ಇಬ್ಬರು ರೋಗಿಗಳಿಗೆ ಯಶಸ್ವಿ ಶ್ವಾಸಕೋಶ ಅಳವಡಿಕೆ
ಬೆಂಗಳೂರು, ಜು. 16: ಕೇರಳದ ಸುರೇಶ್‌ಬಾಬು ಮತ್ತು ಮಧ್ಯಪ್ರದೇಶದ ಜಯಂತ್ ಕುಮಾರ್ ಶಾ ಎಂಬ ಇಬ್ಬರು ಹಿರಿಯ ನಾಗರಿಕರಿಗೆ ಅತ್ಯಂತ ಯಶಸ್ವಿಯಾಗಿ ಶ್ವಾಸಕೋಶ ಕಸಿ ಮಾಡುವ ಮೂಲಕ ಬೆಂಗಳೂರಿನ ಬಿಜಿಎಸ್ ಗ್ಲೆನ್ ಈಗಲ್ಸ್ ಆಸ್ಪತ್ರೆ ಮರುಜೀವ ನೀಡಿದೆ.
ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಸ್ಪತ್ರೆ ನಿರ್ದೇಶಕ ಡಾ.ಸಂದೀಪ್ ಅತ್ತಾವರ್, ತನ್ನ ನೇತೃತ್ವದ ತಜ್ಞ ವೈದ್ಯರ ತಂಡ ಈ ಎರಡು ಕಸಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿಸಿದೆ. ಈ ಇಬ್ಬರು ರೋಗಿಗಳು ದೀರ್ಘಕಾಲದಿಂದ ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದು, ಅವರ ಜೀವ ಉಳಿಸಲು ಶಸ್ತ್ರ ಚಿಕಿತ್ಸೆ ನೆರವಾಗಿದೆ ಎಂದರು.
ಹಿರಿಯ ನಾಗರಿಕರಿಗೆ ಶಸ್ತ್ರಚಿಕಿತ್ಸೆ ಮೂಲಕ ಅಂಗಾಂಗ ಕಸಿ ಮಾಡುವುದು ತುಂಬಾ ಸಂಕೀರ್ಣ. ಬಹುತೇಕ ಜನರು ಶ್ವಾಸಕೋಶದ ರೋಗದ ಅಂತಿಮ ಹಂತದಲ್ಲಿರುತ್ತಾರೆ. ಇವರಿಗೆ ಶ್ವಾಸಕೋಶದ ಕಸಿಯ ಅಗತ್ಯವಿರುತ್ತದೆ. ಸಾಮಾನ್ಯವಾಗಿ ಶ್ವಾಸಕೋಶದ ಕಸಿ ಶಸ್ತ್ರಚಿಕಿತ್ಸೆ ನಂತರ ಗುಣಮುಖ ಆಗುವ ಪ್ರಕ್ರಿಯೆ ಒಬ್ಬೊಬ್ಬರಲ್ಲಿ ಒಂದೊಂದು ರೀತಿಯಲ್ಲಿರುತ್ತದೆ. ಆದರೆ, ನಾವು ಇವರಿಬ್ಬರಿಗೆ ಅತ್ಯುತ್ತಮವಾದ ರೀತಿಯಲ್ಲಿ ನಡೆಸಿದ ಶಸ್ತ್ರಚಿಕಿತ್ಸೆ ಮತ್ತು ನೀಡುತ್ತಿರುವ ವೈದ್ಯಕೀಯ ಚಿಕಿತ್ಸೆಗಳಿಂದಾಗಿ ಶೀಘ್ರ ರೀತಿಯಲ್ಲಿ ಗುಣಮುಖರಾಗಲಿದ್ದಾರೆಂದು ಭರವಸೆ ವ್ಯಕ್ತಪಡಿಸಿದರು.