ಭಡ್ತಿ ಮೀಸಲಾತಿ ಕಾಯ್ದೆ ಜಾರಿಗೆ ಒತ್ತಾಯಿಸಿ ದಲಿತ ಸಂಘಟನೆಗಳಿಂದ ಧರಣಿ

Update: 2018-07-16 16:06 GMT

ಬೆಂಗಳೂರು, ಜು.16: ಭಡ್ತಿ ಮೀಸಲಾತಿ ಕಾಯ್ದೆಯನ್ನು ಕೂಡಲೇ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ದಲಿತ ಸಂಘಟನೆಗಳ ಒಕ್ಕೂಟದ ಸದಸ್ಯರು ನಗರದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು.

ಫ್ರೀಡಂ ಪಾರ್ಕ್ ನಲ್ಲಿ ಸೇರಿದ ಒಕ್ಕೂಟದ ನೂರಾರು ಸದಸ್ಯರು, ವಿಧಾನಸಭೆಯಲ್ಲಿ ಭಡ್ತಿ ಮೀಸಲಾತಿ ಕಾಯ್ದೆ ನಿಲುವಳಿ ಸೂಚನೆ ಚರ್ಚೆ ನಡೆದಾಗ ರಾಜ್ಯ ಸರಕಾರವು ಜುಲೈ 27 ರವರೆಗೆ ಈ ಕಾಯ್ದೆಯನ್ನು ಅನುಷ್ಠಾನಕ್ಕೆ ತರಲಾಗುವುದಿಲ್ಲ ಎಂದು ಭರವಸೆ ನೀಡಿ ನಂತರ ದ್ರೋಹ ಬಗೆದಿದೆ ಎಂದು ಆರೋಪಿಸಿದರು. ದೇಶದ ಅತ್ಯುನ್ನತ ವ್ಯಕ್ತಿ ರಾಷ್ಟ್ರಪತಿಗಳು ಈ ಮಸೂದೆಗೆ ಅಂಗಿಕಾರ ನೀಡಿದ್ದಾರೆ. ಈ ಮೂಲಕ ಭಡ್ತಿ ಮೀಸಲಾತಿ ಅನುಷ್ಠಾನಕ್ಕೆ ಇದ್ದ ಅಡಚಣೆ ದೂರಾದಂತಾಗಿದೆ. ಆದರೂ ಕೂಡಾ ಇದನ್ನು ಜಾರಿಗೊಳಿಸದೇ ಇರುವ ನಿರ್ಧಾರವನ್ನು ರಾಜ್ಯ ಸರಕಾರ ತೆಗೆದುಕೊಳ್ಳುವ ಮೂಲಕ ದಲಿತ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಒಕ್ಕೂಟದ ಅಧ್ಯಕ್ಷ ಎಂ.ವೆಂಕಟೇಶ್ ದೂರಿದರು.

ಹಲವು ಇಲಾಖೆಗಳಲ್ಲಿನ ಎಸ್ಸಿ-ಎಸ್ಟಿ ಅಧಿಕಾರಿ ನೌಕರರಿಗೆ ಹಿಂಭಡ್ತಿ ನೀಡಲಾಗಿದ್ದು, ಈ ಹಿಂಭಡ್ತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗುವುದು ಎಂಬ ಸರಕಾರದ ಹೇಳಿಕೆಯು ಶುದ್ದ ಸುಳ್ಳಾಗಿದೆ. ಕಾಯ್ದೆಯ ವಿರುದ್ದ ತಡೆಯಾಜ್ಞೇ ಪಡೆಯಲು ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆಯೇ ಹೊರತು ಯಾವುದೇ ತೀರ್ಪು ನೀಡಿಲ್ಲವೆಂಬುದನ್ನು ಸರಕಾರ ಅರ್ಥ ಮಾಡಿಕೊಳ್ಳಬೇಕು. ಅಲ್ಲದೆ, ಜುಲೈ 27 ರಂದು ಈ ಸಂಬಂಧಿಸಿದ ಅರ್ಜಿಯು ಕೋರ್ಟ್‌ನಲ್ಲಿ ಏನಾಗುತ್ತದೆ ಎಂದು ಏನೂ ಗೊತ್ತಿಲ್ಲದೆ ಎಸ್ಸಿ-ಎಸ್ಟಿ ನೌಕರರಿಗೆ ಬಹಿರಂಗವಾಗಿ ಮೋಸಮಾಡುತ್ತಿದೆ ಎಂದು ಆರೋಪಿಸಿದರು.

ದಲಿತ ಮಂತ್ರಿ, ಶಾಸಕರು ಕಾಯ್ದೆ ಅನುಷ್ಠಾನಗೊಳಿಸಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದರೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಲೋಕೋಪಯೋಗಿ ಮಂತ್ರಿ ಎಚ್.ಡಿ.ರೇವಣ್ಣನವರು ಕಾಯ್ದೆಯನ್ನು ಅನುಷ್ಠಾನಗೊಳಿಸಬಾರದೆಂದು ವಿಳಂಬ ನೀತಿಯ ಮಸಲತ್ತು ನಡೆಸಿದ್ದಾರೆ. ಜುಲೈ 27 ರ ಕೋರ್ಟ್ ವಿಚಾರಣೆ ಆಗುವವರೆಗೂ ಕಾಯ್ದೆ ಈ ಕೂಡಲೇ ಈ ಪೂರಕವಾದ ಆದೇಶವನ್ನು ಹೊರಡಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಸರಕಾರವೇ ಹೊಣೆ: ದಲಿತ ವಿರೋಧಿ ನೀತಿಯಿಂದ ಹಿಂಭಡ್ತಿ ಪಡೆದ ಮೂವರು ದಲಿತ ಅಧಿಕಾರಿಗಳು ಸಾವನ್ನಪ್ಪಿದ್ದು, ಇವರ ಸಾವಿಗೆ ಸರಕಾರವೇ ಹೊಣೆ ಎಂದು ದಲಿತ ರಕ್ಷಣಾ ವೇದಿಕೆ ಮುಖಂಡರು ಆರೋಪಿಸಿದರು.

2018ರ ಜು.27ರಂದು ಸುಪ್ರೀಂ ಕೋರ್ಟ್ ನಲ್ಲಿ ತಡೆಯಾಜ್ಞೆ ಪ್ರಕಟವಾಗುತ್ತದೆ ಎಂಬ ನಿರೀಕ್ಷೆಯ ಊಹೆಯಲ್ಲಿ ಸರಕಾರ ಭಡ್ತಿ ಮೀಸಲಾತಿ ಕಾಯ್ದೆಯ ಆದೇಶವನ್ನು ಜಾರಿ ಮಾಡದೆ ಸಾವಿರಾರು ಮಂದಿ ದಲಿತ ನೌಕರರಿಗೆ ಸರಕಾರ ದ್ರೋಹ ಬಗೆದಿದೆ ಎಂದು ಆರೋಪಿಸಿದರು. ಮೂವರು ಅಧಿಕಾರಿಗಳು ಸಾವನಪ್ಪಿರುವುದಲ್ಲದೆ ಇಬ್ಬರು ಕೋಮಾ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಸಾವುಗಳಿಂದಾಗಿ ಸರಕಾರ ದಲಿತರನ್ನು ಕೊಲೆ ಮಾಡುವ ಹುನ್ನಾರಕ್ಕೆ ಕೈ ಹಾಕಿದೆ ಎಂದು ದೂರಿದರು.

ಸರಕಾರ ಎಚ್ಚೆತ್ತುಕೊಂಡು ಕೂಡಲೇ ಭಡ್ತಿ ಮೀಸಲಾತಿ ಕಾಯ್ದೆ ಆದೇಶವನ್ನು ಜಾರಿಗೊಳಿಸಬೇಕು. ಇಲ್ಲದಿದ್ದರೆ ಸರಕಾರದ ವಿರುದ್ಧ ದಂಗೆ ಏಳಬೇಕಾಗುತ್ತದೆ ಎಂದು ಮುಖಂಡರು ಎಚ್ಚರಿಕೆ ನೀಡಿದ್ದಾರೆ. ಪ್ರತಿಭಟನೆಯಲ್ಲಿ ಸಮತಾ ಸೈನಿಕ ದಳದ ಅಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ, ಕರ್ನಾಟಕ ದಲಿತ ರಕ್ಷಣಾ ವೇದಿಕೆ ಅಧ್ಯಕ್ಷ ವೆಂಕಟೇಶ್, ಮುಖಂಡರಾದ ಸಿ.ಎಸ್.ರಘು ಕೇಶವಮೂರ್ತಿ ಮತ್ತಿತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News