ಕುಮಾರಸ್ವಾಮಿಗೆ ಬದ್ಧತೆಯಿದ್ದರೆ ಲೋಕಾಯುಕ್ತವನ್ನು ಬಲಪಡಿಸಲಿ: ಮಾಜಿ ಸ್ಪೀಕರ್ ಕೃಷ್ಣ

Update: 2018-07-16 16:17 GMT

ಬೆಂಗಳೂರು, ಜು.16: ಮುಖ್ಯಮಂತ್ರಿ ಕುಮಾರಸ್ವಾಮಿಗೆ ಬಡವರ ಪರ ಕಾಳಜಿ, ಬದ್ಧತೆಯಿದ್ದರೆ ಲೋಕಾಯುಕ್ತವನ್ನು ಬಲಪಡಿಸಲಿ ಹಾಗೂ ಎ.ಟಿ.ರಾಮಸ್ವಾಮಿ ವರದಿಯನ್ನು ಜಾರಿ ಮಾಡಲು ಮುಂದಾಗಲಿ. ಅದು ಬಿಟ್ಟು ಕಣ್ಣೀರು ಹಾಕುವುದು ಯಾಕೆ ಎಂದು ಮಾಜಿ ಸ್ಪೀಕರ್ ಕೆ.ಆರ್.ಪೇಟೆ ಕೃಷ್ಣ ಪ್ರಶ್ನಿಸಿದ್ದಾರೆ.

ಸೋಮವಾರ ನಗರದ ಕಸಾಪದಲ್ಲಿ ಕನ್ನಡ ಜನಶಕ್ತಿ ಕೇಂದ್ರದಿಂದ ಆಯೋಜಿಸಿದ್ದ ಹಿರಿಯ ಸಾಹಿತಿ ಪ್ರೊ.ಚಂಪಾಗೆ ಶಾಂತವೇರಿ ಗೋಪಾಲಗೌಡ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಜನಪರವಾಗಿ ಕೆಲಸ ಮಾಡುವ ಮನಸ್ಸಿದ್ದರೆ ಹಾಗೂ ಧೈರ್ಯವಿದ್ದರೆ ಮುಖ್ಯಮಂತ್ರಿ ಕುಮಾರಸ್ವಾಮಿ ಈ ಎರಡು ಕೆಲಸಗಳನ್ನು ಮೊದಲು ಮಾಡಲಿ ಎಂದು ಹೇಳಿದರು. 

ಹಿಂದೆ ನಾನು ಸಭಾಪತಿಯಾಗಿದ್ದಾಗ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ಆಗ ನನ್ನ ಬಳಿ ಬಂದ ಅವರು, ಲೋಕಾಯುಕ್ತ ಬಲಪಡಿಸಲು ಅಧಿಕಾರಿಗಳು ವಿರೋಧ ವ್ಯಕ್ತಪಡಿಸುತ್ತಾರೆ ಎಂದಿದ್ದರು. ‘ಕೋಳಿಯನ್ನು ಕೇಳಿ ಮಸಾಲೆ ಅರೆಯುತ್ತಾರೆಯೇ?’ ಎಂದು ನಾನು ನಗೆಯಾಡಿದ್ದೆ. ಆದರೆ ಸರಕಾರಿ ಭೂಮಿ ಕಬಳಿಸಿರುವವರಲ್ಲಿ ಅವರ ಗೆಳೆಯರೇ ಹೆಚ್ಚಿದ್ದರು. ಬಳಿಕ ಸರಕಾರ ಬದಲಾಗಿದ್ದರಿಂದ ಅವರಿಗೆ ಕಾಯ್ದೆ ಮಾಡಲು ಸಾಧ್ಯವಾಗಲಿಲ್ಲ. ಈಗಲಾದರೂ ಮಾಡಲಿ ಎಂದರು. ಇಂದಿನ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಮುಖ್ಯಮಂತ್ರಿ ಅಥವಾ ಪ್ರಧಾನ ಮಂತ್ರಿ ಯಾರ ಸ್ಥಾನದಲ್ಲಾದರೂ ಭಗವಂತ ಬಂದು ಕೂತರೂ ಅಧಿಕಾರಿಗಳು ಮಾಡುವ ಭ್ರಷ್ಟಾಚಾರವನ್ನು ನಿಲ್ಲಿಸಲು ಸಾಧ್ಯವಿಲ್ಲ. ಪ್ರಧಾನಿ ಹಾಗೂ ಸಿಎಂ ನಾವು ಪ್ರಾಮಾಣಿಕರು ಎನ್ನುತ್ತಾರೆ. ಆದರೆ, ಅವರ ಅಧಿಕಾರ ಪ್ರಾಮಾಣಿಕವಾಗಿರುವುದಿಲ್ಲ. ನಮ್ಮ ಅಧಿಕಾರ ಪ್ರಾಮಾಣಿಕವಾಗಿದೆ ಎಂದು ಯಾರಾದರೂ ಒಪ್ಪಿಕೊಳ್ಳಲು ತಯಾರಿದ್ದಾರೆ ಎಂದರು.

ಇತ್ತೀಚಿನ ದಿನಗಳಲ್ಲಿ ರಾಜಕಾರಣಿಗಳು ನೀಚ ರಾಜಕಾರಣಕ್ಕಿಳಿದಿದ್ದಾರೆ. ಎಲ್ಲವನ್ನೂ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದ ಅವರು, ಮೊದಲ ಬಾರಿಗೆ ಚುನಾವಣೆಗೆ ಸ್ವರ್ಧಿಸಿದ ಸಂದರ್ಭದಲ್ಲಿ 50 ಕೋಟಿ ಆದಾಯ ಘೋಷಣೆ ಮಾಡುತ್ತಾರೆ, ಎರಡನೇ ಬಾರಿ ಅದು 100 ಕೋಟಿಗೆ, ಮೂರನೆ ಬಾರಿ 150 ಕೋಟಿ ಹೀಗೆ ಹೆಚ್ಚುತ್ತಾ ಹೋಗುತ್ತದೆ. ಅಣ್ಣಾ ಹಜಾರೆ ಲೋಕಪಾಲ್ ಮಸೂದೆ ಜಾರಿಗಾಗಿ ತೀವ್ರ ಹೋರಾಟ ಮಾಡಿದರು. ಆದರೆ, ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಇದುವರೆಗೂ ಅತ್ತ ಕಣ್ಣೆತ್ತಿ ನೋಡಿಲ್ಲ ಎಂದು ವಿಷಾದಿಸಿದರು.

ಶಾಂತವೇರಿ ಗೋಪಾಲಗೌಡರು ರಾಜಕೀಯದ ದೈತ್ಯ ಕಥೆಯಾಗಿದ್ದಾರೆ. ಶೋಷಿತರ, ಬಡ ಗೇಣಿದಾರರ ಅವರ ಹೋರಾಟ ಇಂದಿಗೂ ನೆನೆಸಿಕೊಳ್ಳಲಾಗುತ್ತಿದೆ. ವಿಧಾನಸೌಧದ ಹೊರಗೆ ಮತ್ತು ಒಳಗೆ ಅವರಿಗೆ ತಮ್ಮದೇ ಆದ ಗೌರವವನ್ನು ಹೊಂದಿದ್ದು, ಪ್ರಾಮಾಣಿಕ ಹೋರಾಟಗಾರರಾಗಿದ್ದರು. ಆದರೆ, ಇತ್ತೀಚಿಗೆ ಪ್ರಗತಿಪರರನ್ನು ನೋಡಿದರೆ ಗೊಂದಲವುಂಟಾಗುತ್ತಿದೆ ಎಂದು ಕೃಷ್ಣ ಹೇಳಿದರು.

ಇಂದು ನಾವು ಪ್ರಜಾಪ್ರಭುತ್ವದಲ್ಲಿ ಬದುಕಿದ್ದೇವಾ ಎಂಬ ಅನುಮಾನ ಮೂಡುತ್ತಿದೆ. ಪಕ್ಷಗಳೆಲ್ಲವೂ ವಾಣಿಜ್ಯ ಕೇಂದ್ರಗಳಾಗಿದ್ದು, ಗೆಲ್ಲುವವರಿಗೆ ಟಿಕೆಟ್ ನೀಡುತ್ತೇವೆ ಎನ್ನುತ್ತಾರೆ. ಆದರೆ, ನೂರಾರು ಕೋಟಿ ಇರುವವರು ಮಾತ್ರ ಗೆಲ್ಲುವವರು ಎಂದು ತೀರ್ಮಾನಿಸಲಾಗಿದೆ. ಇದೀಗ ಎಲ್ಲರೂ ಪ್ರಜಾಪ್ರಭುತ್ವದ ಹೆಸರನ್ನು ಹೇಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ನಮ್ಮ ದೇಶದಲ್ಲಿನ ಅಧಿಕಾರಸ್ಥರು ಹಾಗೂ ವಿದ್ಯಾವಂತರು ಹೆಚ್ಚು ಜಾತಿವಾದಿಗಳಾಗಿದ್ದಾರೆ ಎಂದು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News