ಚೀನಾದಲ್ಲಿ ಜನಪ್ರಿಯಗೊಳ್ಳುತ್ತಿರುವ ಕಾಲ್ಬೆರಳ ಕಾಳಗದ ಸ್ಪರ್ಧೆ ‘ಫೂಟ್ಸಿ’ ಬಗ್ಗೆ ನಿಮಗೆ ಗೊತ್ತೇ....?

Update: 2018-07-17 11:20 GMT

ಇಂತಹ ಸ್ಪರ್ಧೆಯೂ ಇದೆಯೇ ಎಂದು ನಿಮಗೆ ಅಚ್ಚರಿಯಾಗಬಹುದು. ಹೌದು,ಈ ಆಟ ಚೀನಾದಲ್ಲಿ ಜನಪ್ರಿಯಗೊಳ್ಳುತ್ತಿದೆ. ಜನರು,ವಿಶೇಷವಾಗಿ ಯುವಜನರು ಇದಕ್ಕೆ ಎಷ್ಟೊಂದು ಮರುಳಾಗಿದ್ದಾರೆಂದರೆ ಆಟಗಾರರ ಮೇಲೆ ಬೆಟ್‌ಗಳನ್ನೂ ಕಟ್ಟಲಾಗುತ್ತಿದೆ.

ಅಂಗೈ ಕಾಳಗ ನಮಗೆ ಗೊತ್ತು, ಇಬ್ಬರು ಸ್ಪರ್ಧಿಗಳು ಟೇಬಲ್ ಮೇಲೆ ಮೊಣಕೈಗಳನ್ನು ಇರಿಸಿ ಪರಸ್ಪರರ ಅಂಗೈಗಳನ್ನು ಬೆಸೆದುಕೊಂಡು ಒಬ್ಬ ಇನ್ನೊಬ್ಬನ ಕೈಯನ್ನು ಬಗ್ಗಿಸಲು ಪ್ರಯತ್ನಿಸುತ್ತಾನೆ. ಹಾಗೆ ಕೈಯನ್ನು ಸಂಪೂರ್ಣವಾಗಿ ಬಗ್ಗಿಸಿ ಟೇಬಲ್‌ಗೆ ತಾಗಿಸಿದರೆ ಆತ ಗೆಲ್ಲುತ್ತಾನೆ. ಫೂಟ್ಸೀಯಲ್ಲಿ ಇಬ್ಬರು ಆಟಗಾರರು ತಮ್ಮ ಕಾಲ್ಬೆರಳುಗಳನ್ನು ಸೇರಿಸಿ ಪಾದಗಳನ್ನು ಹೆಣೆದುಕೊಂಡು ಪರಸ್ಪರರ ಪಾದವನ್ನು ಬಗ್ಗಿಸಿ ನೆಲಕ್ಕೆ ತಾಗಿಸಲು ಪ್ರಯತ್ನಿಸುತ್ತಾರೆ.

ಈ ವಿಲಕ್ಷಣ ಆಟ ಆರಂಭಗೊಂಡಿದ್ದು 1976ರಲ್ಲಿ. ಬ್ರಿಟನ್ನಿನ ಸ್ಟಾಫರ್ಡ್‌ಶೈರ್‌ನ ಪಬ್ಬೊಂದರಲ್ಲಿ ನಾಲ್ವರು ಕುಡುಕರು ಮೋಜಿಗೆ ಈ ಆಟಕ್ಕೆ ನಾಂದಿ ಹಾಡಿದ್ದರು. ಅಂದಿನಿಂದ ಪ್ರತಿ ವರ್ಷ ವಿಶ್ವ ಟೋ ರೆಸ್ಲಿಂಗ್ ಚಾಂಪಿಯನ್‌ಶಿಪ್ ನಡೆಯುತ್ತಿದ್ದು ಹಲವಾರು ಜನರು ಅದರಲ್ಲಿ ಭಾಗವಹಿಸುತ್ತಿದ್ದಾರೆ.

ಚೀನಾದಲ್ಲಿ ಈ ಆಟವು ಅತ್ಯಂತ ವೇಗವಾಗಿ ಜನಪ್ರಿಯಗೊಳ್ಳುತ್ತಿದ್ದು,ಮುಖ್ಯವಾಗಿ ಅಲ್ಲಿಯ ಚಾಂಗ್‌ಕಿಂಗ್ ನಗರದಲ್ಲಿಯ ವಾಟರ್‌ಪಾರ್ಕ್‌ನಲ್ಲಿ ಸ್ಪರ್ಧೆಯು ನಡೆಯುತ್ತದೆ. ಅಲ್ಪಾವಧಿಯಲ್ಲಿಯೇ ಈ ವಿಲಕ್ಷಣ ಆಟ ಜನಪ್ರಿಯಗೊಂಡಿದ್ದು, ಜ್ವರದಂತೆ ಹಬ್ಬುತ್ತಿದೆ.

ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರು ಅದನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ಅಂತಿಮವಾಗಿ ವಿಜಯಶಾಲಿಯಾಗುವ ವ್ಯಕ್ತಿಗೆ ವಾಟರ್‌ಪಾರ್ಕ್ ಪ್ರವೇಶಿಸಲು 90 ಯುವಾನ್(10 ಬ್ರಿಟಿಷ್ ಪೌಂಡ್) ಬೆಲೆಯ ಟಿಕೆಟ್‌ನ್ನು ಉಚಿತವಾಗಿ ನೀಡಲಾಗುತ್ತದೆ.

ಆಟವು ಜನಪ್ರಿಯಗೊಂಡಿರುವುದರಿಂದ ಅಲ್ಲಲ್ಲಿ ವೈಯಕ್ತಿಕ ಸ್ಪರ್ಧೆಗಳು ನಡೆಯುತ್ತಿದ್ದು,ಆಟಗಾರರ ಮೇಲೆ ಬೆಟಿಂಗ್‌ಗಳೂ ಜೋರಾಗಿಯೇ ಇವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News