‘ಅನ್ನಭಾಗ್ಯ’ ಅಕ್ಕಿ ಪ್ರಮಾಣದಲ್ಲಿ ಕಡಿತವಿಲ್ಲ: ಸಚಿವ ಝಮೀರ್ ಅಹ್ಮದ್
ಬೆಂಗಳೂರು, ಜು.17: ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಪಡಿತರದಾರರಿಗೆ ವಿತರಿಸುತ್ತಿರುವ ಅಕ್ಕಿಯ ಪ್ರಮಾಣದಲ್ಲಿ ಮುಂದಿನ ತಿಂಗಳು ಯಾವುದೆ ಕಡಿತವಾಗುವುದಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಝಮೀರ್ ಅಹ್ಮದ್‌ಖಾನ್ ತಿಳಿಸಿದರು.
ಮಂಗಳವಾರ ವಿಕಾಸಸೌಧದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಜೆಟ್‌ನಲ್ಲಿ ಅನ್ನಭಾಗ್ಯ ಯೋಜನೆಯಡಿ ವಿತರಿಸುತ್ತಿದ್ದ ತಲಾ 7 ಕೆಜಿ ಅಕ್ಕಿಯನ್ನು 5 ಕೆಜಿಗೆ ಇಳಿಸಿ, ಅದರ ಜೊತೆಗೆ ಇತರ ಪದಾರ್ಥಗಳನ್ನು ನೀಡುವುದಾಗಿ ಮುಖ್ಯಮಂತ್ರಿ ಘೋಷಿಸಿದ್ದರು. ಆದರೆ, ಬಜೆಟ್ ಮೇಲಿನ ಚರ್ಚೆ ಸಂಬಂಧ ಸದನದಲ್ಲಿ ಉತ್ತರ ನೀಡುವಾಗ ಈ ಹಿಂದಿನಂತೆಯೆ ಅನ್ನಭಾಗ್ಯ ಯೋಜನೆ ಮುಂದುವರೆಯಲಿದೆ ಎಂದಿದ್ದಾರೆ. ರೈತರ ಸಾಲ ಮನ್ನಾ ಮಾಡುವುದು ನಮ್ಮ ಸರಕಾರದ ಆದ್ಯತೆ. ಅದಕ್ಕಾಗಿ ನಾವು ಬಡವರ ಅನ್ನದ ಪ್ರಮಾಣವನ್ನು ಕಡಿಮೆ ಮಾಡುವುದು ಬೇಡ ಎಂದು ಮುಖ್ಯಮಂತ್ರಿಗೆ ಮನವಿ ಮಾಡಿದ್ದೇನೆ ಎಂದು ಅವರು ಹೇಳಿದರು.
ಪಡಿತರ ವ್ಯವಸ್ಥೆಯಲ್ಲಿ ಅಕ್ಕಿಯೊಂದಿಗೆ ಸಕ್ಕರೆ, ಉಪ್ಪು, ಪಾಮೋಲಿನ್ ಎಣ್ಣೆ ಸೇರಿದಂತೆ ಇನ್ನಿತರ ಹೆಚ್ಚುವರಿ ಪದಾರ್ಥಗಳನ್ನು ಬೇಕಾದರೆ ನೀಡಿ, ನಿಮ್ಮ ವಿವೇಚನೆಗೆ ಬಿಟ್ಟದ್ದು. ಆದರೆ, ಅಕ್ಕಿಯ ಪ್ರಮಾಣ ಕಡಿತ ಮಾಡುವುದು ಬೇಡ ಎಂದು ಬಜೆಟ್ ಮಂಡನೆ ನಂತರ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಮನವಿ ಮಾಡಿದ್ದೇನೆ ಎಂದು ಝಮೀರ್ ಅಹ್ಮದ್ ಖಾನ್ ತಿಳಿಸಿದರು.
ಜನರಲ್ಲಿ ಅಕ್ಕಿ ಪ್ರಮಾಣದ ಕುರಿತು ಗೊಂದಲಗಳಿರುವುದು ನನ್ನ ಗಮನಕ್ಕೂ ಬಂದಿದೆ. ಒಂದು ವೇಳೆ ಅಕ್ಕಿ ಪ್ರಮಾಣವನ್ನು ಕಡಿತಗೊಳಿಸಿ, ಇತರ ಪದಾರ್ಥಗಳನ್ನು ವಿತರಿಸುವುದಿದ್ದರೆ ಮುಖ್ಯಮಂತ್ರಿ ನನ್ನನ್ನು ಕರೆದು ಚರ್ಚೆ ಮಾಡುತ್ತಿದ್ದರು. ಆದರೆ, ಈವರೆಗೆ ನನ್ನ ಜೊತೆ ಅವರು ಈ ವಿಚಾರದ ಕುರಿತು ಮಾತುಕತೆ ನಡೆಸಿಲ್ಲ ಎಂದು ಅವರು ಹೇಳಿದರು.
ರಾಜ್ಯದಲ್ಲಿ ನಮ್ಮ 280 ಗೋದಾಮುಗಳಿವೆ. ಆಹಾರ ಧಾನ್ಯಗಳು ಗೋದಾಮುಗಳಲ್ಲಿ ಕೊಳೆಯುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಯಡಿಯೂರಪ್ಪ ಸದನದಲ್ಲಿ ಧ್ವನಿ ಎತ್ತಿದ್ದರು. ಗೋದಾಮುಗಳ ಪರಿಸ್ಥಿತಿ ಕುರಿತು ಎಲ್ಲ ಮಾಹಿತಿಯನ್ನು ಪಡೆಯುತ್ತಿದ್ದೇನೆ ಎಂದು ಝಮೀರ್ ಅಹ್ಮದ್ ಖಾನ್ ತಿಳಿಸಿದರು.
ನಮ್ಮ ಇಲಾಖೆಯ ಕಾರ್ಯದರ್ಶಿ ಹೊಸದಿಲ್ಲಿಯಲ್ಲಿದ್ದು, ನಾಳೆ ಬೆಂಗಳೂರಿಗೆ ಬರುತ್ತಿದ್ದಾರೆ. ಆನಂತರ ನಾನೇ ಎಲ್ಲ ಗೋದಾಮುಗಳಿಗೆ ತೆರಳಿ ವಾಸ್ತವ ಪರಿಸ್ಥಿತಿ ಕುರಿತು ಪರಿಶೀಲನೆ ನಡೆಸಲಿದ್ದೇನೆ ಎಂದು ಝಮೀರ್ ಅಹ್ಮದ್ ಹೇಳಿದರು.
ನಂಜನಗೂಡಿನಲ್ಲಿರುವ ನಮ್ಮ ಇಲಾಖೆಯ ಗೋದಾಮಿನಿಂದ ಒಟ್ಟು 36.98 ಲಕ್ಷ ರೂ.ಮೌಲ್ಯದ 1165 ಕ್ವಿಂಟಾಲ್ ಅಕ್ಕಿ, 196 ಕ್ವಿಂಟಾಲ್ ಗೋಧಿ ಹಾಗೂ 36 ಕ್ವಿಂಟಾಲ್ ತೊಗರಿ ಬೆಳೆಯನ್ನು ಕಳ್ಳತನ ವಾಡಲಾಗಿದೆ ಎಂದು ಅವರು ತಿಳಿಸಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಉಪ ನಿರ್ದೇಶಕ ರಾಮೇಶ್ವರಪ್ಪರನ್ನು ಅಮಾನತ್ತು ಮಾಡಲಾಗಿದೆ. ಅಲ್ಲದೆ, ಡಿಪೋ ಮ್ಯಾನೇಜರ್ ಮೈಲಾರಿ ಹಾಗೂ ಕಂಪ್ಯೂಟರ್ ಆಪರೇಟರ್ ಬಸವರಾಜು ಎಂಬವರನ್ನು ಅಮಾನತು ಮಾಡಿ ಅವರ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ ಎಂದು ಅವರು ತಿಳಿಸಿದರು.
ಕ್ರೈಸ್ತ ಸಮುದಾಯದ ಮುಖಂಡರು ಇಂದು ನನ್ನನ್ನು ಭೇಟಿ ಮಾಡಿದ್ದರು. ಉಡುಪಿ, ಮಂಗಳೂರು, ಚಿಕ್ಕಮಗಳೂರು, ಮೈಸೂರು ಭಾಗದಲ್ಲಿ ಕ್ರೈಸ್ತ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವ ಸಂಬಂಧ ಆ.15ರಂದು ನಾನು ಸ್ವತಃ ಈ ಜಿಲ್ಲೆಗಳಿಗೆ ಭೇಟಿ ನೀಡಿ, ಸ್ಥಳದಲ್ಲೆ ಅವರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದೇನೆ ಎಂದು ಅವರು ಹೇಳಿದರು.