ಸೇವಾ ಸಂಸ್ಥೆಯ ಮೇಲೂ ಕ್ರಿಮಿನಲ್ ಪ್ರಕರಣ ದಾಖಲಿಸಿ: ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಕೆ

Update: 2018-07-16 16:24 GMT

ಬೆಂಗಳೂರು, ಜು.16: ಟ್ಯಾಕ್ಸಿಗಳಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಚಾಲಕರಿಂದ ಕಿರುಕುಳ ಉಂಟಾದ ವೇಳೆ ಚಾಲಕರಷ್ಟೇ ಅಲ್ಲದೆ ಟ್ಯಾಕ್ಸಿ ಸೇವಾಸಂಸ್ಥೆಯ ಮೇಲೂ ಕ್ರಿಮಿನಲ್ ಪ್ರಕರಣ ದಾಖಲಿಸಿ, ಅಗತ್ಯ ಕ್ರಮ ಕೈಗೊಳ್ಳಲು ಸರಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಸಲಾಗಿದೆ.

ವಕೀಲ ಅಮೃತೇಶ್ ಪಿಐಎಲ್ ಸಲ್ಲಿಸಿದ್ದು, ಓಲಾ, ಉಬರ್ ಸೇರಿದಂತೆ ಆ್ಯಪ್ ಆಧಾರಿತ ಟ್ಯಾಕ್ಸಿಗಳಲ್ಲಿ ಪ್ರಯಾಣಿಸುವ ಮಹಿಳೆಯರ ಸುರಕ್ಷತೆಗೆ ಅಗತ್ಯ ನಿಯಮಗಳನ್ನು ರೂಪಿಸುವಲ್ಲಿ ಹಾಗೂ ಕಠಿಣ ಕ್ರಮ ಕೈಗೊಳ್ಳುವಲ್ಲಿ ಸರಕಾರ, ಗೃಹ ಇಲಾಖೆ ನಿರ್ಲಕ್ಷ ವಹಿಸಿದೆ. ಇದರಿಂದಾಗಿ ಆ್ಯಪ್ ಆಧಾರಿತ ಟ್ಯಾಕ್ಸಿಗಳಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ನಿರೀಕ್ಷಿಸುವಷ್ಟು ಪ್ರಮಾಣದಲ್ಲಿ ಸುರಕ್ಷತೆ ಇಲ್ಲವಾಗಿದ್ದು, ಚಾಲಕರು ದುರ್ವರ್ತನೆ ತೋರುವ, ಲೈಂಗಿಕ ದೌರ್ಜನ್ಯ ಎಸಗುವ ಘಟನೆಗಳು ಮರುಕಳಿಸುತ್ತಿವೆ.

ಕಳೆದ ಜೂನ್‌ನಲ್ಲಿ ಓಲಾ ಕ್ಯಾಬ್ ಚಾಲಕನೊಬ್ಬ ಮಹಿಳಾ ಪ್ರಯಾಣಿಕರಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಅದಾದ ಬಳಿಕ ಇದೇ ರೀತಿಯ ನಾಲ್ಕು ಪ್ರಕರಣಗಳು ನಗರದಲ್ಲಿ ಜರುಗಿವೆ. ಈ ನಿಟ್ಟಿನಲ್ಲಿ ಮಹಿಳೆಯರೂ ಸೇರಿದಂತೆ ಯಾವುದೇ ಪ್ರಯಾಣಿಕರ ಜತೆ ಚಾಲಕರು ದುರ್ವರ್ತನೆ ತೋರಿದರೆ ಟ್ಯಾಕ್ಸಿ ಸೇವೆ ನೀಡಿದ ಸಂಸ್ಥೆಯ ಮೇಲೆಯೇ ಕ್ರಿಮಿನಲ್ ಪ್ರಕರಣ ದಾಖಲಿಸಿ ಕ್ರಮ ಜರುಗಿಸಬೇಕು. ಅಗತ್ಯ ಬಿದ್ದಲ್ಲಿ ಟ್ಯಾಕ್ಸಿ ಕಂಪೆನಿಗಳ ಪರವಾನಿಗೆಯನ್ನೇ ರದ್ದುಪಡಿಸಬೇಕು ಎಂದು ನಿರ್ದೇಶಿಸುವಂತೆ ಅರ್ಜಿಯಲ್ಲಿ ಕೋರಿದ್ದಾರೆ.

ಮಹಿಳಾ ಪ್ರಯಾಣಿಕರ ಸುರಕ್ಷತೆಗೆ ಸಂಬಂಧಿಸಿದಂತೆ 2013ರಲ್ಲಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಇತ್ಯರ್ಥಪಡಿಸುವ ವೇಳೆ, ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ 198 ವಿಶೇಷ ಮಹಿಳಾ ಪೊಲೀಸ್ ಪೇದೆಗಳನ್ನು ನೇಮಿಸುವುದಾಗಿ ಸರಕಾರ ಅಫಿಡವಿಟ್ ಸಲ್ಲಿಸಿತ್ತು. ಆದರೆ, ಇದುವರೆಗೂ ಹುದ್ದೆಗಳ ನೇಮಕಾತಿಗೆ ಮುಂದಾಗಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ಅರ್ಜಿ ವಿಚಾರಣೆಗೆ ನಿಗದಿಯಾಗಬೇಕಿದ್ದು, ವಕೀಲ ಜಿ.ಆರ್ ಮೋಹನ್ ವಕಾಲತ್ತು ವಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News