ಪ್ರಾದೇಶಿಕ ಪಕ್ಷ ಬಲವರ್ದನೆಗೆ ಪ್ರಾಮಾಣಿಕರಿಗೆ ಅವಕಾಶ ಕಲ್ಪಿಸಿ: ಪ್ರೊ.ಚಂಪಾ

Update: 2018-07-16 16:22 GMT

ಬೆಂಗಳೂರು, ಜು.16: ಕರ್ನಾಟಕದ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಕುಟುಂಬ ಪಕ್ಷ ಎಂದಾಗಿದೆ. ಹೀಗಾಗಿ, ರಾಜ್ಯಾದ್ಯಂತ ಪಕ್ಷವನ್ನು ಬಲಪಡಿಸುವ ಸಲುವಾಗಿ ವೈಎಸ್‌ವಿ ದತ್ತರಂತಹ ಪ್ರಾಮಾಣಿಕರಿಗೆ ಅವಕಾಶ ನೀಡಬೇಕು ಎಂದು ಹಿರಿಯ ಸಾಹಿತಿ ಚಂದ್ರಶೇಖರ್ ಪಾಟೀಲ್ ಹೇಳಿದ್ದಾರೆ.

ನಗರದ ಕಸಾಪದಲ್ಲಿ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಸರಕಾರವನ್ನು ಉತ್ತಮವಾಗಿ ನಡೆಸುವುದರ ಜತೆಗೆ ಪಕ್ಷದ ತಳಪಾಯವನ್ನು ಗಟ್ಟಿಗೊಳಿಸಬೇಕು. ರಾಜ್ಯಕ್ಕೆ ಪ್ರಾದೇಶಿಕ ಪಕ್ಷದ ಅಗತ್ಯವಿದೆ. ರಾಜ್ಯದೆಲ್ಲೆಡೆ ಪಕ್ಷವನ್ನು ಬಲಪಡಿಸಲು ಪ್ರಾಮಾಣಿಕರಿಗೆ ಅವಕಾಶ ನೀಡಬೇಕು ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಎಂಬ ಮಹಾನುಭಾವ ರಾಷ್ಟ್ರೀಯ ಪಕ್ಷವನ್ನು ತೊರೆದು ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವನ್ನು ಕಟ್ಟಿದ ಸಂದರ್ಭದಲ್ಲಿ ನಾನು ಅದನ್ನು ಬೆಂಬಲಿಸಿದ್ದೆ. ಆದರೆ, ಅನಂತರ ನಡೆದ ಬದಲಾವಣೆಗಳಿಂದಾಗಿ ಯಾರನ್ನು ಸಜ್ಜನ ರಾಜಕಾರಣಿ ಎಂದು ತೀರ್ಮಾನಿಸಬೇಕು ಎಂಬ ಅನುಮಾನ ಮೂಡಿತು. ಇಂದಿನ ದಿನಗಳಲ್ಲಿ ಸಜ್ಜನ ರಾಜಕಾರಣಿಗಳ ಕೊರತೆ ಕಾಡುತ್ತಿದ್ದು, ಕೆಲವೇ ಕೆಲವು ಜನರು ಮಾತ್ರ ಸಜ್ಜನ ರಾಜಕಾರಣಿಗಳನ್ನು ಕಾಣಬಹುದಾಗಿದೆ. ದತ್ತ, ಕೃಷ್ಣರಂತಹ ಪ್ರಾಮಾಣಿಕ ನಾಯಕರು ವಿಧಾನಸೌಧದೊಳಗೆ ಇರಬೇಕು ಎಂದು ಆಶಿಸಿದರು.

ದೇಶದಲ್ಲಿಂದು ನ್ಯಾಯಾಂಗ, ಕಾರ್ಯಾಂಗ ಸೇರಿದಂತೆ ಎಲ್ಲ ಅಂಗಗಳೂ ಹದಗೆಟ್ಟಿದ್ದು, ಅದಕ್ಕೆ ಸಾಹಿತ್ಯ ರಂಗವೂ ಹೊರತಾಗಿಲ್ಲ. ಅದನ್ನು ಬದಲಾವಣೆ ಮಾಡಬೇಕಾಗಿದೆ. ಅದಕ್ಕಾಗಿ, ನೆಲ ಮೂಲದ ಪ್ರಾದೇಶಿಕ ಪಕ್ಷಗಳ ಅಗತ್ಯವಿದ್ದು, ರಾಷ್ಟ್ರೀಯ ದೃಷ್ಟಿಕೋನವನ್ನಿಟ್ಟುಕೊಂಡಿರುವ ವರ್ತಮಾನದ ಸ್ಥಿತಿಗತಿಗಳನ್ನು ಅರ್ಥೈಸಿಕೊಳ್ಳುವ ನಾಯಕರ ಅಗತ್ಯವಿದೆ. ಹಿರಿಯ ನಾಯಕರು ಹಿಂದಿನಿಂದ ಯುವಕರನ್ನು ಪ್ರೋತ್ಸಾಹಿಸಬೇಕು. ಚಳವಳಿಗಳು ನಿರಂತರವಾಗಿರುತ್ತವೆ. ಅದನ್ನು ಹಿರಿಯರು ಅರ್ಥ ಮಾಡಿಕೊಂಡು ಬೆಂಬಲ ನೀಡಬೇಕು ಎಂದು ಚಂಪಾ ನುಡಿದರು.

ವಿಮರ್ಶಕ ಡಾ.ರಾಜೇಂದ್ರ ಚೆನ್ನಿ ಮಾತನಾಡಿ, 70 ರ ದಶಕದಲ್ಲಿ ಶಾಂತವೇರಿ ಗೋಪಾಲಗೌಡರ ಮೂಲಕ ರಾಜ್ಯದಲ್ಲಿ ಸಮಾಜವಾದಿ ಚಿಂತನೆಗಳು ಮೊಳಕೆಯೊಡೆದವು. ಜಡ್ಡುಗಟ್ಟಿದ, ಜಾತಿ ಆಧಾರಿತ ಫ್ಯೂಡಲ್ ಸಮಾಜದಲ್ಲಿ ದೊಡ್ಡ ಚಳವಳಿಗಳು ರೂಪಗೊಂಡಿದ್ದು, ದೇಶದ ಚರಿತ್ರೆಯಲ್ಲಿ ತಿರುವು ನೀಡಿದೆ ಎಂದು ಹೇಳಿದರು.

ಶಾಂತವೇರಿ ಗೋಪಾಲಗೌಡರು 70 ರ ದಶಕದಲ್ಲಿ ಆರಂಭಿಸಿದ ಚಳವಳಿ ರಾಜಕೀಯದಲ್ಲಿ ಸಂಚಲನ ಮೂಡಿಸಿತ್ತು. ಅಂದು ಅವರು ಆರಂಭಿಸಿದ ಉಳುವವನಿಗೆ ಭೂಮಿ ನೀಡಬೇಕು ಎಂಬ ಚಳವಳಿಗೆ ದೇವರಾಜು ಅರಸು ಮುಂದುವರಿಸಿ, ಎಲ್ಲರಿಗೂ ಉಳುವವನೇ ಭೂಮಿ ಒಡೆಯ ಎಂದು ಘೋಷಣೆ ಮಾಡಿದ್ದರು. ಅನಂತರ ಜೆ.ಪಿ.ಅವರ ನವ ನಿರ್ಮಾಣ ಕ್ರಾಂತಿಯು ನಮ್ಮ ವೈಯಕ್ತಿನ ಬದುಕಿನ ಮೇಲೆ ಅಪಾರವಾದ ಪರಿಣಾಮ ಬೀರಿದೆ. ಒಂದು ವೇಳೆ ನಾವು ಚಳವಳಿಗಳಲ್ಲಿ ಪಾಲ್ಗೊಳ್ಳದಿದ್ದರೆ ನಾಲ್ಕು ಗೋಡೆಗಳ ಪುಸ್ತಕಗಳಿಗೆ ಸೀಮಿತವಾಗುತ್ತಿದ್ದೆವು ಎಂದರು.

ಚಳವಳಿಗಾರರು ಬಹುತೇಕರು ನಾಯಕರನ್ನು ಹಿಂಬಾಲಿಸುತ್ತಾರೆ. ಆದರೆ, ಚಂಪಾ ಎಲ್ಲ ಚಳವಳಿಗಳಲ್ಲಿ ಪಾಲ್ಗೊಳ್ಳುತ್ತಿದ್ದರೂ ಯಾವ ನಾಯಕರನ್ನು ಹಿಂಬಾಲಿಸಿಲ್ಲ. ನಾಡಿನಲ್ಲಿ ಅನೇಕ ಸಾಂಸ್ಕೃತಿಕ ಚಳವಳಿಗಾರರನ್ನು ಕಂಡಿದ್ದೇನೆ. ಆದರೆ, ಬಹುತೇಕ ನಾಯಕರ ನಡವಳಿಕೆಯಲ್ಲಿ ಪ್ರಜಾಪ್ರಭುತ್ವದ ಗುಣಗಳನ್ನು ಕಂಡಿಲ್ಲ. ಚಂಪಾರಲ್ಲಿ ಎಲ್ಲವನ್ನೂ ನಾನು ಕಂಡಿದ್ದೆ. ಚಳವಳಿಗಳಿಗೆ ಪ್ರಜಾಪ್ರಭುತ್ವವಾದಿ ಗುಣಗಳನ್ನು ಚಂಪಾ ತಂದುಕೊಟ್ಟಿದ್ದಾರೆ ಎಂದು ಶ್ಲಾಘಿಸಿದರು.

ಇತ್ತೀಚಿನ ದಿನಗಳಲ್ಲಿ ಜಾತಿಗ್ರಸ್ಥ ರಾಜಕೀಯ ಮೇಲಾಗುತ್ತಿದೆ. 70 ರ ದಶಕದ ಕಾಲದವರು ಮಾತ್ರ ಸಮಾಜವಾದವನ್ನು ಒಪ್ಪಿಕೊಂಡಿದ್ದಾರೆ ಎಂಬ ವಾದವಿದೆ. ಇಂದಿನ ದಿನಗಳಲ್ಲಿ ಸಂವಿಧಾನ ಉಳಿಯುವುದು ಕಷ್ಟ ಎಂಬ ಸ್ಥಿತಿಯಲ್ಲಿದೆ. ಜಾತ್ಯತೀತವಾದ ಹಾಗೂ ಸಮಾಜವಾದ ಅಪಾಯದ ಸ್ಥಿತಿಯಲ್ಲಿದೆ. ಸಮಾಜವಾದದ ಬಗೆಗಿನ ಚರ್ಚೆಗೆ ಹಿಂದೇಟು ಹಾಕುತ್ತಿರುವ ಸಂದರ್ಭದಲ್ಲಿದ್ದೇವೆ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ವೈ.ಎಸ್.ವಿ.ದತ್ತ, ಕನ್ನಡ ಜನಶಕ್ತಿ ಕೇಂದ್ರದ ಅಧ್ಯಕ್ಷ ಸಿ.ಕೆ.ರಾಮೇಗೌಡ ಉಪಸ್ಥಿತರಿದ್ದರು.

ಲಂಕೇಶ್, ಚಂಪಾ, ಯು.ಆರ್‌ಅನಂತಮೂರ್ತಿ ಅವರಂತಹ ಲೇಖಕರ ಬರಹಗಳನ್ನು ಆರಾಧಕ ಭಾವನೆಯಿಂದ ಓದುತ್ತೇವೆ. ಹಿಂದಿನಿಂದಲೂ ಅವರೊಂದಿಗೆ ಒಡನಾಡಿದ್ದು, ನನ್ನ ಹೋರಾಟಗಳಿಗೆ ಅವರಿಂದಲೇ ಸ್ಪೂರ್ತಿ ದೊರೆತಿದೆ. ನಾನು ಚುನಾವಣೆಗೆ ನಿಂತು ಸೋತ ಬಳಿಕ ಕ್ಷೇತ್ರದ ಮತದಾರರಿಗೆ ಪತ್ರ ಬರೆದು ಬೇಸರ ವ್ಯಕ್ತಪಡಿಸಿದೆ. ಆದರೆ ನಾನು ಸಿನಿಕನಲ್ಲ. ಹಿಂದೆ ಕೆಜೆಪಿ ರಚನೆಯಾಗಿದ್ದರಿಂದ ಜಾತಿಗಳು ವಿಂಗಡೆಣೆಯಾಗಿ ಗೆದ್ದೆ. ಈ ಬಾರಿ ಅವೇ ಜಾತಿಗಳು ಒಂದಾಗಿ ಗಟ್ಟಿಯಾಗಿದ್ದರಿಂದ ಸೋತೆ.
- ವೈ.ಎಸ್.ವಿ.ದತ್ತ, ಮಾಜಿ ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News