪ್ರಾಮಾಣಿಕರು, ಕೊಳಕರು ಎಂದು ತೋರಿಸುವ ಸಿನೆಮಾದ ಹಿನ್ನೆಲೆಯಲ್ಲಿ 1992-93ರ ಮುಂಬೈ ಕುರಿತ ಹತ್ತು ಕೊಳಕು(ಸ್ಕಾಮಿ) ಸತ್ಯಗಳು, ವಾಸ್ತವಗಳೂ ಇಲ್ಲಿವೆ.

1. ಡಿಸೆಂಬರ್ 1992 ಮತ್ತು ಜನವರಿ 1993ರಲ್ಲಿ ಅಯೋಧ್ಯೆ ಮತ್ತು ಮುಂಬೈಯಲ್ಲಿ ಸಂಭವಿಸಿದ ಒಟ್ಟು ಘಟನೆಗಳಿಗೆ ಕಂಡುಬಂದ ‘‘ಪ್ರತಿಕ್ರಿಯೆ’’ ಯೇ ಮುಂಬೈ ಸ್ಫೋಟಗಳು.

ಇವು ನನ್ನ ಮಾತುಗಳಲ್ಲ; ಆಗ ನಡೆದ ದೊಂಬಿಗಳು ಮತ್ತು ಸ್ಫೋಟಗಳ ಕುರಿತು ವಿಚಾರಣೆ ನಡೆಸಿದ್ದ ವಿಚಾರಣಾ ಆಯೋಗದ ಮುಖ್ಯಸ್ಥರಾಗಿದ್ದ ನ್ಯಾಯಮೂರ್ತಿ ಬಿ.ಎನ್. ಶ್ರೀಕೃಷ್ಣರವರು ಹೇಳಿದ ಮಾತುಗಳು. ಸರಳವಾಗಿ ಹೇಳುವುದಾದರೆ ಡಿಸೆಂಬರ್-ಜನವರಿಯಲ್ಲಿ ಮುಂಬೈಯಲ್ಲಿ ದೊಂಬಿಗಳು ನಡೆಯದೆ ಇರುತ್ತಿದ್ದಲ್ಲಿ, ಅಲ್ಲಿ ಸರಣಿಸ್ಫೋಟಗಳು ನಡೆಯುತ್ತಿರಲಿಲ್ಲ. ಇನ್ನಷ್ಟು ಸರಳವಾಗಿ ಹೇಳುವುದಾದರೆ, 1992ರ ಡಿಸೆಂಬರ್ 6ರಂದು ‘‘ಹಿಂದೂ ಜಾಗೃತಿ’’ಯ ಒಂದು ಆಘಾತಕಾರಿ ರಾಜಕೀಯ ಅಭಿವ್ಯಕ್ತಿಯಾಗಿ 500 ವರ್ಷಗಳಷ್ಟು ಪುರಾತನವಾದ ಮಸೀದಿಯೊಂದನ್ನು ಅಕ್ರಮವಾಗಿ ಉರುಳಿಸದಿರುತ್ತಿದ್ದಲ್ಲಿ ಮುಂಬೈಯಲ್ಲಿ ಹಿಂಸೆ ನಡೆಯುತ್ತಲೇ ಇರಲಿಲ್ಲ.

2. ಮುಂಬೈಯಲ್ಲಿ ಒಂದಲ್ಲ, ಎರಡು ಭಯಾನಕ ಕೋಮು ಹಿಂಸಾ ಸರಣಿಗಳು ನಡೆದಿದ್ದವು.

ಮೊದಲ ದೊಂಬಿಯ ಸರಣಿ ‘‘ಸ್ವಯಂಸ್ಫೂರ್ತಿ’, (ಇದು ಶ್ರೀಕೃಷ್ಣ ವರದಿಯಲ್ಲಿ ಬಳಸಲಾದ ಶಬ್ದ); ಇದು ಅಯೋಧ್ಯೆಯಲ್ಲಿ ಮಸೀದಿ ಧ್ವಂಸವಾದುದರ ವಿರುದ್ಧ ಕ್ರುದ್ಧರಾದ ಮುಸ್ಲಿಮರು ತಾವಾಗಿಯೇ ಬೀದಿಗಳಿಗೆ ಇಳಿದಿದ್ದರ ಪರಿಣಾಮವಾಗಿ ನಡೆದ ದೊಂಬಿಯ ಸರಣಿ. ಎರಡನೆಯ ಹಿಂಸೆಯ ಆವೃತ್ತಿ ಇದಕ್ಕಿಂತ ತುಂಬ ಹೆಚ್ಚು ಸಂಕೀರ್ಣವಾಗಿತ್ತು. 1993ರ ಜನವರಿಯಲ್ಲಿ ಮುಂಬೈ ಹೊರತುಪಡಿಸಿ ದೇಶದ ಬೇರೆ ಯಾವ ಭಾಗವೂ ಹೊತ್ತಿ ಉರಿಯಲಿಲ್ಲ. ಈ ದ್ವಿತೀಯ ದೊಂಬಿ ಸರಣಿಗೆ ಜೋಗೇಶ್ವರಿ ಕೊಳೆಗೇರಿಯಲ್ಲಿ ಮಹಾರಾಷ್ಟ್ರೀಯ ಹಿಂದೂ ಕುಟುಂಬವೊಂದನ್ನು ದಹಿಸಿದ್ದು ತಕ್ಷಣದ ಕಿಡಿಯಾಗಿತ್ತು. ಆದರೆ, ಹಲವಾರು ಸಣ್ಣಪುಟ್ಟ ಘಟನಾವಳಿಗಳೂ ನಡೆದಿದ್ದವು ಮತ್ತು ಕೇಂದ್ರ ಮುಂಬೈಯಲ್ಲಿ ನಡೆದ ಮರಾಠಿ ಕೆಲಸಗಾರರ(ಕೂಲಿ ಕಾರ್ಮಿಕರ), ಯಾಕೆ ಎಂದು ಎಂದು ವಿವರಿಸಲಾಗದ, ಹತ್ಯೆಗಳು ಕೋಮು ಹಿಂಸೆಗೆ ಪ್ರಚೋದನೆ ನೀಡುವ ಉದ್ದೇಶಪೂರಿತವಾದ ಪ್ರಯತ್ನ ನಡೆದಿತ್ತು ಎಂಬುದನ್ನು ಸೂಚಿಸುತ್ತಿದ್ದವು.

ಶಿವಸೇನಾ ಕಾರ್ಯಕರ್ತರುಗಳು ಕೂಡ ಚೂರಿಗಳು ಹಾಗೂ ಸೀಮೆಎಣ್ಣೆ ಬಾಂಬ್‌ಗಳಿಂದ ಶಸ್ತ್ರಸಜ್ಜಿತರಾಗಿ ನಿಂತಿದ್ದರು ಮತ್ತು ಶಿವಸೇನೆಯ ಮಹಾ-ಆರತಿಗಳು ಹಾಗೂ ಬಾಳಾಠಾಕ್ರೆಯವರ ಕೋಮು ವಿಷಪೂರಿತ ಭಾಷಣಗಳು ಮುಂಬೈ ನಗರದ ಬಿಸಿಯೇರಿದ್ದ ವಾತಾವರಣಕ್ಕೆ ಒಂದು ಕೋಮುವಾದಿ ಶಕ್ತಿಯನ್ನು ಸೇರಿಸಿದವು.

ಕೃಪೆ : scroll.in

Writer - ರಾಜ್‌ದೀಪ್ ಸರ್ದೇಸಾಯಿ

contributor

Editor - ರಾಜ್‌ದೀಪ್ ಸರ್ದೇಸಾಯಿ

contributor

Similar News