ಬೆಂಗಳೂರು: ಎಸ್ಸಿ, ಎಸ್ಸಿ ಭಡ್ತಿ ಮೀಸಲಾತಿ ಕಾಯ್ದೆ ಜಾರಿ ಒತ್ತಾಯಿಸಿ ಧರಣಿ

Update: 2018-07-16 13:58 GMT

ಬೆಂಗಳೂರು, ಜು.16: ಎಸ್ಸಿ, ಎಸ್ಟಿ ಭಡ್ತಿ ಮೀಸಲಾತಿಗೆ ಸಂಬಂಧಿಸಿದ ಕಾಯ್ದೆಗೆ ರಾಷ್ಟ್ರಪತಿ ಅಂಕಿತ ಹಾಕಿದ್ದರೂ ರಾಜ್ಯ ಸರಕಾರ ಕಾಯ್ದೆಯನ್ನು ಕಾರ್ಯರೂಪಕ್ಕೆ ಇಳಿಸದೆ ಮೀನಾಮೇಷ ಎಣಿಸುತ್ತಿದೆ ಎಂದು ರಾಜ್ಯ ಸರಕಾರಿ ಎಸ್ಸಿ, ಎಸ್ಟಿ ನೌಕರರ ಒಕ್ಕೂಟದ ಅಧ್ಯಕ್ಷ ದಾಸ್‌ಪ್ರಕಾಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಮವಾರ ನಗರದ ಫ್ರೀಡಂಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿರುವ ಎಸ್ಸಿ, ಎಸ್ಟಿ ನೌಕರರು, ವರ್ಷಾನುಗಟ್ಟಲೆ ನಿರಂತರವಾದ ಹೋರಾಟದ ಫಲವಾಗಿ ಎಸ್ಸಿ, ಎಸ್ಟಿ ಭಡ್ತಿ ಮೀಸಲಾತಿ ಕಾಯ್ದೆಗೆ ರಾಷ್ಟ್ರಪತಿಗಳಿಂದ ಅಂಕಿತ ಪಡೆದಿದ್ದೇವೆ. ಆದರೆ, ಕಾಯ್ದೆಯನ್ನು ಕಾರ್ಯರೂಪಕ್ಕೆ ಇಳಿಸುವ ನಿಟ್ಟಿನಲ್ಲಿ ರಾಜ್ಯಸರಕಾರ ಕಾಲಹರಣ ಮಾಡುವುದು ಸರಿಯಲ್ಲ ಎಂದು ನೌಕರರು ಒತ್ತಾಯಿಸಿದರು.

ಸುಪ್ರೀಂ ಕೋರ್ಟ್‌ನ ಭಡ್ತಿ ಮೀಸಲಾತಿ ರದ್ದು ಆದೇಶದಿಂದಾಗಿ ಈಗಾಗಲೆ ಸಾವಿರಾರು ನೌಕರರು ಹಿಂಭಡ್ತಿ ಪಡೆದಿದ್ದಾರೆ. ಈ ನೌಕರರನ್ನು ರಾಷ್ಟ್ರಪತಿ ಅಂಕಿತದ ಆದೇಶದನ್ವಯ ಪುನಃ ಹಿಂದಿನ ಸ್ಥಾನಕ್ಕೆ ಮುಂಭಡ್ತಿ ಮಾಡಬೇಕಾಗಿದೆ. ಮುಂಭಡ್ತಿ ನೀಡುವುದಕ್ಕೆ ಯಾವುದೆ ಕಾನೂನಿನ ಅಡೆತಡೆ ಇಲ್ಲದಿದ್ದರೂ ಕಾಯ್ದೆಯನ್ನು ಜಾರಿ ಮಾಡುಲು ಹಿಂದೇಟು ಹಾಕುತ್ತಿರುವ ರಾಜ್ಯ ಸರಕಾರದ ನಿಲುವು ಹಲವು ಅನುಮಾನಕ್ಕೆ ಈಡು ಮಾಡಿದೆ ಎಂದು ಅವರು ಹೇಳಿದರು.

ಪಟ್ಟಭದ್ರ ಹಿತಾಸಕ್ತಿಗಳ ಹುನ್ನಾರಗಳ ಹಿನ್ನೆಲೆಯಲ್ಲಿ ಹಿಂಭಡ್ತಿ ಪಡೆದಿರುವ ಎಸ್ಸಿ, ಎಸ್ಟಿ ಅಧಿಕಾರಿಗಳು ಮಾನಸಿಕ ಹಿಂಸೆಗೆ ತುತ್ತಾಗಿದ್ದಾರೆ. ಹಲವರು ಸಾವನ್ನಪ್ಪುವ ಹಂತಕ್ಕೆ ಮುಟ್ಟಿದ್ದಾರೆ. ಹೀಗಾಗಿ ರಾಜ್ಯ ಸರಕಾರ ಕೂಡಲೆ ಎಸ್ಸಿ, ಎಸ್ಟಿ ಭಡ್ತಿ ಮೀಸಲಾತಿಯನ್ನು ಕಾರ್ಯರೂಪಕ್ಕೆ ಇಳಿಸುವ ಮೂಲಕ ಎಸ್ಸಿ, ಎಸ್ಟಿ ನೌಕರರು ಹಾಗೂ ಅಧಿಕಾರಿಗಳನ್ನು ಉಳಿಬೇಕೆಂದು ಅವರು ಒತ್ತಾಯಿಸಿದರು.

ಈ ವೇಳೆ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರಾದ ಡಾ.ವೆಂಕಟಸ್ವಾಮಿ, ಲಯನ್ ಬಾಲಕೃಷ್ಣ, ಕೋದಂಡರಾಮ್ ಸೇರಿದಂತೆ ಹಲವರು ಎಸ್ಸಿ, ಎಸ್ಟಿ ಭಡ್ತಿ ಮೀಸಲಾತಿಯನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಅನಿರ್ದಿಷ್ಟಾವಧಿ ಧರಣಿಯಲ್ಲಿ ಭಾಗವಹಿಸಿದ್ದರು. ಹಾಗೂ ಎಲ್ಲ ಇಲಾಖೆ ಎಸ್ಸಿ, ಎಸ್ಟಿ ನೌಕರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News