ಬಿಬಿಎಂಪಿ ಕಡತ ಪತ್ತೆ ಪ್ರಕರಣ: ತನಿಖೆಯನ್ನು ಸ್ವತಂತ್ರ ತನಿಖಾ ಸಂಸ್ಥೆಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ

Update: 2018-07-16 16:13 GMT

ಬೆಂಗಳೂರು, ಜು.16: ಬಿಬಿಎಂಪಿಗೆ ಸೇರಿದ ಸರಕಾರಿ ಕಡತಗಳು ಕಾಂಗ್ರೆಸ್ ಶಾಸಕ ಮುನಿರತ್ನ ಮನೆಯಲ್ಲಿ ಪತ್ತೆಯಾಗಿದ್ದ ಪ್ರಕರಣಕ್ಕೆ ಮತ್ತೆ ಜೀವ ಬಂದಿದೆ. ಪ್ರಕರಣ ಈಗ ಹೈ ಕೋರ್ಟ್ ಮೆಟ್ಟಿಲೇರಿದ್ದು, ಸದ್ಯ ಲೋಕಾಯುಕ್ತ ಕೋರ್ಟ್‌ನಲ್ಲಿರುವ ಪ್ರಕರಣವನ್ನು ವಜಾಗೊಳಿಸಬೇಕು. ಅಲ್ಲದೇ ಆ ಪ್ರಕರಣದ ಮರುತನಿಖೆಯನ್ನು ಸ್ವತಂತ್ರ ತನಿಖಾ ಸಂಸ್ಥೆಗೆ ನೀಡಬೇಕೆಂದು ಹೈಕೋರ್ಟ್‌ಗೆ ಕ್ರಿಮಿನಲ್ ಪಿಟಿಷನ್ ಹಾಕಲಾಗಿದೆ. ಹಿರಿಯ ವಕೀಲರಾದ ಎನ್.ಪಿ.ಅಮೃತೇಶ್ ಅರ್ಜಿ ಸಲ್ಲಿಸಿದ್ದು, ಮತ್ತೆ ಮುನಿರತ್ನಗೆ ಕಂಟಕ ಎದುರಾಗಿದೆ.

ಏನಿದು ಪ್ರಕರಣ: 2014 ಜನವರಿ 26 ರಂದು ವೈ.ಎಚ್.ಶ್ರೀನಿವಾಸ್ ಎಂಬುವವರು ವೈಯಾಲಿ ಕಾವಲ್ ಮುನಿರತ್ನ ಪತ್ನಿ ಮಂಜುಳಾಗೆ ಸೇರಿದ ಮನೆಯಲ್ಲಿ ಬಿಬಿಎಂಪಿ ಕಾಮಗಾರಿಗಳ ಬೋಗಸ್ ಬಿಲ್ ಸೃಷ್ಟಿ ಮಾಡಲಾಗುತ್ತಿದೆ ಎಂದು ದೂರು ನೀಡಿದ್ದರು. ದೂರು ಪಡೆದ ಲೋಕಾಯುಕ್ತ ಅಧಿಕಾರಿಗಳು ಮತ್ತು ಪೊಲೀಸರು 27 ಜನವರಿ 2014 ರಂದು ದಾಳಿ ಮಾಡಿ ಪರಿಶೀಲನೆ ಸಹ ಮಾಡಿದ್ದರು. ಈ ವೇಳೆ ಮೂವರು ಬಿಬಿಎಂಪಿ ಎಂಜಿನಿಯರ್‌ಗಳು ಮತ್ತು ನಾಲ್ಕಕ್ಕೂ ಹೆಚ್ಚು ಮಂದಿ ಬಿಬಿಎಂಪಿ ಅಧಿಕಾರಿಗಳು ಸಿಕ್ಕಿಬಿದ್ದಿದ್ದರು. ರಾತ್ರಿ ದಾಳಿ ಮಾಡಿದಾಗ ಅಧಿಕಾರಿಗಳೆಲ್ಲಾ ಸೇರಿ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಆಗದಿರುವ ಕಾಮಗಾರಿಗಳಿಗೆ ಬೋಗಸ್ ಬಿಲ್ ಮಾಡುತ್ತಿರುವುದು ಪತ್ತೆಯಾಗಿತ್ತು. ಅಲ್ಲದೆ ಮತ್ತೆ ಕೆಲವು ನಕಲಿ ಬಿಲ್‌ಗಳಿಗೆ ಬಿಲ್ ಪಾಸ್ ಆಗಿರುವುದು ಸಹ ಗೊತ್ತಾಗಿತ್ತು. ಅಲ್ಲದೇ ದಾಳಿಯ ವೇಳೆ ಬಿಬಿಎಂಪಿಗೆ ಸೇರಿದ್ದ ಅಧಿಕೃತ 1300 ದಾಖಲೆಗಳು ಪತ್ತೆಯಾಗಿದ್ದವು. ಈ ಪ್ರಕರಣವನ್ನು ಲೋಕಾಯುಕ್ತ 2014 ರಿಂದ 2017ರ ತನಕ ತನಿಖೆ ಮಾಡಿ 30 ಆಗಸ್ಟ್ 2017 ರಂದು 120 ಕೋಟಿ ಹಗರಣ ಆರೋಪದ ಚಾರ್ಜ್ ಶಿೀಟ್ ಸಲ್ಲಿಕೆ ಮಾಡಿತ್ತು.

ಪ್ರಕರಣದಲ್ಲಿ 8 ಮಂದಿಯ ವಿರುದ್ಧ, ಆರು ಮಂದಿ ಅಧಿಕಾರಿಗಳು ಎರಡು ಮಂದಿ ಕಾಂಟ್ರಾಕ್ಟರ್‌ಗಳ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆ ಮಾಡಿತ್ತು. ಸದ್ಯ ಪ್ರಕರಣ ಲೋಕಾಯುಕ್ತ ಕೋರ್ಟ್‌ನಲ್ಲಿ ಪೆಂಡಿಂಗ್‌ನಲ್ಲಿದೆ.

ಪ್ರಕರಣದಿಂದ ಮುನಿರತ್ನ, ಪತ್ನಿ ಮಂಜುಳ ಕೈಬಿಟ್ಟಿದ್ದ ಲೋಕಾಯುಕ್ತ ಪೊಲೀಸ್: ಪ್ರಕರಣದಲ್ಲಿ ಲೋಕಾಯುಕ್ತ ತನಿಖಾಧಿಕಾರಿಗಳು ಹಾಲಿ ಶಾಸಕ ಮುನಿರತ್ನ ಮತ್ತು ಪತ್ನಿ ಮಂಜುಳಾ ಮುನಿರತ್ನ ಹಾಗೂ ಸೂರಪ್ಪ ಬಾಬು ಎಂಬುವವರನ್ನು ಕೈ ಬಿಟ್ಟು ಎಫ್‌ಐಆರ್ ಮಾಡಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿತ್ತು. ಸ್ವತಃ ಮುನಿರತ್ನ ಪತ್ನಿ ಮಂಜುಳಾ ಹೆಸರಿನಲ್ಲಿ ವೈಯಾಲಿ ಕಾವಲ್ ಮನೆಯಲ್ಲಿ ದಾಖಲೆಗಳು ಸಿಕ್ಕಿದ್ದವು. ಅದು ಅಲ್ಲದೇ ಅದು ಮುನಿರತ್ನ ಕಾರ್ಪೊರೇಟರ್ ಆಗಿದ್ದ ವಾರ್ಡ್ ಮತ್ತು ಮುನಿರತ್ನ ಶಾಸಕ ಆಗಿದ್ದ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಕಾಮಗಾರಿಗಳ ಬೋಗಸ್ ಬಿಲ್ಲಿಂಗ್. ಆದರೂ ಸಹ ಕೇಸ್‌ನಲ್ಲಿ ಅವರ ಪಾತ್ರವಿಲ್ಲ ಎಂದು ಲೋಕಾಯುಕ್ತ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದರು. ಎಫ್‌ಐಆರ್‌ನಲ್ಲಿಯೂ ಸಹ ಅವರ ಹೆಸರನ್ನು ಸೇರಿಸಿರಲಿಲ್ಲ. ತನಿಖೆಯನ್ನು ಪ್ರಶ್ನಿಸಿ ವಕೀಲ ಎನ್.ಪಿ.ಅಮೃತೇಶ್ ಹೈಕೋರ್ಟ್ ಮೊರೆ ಹೋಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News