ಬಿಬಿಎಂಪಿಗೆ ಶೀಘ್ರವೇ ನೂತನ ಕಾನೂನು: ಡಿಸಿಎಂ ಡಾ.ಜಿ.ಪರಮೇಶ್ವರ್

Update: 2018-07-16 13:59 GMT

ಬೆಂಗಳೂರು, ಜು. 16: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಸಮರ್ಪಕವಾಗಿ ನಿರ್ವಹಿಸಲು ಶೀಘ್ರವೇ ನೂತನ ಕಾನೂನು ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಾ.ಜಿ. ಪರಮೇಶ್ವರ್ ಇಂದಿಲ್ಲಿ ತಿಳಿಸಿದ್ದಾರೆ.

ಸೋಮವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಬೆಂಗಳೂರು ಅಭಿವೃದ್ಧಿಗೆ ಸಂಬಂಧಿಸಿದಂತೆ ಶಾಸಕರು, ಮೇಲ್ಮನೆ ಸದಸ್ಯರು ಹಾಗೂ ಸಂಸದರ ಜತೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಬಿಬಿಎಂಪಿಗೆ ಹೊಸ ಕಾನೂನು ತರಲು ಶಾಸಕರು ಸಲಹೆ ನೀಡಿದ್ದಾರೆ. ಮುನಿಸಿಪಾಲಿಟಿ ಆ್ಯಕ್ಟ್ ಅಡಿಯಲ್ಲಿ ಬಿಬಿಎಂಪಿ ಕಾರ್ಯ ನಿರ್ವಹಿಸುತ್ತಿದ್ದು, ಇದರ ಮುಂದುವರೆದ ಭಾಗವಾಗಿ ಹಾಗೂ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಲು ಹೊಸ ಕಾನೂನು ತರಲು ಸಲಹೆ ನೀಡಿದ್ದಾರೆ. ಶೀಘ್ರವಾಗಿ ಕಾನೂನು ಜಾರಿ ಮಾಡಲಾಗುವುದು ಎಂದ ಅವರು ತಿಳಿಸಿದರು.

ಈಗಾಗಲೇ ಪ್ಲಾಸ್ಟಿಕ್ ಕೈಚೀಲ ನಿಷೇಧಿಸಿದ್ದರೂ, ಪ್ಲಾಸ್ಟಿಕ್ ಮಾರಾಟ, ಉತ್ಪಾದನೆ ನಡೆಯುತ್ತಿದೆ. ಹೀಗಾಗಿ ಪ್ಲಾಸ್ಟಿಕ್ ನಿಷೇಧ ಪರಿಣಾಮಕಾರಿ ಅನುಷ್ಠಾನಕ್ಕೆ ಕ್ರಮ ವಹಿಸಲಾಗುವುದೆಂದ ಅವರು, ನಗರದಲ್ಲಿ ಮನಸೋ ಇಚ್ಛೆ ಫ್ಲೆಕ್ಸ್‌ಗಳನ್ನು ಅಳವಡಿಸಲು ಬಿಡುವುದಿಲ್ಲ. ಅನುಮತಿ ಇಲ್ಲದೆ ಫ್ಲೆಕ್ಸ್ ಅಳವಡಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ನಗರದಲ್ಲಿ ತ್ಯಾಜ್ಯವನ್ನು ಸೂಕ್ತ ವಿಲೇವಾರಿ, ಸಂಸ್ಕರಣೆಗೆ ಸಲಹೆ ನೀಡಿದ್ದು, ತ್ಯಾಜ್ಯವನ್ನು ಇಂಧನವನ್ನಾಗಿ ಪರಿವರ್ತಿಸುವ ಬಗ್ಗೆಯೂ ಪ್ರಾಯೋಗಿಕ ಯೋಜನೆ ಆರಂಭಿಸಲಾಗುವುದು ಎಂದ ಅವರು, ಮಹಿಳಾ ಸುರಕ್ಷತೆಗೆ ನಗರದಲ್ಲಿ ನಿರ್ಭಯ ಯೋಜನೆಯಡಿ 5 ಸಾವಿರ ಸಿಸಿಟಿವಿ ಅಳವಡಿಸಲಾಗುವುದು ಎಂದು ಹೇಳಿದರು.

ಸರಕಾರಕ್ಕೆ ಪ್ರಸ್ತಾವನೆ: ನಗರದಲ್ಲಿ 156 ಸರಕಾರಿ ಶಾಲೆಗಳಿದ್ದು, 76 ಸರಕಾರಿ ಶಾಲೆಗಳು ಬಿಬಿಎಂಪಿ ವ್ಯಾಪ್ತಿಯಲ್ಲಿವೆ. ಈ ಎಲ್ಲ ಶಾಲೆಗಳನ್ನು ಬಿಬಿಎಂಪಿಯೇ ನಡೆಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕೆಂದು ಶಾಸಕರು ಸಲಹೆ ನೀಡಿದ್ದು, ಇದನ್ನು ಪರಿಶೀಲಿಸಲಾಗುವುದು ಎಂದರು. ಬೆಂಗಳೂರು ನಗರದಲ್ಲಿ ವಿದ್ಯುತ್ ಉಳಿಸಲು ಇಡೀ ನಗರಕ್ಕೆ ಎಲ್‌ಇಡಿ ಬಲ್ಬ್ ಅಳವಡಿಸಲಾಗುವುದು ಎಂದ ಅವರು, ಮೆಟ್ರೋ, ಬಿಡಬ್ಲ್ಯೂಎಸ್‌ಎಸ್‌ಬಿ ಹೊರತು ಪಡಿಸಿ 10ಸಾವಿರ ಕೋಟಿ ರೂ.ಹಣವನ್ನು ಬಿಬಿಎಂಪಿಗೆ ಸರಕಾರ ಬಜೆಟ್‌ನಲ್ಲಿ ಅನುಮೋದಿಸಿದೆ ಎಂದರು.

ಸಿಟಿ ರೌಂಡ್: ಮುಂದಿನ ವಾರದಿಂದ ಬೆಂಗಳೂರು ನಗರದ 28 ವಿಧಾನಸಭಾ ಕ್ಷೇತ್ರಗಳಿಗೂ ನಾನು ಸಿಟಿ ರೌಂಡ್ ಮಾಡಲಿದ್ದೇನೆ. ಜನರ ಹಾಗೂ ಶಾಸಕರ ಸಮಸ್ಯೆ ಆಲಿಸಲು ತೀರ್ಮಾನಿಸಿದ್ದೇನೆ. ದಿನಕ್ಕೆ ಮೂರು ನಾಲ್ಕು ಕ್ಷೇತ್ರಕ್ಕೆ ಭೇಟಿ ನೀಡಲಿದ್ದೇನೆ ಎಂದು ಅವರು ತಿಳಿಸಿದರು.

ನಗರದಲ್ಲಿನ ರಸ್ತೆ ಗುಂಡಿಗಳ ಶಾಶ್ವತ ಪರಿಹಾರಕ್ಕೆ ‘ಟೆಂಡರ್ ಶ್ಯೂರ್’ ಯೋಜನೆ ತಂದಿದ್ದೇವೆ. ಇದರಿಂದ ಮುಂದಿನ ದಿನಗಳಲ್ಲಿ ಸಮಸ್ಯೆ ಪರಿಹಾರವಾಗಲಿದೆ ಎಂದ ಅವರು, ರಾಜಕಾಲುವೆಯ ಹೂಳು ತೆಗೆಯಲು ಸೂಚಿಸಲಾಗಿದೆ. ಅಲ್ಲದೆ, ಒತ್ತುವರಿ ತೆರವುಗೊಳಿಸಲು ಸರ್ವೆ ಕೈಗೊಳ್ಳಲಾಗುತ್ತಿದೆ ಎಂದರು.

ಸಭೆಯಲ್ಲಿ ಸಚಿವರಾದ ಕೆ.ಜೆ.ಜಾರ್ಜ್, ಬಿ.ಝಡ್.ಝಮೀರ್ ಅಹ್ಮದ್ ಖಾನ್, ಬಿಬಿಎಂಪಿ ಮೇಯರ್ ಸಂಪತ್‌ರಾಜ್, ಬೆಂಗಳೂರು ನಗರದ ಶಾಸಕರು, ಸಂಸದರು ಪಾಲ್ಗೊಂಡಿದ್ದರು.

‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಆಡಳಿತದ ದೃಷ್ಟಿಯಿಂದ 5 ಭಾಗಗಳನ್ನಾಗಿ ವಿಭಜನೆ ಮಾಡಬೇಕೆಂದು ಬಿ.ಎಸ್.ಪಾಟೀಲ್ ನೇತೃತ್ವದ ಸಮಿತಿ ಸಲಹೆ ನೀಡಿದ್ದಾರೆ. ಬಿಬಿಎಂಪಿಗೆ ಪ್ರತ್ಯೇಕ ಕಾನೂನು ರೂಪಿಸಲು ಉದ್ದೇಶಿಸಿದ್ದು, ಈ ಬಗ್ಗೆ ಚರ್ಚಿಸುತ್ತೇವೆ. ವಿಭಜನೆ ಬಗ್ಗೆ ಸರಕಾರ ಪರಿಶೀಲಿಸಲಿದೆ’
-ಡಾ.ಜಿ.ಪರಮೇಶ್ವರ್ ಉಪ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News