×
Ad

ಕುದುರೆ ಕ್ವೀನ್‌ ಲತೀಫಾಗೆ ಉದ್ದೀಪನ ಮದ್ದು ನೀಡಿದ ವಿಚಾರ: ಎಫ್‌ಐಆರ್ ರದ್ದುಕೋರಿ ಜಾಕಿ ಹೈಕೋರ್ಟ್ ಮೊರೆ

Update: 2018-07-16 21:32 IST

ಬೆಂಗಳೂರು, ಜು.16: ರೇಸ್ ಕುದುರೆ ಕ್ವೀನ್ ಲತೀಫಾಗೆ ಉದ್ದೀಪನ ಮದ್ದು ನೀಡಿದ ಆರೋಪದಡಿ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ, ಕುದುರೆ ತರಬೇತುದಾರ ನೀಲ್ ದರಾಶ ಹಾಗೂ ಇತರ ನಾಲ್ವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಅಂಗೀಕರಿಸಿದೆ. ಕುದುರೆ ಕ್ವೀನ್ ಲತೀಫಾಗೆ ಉದ್ದೀಪನ ಮದ್ದು ನೀಡಲಾಗಿದೆ ಎಂದು ಅರ್ಜಿದಾರರ ವಿರುದ್ಧ ಸುಳ್ಳು ಆರೋಪ ಹೊರಿಸಲಾಗಿದ್ದು, ಈ ಪ್ರಕರಣದ ಕುರಿತಂತೆ ನಗರದ 1ನೆ ಎಸಿಎಂಎಂ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಗೆ ಮಧ್ಯಂತರ ತಡೆ ನೀಡುವಂತೆ ಅರ್ಜಿದಾರರ ಪರ ವಕೀಲರ ಮನವಿ ಮಾಡಿದರು.

ಮಧ್ಯಂತರ ಆದೇಶದ ಅಗತ್ಯವಿಲ್ಲ. ಅರ್ಜಿಯ ಅಂತಿಮ ವಿಚಾರಣೆ ನಡೆಸಿ ಆದೇಶ ನೀಡಲಾಗುವುದು ಎಂದು ತಿಳಿಸಿದ ಪೀಠ, ವಿಚಾರಣೆಯನ್ನು ಜುಲೈ 20ಕ್ಕೆ ಮುಂದೂಡಿತು. ಬೆಂಗಳೂರು ಟರ್ಫ್ ಕ್ಲಬ್‌ನ(ಬಿಟಿಸಿ) ರೇಸ್ ಕುದುರೆ ಕ್ವೀನ್ ಲತೀಫಾಗೆ ಉದ್ದೀಪನ ಮದ್ದು ನೀಡಿದ ಪ್ರಕರಣ ಸಂಬಂಧ ಸಿಐಡಿ ಅಧಿಕಾರಿಗಳು 61ನೇ ಸೆಷನ್ಸ್ ಕೊೀರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದರು.

ನ್ಯಾಯಾಲಯಕ್ಕೆ 600ಕ್ಕೂ ಹೆಚ್ಚು ಪುಟಗಳ ಆರೋಪಪಟ್ಟಿ ಸಲ್ಲಿಸಿದ್ದು, ಬಿಟಿಸಿ ಸಿಇಒ ಆಗಿದ್ದ ಎಸ್. ನಿರ್ಮಲ್ ಪ್ರಸಾದ್ ಎ-1 ಆರೋಪಿಯಾಗಿದ್ದಾರೆ. ಬಿಟಿಸಿ ಮುಖ್ಯ ಸ್ಟೆಪಂಡರಿ ಸ್ಟೀವರ್ಡ್ ಪ್ರದ್ಯುಮ್ನ ಸಿಂಗ್, ಸ್ಟೀವರ್ಡ್ ಅರ್ಜುನ್ ಸಜನಾನಿ, ಕ್ವೀನ್ ಲತೀಫಾ ಕುದುರೆ ಮಾಲಕ ವಿವೇಕ್ ಉಭಯ್‌ಕರ್, ಕುದುರೆ ತರಬೇತುದಾರ ನೀಲ್ ದರಾಶ ಹಾಗೂ ಬಿಟಿಸಿ ಉಪ ಮುಖ್ಯ ಪಶು ವೈದ್ಯಾಧಿಕಾರಿ ಡಾ. ಎಚ್.ಎಸ್. ಮಹೇಶ್ ಕ್ರುವಾಗಿ 2 ರಿಂದ 6ನೆ ಆರೋಪಿಗಳಾಗಿದ್ದಾರೆ.

2017ರ ನ.5 ರಂದು ನಡೆದಿದ್ದ ರೇಸ್‌ನಲ್ಲಿ 3 ವರ್ಷದ ಕ್ವೀನ್ ಲತೀಫಾಗೆ ಡ್ರಗ್ಸ್ ಪ್ರೋಕೇನ್ ಕೊಟ್ಟಿದ್ದರಿಂದ ಗೆಲುವು ಸಾಧಿಸಿತ್ತು. ಪರಿಣಾಮ ರೇಸ್‌ನಲ್ಲಿ 2ಮತ್ತು 3 ನೆ ಕುದುರೆಗಳ ಮೇಲೆ ಬಾಜಿ ಕಟ್ಟಿದ್ದ 73,053 ಜನರಿಗೆ 7.30 ಲಕ್ಷ ರೂ. ವಂಚನೆಯಾಗಿದೆ ಎಂದು ಆರೋಪಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News