ಕಳವು ಆರೋಪ: ಐವರು ಕೊಲಂಬಿಯಾ ಪ್ರಜೆಗಳ ಬಂಧನ

Update: 2018-07-17 13:30 GMT

ಬೆಂಗಳೂರು, ಜು. 17: ಕೊಲಂಬಿಯಾದಿಂದ ನಗರಕ್ಕೆ ಪ್ರವಾಸಿ ವೀಸಾದಡಿ ಬಂದು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕಳವು ಮಾಡುತ್ತಿದ್ದ ಆರೋಪದಡಿ ಐವರು ಕೊಲಂಬಿಯಾ ಪ್ರಜೆಗಳನ್ನು ಬಂಧಿಸಿ 80 ಲಕ್ಷ ರೂ.ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯುವಲ್ಲಿ ದಕ್ಷಿಣ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.

ಈ ಬಗ್ಗೆ ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್‌ಕುಮಾರ್, ಕೊಲಂಬಿಯಾದ ಬೋಗೊಟಾದ ಜೋಸ್ ಎಡ್ವರ್ಡೋ ಅರಿವಲೋ ಬರ್ಬಾನೊ (40), ಗುಸ್ತಾವೋ ಅಡಾಲ್ಫೋ ಜರಾಮಿಲ್ಲೋ, ಜರಾಲ್ಡೋ (47) ಯಾಯಿರ್ ಆಲ್ಬರ್ಟೋ, ಸ್ಯಾಂಚಿಯಾಸ್ (45), ಎಡ್ವರ್ಡ್ ಎಲೆಕ್ಸಿಸ್, ಗಾರ್ಸಿಯಾ ಪರಮೋ (38) ಹಾಗೂ ಗುಟಿಯಾರೀಸ್ ಬಂಧಿತರು ಎಂದು ಮಾಹಿತಿ ನೀಡಿದರು.

ಬಂಧಿತರಿಂದ 80 ಲಕ್ಷ ಮೌಲ್ಯದ 950 ಗ್ರಾಂ ವಜ್ರ, ಚಿನ್ನಾಭರಣ, ವಿದೇಶಿ ಕರೆನ್ಸಿ, ದುಬಾರಿ ಬೆಲೆಯ 18 ವಿದೇಶಿ ಕಂಪೆನಿ ವಾಚುಗಳು, ಬೆಲೆಬಾಳುವ ಪೆನ್ನುಗಳು, ಕೃತ್ಯಕ್ಕೆ ಬಳಸಿದ 2 ಕಾರುಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ. ಬಂಧನದಿಂದಾಗಿ ನಿವೃತ್ತ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅವರ ಮನೆ ಕಳವು ಹಾಗೂ ಸದಾಶಿವನಗರದಲ್ಲಿ ನಡೆದಿದ್ದ ಮಾಜಿ ಶಾಸಕರೊಬ್ಬರ ಮನೆ ಕಳವು ಪ್ರಕರಣಗಳು ಪತ್ತೆಯಾಗಿವೆ. ಅವರು ಕಳೆದ ಮೇ ತಿಂಗಳಿನಲ್ಲಿ ಹೊಸದಿಲ್ಲಿಗೆ ಬಂದು ಅಲ್ಲಿಂದ ಬೆಂಗಳೂರಿಗೆ ಆಗಮಿಸಿದ್ದರು ಎಂದು ಸುನೀಲ್ ಕುಮಾರ್ ವಿವರಿಸಿದರು.

ಇವರ ಬಂಧನದಿಂದ ಜಯನಗರದ 2, ಜೆಪಿನಗರದ 1, ಎಚ್.ಎಚ್.ಆರ್ ಲೇಔಟ್, ಎಚ್‌ಎಎಲ್, ಬಾಣಸವಾಡಿಯ ತಲಾ 1 ಸೇರಿ 6 ಕನ್ನಗಳವು, ರಾತ್ರಿ ಕಳವು ಪ್ರಕರಣಗಳು ಪತ್ತೆಯಾಗಿವೆ. ಬೆಂಗಳೂರಿನಲ್ಲಿ ಅತಿ ಹೆಚ್ಚು ಶ್ರೀಮಂತರಿರುವುದನ್ನು ಗೂಗಲ್ ಹುಡುಕಾಟದಲ್ಲಿ ಕಂಡುಕೊಂಡು ಆರೋಪಿಗಳು ನಗರಕ್ಕೆ ಬಂದು ಕೃತ್ಯವೆಸಗಿದ್ದಾರೆ ಎಂದರು.

ಆರೋಪಿಗಳಲ್ಲಿ ಜೋಸ್ ಹೈಸ್ಕೂಲ್‌ವರೆಗೆ ವಿದ್ಯಾಭ್ಯಾಸ ಮಾಡಿದ್ದರೆ, ಗುಸ್ತಾವೋ ಎಂಬಿಎ ಪದವೀಧರ, ಯಾಯಿರ್ ವೆಲ್ಡಿಂಗ್ ಟ್ರೈನಿಂಗ್ ಮಾಡಿದ್ದರೆ, ಎಡ್ವರ್ಡ್ ಫುಡ್ ಹ್ಯಾಡ್ಲಿಂಗ್ ಕೋರ್ಸ್ ಮುಗಿಸಿದ್ದ. ಮಹಿಳೆಯೂ ಬ್ಯುಸಿನೆಸ್ ಟೆಕ್ನಾಲಜಿಯ ಪದವಿಯನ್ನು ಅರ್ಧಕ್ಕೆ ನಿಲ್ಲಿಸಿದ್ದು, ಅಪರಾಧ ಕೃತ್ಯದಲ್ಲಿ ಭಾಗಿಯಾಗಿರುವುದು ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

ಆರೋಪಿ ಜೋಸ್ ಕೊಲಂಬಿಯಾದಲ್ಲಿ ಅಕ್ರಮವಾಗಿ ಪಿಸ್ತೂಲು ಹೊಂದಿದ್ದಕ್ಕೆ 5 ತಿಂಗಳ ಶಿಕ್ಷೆ ಅನುಭವಿಸಿದ್ದು, 2016ರಲ್ಲಿ ಇಬ್ಬರು ಸ್ನೇಹಿತರ ಜೊತೆ ನೇಪಾಳದ ಮೂಲಕ ಭಾರತಕ್ಕೆ ಬಂದು ನಗರದಲ್ಲಿ ಆಫ್ರಿಕನ್‌ವೊಬ್ಬನನ್ನು ಪರಿಚಯ ಮಾಡಿಕೊಂಡು ಮನೆಗಳ್ಳತನಕ್ಕಿಳಿದಿದ್ದ. ಆರೋಪಿ ಗುಸ್ತಾವೋ 1996ರಲ್ಲಿ ಕೊಲಂಬಿಯಾದಲ್ಲಿ ಪೊಲೀಸ್ ಅಧಿಕಾರಿಯ ಪುತ್ರನ ಕೊಲೆಯಲ್ಲಿ ಭಾಗಿಯಾಗಿ 16 ವರ್ಷ ಶಿಕ್ಷೆ ಅನುಭವಿಸಿದ್ದನು. ಆರೋಪಿ ಯಾಯಿರ್ ನ್ಯೂಯಾರ್ಕ್‌ನ ಕ್ವೀನ್ಸ್ ಕಂಪೆನಿಯಲ್ಲಿ ಕೆಲಸ ಮಾಡಿ, ಮೆಕ್ಸಿಕೊದಲ್ಲಿ ಸಣ್ಣ ಉದ್ಯೋಗ ಮಾಡುತ್ತಿದ್ದ. 2015ರಲ್ಲಿ ಈತನನ್ನು ಅಕ್ರಮ ವಾಸದ ಬಗ್ಗೆ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಮತ್ತೊಬ್ಬ ಆರೋಪಿ ಎಡ್ವರ್ಡ್ ಗ್ರಾರ್ಸಿಯಾ ಬಂಧಿತ ಮಹಿಳೆ ಜೊತೆಗಾರನಾಗಿದ್ದ. ಇವರಿಬ್ಬರು ಅಕ್ರಮ ವಾಸದ ಬಗ್ಗೆ ಜೈಲುಶಿಕ್ಷೆ ಅನುಭವಿಸಿದ್ದರು. ಎಲ್ಲ ಆರೋಪಿಗಳಿಗೆ ಸ್ಪಾನಿಶ್ ಭಾಷೆ ಮಾತ್ರ ಗೊತ್ತಿದ್ದು, ಅವರಲ್ಲಿ ಯಾಯಿರ್‌ಗೆ ಇಂಗ್ಲಿಷ್ ಭಾಷೆ ಗೊತ್ತಿರುತ್ತದೆ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

ಸಿಕ್ಕಿದ್ದು ಹೇಗೆ: ಜಯನಗರದಲ್ಲಿ ಜೂನ್‌ನಲ್ಲಿ ನಡೆದ ಕಳವು ಪ್ರಕರಣದ ಬೆನ್ನು ಹತ್ತಿದ ವಿಶೇಷ ಪೊಲೀಸ್ ತಂಡ ವೈಜ್ಞಾನಿಕ ಮಾಹಿತಿಯಾಧರಿಸಿ ಕಾರ್ಯಾಚರಣೆ ನಡೆಸುತ್ತಿರುವಾಗಲೇ ಜುಲೈನಲ್ಲಿ ನಡೆದಿದ್ದ ಮತ್ತೊಂದು ಕಳವು ಪ್ರಕರಣವನ್ನು ಪರಿಶೀಲಿಸಿ ಓಎಲ್‌ಎಕ್ಸ್, ಫ್ಲಿಪ್‌ಕಾರ್ಟ್, ಇನ್ನಿತರ ಸಾಮಾಜಿಕ ಜಾಲತಾಣಗಳನ್ನು ಪರಿಶೀಲಿಸಿ ಕಾರು ಖರೀದಿಸಿ ಮಾರಾಟ ಮಾಡುತ್ತಿದ್ದ ಡೀಲರ್‌ಗಳನ್ನು ಪರಿಶೀಲಿಸಿದಾಗ ಆರೋಪಿಗಳ ಸುಳಿವು ಪತ್ತೆಯಾಯಿತು ಎಂದು ಆಯುಕ್ತರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ಬಿ.ಕೆ ಸಿಂಗ್, ಡಿಸಿಪಿ ಡಾ. ಶರಣಪ್ಪ ಸೇರಿ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News