ಜು.21 ರಂದು ರೈತ ಹುತಾತ್ಮ ದಿನಾಚರಣೆ

Update: 2018-07-16 13:56 GMT

ಬೆಂಗಳೂರು, ಜು.16: ಚುನಾವಣೆ ಪೂರ್ವದಲ್ಲಿ ನೀಡಿದ ಆಶ್ವಾಸನೆಯಂತೆ ಎಲ್ಲ ರೈತರ ಸಾಲ ಮನ್ನಾ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಕೆಗಾಗಿ ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ವತಿಯಿಂದ ಜು.21 ರಂದು ಬಳ್ಳಾರಿಯ ನಗರದ ಬಸವ ಭವನದಲ್ಲಿ ರೈತ ಹುತಾತ್ಮ ದಿನಾಚರಣೆ ಅಂಗವಾಗಿ ರಾಜ್ಯ ರೈತ ಸಮಾವೇಶ ಹಮ್ಮಿಕೊಳ್ಳಲಾಗಿದೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಸೋಮನಗುದ್ದು ರಂಗಸ್ವಾಮಿ, ಸ್ವಾತಂತ್ರ ಬಂದು ಎಪ್ಪತ್ತು ವರ್ಷಗಳು ಕಳೆಯುತ್ತಿದ್ದರೂ ಇಂದಿಗೂ ರೈತರ ಸಮಸ್ಯೆಗಳು ಬಗೆಹರಿದಿಲ್ಲ. 80 ರ ದಶಕದಲ್ಲಿ ಸರಕಾರ ರೈತ ಚಳವಳಿಯಲ್ಲಿ ಭಾಗವಹಿಸಿದ್ದ ರೈತರನ್ನು ಗುಂಡಿಕ್ಕಿ ಸಾಯಿಸಿ 37 ವರ್ಷಗಳು ಕಳೆಯುತ್ತಿದ್ದು, ಅವರ ನೆನಪಿನಾರ್ಥವಾಗಿ ಹುತಾತ್ಮ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಸಮಾವೇಶದ ಅಂಗವಾಗಿ ಬಳ್ಳಾರಿ ನಗರದ ಕನಕ ದುರ್ಗಮ್ಮ ದೇವಾಸ್ಥಾನದಿಂದ ಬಸವ ಭವನದವರೆಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸುವ ನೂರಾರು ಸಂಖ್ಯೆಯ ರೈತರ ಬೃಹತ್ ಜಾಥ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಬೇಡಿಕೆಗಳು: ರೈತರ ಕೃಷಿ ಸಾಲ ಸಂಪೂರ್ಣ ಮನ್ನಾ ಮಾಡಬೇಕು. ರೈತರ ಪಂಪ್‌ಸೆಟ್‌ಗಳಿಗೆ 10 ಗಂಟೆಗಳ ಕಾಲ ನಿರಂತರ ವಿದ್ಯುತ್ ಸಂಪರ್ಕ ನೀಡಬೇಕು. ಫಸಲ್ ಬಿಮಾ ಯೋಜನೆಯನ್ನು ನ್ಯಾಯಯುತವಾಗಿ ರಾಜ್ಯದ ಎಲ್ಲ ರೈತರಿಗೆ ತಲುಪಿಸಬೇಕು. ಭದ್ರಾ ಮೇಲ್ದಂಡೆ ಯೋಜನೆಯನ್ನು ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಗೆ ಸೇರಿಸಬೇಕು. ರಾಜ್ಯದಲ್ಲಿ ಸಮಗ್ರ ನೀರಾವರಿ ಯೋಜನೆಯನ್ನು ಜಾರಿ ಮಾಡಬೇಕು. ಹಿರಿಯ ಕೃಷಿ ರೈತರಿಗೆ ತಿಂಗಳಿಗೆ 6 ಸಾವಿರ ಮಾಸಿಕ ಪಿಂಚಣಿ ನೀಡಬೇಕು. ಕಬ್ಬಿನ ಬೆಳೆ ಬಾಕಿ ಉಳಿಸಿಕೊಂಡಿರುವ ಹಣವನ್ನು ಕೂಡಲೇ ಪಾವತಿ ಮಾಡಬೇಕು. ಒಣ ಬೇಸಾಯಕ್ಕೆ ತೆಲಂಗಾಣ ಮಾದರಿಯಲ್ಲಿ 10 ಸಾವಿರ ಪ್ರೋತ್ಸಾಹ ಧನ ನೀಡಬೇಕು ಎಂದು ಸರಕಾರವನ್ನು ಒತ್ತಾಯಿಸಲಾಗುತ್ತದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News