ಲೋಕಸಭಾ ಚುನಾವಣೆಯಲ್ಲಿ ಬಿಲ್ಲವ ಅಭ್ಯರ್ಥಿಗೆ ಅವಕಾಶ ಸಿಗಲಿ: ವಸಂತ ಬಂಗೇರ

Update: 2018-07-17 05:03 GMT

ಬೆಳ್ತಂಗಡಿಯ ಮಾಜಿ ಶಾಸಕ, ದ.ಕ. ಜಿಲ್ಲೆಯ ಹಿರಿಯ ಕಾಂಗ್ರೆಸ್ ಮುಖಂಡ ಕೆ.ವಸಂತ ಬಂಗೇರ ಜಿಲ್ಲೆಯಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು, ಕಳೆದ ಚುನಾವಣೆಯಲ್ಲಿ ಪಕ್ಷಕ್ಕಾದ ಸೋಲು, ಮುಂಬರುವ ಲೋಕಸಭಾ ಚುನಾವಣೆಗೆ ಪಕ್ಷ ನಡೆಸಬೇಕಾದ ಸಿದ್ಧತೆ ಇತ್ಯಾದಿ ಹಲವು ವಿಷಯಗಳ ಬಗ್ಗೆ 'ವಾರ್ತಾಭಾರತಿ'ಯೊಂದಿಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದ.ಕ. ಜಿಲ್ಲೆಯಲ್ಲಿ ಹಿನ್ನಡೆಯಾಗಲು ಕಾರಣವೇನು?

ಬಂಗೇರ: ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅತ್ಯುತ್ತಮ ಜನಪರ ಕಾರ್ಯಕ್ರಮಗಳನ್ನು ರೂಪಿಸಿತ್ತು. ಇದು ಸಮರ್ಪಕವಾಗಿ ಜನರಿಗೆ ತಲುಪಿತ್ತು. ಇಂತಹ ಉತ್ತಮ ಕಾರ್ಯಗಳನ್ನು ಮಾಡಿದ ಸರಕಾರ ಈ ಹಿಂದೆ ಬಂದಿರಲಿಲ್ಲ. ಆದರೆ, ಈ ಸರಕಾರ ಮಾಡಿದ ಜನಪರ ಕಾರ್ಯಗಳನ್ನು ತನ್ನ ಕಾರ್ಯಕ್ರಮವೆಂದು ಬಿಂಬಿಸುವಲ್ಲಿ ಹಾಗೂ ಜನರಿಗೆ ತಿಳಿ ಹೇಳುವಲ್ಲಿ ಪಕ್ಷದ ಶಾಸಕರು, ಪದಾಧಿಕಾರಿಗಳು ವಿಫಲರಾದರು.ಇದರಿಂದಾಗಿ ಬಿಜೆಪಿಯವರು ನಡೆಸಿದ ಅಪಪ್ರಚಾರಗಳನ್ನು ಜನರು ನಂಬುವಂತಾಯಿತು. ಇದೇ ಕಾಂಗ್ರೆಸ್ ಸೋಲಿಗೆ ಅತ್ಯಂತ ಪ್ರಮುಖವಾದ ಕಾರಣ.

ಕಾಂಗ್ರೆಸ್ ಬೆಂಬಲಿತರಾಗಿದ್ದ ಹಿಂದುಳಿದ ವರ್ಗದವರೂ ಕಳೆದ ಚುನಾವಣೆಯಲ್ಲಿ ಪಕ್ಷದಿಂದ ದೂರವಾದಂತೆ ಕಾಣುತ್ತಿದೆ. ಇದಕ್ಕೇನಂತೀರಿ?

ಬಂಗೇರ: ದ.ಕ. ಜಿಲ್ಲೆಯಲ್ಲಿ ಶೋಷಿತರು, ಹಿಂದುಳಿದ ಸಮುದಾಯ ಗಳು ಸದಾ ಕಾಂಗ್ರೆಸ್ ಪಕ್ಷದೊಂದಿಗೆ ಇದ್ದವು. ಪಕ್ಷವು ಅವರ ಪರವಾಗಿ ಯೋಜನೆಗಳನ್ನು ರೂಪಿಸಿತ್ತು. ಆದರೆ, ಕಳೆದ ಅವಧಿಯಲ್ಲಿ ಜಿಲ್ಲೆಯಲ್ಲಿ ನಡೆದ ಕೆಲವು ಘಟನೆಗಳು, ಹಾಗೂ ಅದನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಇತರರು ವಿಫಲರಾದರು. ಇದನ್ನು ಗುರಾಣಿಯಾಗಿ ಬಳಸಿಕೊಂಡು ಬಿಜೆಪಿಯವರು ಕಾಂಗ್ರೆಸ್ ವಿರುದ್ಧ ತೀವ್ರ ಅಪಪ್ರಚಾರ ನಡೆಸಿದರು. ಕಾಂಗ್ರೆಸ್ ಅಲ್ಪಸಂಖ್ಯಾತರನ್ನು ಓಲೈಸುತ್ತಿದೆ ಎಂದು ಹಾಗೂ ಹಿಂದೂಗಳ ರಕ್ಷಣೆಯ ನೆಪದಲ್ಲಿ ಬಿಜೆಪಿಯವರು ನಡೆಸಿದ ಅಪಪ್ರಚಾರಗಳ ಬಗ್ಗೆ ಜನರನ್ನು ಎಚ್ಚರಿಸುವಲ್ಲಿ ಕಾಂಗ್ರೆಸ್ ಪಕ್ಷ ವಿಫಲವಾಯಿತು. ಇದರಿಂದಾಗಿ ಜನರಲ್ಲಿ ಪಕ್ಷದ ಬಗ್ಗೆ ಗೊಂದಲಗಳು ಸೃಷ್ಟಿಯಾದವು. ಕಾಂಗ್ರೆಸ್ ಬೆಂಬಲಕ್ಕೆ ಸದಾ ನಿಲ್ಲುತ್ತಿದ್ದ ಸಮುದಾಯಗಳೂ ಪಕ್ಷದಿಂದ ದೂರವಾಗುವಂತಾಯಿತು. ಆದರೆ, ಇದೇನು ಶಾಶ್ವತವಾದ ವಿಚಾರವಲ್ಲ. ಜನರಿಗೂ ಈಗ ಸತ್ಯದ ಅರಿವಾಗಿದೆ. ಜಿಲ್ಲೆಯ ಜನರು ಮತ್ತೆ ಕಾಂಗ್ರೆಸ್ಸಿನತ್ತ ಮುಖ ಮಾಡಲಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿ ಯಾರಾಗಬಹುದು, ನೀವು ಟಿಕೆಟ್ ಆಕಾಂಕ್ಷಿಯೇ?

ಬಂಗೇರ: ನಾನು ಲೋಕಸಭಾ ಚುನಾವಣೆಗೆ ಟಿಕೆಟ್ ಆಕಾಂಕ್ಷಿಯಲ್ಲ, ಸ್ಪರ್ಧಿಸುವ ಇರಾದೆಯೂ ನನಗಿಲ್ಲ. ಪಕ್ಷ ಯಾರಿಗೆ ಅವಕಾಶ ನೀಡುತ್ತದೆಯೋ ಅವರ ಪರವಾಗಿ ಕೆಲಸ ಮಾಡುತ್ತೇನೆ. ಪಕ್ಷದಲ್ಲಿ ಯಾರು ಅಭ್ಯರ್ಥಿ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಈಗಾಗಲೇ ಮೂರು, ನಾಲ್ಕು ಮಂದಿ ಆಕಾಂಕ್ಷಿಗಳಿದ್ದಾರೆ. ಜಿಲ್ಲೆಯ ಈಗಿನ ಸ್ಥಿತಿಗತಿಯನ್ನು ಗಮನಿಸಿ ಯಾರು ಸೂಕ್ತ ಎಂದು ಪಕ್ಷ ಆಯ್ಕೆ ಮಾಡಲಿ. ಕಳೆದ ಹಲವು ಚುನಾವಣೆಗಳಲ್ಲಿ ಹಿಂದುಳಿದ ವರ್ಗದ ಬಿಲ್ಲವ ಸಮುದಾಯದಿಂದ ಬಂದಿರುವ ಜನಾರ್ದನ ಪೂಜಾರಿಯವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದರು. ಜಿಲ್ಲೆಯ ದೊಡ್ಡ ಸಮುದಾಯವಾಗಿರುವ ಬಿಲ್ಲವ ಸಮುದಾಯಕ್ಕೆ ಮುಂದೆಯೂ ಅವಕಾಶ ನೀಡಿದರೆ, ಆ ಸಮುದಾಯದ ಮತದಾರರು ಮತ್ತೆ ಕಾಂಗ್ರೆಸ್ ಬೆಂಬಲಕ್ಕೆ ನಿಲ್ಲುವ ಸಾಧ್ಯತೆಯಿದೆ. ಇದನ್ನು ಪಕ್ಷ ಗಣನೆಗೆ ತೆಗೆದುಕೊಳ್ಳಬೇಕಾಗಿದೆ. ಜಿಲ್ಲೆಯ ಜನರ ಆಶೋತ್ತರಗಳನ್ನು ಗಮನಿಸಿ ಮುಂದುವರಿಯ ಬೇಕಾಗಿದೆ.

ಸಮ್ಮಿಶ್ರ ಸರಕಾರದ ಕಾರ್ಯಚಟುವಟಿಕೆ ಬಗ್ಗೆ ಸಂತೃಪ್ತಿ ಇದೆಯೇ?

ಬಂಗೇರ: ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಹಮ್ಮಿಕೊಂಡಿದ್ದ ಕಾರ್ಯಕ್ರಮಗಳೆಲ್ಲವನ್ನೂ ಸಮ್ಮಿಶ್ರ ಸರಕಾರ ಮುಂದುವರಿಸಿದೆ. ಅಲ್ಲದೆ, ರೈತರ ಸಾಲ ಮನ್ನಾದಂತಹ ವಿಶೇಷ ಕಾರ್ಯಕ್ರಮಗಳನ್ನೂ ಹಮ್ಮಿಕೊಂಡಿದೆ. ಈ ಕಾರ್ಯಕ್ರಮಗಳೆಲ್ಲವೂ ಜನರಿಗೆ ನೇರವಾಗಿ ತಲುಪುವಂಥವುಗಳು. ಎರಡೂ ಪಕ್ಷದವರು ಹೊಂದಾಣಿಕೆಯಿಂದ ಮುಂದುವರಿಯುತ್ತಿದ್ದು, ಸರಕಾರ ಯಶಸ್ವಿಯಾಗಿ ಮುಂದುವರಿಯಲಿದೆ.

ಮುಂದಿನ ಚುನಾವಣೆಗೆ ಪಕ್ಷದ ಸಿದ್ಧತೆ ಹೇಗಿದೆ?

ಬಂಗೇರ: ಕಳೆದ ಚುನಾವಣೆ ಹಲವಾರು ಮಹತ್ವದ ಪಾಠಗಳನ್ನು ಕಾಂಗ್ರೆಸ್ಸಿಗೆ ಕಲಿಸಿದೆ. ಅದನ್ನು ಮನದಲ್ಲಿಟ್ಟುಕೊಂಡು ಈಗಾಗಲೇ ಚುನಾವಣಾ ಸಿದ್ಧತೆಗಳನ್ನು ನಡೆಸಬೇಕಾಗಿದೆ. ಬಿಜೆಪಿಯವರು ನಡೆಸುವ ಅಪಪ್ರಚಾರವನ್ನು ಎದುರಿಸಿ ನಿಲ್ಲುವುದೇ ಮುಖ್ಯವಾಗಿದೆ. ಕಾಂಗ್ರೆಸ್ ಮತ್ತೆ ಜನರತ್ತ ತೆರಳಬೇಕಾಗಿದೆ. ಸರಕಾರದ ಸಾಧನೆಗಳನ್ನು ಜನರಿಗೆ ತಿಳಿಸುವುದರೊಂದಿಗೆ ಬಿಜೆಪಿ ನಡೆಸುತ್ತಿರುವ ಅಪಪ್ರಚಾರಗಳಿಗೂ ಉತ್ತರ ನೀಡಬೇಕಾಗಿದೆ. ಮಾಜಿ ಶಾಸಕರು, ಪಕ್ಷದ ಪದಾಧಿಕಾರಿಗಳು ಕಾರ್ಯಕರ್ತರು ಒಗ್ಗಟ್ಟಾಗಿ ದುಡಿದರೆ ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಲೋಕಸಭಾ ಕ್ಷೇತ್ರವನ್ನು ಗೆಲ್ಲುವ ಅವಕಾಶವಿದೆ. ಅದಕ್ಕಾಗಿ ಈಗಲೇ ಸಿದ್ಧತೆಗಳನ್ನು ಆರಂಭಿಸಲಾಗಿದೆ.

ಪಕ್ಷದಿಂದ ದೂರವಾದ ಸಮುದಾಯಗಳನ್ನು ಪಕ್ಷದತ್ತ ಮರಳಿ ತರಲು ಯಾವ ಕಾರ್ಯಕ್ರಮ ರೂಪಿಸಲಾಗಿದೆ?

ಬಂಗೇರ: ಜಿಲ್ಲೆಯಲ್ಲಿ ಹಿಂದುಳಿದ ವರ್ಗದವರು, ಶೋಷಿತ ಸಮುದಾಯಗಳು ಕಾಂಗ್ರೆಸ್‌ನಿಂದ ದೂರವಾಗಿಲ್ಲ. ಅಪಪ್ರಚಾರದಿಂದಾಗಿ ಕಳೆದ ಚುನಾವಣೆಯಲ್ಲಿ ಒಂದಿಷ್ಟು ತೊಡಕುಗಳಾಗಿರಬಹುದು ಅಷ್ಟೇ. ಕಾಂಗ್ರೆಸ್ ಸದಾ ಈ ಜನರ ಪರವಾಗಿಯೇ ಕಾರ್ಯನಿರ್ವಹಿಸಿದೆ. ಕಳೆದ ಚುನಾವಣೆಯಲ್ಲಿ ಹಿಂದುಳಿದ ವರ್ಗದವರಿಗೆ ಅನ್ಯಾಯವಾಗಿದೆ ಎಂಬುದು ಸತ್ಯ. ಅವರಿಗೆ ಕಾಂಗ್ರೆಸ್ ಮುಂದಿನ ದಿನಗಳಲ್ಲಿ ಹೆಚ್ಚು ಅವಕಾಶ ನೀಡಬೇಕಾಗಿದೆ.

ಆಗ ಅವರ ವಿಶ್ವಾಸವನ್ನು ಮರಳಿ ಪಡೆಯಲು ಸಾಧ್ಯವಿದೆ. ಮುಂದಿನ ಚುನಾವಣೆಯಲ್ಲಿ ಇದೆಲ್ಲವನ್ನೂ ಸರಿಪಡಿಸಿಕೊಂಡು ಹೋಗಬಹುದಾಗಿದೆ. ಅದಕ್ಕಾಗಿ ಪಕ್ಷದ ನಾಯಕರು ಜನರ ಬಳಿಗೆ ತೆರಳಬೇಕಾಗಿದೆ. ಎಲ್ಲ ಜನರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯಬೇಕು.

Writer - ಸಂದರ್ಶನ: ಶಿಬಿ ಧರ್ಮಸ್ಥಳ

contributor

Editor - ಸಂದರ್ಶನ: ಶಿಬಿ ಧರ್ಮಸ್ಥಳ

contributor

Similar News