ಮಾದಕ ದ್ರವ್ಯಗಳ ದಂಧೆಗೆ ಕಡಿವಾಣ: ಕ್ರಿಯಾ ಯೋಜನೆ ರೂಪಿಸಲು ಅಧಿಕಾರಿಗಳಿಗೆ ಡಿಸಿಎಂ ಸೂಚನೆ

Update: 2018-07-16 16:10 GMT

ಬೆಂಗಳೂರು, ಜು.16: ರಾಜ್ಯಾದ್ಯಂತ ಮಾದಕ ದ್ರವ್ಯ ವಸ್ತುಗಳ ದಂಧೆಗೆ ಕಡಿವಾಣ ಹಾಕಲು ಅಗತ್ಯ ಕ್ರಿಯಾ ಯೋಜನೆಯನ್ನು ರೂಪಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ಡಾ.ನೀಲಮಣಿ ಎನ್.ರಾಜು ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸೂಚನೆ ನೀಡಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಮಾದಕ ದ್ರವ್ಯ ವಸ್ತುಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಶಿಕ್ಷಣ, ಅಬಕಾರಿ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಅವರು ಈ ನಿರ್ದೇಶನ ನೀಡಿದ್ದಾರೆ.

ಮಾದಕ ವಸ್ತುಗಳ ದಂಧೆಯನ್ನು ನಿಯಂತ್ರಿಸಲು ಗೃಹ ಇಲಾಖೆಯೊಂದರಿಂದ ಮಾತ್ರ ಸಾಧ್ಯವಿಲ್ಲ. ಇದಕ್ಕಾಗಿ ಅಬಕಾರಿ, ಶಿಕ್ಷಣ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಯ ಅಧಿಕಾರಿಗಳ ಸಹಕಾರವು ಅಗತ್ಯ. ಶಿಕ್ಷಣ ಸಂಸ್ಥೆಗಳಲ್ಲಿ ರಚಿಸಿರುವ ರ್ಯಾಗಿಂಗ್ ತಡೆ ಸಮಿತಿಗಳ ಮಾದರಿಯಲ್ಲಿ ಮಾದಕ ದ್ರವ್ಯ ನಿಯಂತ್ರಣ ಸಮಿತಿಯನ್ನು ರಚಿಸುವ ಸಂಬಂಧ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಪರಮೇಶ್ವರ್ ಸಲಹೆ ನೀಡಿದ್ದಾರೆ.

ರಾಜ್ಯದಲ್ಲಿ ಗಾಂಜಾ ಬೆಳೆಯದಂತೆ ಹಾಗೂ ಹೊರ ರಾಜ್ಯಗಳಿಂದ ಮಾದಕ ದ್ರವ್ಯಗಳು ನಮ್ಮ ರಾಜ್ಯದ ಗಡಿ ಪ್ರವೇಶದಂತೆ ಹೇಗೆ ತಡೆಗಟ್ಟಬೇಕು? ಶಾಲಾ, ಕಾಲೇಜುಗಳ ಬಳಿ ಅವುಗಳ ಮಾರಾಟಕ್ಕೆ ಅವಕಾಶ ನೀಡದಂತೆ ಕಟ್ಟೆಚ್ಚರ ವಹಿಸುವುದು ಹೇಗೆ? ಸಮಾಜದಲ್ಲಿ ಈ ಮಾದಕ ದ್ರವ್ಯಗಳ ಸೇವನೆಯಿಂದ ಆಗುವ ಅನಾಹುತಗಳ ಬಗ್ಗೆ ಮತ್ತಷ್ಟು ಪರಿಣಾಮಕಾರಿಯಾಗಿ ಹೇಗೆ ಜಾಗೃತಿ ಮೂಡಿಸಬಹುದು ಎಂಬುದರ ಕುರಿತು ಕ್ರಿಯಾ ಯೋಜನೆ ರೂಪಿಸುವಂತೆ ಅವರು ಸೂಚಿಸಿದರು. ಈ ಕ್ರಿಯಾ ಯೋಜನೆ ರೂಪಿಸಲು ಸ್ವಯಂ ಸೇವಾ ಸಂಸ್ಥೆಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮತ್ತು ಪುನರ್ವಸತಿ ಕೇಂದ್ರಗಳಲ್ಲಿ ಇರುವವರ ಸಹಕಾರ ಪಡೆದುಕೊಳ್ಳುವುದು ಉತ್ತಮ ಎಂದು ಪರಮೇಶ್ವರ್ ಸಲಹೆ ನೀಡಿದರು.

ರಾಜ್ಯದಲ್ಲಿ ಮಾದಕ ದ್ರವ್ಯಗಳ ದಂಧೆಗೆ ಸಂಪೂರ್ಣ ಕಡಿವಾಣ ಹಾಕಲೇಬೇಕು. ಇಲ್ಲದಿದ್ದರೆ, ರಾಜ್ಯ ಸರಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಕೆಲವು ವರ್ಷಗಳ ಹಿಂದೆ ಹೊರ ರಾಜ್ಯಗಳಿಂದ ನಮ್ಮ ರಾಜ್ಯಕ್ಕೆ ಗಾಂಜಾ ಸರಬರಾಜಾಗುತ್ತಿತ್ತು. ಆದರೆ, ಇತ್ತೀಚಿಗೆ ನಮ್ಮ ರಾಜ್ಯದ ಚಿಕ್ಕಬಳ್ಳಾಪುರ, ಹಾಸನ, ಶಿವಮೊಗ್ಗ ಸೇರಿದಂತೆ ಕೆಲವು ಕಡೆ ಗಾಂಜಾ ಬೆಳೆಯುತ್ತಿರುವ ಸುದ್ದಿಗಳು ಕೇಳಿ ಬರುತ್ತಿವೆ. ಅಧಿಕಾರಿಗಳು ಇದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಅವರು ತಾಕೀತು ಮಾಡಿದ್ದಾರೆ.

ವಿದೇಶ ಸೇರಿದಂತೆ ಹೊರ ರಾಜ್ಯಗಳಿಂದ ವಿವಿಧ ರೀತಿಯ ಮಾದಕ ದ್ರವ್ಯಗಳು ರಾಜ್ಯಕ್ಕೆ ಬರುತ್ತಿವೆ. ಈ ದಂಧೆಯಲ್ಲಿ ತೊಡಗಿಕೊಂಡಿರುವವರಿಗೆ ಪೊಲೀಸರ ಭಯವಿಲ್ಲದಂತಾಗಿದೆ. ಇದರ ಪರಿಣಾಮವಾಗಿ ಚಿಂದಿ ಆಯುವವರೂ ಮಾದಕ ದ್ರವ್ಯಗಳ ಮಾರಾಟ, ಖರೀದಿ ಮಾಡುವ ಮಟ್ಟಕ್ಕೆ ಇಳಿಯುವಂತಾಗಿದೆ ಎಂದು ಪರಮೇಶ್ವರ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಭೂಗತ ಲೋಕ, ಪ್ರತಿಷ್ಠಿತ ವ್ಯಕ್ತಿಗಳು ಮತ್ತು ಪ್ರದೇಶಗಳಿಗೆ ಮಾತ್ರ ಈ ದಂಧೆ ಮೀಸಲಾಗಿತ್ತು. ಆದರೆ, ಇಂದು ಕೊಳಗೇರಿ ಸೇರಿದಂತೆ ಎಲ್ಲ ಕಡೆಯೂ ಹಬ್ಬುತ್ತಿದೆ. ಇದು ನಾಗರಿಕ ಸಮಾಜದ ಪಾಲಿಗೆ ದೊಡ್ಡ ಪಿಡುಗಾಗಿದೆ. ಈ ದಂಧೆಯಲ್ಲಿ ತೊಡಗಿರುವವರ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ, ಈ ಮಾದಕ ವಸ್ತುಗಳ ಸೇವನೆಯಿಂದ ಆಗುವ ಅನಾಹುತಗಳ ಬಗ್ಗೆ ಜನಸಾಮಾನ್ಯರಲ್ಲೂ ಅರಿವು ಮೂಡಿಸಬೇಕಾದ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ.

ಬೆಂಗಳೂರು ನಗರಕ್ಕೆ ಬರುತ್ತಿರುವ ಮಾದಕದ್ರವ್ಯ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಮಾದಕ ದ್ರವ್ಯಗಳು ಮಾರಾಟವಾಗುತ್ತಿರುವ ಕೆಲವು ಪ್ರದೇಶಗಳನ್ನು ಗುರುತಿಸಲಾಗಿದ್ದು, ಅಂತಹ ಕಡೆ ಪೊಲೀಸರು ಹೆಚ್ಚಿನ ಗಮನ ಹರಿಸಬೇಕು. ಇಲ್ಲದಿದ್ದರೆ, ಆಯಾ ಠಾಣೆಯ ಪೊಲೀಸರನ್ನೆ ಹೊಣೆಗಾರರನ್ನಾಗಿಸಲಾಗುವುದು ಎಂದು ಪರಮೇಶ್ವರ್ ಎಚ್ಚರಿಕೆ ನೀಡಿದ್ದಾರೆ.

ಸಭೆಯಲ್ಲಿ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ನಗರ ಪೊಲೀಸ್ ಆಯುಕ್ತ ಸುನೀಲ್‌ಕುಮಾರ್ ಸೇರಿದಂತೆ ಇನ್ನಿತರ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ಸಿಐಡಿಯಲ್ಲಿರುವ ಮಾದಕ ವಸ್ತುಗಳ ನಿಯಂತ್ರಣ ಘಟಕವನ್ನು ಮತ್ತಷ್ಟು ಬಲಪಡಿಸಬೇಕು. ಅಗತ್ಯವಿರುವ ಸಿಬ್ಬಂದಿಗಳ ನೇಮಕ ಮಾಡುವುದರ ಜೊತೆಗೆ ತರಬೇತಿ ನೀಡಲು ವ್ಯವಸ್ಥೆ ಮಾಡಬೇಕು. ಈ ದಂಧೆಗೆ ಕಡಿವಾಣ ಹಾಕಲು ಪೊಲೀಸ್ ಠಾಣೆಗಳಲ್ಲಿರುವ ಸಿಬ್ಬಂದಿಯನ್ನು ಕ್ರಿಯಾಶೀಲಗೊಳಿಸಬೇಕು.
-ಡಾ.ಜಿ.ಪರಮೇಶ್ವರ್, ಉಪ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News